Friday, 9th December 2022

ಅನವಶ್ಯಕ ವ್ಯಾಪಾರ ಪರವಾನಗಿ ವ್ಯವಸ್ಥೆ ರದ್ದಾಗಲಿ

ಕಳಕಳಿ

ಡಿ.ಎಸ್.ಅರುಣ್

ವ್ಯಾಪಾರಿಗಳು ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ, ‘ವ್ಯಾಪಾರ ಪರವಾನಗಿ ಇದೆಯೇ?’ ಎಂದು ಬ್ಯಾಂಕ್ ಅಧಿಕಾರಿ ಗಳು ಪ್ರಶ್ನಿಸುತ್ತಾರೆ. ಹೀಗಾಗಿ ನಿಗದಿತ ಪರವಾನಗಿ ಪಡೆಯಲು ವ್ಯಾಪಾರಸ್ಥರು ಸ್ಥಳೀಯ ಸಂಸ್ಥೆಗಳ ಮೊರೆ ಹೋಗ ಬೇಕಾಗುತ್ತದೆ. ಇಂಥ ವೇಳೆಯಲ್ಲಿ ಕಿರುಕುಳ ಆರಂಭವಾಗುತ್ತದೆ.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಮಂಡಲದ 147ನೇ ಅಧಿವೇಶನದಲ್ಲಿ ವರ್ತಕರ ಪರವಾಗಿ ದನಿಯೆತ್ತಿ, ಟ್ರೇಡ್ ಲೈಸೆನ್ಸ್ ಅಥವಾ ವ್ಯಾಪಾರ ಪರವಾನಗಿಯ (ಇದಕ್ಕೆ ಉದ್ದಿಮೆ ಪರವಾನಗಿ ಎಂದೂ ಕರೆಯುವುದುಂಟು) ವಿಷಯ ಹಾಗೂ ಇದರಿಂದ ವ್ಯಾಪಾ ರಸ್ಥರು ಅನುಭವಿಸುತ್ತಿರುವ ಸಂಕಟದ ಬಗ್ಗೆ ನಗರಾಭಿವೃದ್ಧಿ ಸಚಿವರ ಬಳಿ ಪ್ರಸ್ತಾಪಿಸಿ ಸುದೀರ್ಘವಾಗಿ ಚರ್ಚಿಸುವ ಅವಕಾಶ ದೊರೆಯಿತು.

ಇದಕ್ಕೆ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದರು, ತದನಂತರ ಮಾಧ್ಯಮಮಿತ್ರರು ಈ ವಿಷಯದ ಗಂಭೀರತೆ ಅರಿತು ನನ್ನ ಬಳಿ ಪ್ರತಿಕ್ರಿಯೆ ಕೇಳಿ ಅದನ್ನು ಚಿತ್ರೀಕರಿಸಿಕೊಂಡರು. ಸದರಿ ದೃಶ್ಯಮಾಲಿಕೆ ರಾಜ್ಯದ ಜನರಿಗೆ ತಲುಪಿ, ಶಿವಮೊಗ್ಗ, ದಾವಣಗೆರೆ, ಮಂಗಳೂರು, ರಾಯಚೂರು ಸೇರಿದಂತೆ ರಾಜ್ಯದ ಬಹಳಷ್ಟು ಭಾಗಗಳ ವರ್ತಕರು, ಉದ್ಯಮಿಗಳು ಹಾಗೂ ಶ್ರೀಸಾಮಾನ್ಯರು ತಮ್ಮ ದನಿಯಾಗಿ ನಿಂತ ನನಗೆ ಧನ್ಯವಾದ ತಿಳಿಸಿ, ತಮಗೆ ಆಗುತ್ತಿರುವ ಕೆಟ್ಟ ಅನುಭವದ ಕುರಿತು ಹೇಳಿಕೊಂಡಿದ್ದಾರೆ.

