Friday, 12th August 2022

103 ಕೋಟಿ ಜನ ಶಾಂತಿ, ಸಹಬಾಳ್ವೆಯಿಂದ ಜೀವಿಸುವುದೇ ಅಚ್ಚರಿ !

ಇದೇ ಅಂತರಂಗ ಸುದ್ದಿ

vbhat@me.com

ಭಾರತದ ಜನಸಂಖ್ಯೆ, ಇಲ್ಲಿನ ಟ್ರಾಫಿಕ್, ಜನಜೀವನ ನೋಡಿದ ಅಮೆರಿಕನ್‌ರಿಗೆ ಈ ಜನ ಹೇಗೆ ಜೀವಿಸುತ್ತಿರಬಹುದು ಎಂದು ಸೋಜಿಗ ವಾಗಬಹುದು. ಆದರೆ ನಮಗೆ ಅದು ಸೋಜಿಗವಲ್ಲ, ಸಹಜ. ಎಲ್ಲಾ ಅಸಾಧ್ಯಗಳ ನಡುವೆಯೂ ಬದುಕು ಸಾಧ್ಯವಾಗುತ್ತಾ ಹೋಗುತ್ತದೆ. ಹತ್ತಿ ಚೀಲ ಪೂರ್ತಿ ತುಂಬಿದರೂ, ಇನ್ನೂ ಸ್ವಲ್ಪ ಹತ್ತಿಯನ್ನು ತುರುಕಲು ಜಾಗವಿರುತ್ತದಂತೆ.

ಎರಡು ತಿಂಗಳ ಹಿಂದೆ ನಾನು ದಿಲ್ಲಿಗೆ ಹೋಗುವಾಗ ವಿಮಾನ ಹಿಡಿಯುವುದು ಸಾಧ್ಯವೇ ಇರಲಿಲ್ಲ. ವಿಮಾನ ತಪ್ಪಿ ಹೋಗುವುದು ನೂರಕ್ಕೆ ನೂರು ನಿಜವಾಗಿತ್ತು. ಕಾರಣ ನಾನು ಮನೆಯಿಂದ ಹೊರಡುವುದೇ ತಡವಾಗಿತ್ತು. ಹಿಂದಿನ ರಾತ್ರಿ ನಾನು ‘ಲೋಕಧ್ವನಿ’ಯ ಕೆಲಸ ಮುಗಿಸಿಕೊಂಡು, ಶಿರಸಿಯಿಂದ ನನ್ನ ನೆಚ್ಚಿನ ‘ಥಾರ್’ ಡ್ರೈವ್ ಮಾಡಿಕೊಂಡು ಬಂದು ಮನೆ ಸೇರಿದ್ದೇ ಬೆಳಗಿನ ಜಾವ ೨ಕ್ಕೆ. ಹೀಗಾಗಿ ಎಚ್ಚರವಾಗಲೇ ಇಲ್ಲ. ಅಲಾರಂ ಇಟ್ಟುಕೊಂಡಿದ್ದರೂ ಮೊಬೈಲ್ ಸೈಲೆಂಟ್ ಮೋಡ್‌ನಲ್ಲಿ ಇದ್ದುದರಿಂದ ಅದು ಕೂಗಿಕೊಳ್ಳಲೇ ಇಲ್ಲ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬೆಳಗ್ಗೆ ಆರು ಗಂಟೆ ಹತ್ತು ನಿಮಿಷಕ್ಕೆ ದಿಲ್ಲಿಗೆ ವಿಮಾನ ನಿಗದಿಯಾಗಿತ್ತು. ನಾನು ಐದು ಗಂಟೆ ಹತ್ತು ನಿಮಿಷಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರಬೇಕಿತ್ತು. ಹೀಗಾಗಿ ನಾನು ಮನೆಯಿಂದ ಹೊರಟಿದ್ದೇ ಬೆಳಗ್ಗೆ ನಾಲ್ಕೂವರೆಗೆ. ನಲವತ್ತು ನಿಮಿಷದಲ್ಲಿ ಏರ್‌ಪೋರ್ಟ್ ತಲುಪುವುದು ಸಾಧ್ಯವೇ ಇರಲಿಲ್ಲ. ನನ್ನ ಮನೆಯಿಂದ ಅಲ್ಲಿಗೆ ಹೋಗಲು ಬೆಳಗಿನ ಜಾವದ ಸಮಯದಲ್ಲೂ ಕನಿಷ್ಠ ಒಂದೂಕಾಲು ಗಂಟೆ ಬೇಕು.

