Wednesday, 8th February 2023

ಸ್ವಾಭಿಮಾನಿ ಬದುಕಿಗಾಗಿ ಜೆಡಿಎಸ್ ಬೆಂಬಲಿಸಿ ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸಿ : ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ: ರಾಜ್ಯದ ೭ ಕೋಟಿ ಜನತೆ ಸ್ವಾಭಿಮಾನದಿಂದ ಬದುಕು ನಡೆಸಲು ನೆರವಾಗಬೇಕಾದರೆ ಹೆಚ್.ಡಿ. ಕುಮಾರ ಸ್ವಾಮಿ ಅವರ ಕೈ ಬಲಪಡಿಸಲು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ.ಈ ನಿಟ್ಟಿನಲ್ಲಿ ಭಾನುವಾರ ತಾಲೂಕಿಗೆ ಆಗಮಿಸುವ ಪಂಚರತ್ನ ರಥಯಾತ್ರೆಗೆ ಹೆಚ್ಚಿನ ಜನಸೇರುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾ ಡಿದರು.

ಪಂಚರತ್ನ ರಥಯಾತ್ರೆ ಗೌರಿಬಿದನೂರಿನಿಂದ ೨೭ಕ್ಕೆಮಂಚೇನಹಳ್ಳಿ ತಾಲೂಕಿಗೆ ಆಗಮಿಸಲಿದೆ. ನವೆಂಬರ್ ೧೮ ರಿಂದ ಈವರೆಗೆ ನಡೆದಲ್ಲೆಲ್ಲಾ ಅಭೂತಪೂರ್ವ ಜನ ಬೆಂಬಲ ದೊರೆತಿದೆ. ತಾಲೂಕಿಗೆ ಆಗಮಿಸುವಾಗ ಎಲ್ಲ ಸಮುದಾಯಗಳ ಯುವಜನತೆ, ರೈತರು, ಕಾರ್ಮಿಕರು,ಮಹಿಳೆಯರು ಆಗಮಿಸಿ ಕುಮಾರಸ್ವಾಮಿ ಮಾತುಗಳಿಗೆ ಕಿವಿಯಾಗ ಬೇಕು. ಏಕೆಂದರೆ ವಿರಾಮವಿಲ್ಲದೆ, ಆರೋಗ್ಯ ಲೆಕ್ಕಿಸದೆ  ಜನಸಾಮಾನ್ಯರ ಬದುಕು ಹಸನಾಗಬೇಕು,ಮಹಿಳಾ ಸಬಲೀಕರಣ,ಸರ್ವರಿಗೂ ಸೂರು, ಉಚಿತ ಗುಣ ಮಟ್ಟದ ಶಿಕ್ಷಣ, ಆರೋಗ್ಯ, ಇಸ್ರೇಲ್ ಮಾದರಿ ಕೃಷಿ, ನೀಡಬೇಕು ಎಂದು ಪ್ರವಾಸ ಮಾಡುತ್ತಿದ್ದಾರೆ. ನುಡಿದಂತೆ ನಡೆಯುವ ಕುಮಾರಣ್ಣನಿಗೆ ಈ ಬಾರಿ ಅಧಿಕಾರ ನೀಡಲು ಜನತೆ ಆಶೀರ್ವಾದ ಮಾಡಲು ಬನ್ನಿ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ.ರಾಜಕಾಂತ್ ಮಾತನಾಡಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಜಾ ಪ್ರಭುತ್ವ ಹರಣ ವಾಗುತ್ತಿದೆ. ಇಲ್ಲಿ ಪ್ರಶ್ನೆ ಮಾಡುವುದೂ ಅಪರಾಧ ಆಗಿದೆ.ಭಯದ ವಾತಾವರಣದಲ್ಲಿ ಜನತೆ ಬದುಕು ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿ ಜನತೆ ಬದಲಾವಣೆ ಅನಿವಾರ್ಯ ಎಂಬ ಮಾತುಗಳನ್ನು ಸಾರ್ವಜನಿಕ ವಲಯದಲ್ಲಿ ಆಡುತ್ತಿದ್ದಾರೆ. ಬಿಜೆಪಿ ಸರಕಾರದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಸಸ್ಪೆಂಡ್ ಸರ್ಕಾರಕ್ಕೆ ನಾಚಿಕೆ ತರಬೇಕು.ಮತದಾರರ ಪಟ್ಟಿಯನ್ನು ತನಗೆ ಬೇಕಾದ ಹಾಗೆ ತೆಗೆಯುವುದು, ಸೇರಿಸುವುದು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ. ಚಿಲುಮೆ ಪ್ರಕರಣದಲ್ಲಿ ಚುನಾವಣೆ ಆಯೋಗ ಹೊರತು ಪಡಿಸಿ ಸ್ವತಂತ್ರ ತನಿಖೆ ನಡೆಸಲು ಮುಂದಾಗುವುದು ನಾಚಿಕೆ ಗೇಡು. ತಾಲೂಕಿನಲ್ಲಿ ಅಧಿಕಾರಿಗಳು ಮಂತ್ಲಿ ವಸೂಲಿ ಮಾಡಲಿಲ್ಲ ಎಂದರೆ ವರ್ಗಾವಣೆ,ಇಲ್ಲ ಸಸ್ಪೆಂಡ್ ಮಾಡಿಸುತ್ತಾರೆ. ಇದು ತೊಲಗಬೇಕಾದರೆ ಕುಮಾರಸ್ವಾಮಿ ಅವರ ಸರಕಾರವನ್ನು ಅಧಿಕಾರಕ್ಕೆ ತರಬೇಕು. ನುಡಿದಂತೆ ನಡೆವ ಮೂಲಕ ಜನತೆಯ ಕಷ್ಟಗಳಿಗೆ ಪರಿಹಾರ ನೀಡುವರು ಎಂದರು.