ವ್ಯಕ್ತಿಗತವಾಗಿಯೇ ಆಗಲಿ ಅಥವಾ ಸಮಾಜಕ್ಕೆ ಅನ್ವಯವಾಗುವಂತಿರಲಿ, ಪ್ರತಿಯೊಂದು ಆರ್ಥಿಕ ವಿಚಾರಕ್ಕೂ ಒಂದು ಉದ್ದೇಶ ಇರುತ್ತದೆ. ಅದರಲ್ಲೂ ತೆರಿಗೆ ಎನ್ನುವುದು ಒಂದು ಸಾಮಾಜಿಕ ಜವಾಬ್ದಾರಿ. ಸುಖಾಸುಮ್ಮನೆ ತೆರಿಗೆ ವಿಽಸಲೂ ಸಾಧ್ಯವಿಲ್ಲ. ಹಾಗೇನಾದರೂ ಆದಲ್ಲಿ ಅದು ಬೇಜವಾಬ್ದಾರಿತನ ಎನಿಸಿಕೊಳ್ಳುತ್ತದೆ ಮತ್ತು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ
ಬೀರುತ್ತದೆ.

ವ್ಯಾಪಾರ ಪರವಾನಗಿ ಹಾಗೂ ಶೋಷಣೆ ಇವೆರಡಕ್ಕೂ ಬಹಳ ಗಟ್ಟಿಯಾದ ಸಂಬಂಧವಿದೆ ಎನಿಸುತ್ತದೆ. ಏಕೆಂದರೆ, ವ್ಯಾಪಾ ರಸ್ಥರು ಪರವಾನಗಿ ಪಡೆಯಬೇಕೆಂದರೆ ಶೋಷಣೆ ಎಂಬುದು ಸರ್ವೇಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ದೇಶದ ಪ್ರಗತಿಯಲ್ಲಿ ವ್ಯಾಪಾರಸ್ಥರ ಕೊಡುಗೆ ಅಪಾರ. ದೇಶದಲ್ಲಿ ತೆರಿಗೆ ಸಂಗ್ರಹ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಾಗುವಲ್ಲಿ ವ್ಯಾಪಾರಸ್ಥರ ಪಾತ್ರ ಮಹತ್ತರವಾಗಿದೆ. ಇದರ ನಡುವೆ ಸ್ಥಳೀಯ ಮಟ್ಟದಲ್ಲಿ ವ್ಯಾಪಾರ ಪರವಾನಗಿ ಏಕೆ ಬೇಕು ಹಾಗೂ ಅದರಿಂದ ಆಗುತ್ತಿರುವ ಪರಿಣಾಮಗಳೇನು ಎಂಬುದರ ಬಗ್ಗೆ ಸರಕಾರ ಚಿಂತನೆ ನಡೆಸಬೇಕು.

ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲದ 146ನೇ ಅಧಿವೇಶನದಲ್ಲೂ ಈ ಕುರಿತು ಪ್ರಶ್ನಿಸಿದಾಗ, ವ್ಯಾಪಾರ ಪರವಾನಗಿ ಯಿಂದ ರಾಜ್ಯದಲ್ಲಿ ಸಂಗ್ರಹವಾಗುತ್ತಿರುವುದು ಕೇವಲ 21 ಕೋಟಿ ರುಪಾಯಿ ಎಂಬ ಅಂಶ ತಿಳಿದುಬಂತು. ವ್ಯಾಪಾರ ಪರವಾ ನಗಿ ಹೊರತಾಗಿ ಬೇರೆ ಬೇರೆ ರೀತಿಯಲ್ಲಿ ತೆರಿಗೆ ಹಣ ಸಂಗ್ರಹಿಸುವುದಕ್ಕೆ ರಾಜ್ಯ ಸರಕಾರಕ್ಕೆ ಅವಕಾಶವಿದೆ. ಇದರ ಬಗ್ಗೆಯೂ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ಮಾಡಿರುವೆ. ಆದ್ದರಿಂದ ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂಬುದು ನನ್ನ ಒತ್ತಾಯ.

ಈ ಪರವಾನಗಿ ವಿಚಾರದಲ್ಲಿ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆಗಳನ್ನು ರಾಜ್ಯ ಸರಕಾರ ಸೂಕ್ಷ್ಮವಾಗಿ ಗಮನಿಸಬೇಕು. ಈ ತೊಡಕುಗಳನ್ನು ತಪ್ಪಿಸಿದಲ್ಲಿ ಯಾವುದೇ ಸರಕಾರಕ್ಕೆ ಉತ್ತಮ ಹೆಸರು ಬರುವುದರಲ್ಲಿ ಸಂಶಯವಿಲ್ಲ. ಈ ವ್ಯಾಪಾರ ಪರವಾನಗಿ ಎಂಬುದು ಕರ್ನಾಟಕದಲ್ಲಿ ಬಹಳ ವರ್ಷಗಳಿಂದಲೂ ಒಂದು ‘ಹಾವಳಿ ತೆರಿಗೆ’ಯಾಗಿ ಪರಿಣಮಿಸಿದೆ. ಇದರ ಉದ್ದೇಶವೇನು? ಸಂಪನ್ಮೂಲ ಕ್ರೋಡೀಕರಣಕ್ಕೆ ಹೀಗೊಂದು ನಾಮಪದವನ್ನು ಅಥವಾ ಪರಿಕಲ್ಪನೆಯನ್ನು ಸೃಷ್ಟಿಸಿ ತೆರಿಗೆ ವಸೂಲಿ ಮಾಡು ವುದು ಸಮಂಜಸವೇ? ಓಬೀರಾಯನ ಕಾಲದ ತಂತ್ರಜ್ಞಾನವನ್ನು ಉಪಯೋಗಿಸುವ ರೀತಿಯಲ್ಲಿ ಹಣ ವಸೂಲಿ ಮಾಡುವುದು ಯಾವುದೇ ಸರಕಾರಕ್ಕೆ ಶೋಭೆ ತರುವ ಸಂಗತಿಯೇ? ಏನಿದು ವ್ಯಾಪಾರ ಪರವಾನಗಿ? ವ್ಯಾಪಾರ ಮಾಡಲು ಜಿಎಸ್‌ಟಿ ನೋಂದಣಿ ಯಿದೆ, ಸೇವೆಗಳಿಗೂ ಜಿಎಸ್‌ಟಿ ನೋಂದಣಿಯಿದೆ.

ಆಸ್ತಿ ತೆರಿಗೆ ವಿಚಾರಕ್ಕೆ ಬಂದರೆ ಮನೆ ಅಥವಾ ಅಂಗಡಿ ಮಾಲೀಕರು ಅದನ್ನು ಕಟ್ಟುತ್ತಾರೆ. ಈ ಆಸ್ತಿ ತೆರಿಗೆಯಲ್ಲಿ ರಸ್ತೆ
ನಿರ್ವಹಣೆ ಯಿಂದ ಎಲ್ಲ ನಿರ್ವಹಣೆವರೆಗೂ ತೆರಿಗೆ ಕ್ರೋಢೀಕರಣ ನಡೆಯುತ್ತಿದೆ. ಕಾರ್ಮಿಕ ಭದ್ರತೆ ಹಾಗೂ ಸೌಲಭ್ಯಗಳ ವಿಚಾರದಲ್ಲಿ ‘”Shops and Establishment Act’ ’ ಪ್ರಕಾರ ಹಣವಸೂಲಿ ಮಾಡಲಾಗುತ್ತಿದೆ. ಹೀಗಿರುವಾಗ ಸ್ಥಳೀಯ ಸಂಸ್ಥೆಗಳು ಯಾವ ಕಾರಣಕ್ಕಾಗಿ ಈ ಹಳಸಿದ ಕ್ರೋಡೀಕರಣ ಪದ್ಧತಿಯನ್ನು ಇನ್ನೂ ಮುಂದುವರಿಸಿ ವ್ಯಾಪಾರ ತೆರಿಗೆ ವಸೂಲಿ ಮಾಡುತ್ತಿವೆ? ಇದರಿಂದ ವರ್ತಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಇರಿಸು-ಮುರಿಸು ಉಂಟಾಗುತ್ತಿದೆ.