ಏನೇ ತಿಪ್ಪರಲಾಗ ಹಾಕಿದರೂ ಐದು ಮುಕ್ಕಾಲಕ್ಕಿಂತ ಮುಂಚೆ ಏರ್‌ಪೋರ್ಟ್ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೇ ಹನುಮಂತನ ಬಾಲದಂಥ ಕ್ಯೂನಲ್ಲಿ ನಿಂತು, ಬೋರ್ಡಿಂಗ್ ಪಾಸ್ ಪಡೆಯುವ ಹೊತ್ತಿಗೆ, ಗೇಟ್ ಕ್ಲೋಸ್ ಆಗಿರುತ್ತದೆ. ಆನಂತರ ಯಾರೇ ಬಂದರೂ ಬಿಡುವುದಿಲ್ಲ. ಈ ಮಧ್ಯೆ, ತಕ್ಷಣ ಏರ್‌ಲೈನ್ಸ್ ಸಂಸ್ಥೆಗೆ ಫೋನ್ ಮಾಡಿ ಕೇಳಿದೆ. ವಿಮಾನ ರೈಟ್ ಟೈಮಿಗೆ ಹೊರಡುವುದೆಂದು ಹೇಳಿದರು. ಕೆಲಸ ಕೆಟ್ಟಿತು, ಫ್ಲೈಟ್ ಮಿಸ್ ಆಗೋದು ಗ್ಯಾರಂಟಿ ಎಂಬುದು ನಿಶ್ಚಿತವಾಯಿತು.

ಇನ್ನು ವಿಮಾನ ನಿಲ್ದಾಣದ ತನಕ ಹೋಗಿ ಪ್ರಯೋಜನವಿಲ್ಲ ಎಂದು ನಿರ್ಧರಿದೆ. ನನ್ನ ಪತ್ನಿಯೂ ‘ಸುಮ್ನೆ ಯಾಕೆ ಅಲ್ಲಿ ತನಕ ಹೋಗಿ ಹಿಂದೆ ಬರ್ತೀರಾ? ಫ್ಲೈಟ್ ಮಿಸ್ ಆಗೋದರಲ್ಲಿ ಅನುಮಾನವೇ ಇಲ್ಲ. ಯಾಕೆ ತೊಂದರೆ ತೆಗೆದುಕೊಳ್ತೀರಾ?’ ಎಂದಳು. ಆದರೂ ಅದೃಷ್ಟ ಪರೀಕ್ಷಿಸೋಣ ಎಂದು ಹೊರಟೆ. ಆಶ್ಚರ್ಯ ಅಂದ್ರೆ, ನಾನು ವಿಮಾನ ಹೊರಡಲು ಇನ್ನೂ ಇಪ್ಪತ್ತು ನಿಮಿಷಗಳಿರುವಾಗಲೇ ವಿಮಾನದೊಳಗೆ ಬಂದು ಕುಳಿತು, ಪತ್ನಿಗೆ ಫೋನ್ ಮಾಡಿದರೆ ಅವಳು ನಂಬಲಿಲ್ಲ. ನಂತರ ಗಗನಸಖಿಯ ಪ್ರಕಟಣೆಯ ದನಿ ಕೇಳಿ ದಾಗಲೇ ಆಕೆಗೂ ಆಶ್ಚರ್ಯ.

ನಮ್ಮ ದೇಶದಲ್ಲಿ ಇರುವಂಥ ಅವ್ಯವಸ್ಥೆ, ಅಸ್ತವ್ಯಸ್ತ (chaos) ಬೇರೆಲ್ಲೂ ಇರಲಿಕ್ಕಿಲ್ಲ. ಆದರೂ ಎಲ್ಲವೂ ಸುಖಾಂತ್ಯವಾಗುತ್ತದೆ ಎಂಬುದು ನನಗೆ ನೂರಾರು ಸಲ ಅನುಭವಕ್ಕೆ ಬಂದಿದೆ. ಈ ಘಟನೆಯಲ್ಲಿ ವ್ಯವಸ್ಥೆಯದೇನೂ ತಪ್ಪಿಲ್ಲ. ಪ್ರಮಾದವಾಗಿದ್ದು ನನ್ನಿಂದ. ನಾನು ಸಮಯಕ್ಕೆ ಸರಿಯಾಗಿ ಅಥವಾ ಮುಂಚಿತವಾಗಿ ಹೋಗಿದ್ದಿದ್ದರೆ ಇಷ್ಟೆ ಗಂಡಾಗುಂಡಿ ಮಾಡಬೇಕಾದ ಅಗತ್ಯವಿರಲಿಲ್ಲ. ಈ ರೀತಿಯ ಅನುಭವ ನಿಮಗೂ ಆಗಿರಬಹುದು. ಕೊನೆ ಕ್ಷಣದಲ್ಲಿ ಪವಾಡ ಸದೃಶ ಎಂಬಂತೆ ಕಾರ್ಯಸಿದ್ಧಿಯಾಗಿರಬಹುದು. ಆದರೂ ಈ ರಸ್ತೆ, ಗುಂಡಿ, ಮಳೆ, ಟ್ರಾಫಿಕ್ ಜಾಮ, ಜನಜಂಗುಳಿ ಮಧ್ಯದಲ್ಲಿಯೂ ನಮ್ಮ ಬದುಕು ಹೇಗೆ ನಡೆಯಬೇಕೋ ಹಾಗೆ ನಡೆಯುತ್ತಿರುತ್ತದೆ.
ಇದನ್ನು perfect anarchy ಅಂತ ಕರೆಯುತ್ತಾರೆ.

