ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

RCBW vs GGTW: ಗುಜರಾತ್‌ ಜಯಂಟ್ಸ್‌ ವಿರುದ್ದ ಸೋತು ಹ್ಯಾಟ್ರಿಕ್‌ ಆಘಾತ ಅನುಭವಿಸಿದ ಆರ್‌ಸಿಬಿ!

RCBW vs GGTW Match Highlight: ಪ್ರಸ್ತುತ ಸಾಗುತ್ತಿರುವ 2024ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುರುವಾರ ನಡೆದಿದ್ದ ಪಂದ್ಯದಲ್ಲಿ ಗುಜರಾತ್‌ ಜಯಂಟ್ಸ್‌ ವಿರುದ್ಧ ಆರ್‌ಸಿಬಿ 6 ವಿಕೆಟ್‌ ಸೋಲು ಅನುಭವಿಸಿತು.

RCBW vs GGTW: ಆರ್‌ಸಿಬಿ ವನಿತೆಯರಿಗೆ ಹ್ಯಾಟ್ರಿಕ್‌ ಸೋಲಿನ ಆಘಾತ!

ಗುಜರಾತ್‌ ಜಯಂಟ್ಸ್‌ ಎದುರು ಆರ್‌ಸಿಬಿಗೆ ಸೋಲು.

Profile Ramesh Kote Feb 27, 2025 11:30 PM

ಬೆಂಗಳೂರು: ತವರು ಅಭಿಮಾನಿಗಳ ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲಿನ ಆಘಾತ ಅನುಭವಿಸಿದೆ. ಗುರುವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಆರ್‌ಸಿಬಿ, ಗುಜರಾತ್‌ ಜಯಂಟ್ಸ್‌ ಎದುರು 6 ವಿಕೆಟ್‌ ಸೋಲು ಕಂಡಿತು. ಆ ಮೂಲಕ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅಪಾರ ಸಂಖ್ಯೆಯ ಆರ್‌ಸಿಬಿ ಅಭಿಮಾನಿಗಳಿಗೆ ಸ್ಮೃತಿ ಮಂಧಾನಾ ಪಡೆ ಮತ್ತೊಮ್ಮೆ ನಿರಾಶೆ ಮೂಡಿಸಿತು.

ಆರ್‌ಸಿಬಿ ನೀಡಿದ್ದ ಕೇವಲ 126 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಜಯಂಟ್ಸ್‌ ತಂಡ, ಆರಂಭಿಕ ಮೂರು ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡರೂ ನಾಯಕಿ ಆಶ್ಲೆ ಗಾರ್ಡ್ನರ್‌ (58 ರನ್‌) ಹಾಗೂ ಫೋಬ್‌ ಲೀಚ್‌ಫೀಲ್ಡ್‌ (30) ಅವರ ಬ್ಯಾಟಿಂಗ್‌ ಬಲದಿಂದ 16.3 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಈ ಟೂರ್ನಿಯಲ್ಲಿ ಗುಜರಾತ್‌ಗೆ ಇದು ಎರಡನೇ ಜಯ.

WPL 2025: ಡಬ್ಲ್ಯುಪಿಎಲ್‌ ಮುಂದಿನ ಪಂದ್ಯದಿಂದ ಹೊರಗುಳಿದ ಚಾಮರಿ ಅಟ್ಟಪಟ್ಟು

ಆಶ್ಲೆ ಗಾರ್ಡ್ನರ್‌ ಅರ್ಧಶತಕ

ಗುಜರಾತ್‌ ತಂಡದ ಆರಂಭಿಕ ಮೂರು ವಿಕೆಟ್‌ಗಳನ್ನು ಬೇಗ ಕಿತ್ತರೂ ಆರ್‌ಸಿಬಿ ಬೌಲರ್‌ಗಳಿಂದ ನಾಯಕಿ ಆಶ್ಲೆ ಗಾರ್ಡ್ನರ್‌ ಅವರನ್ನು ಆರಂಭದಲ್ಲಿಯೇ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಅವರು 31 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 58 ರನ್‌ ಸಿಡಿಸಿ ತಂಡವನ್ನು ಗೆಲುವಿನ ಗೆಲುವಿನ ದಡ ಸೇರಿಸಿ ವಿಕೆಟ್‌ ಒಪ್ಪಿಸಿದರು. ಇದಕ್ಕೂ ಮುನ್ನ ಇವರು ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಪಡೆದುಕೊಂಡಿದ್ದರು. ಗುಜರಾತ್‌ ತಂಡದ ಗೆಲುವಿಗೆ ನೆರವು ನೀಡಿದ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೊನೆಯಲ್ಲಿ ಫೋಬ್‌ ಲೀಚ್‌ಫೀಲ್ಡ್‌ ಅವರು 21 ಎಸೆತಗಳಲ್ಲಿ 30 ರನ್‌ಗಳನ್ನು ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆರ್‌ಸಿಬಿ ಪರ ರೇಣುಕಾ ಸಿಂಗ್‌ ಹಾಗೂ ವೇರ್‌ಹ್ಯಾಮ್‌ ತಲಾ ಎರಡೆರಡು ವಿಕೆಟ್‌ ಪಡೆದರು.