ಒಂದೆಡೆ ಹಣದ ವ್ಯತ್ಯಯ, ಮತ್ತೊಂದೆಡೆ ತಮ್ಮ ಸಂಸ್ಥೆಗಳನ್ನು ಕಟ್ಟಲು ಒತ್ತಡ; ಒಂದು ರೀತಿಯಲ್ಲಿದು ‘ಅಧಿಕೃತಗೊಳಿಸಿರುವ ತಪ್ಪು ಹಣಸಂಗ್ರಹ’ ಎಂದರೆ ತಪ್ಪಾಗಲಾರದು. ಸಂಪನ್ಮೂಲ ಕ್ರೋಡೀಕರಣಕ್ಕೆ ನಾನಾ ವಿಧಗಳಿವೆ. ಈಗಿನ ಕಾಲಘಟ್ಟದಲ್ಲಿ ಸರಳೀಕೃತವಾದ ತೆರಿಗೆ ವ್ಯವಸ್ಥೆ ಕಾರ್ಯರೂಪಕ್ಕೆ ಬಂದರೆ ವ್ಯಾಪಾರಿಗಳಿಗೂ ಅನುಕೂಲವಾಗುತ್ತದೆ ಮತ್ತು ವ್ಯಾಪಾರಕ್ಕೆ
ಇಂಬುಕೊಡುವ ವಾತಾವರಣವನ್ನೂ ಸೃಷ್ಟಿಸಬಹುದು, ಅಲ್ಲವೇ? ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರಸರಕಾರವು ವ್ಯಾಪಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ಬಗೆಯ ಕ್ರಮಗಳನ್ನೂ ಕೈಗೊಂಡಿದೆ.

ವ್ಯಾಪಾರಸ್ಥರು ಕೂಡ ಸರಕಾರಗಳ ಸೂಚನೆಯಂತೆ ದೇಶದ ಅಭಿವೃದ್ಧಿಗೆ, ತೆರಿಗೆ ಸಂಗ್ರಹಕ್ಕೆ ಮತ್ತು ಪ್ರಗತಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಆದ್ದರಿಂದ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ರಾಜ್ಯ ಸರಕಾರವು ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕಾಗಿದೆ.

ವ್ಯಾಪಾರ ಪರವಾನಗಿ ವ್ಯವಸ್ಥೆಯು ಮೊದಲು ಆರಂಭವಾಗಿದ್ದು 1976ರಲ್ಲಿ. ‘ಕರ್ನಾಟಕ ಮುನ್ಸಿಪಲ್ ಕಾಯ್ದೆ 1976’ರ ಆರಂಭದಲ್ಲಿ, ಅಪಾಯ ಮತ್ತು ತೊಂದರೆಯಾಗುವಂಥ ವ್ಯಾಪಾರವಾಗಿದ್ದಲ್ಲಿ ಅಂಥವರು ವ್ಯಾಪಾರ ಪರವಾನಗಿ ತೆಗೆದು ಕೊಳ್ಳಬೇಕು ಎಂಬ ನಿಯಮವಿತ್ತು. ಆದರೆ ಕಾಲಕ್ರಮೇಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ವ್ಯಾಪಾರಸ್ಥರೂ ಈ
ಪರವಾನಗಿಯನ್ನು ತೆಗೆದುಕೊಳ್ಳುವಂತೆ ನಿಯಮಗಳನ್ನು ಅನುಷ್ಠಾನಕ್ಕೆ ತರಲಾಯಿತು. ಇದರ ಜತೆಯಲ್ಲೇ ವ್ಯಾಪಾರಸ್ಥರ ಶೋಷಣೆ ಮತ್ತು ಗೊಂದಲಗಳು ಶುರುವಾದವು ಎಂದು ಹೇಳಿದರೆ ತಪ್ಪಾಗಲಾರದು.

