Friday, 3rd February 2023

ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ಕೊಡಗು ಮೂಲದ ಎಂ.ಎ.ಗಣಪತಿ ಐಪಿಎಸ್ ನೇಮಕ

ಮಡಿಕೇರಿ: ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮಹಾನಿರ್ದೇಶಕರಾಗಿ ಕೊಡಗು ಮೂಲದ ಐಪಿಎಸ್ ಅಧಿಕಾರಿ ಎಂ.ಎ.ಗಣಪತಿ ಅವರನ್ನು ನೇಮಕ ಮಾಡಿದೆ.

ಈ ಮೊದಲು ಎಂ.ಎ.ಗಣಪತಿ ಅವರು ನಾಗರಿಕ ವಿಮಾನಯಾನ ಮತ್ತು ಭದ್ರತಾ ವಿಭಾಗದ ಪ್ರಧಾನ ನಿರ್ದೇಶಕ (ಡಿಜಿ) ಆಗಿ ಸೇವೆ ಸಲ್ಲಿಸುತ್ತಿದ್ದರು. 1986 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಎಂ.ಎ ಗಣಪತಿ, ಈ ಹಿಂದೆ ಸಿಐಎಸ್‌ಎಫ್‌ನಲ್ಲಿ ವಿಶೇಷ ಡಿಜಿ ಆಗಿದ್ದರು. ಅದಕ್ಕೂ ಮೊದಲು ಉತ್ತರಾಖಂಡ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದರು.

ಗೃಹ ಸಚಿವಾಲಯದ ಆಂತರಿಕ ಭದ್ರತೆ ಮತ್ತು ನಕ್ಸಲ್‌ ನಿಗ್ರಹ ಪಡೆ ವಿಭಾಗಗಳಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಫೆಬ್ರವರಿ 29, 2024 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಅವರು ಎನ್‌ಎಸ್‌ಜಿ ಮಹಾನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

error: Content is protected !!