ರೈತರು ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ. ಮೂರೂ ಬಾರಿ ಆಯ್ಕೆಯಾಗಿರುವ ಸುಧಾಕರ್ ಸುಳ್ಳು ಹೇಳಿದ್ದಾರೆ.ಇಷ್ಟು ಅವಧಿಯಲ್ಲಿ ಬಡವನಿಗೆ  ನಿವೇಶನ ನೀಡಿಲ್ಲ.ಉದ್ಯೋಗ ನೀಡಿಲ್ಲ.ಮಹಿಳಾ ಕಾಲೇಜು ೯ ವರ್ಷದಿಂದ ಪೂರ್ಣ ಗೊಳಿಸಿಲ್ಲ.ನಿನ್ನೆ ಮೋನ್ನೆಯ ಮೆಡಿಕಲ್ ಕಾಲೇಜು ವೇಗವಾಗಿ ಪೂರ್ಣ ಗೊಳಿಸುವ ಆಸಕ್ತಿ ಯಾಕೆ ? ಲಾಭ ಹೆಚ್ಚಿದೆ ಎಂದು ಆತುರದಲ್ಲಿ ಉದ್ಘಾಟನೆಗೆ ಮುಂದಾಗಿದ್ದೀರಿ. ಇದೇ ಆತುರ ರಂಗ ಮಂದಿರ ಪೂರ್ಣಗೊಳಿಸಲು ಮಹಿಳಾ ಕಾಲೇಜು ಮಾಡಲು ಯಾಕಿಲ್ಲ. ನಿಮ್ಮ ೩ ಬಾರಿ ಗೆಲುವಿನ ಅವಧಿಯಲ್ಲಿ ಹಣ ಹಂಚಿ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ಅಧಿಕಾರ ಪಡೆದಿದ್ದೀರಿ.ಸಿಂಗಪುರ್ ಮಾಡೋದೂ ಎಲ್ಲಿಗೆ ಬಂತು ಸ್ವಾಮಿ.ಬಡವರ ಜಾಮೀನು ಕಿತ್ತುಕೊಂಡು ಸೈಟ್ ರಾಜಕಾರಣ ಮಾಡುವುದು ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ತಾಲೂಕಿನಲ್ಲಿ ರಥಯಾತ್ರೆಯು ಮಂಚೇನಹಳ್ಳಿ, ಪೋಶೆಟ್ಟಹಳ್ಳಿ,ಮುಸ್ಟೂರು, ಪೆರೇಸಂದ್ರ, ಊನೇಗಲ್ಲು, ದಿಬ್ಬೂರು, ನಾಯನಹಳ್ಳಿ ನಂದಿ ಗ್ರಾಮಗಳಲ್ಲಿ ಸಂಚರಿಸಲಿದೆ. ನ0ದಿಯಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ ಎಂದು ಬಚ್ಚೇಗೌಡ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ತಾಲೂಕು ಅಧ್ಯಕ್ಷ ಕೆ.ಬಿ.ಮುನಿರಾಜು,ಮುಖಂಡರಾದ ಕೆ.ಆರ್.ರೆಡ್ಡಿ,ಸಾಧಿಕ್ ನಯಾಜ್,ಬಂಡ್ಲು ಶ್ರೀನಿವಾಸ್, ಸಂದೀಪ್, ಮತ್ತಿತರರು ಇದ್ದರು.

error: Content is protected !!