#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಅಂಡರ್-19 ಮಹಿಳಾ ಟಿ20 ವಿಶ್ವಕಪ್‌; ಭಾರತ ಶುಭಾರಂಭ

U19 Women's T20 World Cup: ಭಾರತ ತಂಡ ಮುಂದಿನ ಪಂದ್ಯವನ್ನು ಮಲೇಷ್ಯಾ ವಿರುದ್ಧ ಆಡಲಿದೆ. ಈ ಪಂದ್ಯ ಜ.21 ರಂದು ನಡೆಯಲಿದೆ. ಸದ್ಯ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ. ಶ್ರೀಲಂಕಾ ದ್ವಿತೀಯ ಸ್ಥಾನಿಯಾಗಿದೆ.

ಅಂಡರ್-19 ಮಹಿಳಾ ಟಿ20 ವಿಶ್ವಕಪ್‌; ಭಾರತ ಶುಭಾರಂಭ

India Women U19

Profile Abhilash BC Jan 19, 2025 5:17 PM

ಕೌಲಾಲಂಪುರ: ಮಹಿಳಾ ಅಂಡರ್‌-19 ಟಿ20 ವಿಶ್ವಕಪ್‌(U19 Women's T20 World Cup) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ(INDWU19 vs WIWU19) ತಂಡ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಭಾನುವಾರ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ ಗೆಲುವು ಸಾಧಿಸಿದೆ.

ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ ಭಾರತೀಯ ಬೌಲರ್‌ಗಳ ಎಸೆತಗಳಿಗೆ ತರಗೆಲೆಯಂತೆ ಉದುರಿ ಕೇವಲ 44 ರನ್‌ಗೆ ಸರ್ವಪತನ ಕಂಡಿತು. ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ ಪವರ್‌ ಪ್ಲೇ ಮುಕ್ತಾಯಕ್ಕೂ ಮುನ್ನವೇ 4.2 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 47 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಜೋಶಿತಾ 2 ಓವರ್‌ಗಳಲ್ಲಿ 5 ರನ್‌ ನೀಡಿ 2 ವಿಕೆಟ್‌ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉಳಿದಂತೆ ಪಿ. ಸಿಸೋಡಿಯಾ 7 ಕ್ಕೆ 3, ಆಯುಷಿ ಶುಕ್ಲಾ 6 ಕ್ಕೆ 2 ವಿಕೆಟ್‌ ಕಿತ್ತರು.

ಚೇಸಿಂಗ್‌ ವೇಳೆ ಭಾರತ ನಾಲ್ಕು ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿದರೂ, ಜಿ ಕಮಲಿನಿ(16*) ಮತ್ತು ಸಾನಿಕಾ ಚಲ್ಕೆ(18*) ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು.

ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ ಪರ 5 ಆಟಗಾರ್ತಿಯರು ಶೂನ್ಯ ಸಂಕಟಕ್ಕೆ ಸಿಲುಕಿದರು. ಅಸಾಬಿ ಕ್ಯಾಲೆಂಡರ್(12) ಮತ್ತು ಕೆನಿಕಾ ಕ್ಯಾಸರ್(15) ಮಾತ್ರ ಎರಡಂಕಿ ಮೊತ್ತ ಕಲೆಹಾಕಿದರು. ಭಾರತ ತಂಡ ಮುಂದಿನ ಪಂದ್ಯವನ್ನು ಮಲೇಷ್ಯಾ ವಿರುದ್ಧ ಆಡಲಿದೆ. ಈ ಪಂದ್ಯ ಜ.21 ರಂದು ನಡೆಯಲಿದೆ. ಸದ್ಯ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ. ಶ್ರೀಲಂಕಾ ದ್ವಿತೀಯ ಸ್ಥಾನಿಯಾಗಿದೆ.



ಶ್ರೀಲಂಕಾಗೆ 139 ರನ್‌ ಜಯ

ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ಮಲೇಷ್ಯಾ ವಿರುದ್ಧ 139 ರನ್‌ ಅಂತರದ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ಬಾರಿಸಿದರೆ, ಗುರಿ ಬೆನ್ನಟ್ಟಿದ ಮಲೇಷ್ಯಾ14.1 ಓವರ್‌ಗಳಲ್ಲಿ 23 ರನ್‌ಗೆ ಆಲೌಟ್‌ ಆಯಿತು. ಲಂಕಾ ಪರ ದಹಮಿ ಸನೇತ್ಮಾ(55) ಅರ್ಧಶತಕ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ಬೌಲಿಂಗ್‌ನಲ್ಲಿ ಮಿಂಚಿದರೆಂದರೆ, ಚಾಮೋದಿ ಪ್ರಬೋದ(5 ಕ್ಕೆ 3) ಮತ್ತು ಲಿಮಾನ್ಸ ತಿಲಕರತ್ನ(3 ಕ್ಕೆ 2).