Monday, 5th December 2022

ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡೋಣ !

ಪ್ರಚಲಿತ

ಪ್ರವೀಣ ವಿವೇಕ

ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ರಾಜಕೀಯ ತ್ಯಾಗದಿಂದ ಕೂಡಿತ್ತು. ಆದರೆ, ಸ್ವಾತಂತ್ರ್ಯ ನಂತರ ಅದು ಭೋಗಾಭಿಲಾಷೆಯಾಗಿ ಪರಿಣಮಿಸಿದೆ. ಅಂದು ರಾಜಕೀಯ ಪ್ರವೇಶಿಸುವುದೆಂದರೆ ತಿತಿಕ್ಷಾ ಜೀವನ ನಡೆಸುವುದಾಗಿತ್ತು. ಕಠಿಣ ಪರಿಶ್ರಮದ ಮೂಲಕ ವ್ಯಕ್ತಿ ಸಾಧನೆ ಮಾಡಬೇಕಿತ್ತು.

ಆದರೆ, ಇಂದು ಎಲ್ಲವೂ ಬದಲಾಗಿದೆ. ಇಂದು ರಾಜಕಾರಣ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯುವುದೇ ಪರಮ ಗುರಿಯಾಗಿದೆ. ಇವೆಲ್ಲದರ ನಡುವೆ ಅಧಿಕಾರ ನಮ್ಮ ಕುಟುಂಬಕ್ಕೆ ಉಳಿಯಬೇಕು, ನಾವೇ ಎಲ್ಲರನ್ನು ಆಳಬೇಕು ಎನ್ನುವ ಮನೋಸ್ಥಿತಿ ಕೆಲವರದ್ದು. ಪರಿಣಾಮ ಕುಟುಂಬ ರಾಜಕಾರಣ ಇಂದಿಗೂ ಜೀವಂತವಾಗಿದೆ. ಮತ್ತೊಂದು ವಿಧಾನಸಭೆ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ.

ಇನ್ನೇನು ಆರು ತಿಂಗಳಿಗೆ ಎದುರಾಗುವ ಚುನಾವಣೆ ಎದುರಿಸಲು ರಾಜ ಕೀಯ ಪಕ್ಷಗಳು ಭರ್ಜರಿ ತಯಾರಿ ಆರಂಭಿಸಿವೆ. ಪ್ರತಿ ಚುನಾವಣೆ ಬಂದಾಗಲೂ ಬಿಜೆಪಿ ಕಾಂಗ್ರೆಸ್ ಮೇಲೆ ಅದೊಂದು ಕುಟುಂಬ ರಾಜಕಾರಣದ ಪಕ್ಷ ಎಂದು ಹೇಳುವ ಮೂಲಕ ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸು ತ್ತದೆ. ವಿಪರ್ಯಾಸ ಎಂದರೆ ಈ ಕುಟುಂಬ ರಾಜಕಾರಣದಿಂದ ಬಿಜೆಪಿ ಕೂಡ ಹೊರತಾಗಿಲ್ಲ!

ಕೆಲ ಬೆರಳಣಿಕೆಷ್ಟು ರಾಜಕಾರಣಿಗಳು ಮಾತ್ರ ಮೇಲಿನ ಈ ಗುಣಗಳನ್ನು ಹೊಂದಿರುತ್ತಾರೆ. ಉಳಿದವರು ಮಾತ್ರ ಬೇರೆಯವರ ಕೃಪ ಕ ಟಾಕ್ಷದಿಂದಲೇ ಅಧಿಕಾರದ ಗದ್ದುಗೆ ಯನ್ನು ತಮ್ಮದಾಗಿಸಿಕೊಳುತ್ತಾರೆ. ಈಗ ನೋಡಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿದೆ. ಹೀಗೆ ಸ್ವೀಕರಿಸಿದ ಅರ್ಜಿಗಳಲ್ಲಿ ೧೦ ಅಪ್ಪ- ಮಕ್ಕಳ ಜೋಡಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಹೀಗೆ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಟಿಕೆಟ್ ಸಿಕ್ಕು ಬಿಟ್ಟರೆ ಪಕ್ಷಕ್ಕಾಗಿ ತಳ ಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದ ಕಾರ್ಯ ಕರ್ತರ ಪಾಡೇನು ಎಂಬುದು ಸಹಜವಾದ ಪ್ರಶ್ನೆ.

