#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Navjot Singh Sidhu: ಠೋಕೋ..ಠೋಕೋ..! ಐದು ತಿಂಗಳಲ್ಲಿ 33 ಕೆ.ಜಿ. ದೇಹ ತೂಕ ಇಳಿಸಿದ ಸಿಕ್ಸರ್‌ ಸಿಧು

ನಮ್ಮ ದೇಹದ ತೂಕ ನಮ್ಮನ್ನು ಕೇಳದೇ ಹೆಚ್ಚಾಗುತ್ತದೆ! ಆದರೆ ಅದೇ ದೇಹ ತೂಕವನ್ನು ಇಳಿಸಿಕೊಳ್ಳುವುದು ಸವಾಲಿನ ಕೆಲಸವೇ ಸರಿ.. ಈ ಸವಾಲನ್ನು ಮಾಜಿ ಕ್ರಿಕೆಟಿಗ ಹಾಲಿ ರಾಜಕಾರಣಿ ನವಜ್ಯೋತ್ ಸಿಂಗ್ ಸಿಧು ಗೆದ್ದಿದ್ದು ಹೇಗೆ ಗೊತ್ತಾ..?

ಹೀಗಿದ್ದೆ.. ಹೀಗಾದೆ..! ಸಿಕ್ಸರ್‌ ಸಿಧು ಸಿಕ್ಸ್‌ ಪ್ಯಾಕ್‌ ಸೀಕ್ರೇಟ್‌ ಏನು?

ನವಜೋತ್ ಸಿಂಗ್ ಸಿಧು

Profile Sushmitha Jain Jan 31, 2025 9:53 AM

ಅಮೃತಸರ: ಮಾಜಿ ಕ್ರಿಕೆಟಿಗ ಮತ್ತು ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu) ಸದಾ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸಕ್ರಿಯರಾಗಿರುತ್ತಾರೆ. ಮಾತ್ರವಲ್ಲದೇ ಒಂದಲ್ಲ ಒಂದು ವಿಷಯಗಳಿಂದಾಗಿ ಸಿಧು ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಿಧು ಅವರು ಭರ್ಜರಿಯಾಗಿ ತಮ್ಮ ದೇಹ ತೂಕವನ್ನು ಕಳೆದುಕೊಂಡಿರುವ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದು, ಅವರ ಈ ಪೋಸ್ಟ್ ಗೆ ಭಾರೀ ಪ್ರತಿಕ್ರಿಯೆಗಳು ಬರ್ತಿವೆ ಮತ್ತು ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಸಿಧು ಅವರು ಕೇವಲ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 33 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನು ಮೊದಲು ಹೇಗಿದ್ದೆ ಮತ್ತು ಈಗ ಹೇಗಾದೆ ಎಂಬ ಎರಡು ಚಿತ್ರಗಳನ್ನು ತಮ್ಮಇನ್ಸ್ಟಾ‌ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾತ್ರವಲ್ಲದೇ ಈ ಚಿತ್ರಕ್ಕೆ ನೀಡಿರುವ ಕ್ಯಾಪ್ಷನ್‌ನಲ್ಲಿ ಸಿಧು ತಾನು ಹೇಗೆ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದೆ, ಪ್ರಾಣಾಯಾಮಗಳನ್ನು ಅನುಸರಿಸಿದೆ ಮತ್ತು ಸುದೀರ್ಘ ವಾಕಿಂಗ್ ತನ್ನ ಈ ದೇಹ ತೂಕ ಇಳಿಸುವಿಕೆಗೆ ಹೇಗೆ ಸಹಕಾರಿಯಾಯಿತು ಎಂಬುದನ್ನು ಅವರು ತನ್ನ ಈ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ. ‘ಮೊದಲು ಮತ್ತು ಆ ಬಳಿಕ... ಆಗಸ್ಟ್ ನಿಂದ ಕಳೆದ ಐದು ತಿಂಗಳ ಅವಧಿಯಲ್ಲಿ 33 ಕೆ.ಜಿ. ತೂಕವನ್ನು ಕಳೆದುಕೊಂಡಿದ್ದೇನೆ’ ಎಂದು ಸಿಧು ಬರೆದುಕೊಂಡಿದ್ದಾರೆ.