125 ರನ್‌ ಗಳಿಸಿದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಗುಜರಾತ್‌ ಜಯಂಟ್ಸ್‌ ತಂಡದ ಶಿಸ್ತು ಬದ್ದ ಬೌಲಿಂಗ್‌ ದಾಳಿಗೆ ನಲುಗಿ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 125 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಪರ 28 ಎಸೆತಗಳಲ್ಲಿ 33 ರನ್‌ ಗಳಿಸಿದ ಕನಿಜಾ ಅಹುಜಾ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

ಬೆಂಗಳೂರಿಗೆ ಆರಂಭಿಕ ಆಘಾತ

ಆರ್‌ಸಿಬಿ ಪರ ಎಂದಿನಂತೆ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂಧಾನಾ ಹಾಗೂ ವ್ಯಾಟ್‌ ಹಾಡ್ಜ್‌ ವೈಫಲ್ಯ ಅನುಭವಿಸಿದರು. ಮೊದಲಿಗೆ ವ್ಯಾಟ್‌ ಹಾಡ್ಜ್‌ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಎಲಿಸ್‌ ಪೆರಿ ಡಕ್‌ಔಟ್‌ ಆದರು. ನಾಯಕಿ ಸ್ಮೃತಿ ಮಂಧಾನಾ ಕೂಡ 10 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಬೆಂಗಳೂರು ತಂಡ 25 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.



ಆರ್‌ಸಿಬಿಗೆ ಆಸರೆಯಾದ ಕನಿಕಾ ಅಹುಜಾ

ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟ್‌ ಮಾಡಿದ ರಾಘ್ವಿ ಬಿಸ್ಟ್‌ (22 ರನ್‌) ಹಾಗೂ ಕನಿಕಾ ಅಹುಜಾ (33) ಅವರು ಮುರಿಯದ ನಾಲ್ಕನೇ ವಿಕೆಟ್‌ಗೆ 48 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಇನ್ನು ಸ್ಪೋಟಕ ಆಟಗಾರ್ತಿ ರಿಚಾ ಘೋಷ್‌ (9) ನಿರಾಶೆ ಮೂಡಿಸಿದರು. ಡೆತ್‌ ಓವರ್‌ಗಳಲ್ಲಿ ಜಾರ್ಜಿಯಾ ವೇರ್‌ಹ್ಯಾಮ್ 20 ರನ್‌ ಹಾಗೂ ಕಿಮ್‌ ಗಾರ್ಥ್‌ 14 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದರು. ಗುಜರಾತ್‌ ಜಯಂಟ್ಸ್‌ ಪರ ತನುಜಾ ಕಾನ್ವರ್‌ 4 ಓವರ್‌ಗಳಲ್ಲಿ ಕೇವಲ 16 ರನ್‌ ನೀಡಿ 2 ವಿಕೆಟ್‌ ಕಿತ್ತರು.

WPL 2025: 8 ಸಿಕ್ಸರ್‌ ಸಿಡಿಸುವ ಮೂಲಕ ವಿಶೇಷ ದಾಖಲೆ ಬರೆದ ಆಶ್ಲೀ ಗಾರ್ಡ್ನರ್!

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 125-7 (ಕನಿಕಾ ಅಹುಜಾ 33, ರಾಘ್ವಿ ಬಿಸ್ಟ್‌ 22, ಜಾರ್ಜಿಯಾ ವೇರ್‌ಹ್ಯಾಮ್‌ 20; ತನುಜಾ ಕಾನ್ವರ್‌ 16 ಕ್ಕೆ 2, ದೇವೇಂದ್ರ ಡಾಟಿನ್‌ 33 ಕ್ಕೆ 2, ಆಶ್ಲೀ ಗಾರ್ಡ್ನರ್ 22 ಕ್ಕೆ 1)

ಗುಜರಾತ್‌ ಜಯಂಟ್ಸ್‌: 16.3 ಓವರ್‌ಗಳಲ್ಲಿ 126-4 (ಆಶ್ಲೆ ಗಾರ್ಡ್ನರ್‌ 58, ಫೋಬ್‌ ಲೀಚ್‌ಫೀಲ್ಡ್‌ 30; ರೇಣುಕಾ ಸಿಂಗ್‌ 24 ಕ್ಕೆ 2, ಜಾರ್ಜಿಯಾ ವೇರ್‌ಹ್ಯಾಮ್‌ 26ಕ್ಕೆ 2)