ಕರೋನಾ ಮಹಾಮಾರಿಗೆ ಬೆಳಗಾವಿ ಸಂಸದ ಸುರೇಶ್ ಅಂಗಡಿ ತುತ್ತಾದಾಗ ಆ ಕ್ಷೇತ್ರಕ್ಕೆ ಉಪಚುನಾವಣೆ ಜರುಗಿತು. ಪಾರ್ಟಿ ವಿಥ್ ಡಿಫರೆನ್ಸ್ ಎಂದು ಹೇಳಿಕೊಳ್ಳುವ ಬಿಜೆಪಿ ಹೊಸ ಅಭ್ಯರ್ಥಿಗೆ ಮಣೆ ಹಾಕಬಹುದು ಎನ್ನುವ  ಲೆಕ್ಕಾಚಾರದಲ್ಲಿ ಎಲ್ಲರೂ ಇದ್ದರು. ವಿಪರ್ಯಾಸವೆಂದರೆ ಬಿಜೆಪಿ ಆಗ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ನೀಡಿತು. ಅಲ್ಲದೇ ಕಾಂಗ್ರೆಸ್ ಕೂಡಾ ಬಸವ ಕ ಲ್ಯಾಣದಲ್ಲಿ ದಿವಗಂತ ನಾರಾಯಣ ರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಿತ್ತು. ಇದನ್ನು ನೋಡಿದಾಗ ಈ ಕುಟುಂಬ ರಾಜ ಕಾರಣ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ, ಈ ರಕ್ತಬೀಜಾಸುರ ಪ್ರತಿ ಯೊಂದು ಪಕ್ಷದಲ್ಲಿ ಹಾಸು ಹೊಕ್ಕಿದೆ.

ರಾಜ್ಯದಲ್ಲಿ ಮೈತ್ರಿ ಸರಕಾರ ಆಡಳಿತವಿದ್ದಾಗ ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಸಿ. ಎಸ್ ಶಿವಳ್ಳಿಯವರು ಅಕಾಲಿಕವಾಗಿ ಮರಣ ಹೊಂದಿದರು. ಆಗಲೂ ಕಾಂಗ್ರೆಸ್ ಶಿವಳ್ಳಿಯವರ ಧರ್ಮಪತ್ನಿ ಕುಸುಮಾ ಶಿವಳ್ಳಿಯವರಿಗೆ ಉಪಚುನಾವಣೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬಂದಿತ್ತು. ಅದೂ ಬಿಡಿ, ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಕೂಡಾ ದಿವಗಂತ ಸತ್ಯನಾರಾಯಣ್ ಅವರ ಪತ್ನಿಗೆ ಟಿಕೆಟ್ ನೀಡಿ ಚುನಾವಣಾ ರಣಕಣಕ್ಕೆ
ಧುಮುಕಿತ್ತು. ಒಟ್ಟಿನಲ್ಲಿ ನಾಯಕರೊಬ್ಬರು ಮರಣ ಹೊಂದಿದ ನಂತರ ಆ ನಾಯಕನ ಕುಟುಂಬಸ್ಥರಿಗೆ ಟಿಕೆಟ್ ನೀಡಿ ಅನುಕಂಪದ ಅಲೆಯ ಆಧಾರದ ಮೇಲೆ ಗೆಲ್ಲುವ ತವಕ ಎಲ್ಲ ಪಕ್ಷಗಳಲ್ಲೂ ಚಾಲ್ತಿಯಲ್ಲಿದೆ.

ಕುಟುಂಬ ರಾಜಕಾರಣ ಕೇವಲ ರಾಜಕೀಯ ನಾಯಕನ ಮರಣಾನಂತರ ಮುನ್ನೆಲೆಗೆ ಬರುತ್ತಿಲ್ಲ! ಬದಲಾಗಿ ಈ ಹಿಂದೆ ರಾಜರು ತಮ್ಮ ಉತ್ತರಾಧಿ ಕಾರಿಯನ್ನು ನೇಮಕ ಮಾಡಿಕೊಳ್ಳತ್ತಿದ್ದಂತೆ, ಇವತ್ತಿನ ರಾಜಕೀಯ ಮುಖಂಡರು ತಾವು ಬದುಕಿzಗಲೇ ತಮ್ಮ ಕುಟುಂಬದ ಒಂದು ಕುಡಿಯನ್ನು ರಾಜಕಾರಣಕ್ಕೆ ಎಳೆದು ತಂದಿಡುವ ಪ್ರಯತ್ನ ಮಾಡುತ್ತಾರೆ. ಹೀಗೆ ಕುಟುಂಬ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿರುವು ದನ್ನು ನೋಡಿದಾಗ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಲಿಂಕನ್ ಅವರ ಘೋಷಣೆ ನಿರರ್ಥಕವಾಗುತ್ತಿದೆ ಎಂದು ಭಾಸವಾಗುತ್ತದೆ.

ಕುಟುಂಬ ರಾಜಕಾರಣ ಗ್ರಾಮ ಪಂಚಾಯತ್ ಚುನಾವಣೆಯಿಂದ ಹಿಡಿದು ರಾಷ್ಟ್ರ ಮಟ್ಟದ ಚುನಾವಣೆ ವರೆಗೂ ಅಂಟಿಕೊಂಡಿದೆ. ಬಹುತೇಕ ಶಾಸಕರು ಹಾಗೂ ಸಂಸದರು ತಮಗೆ ಪರ್ಯಾಯವಾಗಿ ಬೇರೆ ಕಾರ್ಯಕರ್ತರನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಮಾಡುವುದೇ ಇಲ್ಲ! ಕಾರ್ಯಕರ್ತರು ತಮ್ಮ ಸ್ವಂತ ಪರಿಶ್ರಮದ ಮೇಲೆ ರಾಜಕೀಯ ಮುಖಂಡನ ಸಮಬಲಕ್ಕೆ ಬಂದರೂ, ಅವರಿಗೆ ಎಲ್ಲಿ ಮತ್ತು ಹೇಗೆ ತಿವಿಯ ಬೇಕೆಂಬುವುದನ್ನು ನಾಯಕ ಆಗಲೇ ತಿಳಿದುಕೊಂಡು ಬಿಟ್ಟಿರುತ್ತಾನೆ. ಮುಂದೊಂದು ದಿನ ಹಾಗೆಯೇ ಮಾಡಿ ಕಾರ್ಯಕರ್ತನನ್ನು ಮೂಲೆಗುಂಪು
ಮಾಡಿ ಬಿಡುತ್ತಾನೆ. ಸಮಾಜ ಸೇವೆಯೆಂಬ ಕುಂಟು ನೆಪದಲ್ಲಿ ರಾಜಕೀಯ ಪ್ರವೇಶಿಸುವ ರಾಜಕಾರಣಿಗಳು ಅಧಿಕಾರ ಸಿಕ್ಕ ನಂತರ ತಮ್ಮ ಇಡೀ ಕುಟುಂಬವನ್ನು ರಾಜಕಾರಣಕ್ಕೆ ತಂದು ಆಗರ್ಭ ಶ್ರೀಮಂತರಾಗಿ ಅಭಿವೃದ್ಧಿಯ ದೃಷ್ಟಿಕೋನವನ್ನೇ ಮರೆತು ಬಿಡುತ್ತಾರೆ.