ವ್ಯಾಪಾರಿಗಳು ಬ್ಯಾಂಕಿನಲ್ಲಿ ಸಾಲ ಕೇಳಲು ಹೋದಾಗ, ‘ವ್ಯಾಪಾರ ಪರವಾನಗಿ ಇದೆಯೇ?’ ಎಂದು ಬ್ಯಾಂಕ್ ಅಧಿಕಾರಿಗಳು ಪ್ರಶ್ನಿಸುತ್ತಾರೆ. ಹೀಗಾಗಿ ನಿಗದಿತ ಪರವಾನಗಿ ಪಡೆಯಲು ವ್ಯಾಪಾರಸ್ಥರು ಸ್ಥಳೀಯ ಸಂಸ್ಥೆಗಳ ಮೊರೆಹೋಗಬೇಕಾಗುತ್ತದೆ. ಇಂಥ
ವೇಳೆಯಲ್ಲಿ ಕಿರುಕುಳ ಆರಂಭವಾಗುತ್ತದೆ. ಆದಾಯ ಸಂಗ್ರಹದ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಗಳು ‘ಉದ್ದಿಮೆ ಪರವಾನಗಿ ಕಡ್ಡಾಯ’ ಎಂದು ಹೇಳುವ ಮೂಲಕ ವ್ಯಾಪಾರಸ್ಥರಿಗೆ ಮತ್ತಷ್ಟು ಮಾನಸಿಕ ವೇದನೆ ನೀಡುತ್ತವೆ.

ಸ್ಥಳೀಯ ಮಟ್ಟದಲ್ಲಿ ದಶಕಗಳಿಂದ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವವರಿಗೂ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ಪರವಾನಗಿ ಪಡೆಯದಿದ್ದರೆ ಅಂಗಡಿ ಬಾಗಿಲು ಹಾಕಿಸುತ್ತೇವೆ ಅಥವಾ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೆದರಿಸುವುದರ ಜತೆಜತೆಗೆ, ಕೆಟ್ಟದಾಗಿಯೂ ವರ್ತಿಸುತ್ತಾರೆ. ಇಂಥ ಘಟನೆಗಳನ್ನು ರಾಜ್ಯ ಸರಕಾರ ತಪ್ಪಿಸಬೇಕು. ವೃತ್ತಿತೆರಿಗೆ ವ್ಯವಸ್ಥೆಯೂ 1976ರಿಂದ ಜಾರಿ ಯಲ್ಲಿದ್ದು, ವೃತ್ತಿ ತೆರಿಗೆಗೆ ಸಂಬಂಧಿಸಿದ ಕಾಯ್ದೆಯಲ್ಲಿಯೂ ಅದನ್ನು ಪ್ರಸ್ತಾಪಿಸಲಾಗಿದ್ದು, ವ್ಯಾಪಾರ
ಪರವಾನಗಿಯ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ.

ವ್ಯಾಪಾರ ಪರವಾನಗಿಯಿಂದ ಸಂಗ್ರಹವಾಗುವ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಹಣವು ವೃತ್ತಿತೆರಿಗೆಯಲ್ಲಿ ಸಂಗ್ರಹವಾಗುತ್ತದೆ. ನಗರಾಭಿವೃದ್ಧಿ ಸಚಿವರು, ಶಾಸಕರು, ಕರ್ನಾಟಕದ ಎಲ್ಲ ಸ್ಥಳೀಯ ಸಂಸ್ಥೆಗಳ ನಿರ್ವಹಣಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸಿ, ತೀರಾ ಅನಗತ್ಯವಾಗಿರುವ ಈ ಹಣವಸೂಲಾತಿ ಪದ್ಧತಿಯನ್ನು ರದ್ದುಗೊಳಿಸುವುದು ಸೂಕ್ತವಲ್ಲವೇ? ಮತ್ತೊಂದು ಸಂಗತಿಯೆಂದರೆ, ಸ್ಥಳೀಯರು ಮಾಡುತ್ತಿರುವ ವ್ಯಾಪಾರದ ಮಾಹಿತಿ ಪಡೆದುಕೊಂಡು ಸ್ಥಳೀಯ ಸಂಸ್ಥೆ ಅಥವಾ ಸರಕಾರಗಳು ಯಾವುದೇ ಯೋಜನೆ ರೂಪಿಸುವುದಿಲ್ಲ. ಆದ್ದರಿಂದ ಹಳಸಿರುವ ಈ ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ರದ್ದುಗೊಳಿಸಿದರೆ
ಯಾವುದೇ ನಷ್ಟವಾಗುವುದಿಲ್ಲ.

(ಲೇಖಕರು, ವಿಧಾನ ಪರಿಷತ್ ಸದಸ್ಯ)