Sunday, 3rd July 2022

ಸಂತೋಷದಿಂದ ಬದುಕುವುದು ಹೇಗೆ ?

ಈ ಜೀವನವೇ ನಮಗೆ ದೊರೆತ ಸುಂದರ ಗಿಫ್ಟ್!

ವೆಂಕಟೇಶ ಚಾಗಿ

ಮನುಷ್ಯ ಎಂದ ಮೇಲೆ ಕಷ್ಟಗಳು ಸಹಜ. ಅವನ್ನು ಎದುರಿಸಿ, ತಾಳ್ಮೆ ಕಳೆದುಕೊಳ್ಳದೇ, ಬದುಕುವುದೇ ಈ ಜೀವನ ದಲ್ಲಿ ನಾವು ಮಾಡಬಹುದಾದ ದೊಡ್ಡ ಸಾಧನೆ. ಈ ಬದುಕು ನಮಗೆ ದೊರೆತ ಸುಂದರ ಗಿಫ್ಟ್. ಅದನ್ನು ಸಾರ್ಥಕ ಗೊಳಿಸುವುದು ನಮ್ಮ ಕರ್ತವ್ಯ.

ಬದುಕು ತುಂಬಾ ಸುಂದರವಾಗಿದೆ ಎಂದು ನಿಮಗೆ ಅನಿಸಿದೆಯಾ ? ಹೌದು ಎಂದಾದರೆ ನೀವು ಬದುಕಿನಲ್ಲಿ ತೃಪ್ತರಾಗಿದ್ದೀರಿ ಎಂದು ಅರ್ಥ. ಇಲ್ಲ ಎಂದಾದಲ್ಲಿ ನಿಮ್ಮಲ್ಲಿ ಬದುಕಿನ ಬಗ್ಗೆ ಅತೃಪ್ತಿ ಇದೆ ಎಂದರ್ಥ. ಬದುಕು ಎಲ್ಲರಿಗೂ, ಎಲ್ಲ ಸಮಯದಲ್ಲೂ ಸುಂದರವಾಗಿ ಕಾಣುವುದಿಲ್ಲ. ಬದುಕು ಸುಂದರವಾಗಿ ಕಾಣಬೇಕೆಂದರೆ ತೃಪ್ತ ಮನೋಭಾವವನ್ನು ನಾವು ಉಳಿಸಿ ಕೊಳ್ಳಲೇ ಬೇಕು. ಬದುಕಿನ ನೂರೆಂಟು ತಾಪತ್ರಯಗಳ ನಡುವೆ ತೃಪ್ತಿಕರ ಮನೋಭಾವ ಎನ್ನುವು ದು ಅತಿ ಅವಶ್ಯಕವಾಗಿ ಮೂಡಲೇಬೇಕು. ಇಲ್ಲದಿದ್ದಲ್ಲಿ ಬದುಕು ತುಂಬಾ ಕ್ಲಿಷ್ಟಕರ ವಾಗಿರುತ್ತದೆ. ಭಾರವಾಗಿ ಗೋಚರಿಸುತ್ತದೆ.

ಆದರೂ ಗೆಲುವಿಗೆ ಒಂದಿಷ್ಟು ಇತಿಮಿತಿಗಳಿವೆ. ಅವುಗಳನ್ನು ಮೀರಿ ಹೋದಾಗ ಸೋಲಿನ ಕಡೆಗೆ ನಾವು ವಾಲುತ್ತೇವೆ. ಹಾಗಾದರೆ ಗೆಲುವು ಯಾವಾಗಲೂ ನಮ್ಮೊಂದಿಗೆ ಇರಬೇಕೆಂದರೆ, ನಮ್ಮ ಇತಿಮಿತಿಗಳ ಅರಿವು ನಮಗಿರಬೇಕು. ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಯಾವಾಗಲೂ ಮಾಡುತ್ತಿರಬೇಕು. ಆಗ ಬದುಕು ನಿಜವಾಗಿಯೂ ಸುಂದರವಾಗಿ ಕಾಣುವುದು.