೧೯೨೦ ಡಿಸೆಂಬರ್ ೧೪ ರಂದು ಅಕಾಲಿ ದಳ ಎನ್ನುವ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದಿತು. ಸಿಖ್ ಸಮುದಾಯದ ಧಾರ್ಮಿಕ ಸಂಸ್ಥೆ ಗುರುದ್ವಾರ ಕಮಿಟಿ ಸಮಿತಿಯ ರಾಜಕೀಯ ಕಾರ್ಯಪಡೆಯಾಗಿ ಇದು ಕಾರ್ಯ ನಿರ್ವಹಿಸುತಿತ್ತು. ದೇಶ ಸ್ವಾತಂತ್ರ್ಯ ಪಡೆದುಕೊಂಡ ನಂತರ ಪಂಜಾಬಿ ಮಾತನಾಡುವ ಭಾಷಿಕರಿಗೆ ಪ್ರತ್ಯೇಕ ರಾಜ್ಯ ನೀಡಬೇಕು ಎಂಬ ಹೋರಾಟದ ಮುಂದಾಳತ್ವ ವಹಿಸಿತ್ತು. ಇದರ ಫಲವಾಗಿ ೧೯೬೭ ರಲ್ಲಿ ಮೈತ್ರಿ ಪಕ್ಷಗಳ ಬೆಂಬಲದಿಂದ ಪಂಜಾಬಿನ ಅಽಕಾರದ ಚುಕ್ಕಾಣಿ ಹಿಡಿಯಿತು.

೧೯೭೭ ರಲ್ಲಿ ನಡೆದ ಚುನಾವಣೆಯಲ್ಲಿ ಅಕಾಲಿ ದಳ ಸ್ವಂತ ಬಲದ ಮೇಲೆ ಅಧಿಕಾರಕ್ಕೇರಿತು, ಪ್ರಕಾಶ್ ಸಿಂಗ್ ಬಾದಲ್ ಪಂಜಾಬಿನ ಮುಖ್ಯಮಂತ್ರಿಯಾದರು. ನಂತರದ ದಿನಗಳಲ್ಲಿ ಬಾದಲ್ ಅಕಾಲಿ ದಳದ ಮೇಲೆ ಪ್ರಭುತ್ವ ಸಾಧಿಸಿ ಎರಡು ಮೂರು ಬಾರಿ ಮುಖ್ಯಮಂತ್ರಿಯಾದರು.
ವಿಪರ್ಯಾಸವೆಂದರೆ ಸಿಖ್ ಧರ್ಮದ ಹಿತ ಕಾಪಾಡುವ ದೃಷ್ಟಿಯಿಂದ ಹುಟ್ಟಿಕೊಂಡ ಅಕಾಲಿ ದಳ ಕೇವಲ ಬಾದಲ್ ಕುಟುಂಬಕ್ಕೆ ಸೀಮಿತವಾಯಿತು, ಈಗ ಬಾದಲ್ ಪುತ್ರ ಸುಖ್‌ಬೀರ್ ಬಾದಲ್ ಅಕಾಲಿ ದಳದ ಅಧ್ಯಕ್ಷರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಹಿಂದುತ್ವದ ಅಜೆಂಡಾ ಹಾಗೂ ವಲಸಿಗರ ವಿರುದ್ದ ಹೋರಾಟ ನಡೆಸಿ ಮುಖ್ಯಮಂತ್ರಿ ಗಾದಿಗೇರಿದ್ದ ಬಾಳಾ ಠಾಕ್ರೆ ಯವರ ಶಿವಸೇನೆ, ತೆಲಾಗಂಣ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಮುನ್ನೆಲೆಗೆ ಬಂದಿದ್ದ ತೆಲಾಗಂಣ ರಾಷ್ಟ್ರ ಸಮಿತಿ, ಸಮಾಜವಾದಿ ಸಿದ್ಧಾಂತದ ಮೇಲೆ ಸ್ಥಾಪನೆಗೊಂಡ ಮುಲಾಯಂ ಸಿಂಗರ ಸಮಾಜವಾದಿ ಪಕ್ಷ, ಜಯಪ್ರಕಾಶ್ ನಾರಾಯಣರ ಸೂರ್ತಿಯಿಂದ ರಾಜಕೀಯ ಪ್ರವೇಶ ಪಡೆದಿದ್ದ ಲಾಲೂ ಪ್ರಸಾದ್ ರವರ ರಾಷ್ಟ್ರೀಯ ಜನತಾ ದಳ, ಜಾತ್ಯಾತೀತತೆಯನ್ನು ಬೋಧಿಸಿ ಜಾತಿ ಆಧಾರದ ಮೇಲೆ ಚುನಾವಣೆಗೆ ಹೋಗುವ ದೇವೇಗೌಡರ ಜಾತ್ಯತೀತ ಜನತಾದಳವನ್ನೂ ಸೇರಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳಲ್ಲೂ ಸಂತತಿ ರಾಜಕಾರಣವೇ ಎದ್ದು ಕಾಣುತ್ತದೆ.