ಮುಂಬೈಯ ಧಾರಾವಿಯ ಕೊಳಗೇರಿಯನ್ನು ನೋಡಿದ ವಿದೇಶಿ ವರದಿಗಾರನೊಬ್ಬ ಇಲ್ಲಿ ಲಕ್ಷಾಂತರ ಜನ ಜೀವಿಸುತ್ತಿರುವುದೇ ಒಂದು ಸೋಜಿಗ ಎಂದು ಹೇಳಿದ. ಆದರೆ ಅಲ್ಲಿ ವಾಸಿಸುವ ಜನರಿಗೆ ಅದು ಸಹಜ. ಅವರು ಹುಟ್ಟಿ, ಬೆಳೆದಿದ್ದೇ ಅಲ್ಲಿ. ಅವರಿಗೆ ಅದು ಸಮಸ್ಯೆಯೇ ಅಲ್ಲ. ಭಾರತದ ಜನಸಂಖ್ಯೆ, ಇಲ್ಲಿನ ಟ್ರಾಫಿಕ್, ಜನಜೀವನ ನೋಡಿದ ಅಮೆರಿಕನ್‌ರಿಗೆ ಈ ಜನ ಹೇಗೆ ಜೀವಿಸುತ್ತಿರಬಹುದು ಎಂದು ಸೋಜಿಗವಾಗಬಹುದು. ಆದರೆ ನಮಗೆ ಅದು ಸೋಜಿಗವಲ್ಲ, ಸಹಜ.

ಎಲ್ಲಾ ಅಸಾಧ್ಯಗಳ ನಡುವೆಯೂ ಬದುಕು ಸಾಧ್ಯವಾಗುತ್ತಾ ಹೋಗುತ್ತದೆ. ಹತ್ತಿ ಚೀಲ ಪೂರ್ತಿ ತುಂಬಿದರೂ, ಇನ್ನೂ ಸ್ವಲ್ಪ ಹತ್ತಿಯನ್ನು
ತುರುಕಲು ಜಾಗವಿರುತ್ತದಂತೆ. ಹಾಗೆಯೇ ಎಷ್ಟೇ ಟ್ರಾಫಿಕ್ ಜಾಮ್ ಆದರೂ ನಮ್ಮ ನಮ್ಮ ವಾಹನ ಹೋಗಲು ಸ್ವಲ್ಪ ಜಾಗ ಇದ್ದೇ ಇರುತ್ತದೆ. ಮುಂಬೈ ಲೋಕಲ್ ಟ್ರೈನ್ ಜನರಿಂದ ತುಂಬಿ ತುಳುಕುತ್ತಿದ್ದರೂ ಒಬ್ಬನಿಗೆ ಮೊಳಕೈ ಆಡಿಸಲು ಜಾಗ ಸಿಕ್ಕರೆ ನಾಲ್ಕು ಜನ ಹತ್ತಿಕೊಳ್ಳುವಂತೆ, ನಮ್ಮ ವ್ಯವಸ್ಥೆ ಎಲ್ಲ ಪರಿಧಿಯನ್ನು ದಾಟಿಯೂ ಪುನಃ ಸಹಜ ಸ್ಥಿತಿಗೆ ಬಂದಿರುತ್ತದೆ. ಮುಂಬೈ ಮಳೆಗೆ ವ್ಯವಸ್ಥೆಯೇ ಹರಿದು ಹೋಯಿತು ಎಂಬಂತೆ ವರದಿ ಮಾಡಿದ ಮಾಧ್ಯಮಗಳು ಎರಡು ದಿನ ಬಿಟ್ಟು ‘ಸಹಜ ಸ್ಥಿತಿಯತ್ತ ಮುಂಬೈ ಜನಜೀವನ’ ಎಂದು ವರದಿ ಮಾಡುತ್ತವೆ.

ಈ ವ್ಯವಸ್ಥೆಗೆ ಎಲ್ಲ ಅವ್ಯವಸ್ಥೆಗಳನ್ನು ಹೊಟ್ಟೆಯೊಳಗೆ ತುಂಬಿಕೊಳ್ಳುವ, ಹೀರಿಕೊಳ್ಳುವ, ಎಲ್ಲವನ್ನೂ ಮಟ್ಟಸವಾಗಿಸುವ ಒಂದು ಅಗಾಧ ಶಕ್ತಿಯಿರುವುದು ಮಾತ್ರ ಸುಳ್ಳಲ್ಲ. ಆ ಶಕ್ತಿಯೇ ಈ ವ್ಯವಸ್ಥೆಯನ್ನು ನಡೆಸುತ್ತಿರುವುದು. ಇಲ್ಲದಿದ್ದರೆ ನನಗೆ ಅಂದು ಫ್ಲೈಟ್ ಮಿಸ್ ಆಗುತ್ತಿತ್ತು. ಈ ಎಲ್ಲ ಅಪಸವ್ಯಗಳ ನಡುವೆಯೇ ನಮ್ಮ ಬದುಕು ಹಸನುಗೊಳ್ಳುತ್ತಿದೆ, ಬದುಕು ಸಾಗುತ್ತಿದೆ. ಅದೇ ಅದ್ಭುತ. ಇಷ್ಟೊಂದು ಜಾತಿ, ಪಂಗಡ, ಕೋಮು, ಧರ್ಮ, ಭಾಷೆ, ವೈರುಧ್ಯ, ಜನಸಂಖ್ಯೆ ಸಮಸ್ಯೆ.. ಇವೆಲ್ಲವುಗಳ ಮಧ್ಯೆಯೇ ಭಾರತ ಇಂದು ವಿಶ್ವದ ಪ್ರಮುಖ
ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಸಣ್ಣ ಮಾತಲ್ಲ. ನೂರಾ ಮೂವತ್ತು ಕೋಟಿ ಜನ ಒಂದೆಡೆ ಶಾಂತಿ, ಸಹಬಾಳ್ವೆಯಿಂದ ಜೀವಿಸು ತ್ತಿರುವುದೇ ಒಂದು ಅಚ್ಚರಿ ಅಲ್ಲವೇ?

ಹೀಗೆ, ಹೇಗೆ, ಹೀಗೂ!

1985ರಲ್ಲಿ ‘ರೀಡರ‍್ಸ್ ಡೈಜೆಸ್ಟ್’ ಮಾಸಿಕ ತನ್ನ ಪ್ರಸಾರ ಸಂಖ್ಯೆ ಕುರಿತು ಒಂದು ಜಾಹೀರಾತು ಬಿಡುಗಡೆಗೊಳಿಸಿತು. ಅದರಲ್ಲಿ
‘ಹದಿನೇಳು ಭಾಷೆಗಳಲ್ಲಿ ಮೂವತ್ತು ದಶಲಕ್ಷ ಪ್ರತಿಗಳು ಮುದ್ರಣವಾಗುವ ಏಕೈಕ ಮಾಸಿಕ’ ಎಂದು ಬರೆದಿತ್ತು.

ಇದನ್ನು ಓದಿ ಕೆಲವರಿಗೆ ಅಚ್ಚರಿಯಾಯಿತು. ಇನ್ನು ಕೆಲವರಿಗೆ ಏನೂ ಅನಿಸಲೇ ಇಲ್ಲ. ಕಾರಣ ಅವರಿಗೆ ಮೂವತ್ತು ದಶಲಕ್ಷ (ಮೂರು ಕೋಟಿ) ಪ್ರತಿಗಳು ಅಂದರೆ ಎಷ್ಟು ಎಂಬ ಪ್ರಮಾಣದ ಆಗಾಧತೆ ಕಣ್ಣುಮುಂದೆ ಬರಲಿಲ್ಲ. ಇದೂ ಒಂದು ಅಂಕಿ-ಅಂಶ ಎಂಬಂತೆ ಗ್ರಹಿಸಿಕೊಂಡರು. ಹೀಗಾಗಿ ಈ ಜಾಹೀರಾತಿನ ಪರಿಣಾಮ ಅಷ್ಟಾಗಿ ಓದುಗರ ಮೇಲಾಗಲಿಲ್ಲ.

ಇದನ್ನು ರಾಘವೇಂದ್ರ ಸಿಂಗ್ ಎಂಬುವವರು ‘ರೀಡರ‍್ಸ್ ಡೈಜೆಸ್ಟ್’ ಸಂಪಾದಕೀಯ ಮಂಡಳಿಯ ಗಮನಕ್ಕೆ ತಂದರು. ಇದೇ ಅಂಕಿ-ಅಂಶವನ್ನು ಬಳಸಿ, ಜಾಹೀರಾತಿನಲ್ಲಿ Picturise ಮಾಡಿದರೆ, ಪರಿಣಾಮ ಜೋರಾಗಿರುತ್ತದೆಂಬ ಸಲಹೆ ನೀಡಿದರು. ಈ ಜಾಹೀರಾತು ಹೇಗಿರಬೇಕು ಎಂದು ಅವರು ನೀಡಿದ ಸಲಹೆ-‘ರೀಡರ‍್ಸ್ ಡೈಜೆಸ್ಟ್ ಮಾಸಿಕದ ಗಾತ್ರ ಒಂದು ಸೆಂಟಿಮೀಟರ್. ಒಂದರ ಮೇಲೆ ಒಂದ ರಂತೆ, ಮೂರು ಕೋಟಿ ಪ್ರತಿಗಳನ್ನು ಇಟ್ಟರೆ ಮುನ್ನೂರು ಕಿಮೀ ಎತ್ತರವಾಗುತ್ತದೆ. ಅಂದರೆ ಎವರೆಸ್ಟ್ ಪರ್ವತದ ಮೇಲೆ ಅಷ್ಟೇ ಎತ್ತರದ ಮೂವತ್ತೈದು ಪರ್ವತಗಳನ್ನು ಇಟ್ಟಂತೆ!’

ಪತ್ರಿಕೆ ಸಂಪಾದಕೀಯ ಮಂಡಳಿಗೆ ಈ ಸಲಹೆ ಹಿಡಿಸಿತು. ಎರಡು ತಿಂಗಳ ನಂತರ, ಪತ್ರಿಕೆಯ ಜಾಹೀರಾತಿನಲ್ಲಿ ಈ ಸಂಗತಿ ಸೇರಿಸ ಲಾಗಿತ್ತು. ಅಂಕಿ-ಅಂಶಗಳು ಯಾವತ್ತೂ ಬೋರು. ಅವನ್ನು Illustrate ಮಾಡಿದರೆ, ಸುಲಭವಾಗಿ ಅರ್ಥವಾಗುವಂತೆ ಚಿತ್ರೀಕರಿಸಿ ಹೇಳಿದರೆ ಪರಿಣಾಮ ಪ್ರಭಾವ ಶಾಲಿ. ಹೀಗೆ ಹೇಳುವುದನ್ನು ಹೇಗೆ ಹೇಳಿದರೆ ಚೆನ್ನ ಎಂದು ಯೋಚಿಸಿದರೆ ಹೀಗೂ ಹೇಳಬಹುದು ಎಂಬುದು ತಿಳಿದೀತು.

ಹಿಂದಾಗಡೆಯಿಂದ ಬನ್ನಿ..!  ‘ಹಿಂದಾಗಡೆಯಿಂದ ಬನ್ನಿ, ಹಿಂದಾಗಡೆಯಿಂದ ಬಂದು ಭೇಟಿ ಮಾಡಿ’ ಎಂಬ ಮಾತು ಉತ್ತರ ಕರ್ನಾಟಕ ದಲ್ಲಿ ಬಳಕೆಯಲ್ಲಿದೆ. ಇದನ್ನು ದೈನಂದಿನ ಬಳಕೆಯಲ್ಲಿ ವ್ಯಾಪಕವಾಗಿ ಹೇಳಲಾಗುತ್ತದೆ. ‘ಹಿಂದಾಗಡೆಯಿಂದ ಬನ್ನಿ ಅಂದರೆ ಹಿಂಬದಿ ಯಿಂದ ಬನ್ನಿ ಎಂದರ್ಥವಲ್ಲ. ನಂತರ ಬನ್ನಿ’ ಎಂದರ್ಥ. ಕೆಲವರು ಇದನ್ನು ಯಥಾರ್ಥ ಭಾವಿಸಿ, ಹಿಂದುಗಡೆಯಿಂದ ಬನ್ನಿ ಅಂತ
ಏಕೆ ಹೇಳಿದರು, ಹಿಂದುಗಡೆಯಿಂದ ಹೇಗೆ ಹೋಗುವುದು ಎಂದು ಯೋಚಿಸುವುದುಂಟು.

ಇತ್ತೀಚೆಗೆ ನನ್ನ ಸ್ನೇಹಿತರ ಪರಿಚಿತರೊಬ್ಬರು ಬೆಂಗಳೂರಿನಿಂದ ಬಾಗಲಕೋಟೆಯ ಒಬ್ಬ ಪ್ರಮುಖರನ್ನು ಭೇಟಿ ಮಾಡಿದಾಗ, ‘ನಾನು ಈಗ ತುಸು ಅವಸರದಲ್ಲಿದ್ದೇನೆ, ಹಿಂದಾಗಡೆಯಿಂದ ಬನ್ನಿ’ ಎಂದು ಹೇಳಿದರಂತೆ. ಇವರು ‘ಆಯಿತು, ಆಯಿತು’ ಎಂದು ಹೇಳಿ ಹೊರ ಹೋಗಿ ಒಂದೆರಡು ಸಿಗರೇಟ್ ಸೇದಿ, ಅವರ ಮನೆಯ ಹಿಂಬದಿಗೆ ಹೋದರಂತೆ. ಅಲ್ಲಿಂದ ಒಳ ಪ್ರವೇಶಿಸುವಾಗ, ಆ ಮನೆಯ  ಯಜಮಾನರ ಪತ್ನಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಇದನ್ನು ನೋಡಿದ ಯಾರೋ ಜೋರಾಗಿ, ‘ಕಳ್ಳ, ಕಳ್ಳ’ ಎಂದು ಕೂಗಿ
ದರಂತೆ, ಇನ್ನು ಕೆಲವರು ಮನೆಯ ಹೆಂಗಸರು ಸ್ನಾನ ಮಾಡುವಾಗ ಇಣುಕಿ ನೋಡಲು ಹೋಗಿದ್ದ ಎಂದು ಭಾವಿಸಿ ಇನ್ನೂ ಎರಡು ಬಾರಿಸಿದರಂತೆ. ಈ ಮಹಾಶಯ ಸ್ಪಷ್ಟನೆ ನೀಡಿ ಮನವರಿಕೆ ಮಾಡಿಕೊಡುವ ಹೊತ್ತಿಗೆ ಅವರ ಮುಖಮೂತಿ ಯಿಂದ ರಕ್ತ ಸುರಿಯಲಾ ರಂಭಿಸಿತ್ತಂತೆ. ಇವೆಲ್ಲ ಮುಗಿದು ಹತ್ತು ಜನರ ಮುಂದೆ ನ್ಯಾಯಪಂಚಾಯ್ತಿ ನಡೆದಾಗ, ‘ನೀವೇ ಹೇಳಿದರಲ್ಲ, ಹಿಂದಾಗಡೆಯಿಂದ ಬನ್ನಿ ಅಂತ. ಅದಕ್ಕೆ ಮನೆ ಹಿಂಬದಿಯಿಂದ ಬರುತ್ತಿದ್ದಂತೆ ಎಲ್ಲ ಸೇರಿ ನನಗೆ ಹೊಡೆದರು.

ನಾನೇನು ತಪ್ಪು ಮಾಡಿದೆ ಅಂತ ಹೊಡೆದಿರಿ? ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ತಕ್ಷಣ ಎಲ್ಲ ಸುತ್ತುವರಿದು ಹೊಡೆದರು. ನಾನು ಈ ಮನೆಯ ಯಜಮಾನರಿಗೆ ಹಣ ತಲುಪಿಸಲು ಬಂದಿದ್ದೆ. ಎಲ್ಲರ ಮುಂದೆ ಹಣ ಕೊಡುವುದು ಬೇಡ, ಮನೆಯ ಹಿಂದುಗಡೆ ಹೋಗಿ ಕೊಡಿ ಎಂದು ಸೂಚಿಸಲು ಅವರು ಹಾಗೆ ಹೇಳಿರಬಹುದೆಂದು ಭಾವಿಸಿ, ಹಿಂಬದಿಯಿಂದ ಮನೆಯೊಳಗೆ ಪ್ರವೇಶಿಸಲು ಅಲ್ಲಿಗೆ ಹೋಗಿದ್ದೆ’ ಎಂದು ನಡೆದಿದ್ದನ್ನೆಲ್ಲ ವಿವರಿಸಿದರಂತೆ.

ಇಷ್ಟಾದ ನಂತರ ಹೊಡೆತ ತಿಂದ ಮಹಾಶಯನಿಗೆ ‘ಹಿಂದಾಗಡೆಯಿಂದ ಬನ್ನಿ ಅಂದ್ರೆ ನಂತರ ಬನ್ನಿ’ ಎಂದರ್ಥ ಎಂಬುದು ತಿಳಿಯಿ ತಂತೆ. ಕೊನೆಯಲ್ಲಿ ಹೊಡೆತ ತಿಂದವ ಮುಖ, ಬಾಯಿ ಒರೆಸಿಕೊಳ್ಳುತ್ತಿದ್ದರೆ, ಹೊಡೆತ ಕೊಟ್ಟವರು ಮೆಲ್ಲಗೆ ಜಾಗ ಖಾಲಿ ಮಾಡಿದ್ದರಂತೆ. ಈಗಲೂ ಆ ಮಹಾಶಯನಿಗೆ ಹಿಂದಾಗಡೆಯಿಂದ ಬನ್ನಿ ಅಂದರೆ ನಂತರ ಬರಬೇಕೋ, ಹಿಂಬದಿಯಿಂದ ಬರಬೇಕೋ ಎನ್ನುವ ದ್ವಂದ್ವ ಕಾಡುತ್ತ ದಂತೆ. ಅಂತೂ ಅವರ ಪಾಲಿಗೆ ಆ ಪದದ ಅರ್ಥ ಅತಿ ದುಬಾರಿಯಾಗಿ ಪರಿಣಮಿಸಿದ್ದಂತೂ ನಿಜ.

ಮೊನ್ನೆ ನಾನು ‘ಮೈ ಹೂಂ ನ’ ಎಂಬ ಹಿಂದಿ ಸಿನಿಮಾ ನೋಡುತ್ತಿದ್ದೆ. ಅದರಲ್ಲಿ ಹಿಂದಿ ಲೇಡಿ ಟೀಚರ್ ಹೀರೋಗೆ ಹೇಳ್ತಾಳೆ- ’’Come and meet me at the backside’’ ಆಗ ನನಗೆ ಅನಿಸಿದ್ದೇನೆಂದರೆ, ‘ಹಿಂದಾಗಡೆಯಿಂದ ಬಂದು ಭೇಟಿ ಮಾಡಿ’ ಎಂಬ ಪದ ಪ್ರಯೋಗ ಕೇವಲ ಉತ್ತರ ಕರ್ನಾಟಕದಲ್ಲಿ ಮಾತ್ರ ಅಲ್ಲ, ಹಿಂದಿಯಲ್ಲೂ, ಹಿಂದಿ ಮಾತಾಡುವ ಪ್ರದೇಶಗಳಲ್ಲೂ ಬಳಕೆಯಲ್ಲಿದೆಯೆಂದು.

ಪ್ರೀತಿ-ಅಧ್ಯಾತ್ಮ
ಸದ್ಗುರು ಅವರ ಉಪನ್ಯಾಸ, ಸತ್ಸಂಗ, ಪ್ರವಚನ, ಸಂವಾದ ಚೆನ್ನಾಗಿರುತ್ತವೆ. ಸದ್ಗುರು ಬಹಳ ಸಂಯಮದಿಂದ, ಹೊಸ ಹೊಳವಿನಿಂದ ಮಾತಾಡುತ್ತಾರೆ. ಅವರ ಯೋಚನೆಯ ಧಾಟಿಯೂ ಭಿನ್ನವಾಗಿರುತ್ತದೆ. ಒಮ್ಮೆ ಯಾರೋ- ‘ನಾವು ಪ್ರೀತಿಯೆಂಬ ಆನಂದದಿಂದ ಕೂಡಿ ದ್ದರೆ, ಅಧ್ಯಾತ್ಮ ಹಾದಿಯಲ್ಲಿ ಸಾಗಬಹುದೇ?’ ಎಂದು ಸದ್ಗುರು ಅವರಿಗೆ ಕೇಳಿದಾಗ, ನೀಡಿದ ಸರಳ ಉತ್ತರವಿದು.

ಪ್ರೀತಿ ಎನ್ನುವುದು ಆನಂದವಲ್ಲ. ಅದೊಂದು ಗಾಢವಾದ ಅದ್ಭುತವಾದ ನೋವು. ಅದು ನಿಮ್ಮೊಳಗಿರುವ ಎಲ್ಲವನ್ನೂ ಹರಿದು ಛಿದ್ರ ಮಾಡುತ್ತದೆ. ಆಗಲೇ ನಿಮಗೆ ಪ್ರೀತಿಯ ಅರಿವಾಗುವುದು. ನೀವು ಸಂತೋಷಗೊಂಡರೆ ಅದು ಪ್ರೀತಿ ಯಲ್ಲ, ಕೇವಲ ಅನುಕೂಲತೆಯಷ್ಟೆ. ನಿಮಗೆ ಸ್ವಲ್ಪ ವಾತ್ಸಲ್ಯ ಭಾವನೆ ಉಂಟಾಗಿರಬಹುದು. ಆದರೆ ನಿಮಗೆ ಪ್ರೀತಿಯ ಭಾವನೆ ಉಂಟಾಯಿತೆಂದರೆ, ನಿಮ್ಮ ಆಂತರ್ಯ ದಲ್ಲಿರುವ ಎಲ್ಲವೂ ನಿಜವಾಗಲೂ ಛಿದ್ರಗೊಳ್ಳುವುದು. ಅದು ನೋವಿನಿಂದ ಕೂಡಿದ್ದರೂ ಅದ್ಭುತವಾಗಿರುತ್ತದೆ. ನೀವು ಪ್ರೀತಿಯಲ್ಲಿ ಇದ್ದಾಗ, ನೀವು ಮಾಡುವುದೆಲ್ಲವೂ ಪ್ರೀತಿಯೇ. ನೀವು ತಿಂದರೆ ಅದು ಪ್ರೀತಿ. ಆ ವ್ಯಕ್ತಿಗಾಗಿ ಕೆಲಸ ಮಾಡಲಿ, ಬಿಡಲಿ ಅದೂ ಪ್ರೀತಿಯೇ. ಆದರೆ ಇಂದು ನಾವು ಒಂದು ಮನೋಭಾವನೆ ಯನ್ನು ಮೈಗೂಡಿಸಿಕೊಂಡಿದ್ದೇವೆ.

‘ಪ್ರೀತಿ ಮಾಡುವುದು’ ಎಂಬ ಪದಗಳನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಕೇವಲ ಕೆಲವು ನಿರ್ದಿಷ್ಟ ಕ್ರಿಯೆಗಳು ಮಾತ್ರ ಪ್ರೀತಿಯದ್ದಾ ಗಿರುತ್ತವೆ. ನೀವು ಪ್ರೀತಿಯನ್ನು ಮಾಡಲಾಗುವುದಿಲ್ಲ. ನೀವು ಅನುವು ಮಾಡಿಕೊಟ್ಟರೆ, ಅದು ನಿಮಗೆ ಉಂಟಾಗಬಹುದು. ಪ್ರೀತಿಯು ಎಲ್ಲವನ್ನು ಒಳಗೊಂಡಿದೆ. ನೀವು ಪ್ರೀತಿಯಿಂದಿದ್ದರೆ ನಿಮ್ಮ ನಾಯಿಯನ್ನು ನೋಡಿದರೆ ಅದನ್ನು ಪ್ರೀತಿಸುವಿರಿ. ನೀವು ಒಂದು ಮರವನ್ನು ನೋಡಿದೊಡನೆ ಅದನ್ನು ಪ್ರೀತಿಸುವಿರಿ- ಒಂದು ಹೂವನ್ನು ನೋಡಿ ಅದನ್ನು ಪ್ರೀತಿಸುವಿರಿ.

ನೀವು ಆಕಾಶವನ್ನು ನೋಡುವಿರಿ, ಅದನ್ನು ಪ್ರೀತಿಸುವಿರಿ. ನೀವು ಪ್ರೀತಿಯಿಂದಿದ್ದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ಕೇವಲ ಒಬ್ಬ ವ್ಯಕ್ತಿಯು ಮಾತ್ರ ನಿಮಗೆ ಸುಂದರವಾಗಿ ಕಾಣಿಸಿದರೆ, ನಿಮ್ಮಲ್ಲಿ ಪ್ರೀತಿ ಇಲ್ಲವೆಂದಾಯಿತು. ಅದು ನಿಮ್ಮ ಕಾಮದ ನಯವಾದ ಅಭಿವ್ಯಕ್ತಿ ಯಾಗಿದೆ. ಒಂದು ಗುಣ, ಅದೊಂದು ಕ್ರಿಯೆಯಲ್ಲ. ಧ್ಯಾನವೂ ಒಂದು ಗುಣ, ಅದೊಂದು ಕ್ರಿಯೆಯಲ್ಲ. ಅಧ್ಯಾತ್ಮಿಕತೆಯೂ ಒಂದು ಗುಣ, ಕ್ರಿಯೆಯಲ್ಲ. ಅದೊಂದು ಹೊಸ ಆಯಾಮ. ಅದು ನೀವು ‘ಮಾಡುವ’ ಏನೋ ಒಂದು ಕ್ರಿಯೆಯಲ್ಲ. ನೀವು ಅದರೊಳಗೆ ಮುಳುಗುವು ದಾಗಿದೆ. ಅದು ನಿಮ್ಮನ್ನು ಆವರಿಸಿಕೊಳ್ಳಲು ನೀವು ಸಮ್ಮತಿಸುವುದಾಗಿದೆ. ಇಲ್ಲದಿದ್ದಲ್ಲಿ ಅಲ್ಲಿ ಅಧ್ಯಾತ್ಮಿಕತೆ ಇಲ್ಲ. ನೀವು ಅಧ್ಯಾತ್ಮ ರಾಗುವಿರೆಂದು ಯೋಚಿಸಿದರೆ, ಅದು ಎಂದಿಗೂ ಸಂಭವಿಸುವುದಿಲ್ಲ. ನೀವು ಸುಲಭವಾಗಿ ಭೇದಿಸುವಂತವರಾಗಬೇಕು. ಅಗಲೇ ಅಲ್ಲಿ ಅಧ್ಯಾತ್ಮಿಕತೆ ಇರುವುದು. ನೀವು ಅಭೇದ್ಯವಾದ ಕಲ್ಲಿನಂತೆ ನಿಂತಿದ್ದರೆ, ಅಲ್ಲಿ ಅಧ್ಯಾತ್ಮಿಕತೆ ಇರುವುದಿಲ್ಲ.

ಹೀಗೊಂದು ಪತ್ರ
ಇತ್ತೀಚೆಗೆ ಮರು ಓದಿಗಾಗಿ ಅನುರಾಗ ಮಾಥೂರ್ ಅವರ The Inscrutable mericans ಎಂಬ ಕಾದಂಬರಿ ಎತ್ತಿಕೊಂಡಿದ್ದೆ. ಸುಮಾರು 25 ವರ್ಷಗಳ ಹಿಂದಿನ ಕಾದಂಬರಿ. ಇದನ್ನು ಆಧರಿಸಿ ನಿರ್ದೇಶಕ ಚಂದ್ರ ಸಿದ್ಧಾರ್ಥ ಸಿನಿಮಾ ಕೂಡ ಮಾಡಿದ್ದಾರೆ. ಈ ಕೃತಿಯಲ್ಲಿ ಬರುವ ಗೋಪಾಲ ಹಾಗೂ ಅವನ ಇಂಗ್ಲಿಷ್‌ನ್ನು ಮಾಥೂರ್ ಬಹಳ ಸ್ವಾರಸ್ಯವಾಗಿ ಬಣ್ಣಿಸಿದ್ದಾರೆ.

ಅದಕ್ಕೆ ಪುಟ್ಟ ಸ್ಯಾಂಪಲ್ ಇದು. ಗೋಪಾಲ ತನ್ನ ಸಹೋದರನಿಗೆ ಬರೆದ ಪತ್ರದಲ್ಲಿರುವ ಒಕ್ಕಣೆ- ‘I am hoping all is well with health and wealth. I am fi ne at my end. Hoping your end is fine too.’