Wednesday, 1st February 2023

ಮಾಟಗಾತಿಯರ ಲೋಕದಲ್ಲೊಂದು ವಿಹಾರ…

ಹಿಂದಿರುಗಿ ನೋಡಿದಾಗ

ನಮ್ಮ ಜಗತ್ತಿನಲ್ಲಿ ದೆವ್ವಗಳು ಹಾಗೂ ದುಷ್ಟಶಕ್ತಿಗಳಿವೆ ಎಂದು ಎಲ್ಲ ಕಾಲ-ದೇಶ-ಧರ್ಮದ ಜನರೂ ನಂಬಿರುವುದುಂಟು. ಮಧ್ಯಯುಗದ ಐರೋಪ್ಯ ದೇಶಗಳಲ್ಲಿ ಮಾಟಗಾತಿಯರ ಅಸ್ತಿತ್ವದ ಬಗ್ಗೆ ವಿಪುಲ ಮಾಹಿತಿ ದೊರೆಯುತ್ತದೆ. ಮಾಟಗಾತಿಯರ ಬಗೆಗಿನ ವಿಪರೀತ ನಂಬಿಕೆ, ಭಯ-ಭೀತಿ ