Tuesday, 9th August 2022

ಮುಹಮ್ಮದ್ ಆರೀಫ್ ಪಡುಬಿದ್ರೆಗೆ ಮೊಗದೋಡಿ ಗೋಪಾಲಕೃಷ್ಣ ಮೇಲಾಂಟ ಪ್ರಶಸ್ತಿ

ಮಂಗಳೂರು : ವಿಜಯ ಕರ್ನಾಟಕ ಮಂಗಳೂರಿನ ಪ್ರಧಾನ ವರದಿಗಾರ ಮುಹಮ್ಮದ್ ಆರೀಫ್ ಪಡುಬಿದ್ರೆ ಅವರು ಕೆಯುಡಬ್ಲ್ಯೂಜೆ ಕಾಸರಗೋಡು ಘಟಕದಿಂದ ನೀಡಲಾಗುವ ದತ್ತಿನಿಧಿ ಪ್ರಶಸ್ತಿಯಲ್ಲಿ ಮೊಗದೋಡಿ ಗೋಪಾಲಕೃಷ್ಣ ಮೇಲಾಂಟ ಪ್ರಶಸ್ತಿಗೆ ಆಯ್ಕೆ ಯಾಗಿದ್ದಾರೆ.

ದತ್ತಿ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಫಲಕಗಳನ್ನೊಳಗೊಂಡಿರುತ್ತದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರೆ ಮುಹಮ್ಮದ್ ಆರಿಫ್, 1996ರಲ್ಲಿ ಕೆನರಾ ಟೈಮ್ಸ್ ಬಳಗದ ಕನ್ನಡ ಜನಾಂತರಂಗ ಮತ್ತು ಕರಾವಳಿ ಅಲೆ ಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿ ಆರಂಭಿಸಿದರು.

ನಾಲ್ಕು ವರ್ಷ ಉಡುಪಿ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿ, 1999ರಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಈಗ ಮಂಗಳೂರಿನ ಪ್ರಧಾನ ವರದಿಗಾರ (ಪ್ರಿನ್ಸಿಪಾಲ್ ಕರೆಸ್ಪಾಂಡೆಂಟ್)ರಾಗಿದ್ದಾರೆ.

ಪತ್ರಿಕಾ ಕ್ಷೇತ್ರದಲ್ಲಿ ಒಟ್ಟು 23 ವರ್ಷಗಳ ಅನುಭವ ಹೊಂದಿರುವ ಇವರಿಗೆ ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗಾಗಿ ಪ.ಗೋ.ಪ್ರಶಸ್ತಿ, ಸೌಹಾರ್ದ ವರದಿಗಳಿ ಗಾಗಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಥಮ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ, ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಸಾರ್ವ ಜನಿಕ ಶ್ರೀಗಣೇಶೋತ್ಸವ ಸಂದರ್ಭ ಸೌಹಾರ್ದತೆಗಾಗಿ ಸನ್ಮಾನ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನಿಂದ ಮೀಲಾದ್ ಸೌಹಾರ್ದ ಪ್ರಶಸ್ತಿ ಇತ್ಯಾದಿಗಳು ಲಭಿಸಿವೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿತರಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮತ್ತು ದಕ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ.

ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ರೋಗಿಗಳ ಸಹವರ್ತಿಗಳಿಗೆ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆಯ ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದು, ಆಸ್ಪತ್ರೆಗಳಲ್ಲಿರುವ ಬಡ ರೋಗಿಗಳಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಜಮಾಅತ್ ಸರ್ವೇ ಮೂಲಕ ಗ್ರಾಮಕ್ಕೆ ಸೌಲಭ್ಯ ವಿತರಣೆ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.