‘ಇದೆಲ್ಲವೂ ದೃಢ ಇಚ್ಛಾಶಕ್ತಿ (ವಿಲ್ ಪವರ್), ನಿರ್ಧಾರ, ವಿಧಾನ ಮತ್ತು ಶಿಸ್ತುಬದ್ಧ ಆಹಾರ ಪದ್ಧತಿಗಳನ್ನು ಅನುಸರಿಸುವುದರ ಜೊತೆಗೆ ಪ್ರಾಣಾಯಾಮ ಹಾಗೂ ತೂಕ ತರಬೇತಿ ಮತ್ತು ಸುದೀರ್ಘ ನಡಿಗೆಯಿಂದ ಸಾಧ್ಯವಾಗಿದೆ.. ಅಸಾಧ್ಯವಾದುದು ಯಾವುದೂ ಇಲ್ಲ ಸ್ನೇಹಿತರೇ – ‘ಪೆಹ್ಲೇ ಸುಖ್ ನಿರೋಗಿ ಕಾಯ’ (ಆರೋಗ್ಯವಂತ ದೇಹ ಅತ್ಯಂತ ದೊಡ್ಡ ವರ)’ ಎಂದು ಈ ಕಾಂಗ್ರೆಸ್ ನಾಯಕ ಫಿಟ್ನೆಸ್ ಮಂತ್ರವನ್ನು ಜಪಿಸಿದ್ದಾರೆ.

ಇದನ್ನೂ ಓದಿ: Health Tips: ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ತಜ್ಞರು ಹೇಳಿದ್ದೇನು?

ಈ ಪೋಸ್ಟನ್ನು ಸಿಧು ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ ಶೇರ್ ಮಾಡುತ್ತಿದ್ದಂತೆ ಇದು 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಸಿಧು ಅವರ ಈ ತೂಕ ಕಳೆದುಕೊಳ್ಳುವಿಕೆ ವಿಧಾನಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದು, ಹೆಚ್ಚಿನವರು ಹಾರ್ಟ್ ಮತ್ತು ಫೈರ್ ಇಮೋಜಿಗಳನ್ನು ಹಾಕಿ ಖುಷಿ ವ್ಯಕ್ತಪಡಿಸಿದ್ದಾರೆ.

‘ಕ್ರಿಕೆಟ್ ಮೈದಾನದಲ್ಲಿ ನಿಮ್ಮ ಬ್ಯಾಟ್‌ನಲ್ಲಿ ಸಿಕ್ಸರ್ ಬಾರಿಸಿದಂತೆ ಇದೊಂದು ಅಮೋಘ ಸಾಧನೆ. ನಿಮ್ಮ ಈ ಆಹಾರ ಪದ್ಧತಿಯ ಸೂತ್ರವನ್ನು ಹಂಚಿಕೊಂಡರೆ ನಿಮ್ಮ ಅಭಿಮಾನಿಗಳಿಗೆ ಪ್ರಯೋಜನಕಾರಿಯಾದೀತು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

‘ನಿಮ್ಮ ಎನರ್ಜಿ ಲೆವೆಲ್ ಹೆಚ್ಚಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಮತ್ತು ಆಂಟಿ ಜೀ ಚೇತರಿಸಿಕೊಂಡ ಬಳಿಕ ನೀವು ಹಾಕುತ್ತಿರುವ ಎಲ್ಲಾ ವಿಡಿಯೋಗಳನ್ನೂ ನಾವು ನೋಡುತ್ತಿದ್ದೇವೆ’ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

‘ಸೂಪರ್..! ನೀವೀಗ 95 ಕೆ.ಜಿಗೆ ಇಳಿದಿರುವುದು ಖುಷಿಯ ಸಂಗತಿ.. ನೂರಕ್ಕಿಂತ ಮೇಲೆ ಇನ್ನು ಹೋಗುವುದ ಬೇಡ.. ಕಡಿಮೆ ಸ್ಕೋರ್ ಮತ್ತು ಹೈ ಪ್ರೊಫೈಲನ್ನು ಕಾಪಾಡಿಕೊಳ್ಳಿ’ ಎಂದು ಇನ್ನೊಬ್ಬರು ಕ್ರಿಕೆಟ್ ಕಮೆಂಟ್ರಿ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.