ಬದುಕು ಮರಳಿ ದೊರೆಯುವುದಿಲ್ಲ

ಒಂದಂತೂ ನಿಜ – ಈ ಬದುಕು ನಮಗೆ ಮತ್ತೆ ಮರಳಿ ದೊರೆಯುವುದಿಲ್ಲ. ಇಲ್ಲಿವರೆಗೆ ಅದೆಷ್ಟು ಕೋಟಿ ಜನ ಜನ್ಮತಾಳಿ ಬದುಕಿ ಸತ್ತುಹೋದರೋ.. ಯಾರಿಗೂ ಗೊತ್ತಿಲ್ಲ. ಮುಂದಿನ ಜನ್ಮದದರೂ ಸಾಧಿ ಸೋಣ, ಮುಂದಿನ ಜನ್ಮದದರೂ ಒಂದಾಗೋಣ ಎಂಬಿತ್ಯಾದಿ ಮಾತುಗಳು ಹಾಸ್ಯಾಸ್ಪದವಾಗುತ್ತವೆ. ಒಂದು ಹಂತದಲ್ಲಿ ಈ ಮಾತುಗಳನ್ನು ನಾವು ನಮ್ಮ ಸಮಾಧಾನಕ್ಕೋಸ್ಕರ ಹೇಳಿದರೂ ನಿಜವಾಗುವುದು ಸಾಧ್ಯವೇ ..? ಈಗ ನೀವೇ ಹೇಳಿ ಈ ಬದುಕು ನಿಮಗೆ ಒಂದು ದೊಡ್ಡ ಗಿಫ್ಟ್ ಅಲ್ಲವೇ. ಹಾಗಾದರೆ ಬದುಕನ್ನು ಸುಂದರವಾಗಿ ನೋಡದೆ ನೀವೇಕೆ ಹಿಂಜರಿಯುತ್ತೀರಿ? ಸುಂದರ ಬದುಕಿಗಾಗಿ ಒಂದಿಷ್ಟು ಟಿಪ್ಸ್‌ಗಳನ್ನು ಪಾಲಿಸಿ ಆಗ ಬದುಕು ಸುಂದರವಾಗಿ ಕಾಣದೇ ಇರೋದು.

೧ ಕಷ್ಟಗಳನ್ನು ಎದುರಿಸಿ
ಬದುಕಿನಲ್ಲಿ ಕಷ್ಟಗಳು ಅನಿವಾರ್ಯ. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತವೇ? ನಿಜಹೇಳಬೇಕೆಂದರೆ ಮರಕ್ಕೂ ಕಷ್ಟಗಳು ಬರುತ್ತವೆ. ಆದರೆ ನನಗೆ ಕಷ್ಟ ಬಂದಿದೆ ಎಂದು ಅದು ಅಳುತ್ತ ಕುಳಿತಿಲ್ಲ . ಕಷ್ಟಗಳನ್ನು ಎದುರಿಸಿ ಅವಕಾಶ ಇರುವ ಕಡೆ ತನ್ನ ರೆಂಬೆ-ಕೊಂಬೆಗಳನ್ನು ಚಾಚಿ ಹೆಮ್ಮರವಾಗಿ ಬೆಳೆದು ಬದುಕನ್ನು ಅರಳಿಸಿದೆ. ನಿಂತಲ್ಲಿಯೇ ತನ್ನ ಕಷ್ಟಗಳನ್ನು
ಎದುರಿಸುವಂತಹ ಸಾಮರ್ಥ್ಯ ಮರಕ್ಕೆ ಇರುವಾಗ ನಮಗೇಕಿಲ್ಲ? ಖಂಡಿತವಾಗಿ ಇದೆ. ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು.

೨ ಆಸೆಗಳು ಇತಿಮಿತಿಯಲ್ಲಿರಲಿ
ಕಷ್ಟಗಳ ಕಾರಣವೇನೆಂದರೆ ಆಸೆಗಳು. ಆಸೆಗಳು ಇಲ್ಲದೇ ಬದುಕಲು ಸಾಧ್ಯವಿಲ್ಲ. ಆಸೆಗಳಿಂದಲೇ ಬದುಕು. ಆದರೆ ಆಸೆಗಳು ಇತಿಮಿತಿಯಲ್ಲಿರಬೇಕು. ಆಸೆಗಳು ಹೆಚ್ಚಿದಂತೆ ಹೆಚ್ಚು ಎದುರಾಗುವುದಂತೂ ಖಂಡಿತ. ನಮ್ಮ ಸಾಮರ್ಥ್ಯದ ಅರಿವು ನಮಗಿರ ಬೇಕು. ಇತಿಮಿತಿಗಳನ್ನು ದಾಟಿ ಹೋದಾಗ ಬದುಕು ದುಃಖಯವಾಗುವುದಂತೂ ಖಂಡಿತ.

೩ ಹೋಲಿಕೆ ಎಂಬುದು ಬದುಕನ್ನು ಹೋಳಾಗಿಸದಿರಲಿ
ನಮ್ಮ ಬದುಕನ್ನು ಇತರರ ಬದುಕಿನೊಂದಿಗೆ ಹೋಲಿಕೆ ಮಾಡುವುದು ಮಾನವನ ಗುಣ. ಹೋಲಿಕೆಯಂತೆ ಬದುಕುವುದು ತುಂಬಾ ಕಷ್ಟವೇ ಸರಿ. ಯಾರೋ ಬಂಗಲೆಯಲ್ಲಿ ಜೀವಿಸುತ್ತಿದ್ದಾರೆ, ಯಾರೋ ದೊಡ್ಡ ಹುದ್ದೆಯನ್ನು ಪಡೆದರಂತೆ, ಯಾರೋ ಹೆಚ್ಚು ಬೆಲೆಬಾಳುವ ಕಾರಲ್ಲಿ ಓಡಾಡುತ್ತಿದ್ದರಂತೆ, ಯಾರೋ ತುಂಬಾ ಸುಂದರವಾಗಿ ಇದ್ದಾರಂತೆ – ಹೀಗೆ ಹಲವಾರು ಹೋಲಿಕೆಗಳ ಬಂಧನದೊಳಗೆ ಸಿಲುಕಿ ನರಳುತ್ತಾ ಬಂಧನವಾಗಿಸಿಕೊಳ್ಳುತ್ತೇವೆ. ಯಾಕೆ ಈ ಹೋಲಿಕೆ..? ನಮಗೆ ಅವಶ್ಯವೇ..? ಒಮ್ಮೆ ಯೋಚಿಸಿ. ಹೋಲಿಕೆಯ ಹೊರೆಯನ್ನು ಹೆಚ್ಚಿಸಿಕೊಳ್ಳಬೇಡಿ. ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ.

೪ ಬಂದದ್ದು ಬರಲಿ ಧೈರ್ಯ ಇರಲಿ
ಜೀವನದಲ್ಲಿ ಬಂದಿರುವುದು ಬರಲಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಶ್ರೀಮಂತಿಕೆ ಬಂದರೆ ಹಿಗ್ಗದಿರಿ. ಬಡತನ ಬಂದರೆ ಕುಗ್ಗದಿರಿ. ಸಂತೋಷ ಎಂಬ ಬದುಕಿನ ಬಹುಮಾನ ಪಡೆಯಲು ಆತೊರೆಯಬೇಕು ಅಷ್ಟೇ. ಸಂತೋಷದ ಕ್ಷಣಗಳನ್ನು ಅನುಭವಿಸಿ. ಸಂಪಾದಿಸಿ, ಒಂದಷ್ಟು ಹಣ ಕೂಡಿ ಹಾಕಿ, ಮತ್ತಷ್ಟು ಹಣವನ್ನು ಮತ್ತೊಬ್ಬರಿಗೆ ಹಂಚಿ. ಆಗ ಬದುಕೇ ಸಂತಸಮಯವಾಗುತ್ತದೆ. ಯಾರೂ ಶಾಶ್ವತವಲ್ಲ. ಯಾವುದೂ ಶಾಶ್ವತವಲ್ಲ. ಎಲ್ಲದಕ್ಕೂ ಒಂದು ಕೊನೆ ಇದೆ. ಬದುಕಿಗೂ ಸಹ. ಬದುಕೆಂಬ ಅತಿ ದೊಡ್ಡ ಗಿಫ್ಟ್ ಪಡೆದ ನಾವೇ ಧನ್ಯರು. ಯಾರೇ ಜೀವನದಲ್ಲಿ ಬರಲಿ ಹೋಗಲಿ ಜೀವನ ನಮ್ಮದು. ನಮ್ಮ
ಜೀವನ ಮತ್ತೊಬ್ಬರ ಹಿತಾಸಕ್ತಿ ಗೆ ಬಲಿಯಾಗಬಾರದು. ಬದುಕಿ, ಬದುಕಿಸಿ. ಸಂತೋಷದಿಂದ ಬದುಕಿ ತೋರಿಸಿ. ಬನ್ನಿ ಸುಂದರ ಬದುಕಿಗೊಂದು ಹಾಯ್ ಹೇಳೋಣ.