ಇನ್ನೂ ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಬೇಕೆ? ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್‌ನ್ನು ವಿಸರ್ಜನೆ ಮಾಡಿ ಬಿಡೋಣ ಎಂದು ಗಾಂಧಿ ಹೇಳಿದ್ದರು! ಆದರೆ, ಇಂದು ಕಾಂಗ್ರೆಸ್ ನೆಹರು ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಬಿಟ್ಟಿದೆ. ಈ ಕಂಪನಿಗೆ ನೆಹರು, ಇಂದಿರಾ ಗಾಂಧಿ, ಸಂಜಯ ಗಾಂಧಿ,
ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಷೇರುದಾರರಾಗಿದ್ದರು, ಈಗ ಹೊಸದಾಗಿ ಪ್ರಿಯಾಂಕ ಗಾಂಧಿ ಕೂಡಾ ಈ ಕಂಪನಿಗೆ ಷೇರುದಾರಳಾಗಿದ್ದಾಳೆ.

ವಿಚಿತ್ರವೆಂದರೆ ಕಾಂಗ್ರೆಸ್ಸಿಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಹೊರತುಪಡಿಸಿ ಬೇರೆಯವರನ್ನು ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಕಾಂಗ್ರೆಸ್ಸಿನಲ್ಲಿ ಪರ್ಯಾಯ ನಾಯಕರೇ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿತ್ತು.
ನಾಯಕರಿದ್ದರೂ ಗಾಂಧಿ ಕುಟುಂಬದ ಸದಸ್ಯರು ಅದೆಷ್ಟೋ ವರ್ಷಗಳಿಂದ ನಿರಾದಾಯಕವಾಗಿ ಬಂದಿರುವ ಅಧಿಕಾರವ ನ್ನು ಬೇರೆಯವರಿಗೆ ಹಸ್ತಾಂತರಿಸಲು ಅವರು ತಯಾರು ಇರಲಿಲ್ಲ. ಈಗ ಅಪರೂಪಕ್ಕೆ ನಮ್ಮದೇ ರಾಜ್ಯದ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ಸಿನ ರಾಷ್ಟ್ರೀಯ
ಅಧ್ಯಕ್ಷರಾಗಿದ್ದಾರೆ. ವಿಪರ್ಯಾಸವೆಂದರೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಶಾಸಕರಾಗಿದ್ದಾರೆ.

ಕುಟುಂಬ ರಾಜಕಾರಣದಿಂದ ಬಿಜೆಪಿ ಅಲ್ಪಮಟ್ಟಿಗೆ ಅಂತರ ಕಾಯ್ದುಕೊಂಡಿದೆ. ಆದರೂ ಅಲ್ಲಲ್ಲಿ ಕುಟುಂಬ ರಾಜಕಾರಣದ ವಾಸನೆಯನ್ನು ಮೂಸಿ ನೋಡಿದೆ. ರಾಜ್ಯದ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಕುಟುಂಬ ರಾಜಕಾರಣ ಅಂಟಿಕೊಂಡಿದೆ. ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ಸಂಸದ, ಮಾಜಿ ಮಂತ್ರಿ ಉದಾಸಿಯವರ ಪುತ್ರ ಶಿವಕುಮಾರ ಉದಾಸಿ ಹಾವೇರಿ ಗದಗ ಸಂಸದರು, ಮಕ್ಕಳ ಮತ್ತು
ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಯವರ ಪತಿ ಚಿಕ್ಕೋಡಿ ಲೊಕಸಭಾ ಕ್ಷೇತ್ರದ ಸಂಸದರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ ಶೆಟ್ಟರ್ ವಿಧಾನ ಪರಿಷತ್ ಸದಸ್ಯರು.

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್ ಶಾಸಕರು, ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬದ ರಾಜಕಾರಣ, ಡಿಕೆ ಶಿವಕುಮಾರ್ ಶಾಸಕರು ಇವರ ಸಹೋದರ ಡಿಕೆ ಸುರೇಶ್ ಸಂಸದರು, ಕುಮಾರಸ್ವಾಮಿಯವರ ಪತ್ನಿ ಶಾಸಕಿ, ರೇವಣ್ಣನವರ ಪತ್ನಿ ಮಾಜಿ ಜಿಲ್ಲಾ ಪಂಚಾಯಿತಿಯ ಸದ್ಯ ಸರು, ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಸಂಸದರು, ಮಾಜಿ ಸಿಎಂ ಸಿದ್ದರಾಮಯ್ಯ ನವರ ಪುತ್ರ ಯತೀಂದ್ರ ಕೂಡಾ ಶಾಸಕರಾಗಿದ್ದಾರೆ, ಹೀಗೆ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ಹರಡಿದೆ. ಅದೆಷ್ಟೋ ಕಾರ್ಯಕರ್ತರ ತ್ಯಾಗ ಮತ್ತು ಶ್ರಮದಿಂದ ನಾಯಕರಾಗುವ ಬಹುತೇಕ ರಾಜಕಾರಣಿಗಳು ಅಧಿಕಾರದ ಚುಕ್ಕಾಣಿ ಹಿಡಿದಾಗ ಕಾರ್ಯಕರ್ತರನ್ನು ಮರೆತು ಬಿಡುತ್ತಾರೆ.

ಅಧಿಕಾರದ ಅಮಲನ್ನು ತೀರಿಸಿಕೊಳ್ಳಲು ಕುಟುಂಬ ರಾಜಕಾರಣಕ್ಕೆ ಜೋತು ಬೀಳುತ್ತಾರೆ. ಪಕ್ಷಗಳು ಶಾಸಕರು, ಸಂಸದರು ಮರಣ ಹೊಂದಿದಾಗ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುತ್ತವೆ. ಆದರೆ, ಗೆದ್ದ ಅಭ್ಯರ್ಥಿ ತನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ವಿಧಾನಸಭೆ ಗಳಲ್ಲಿ ಅಥವಾ ಲೋಕಸಭೆಯಲ್ಲಿ ಮಂಡಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರಾ? ನಿಜವಾಗಿಯೂ ಅವರು ಜನರ ಕಷ್ಟಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯತೆಯನ್ನು ಹೊಂದಿದ್ದಾರಾ? ಎಂಬುವುದನ್ನು ವಿಚಾರ ಮಾಡಲು ಇದೊಂದು ಸೂಕ್ತ ಸಮಯವಾಗಿದೆ.

ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕ, ಆದಷ್ಟು ಬೇಗ ರಾಜಕಾರಣ ಕುಟುಂಬ ಮುಕ್ತವಾಗಲಿ. ಇದಕ್ಕೆ ಕರ್ನಾಟಕ
ವಿಧಾನಸಭೆ ಚುನಾವಣೆ ಮುನ್ನುಡಿ ಬರೆಯಲಿ.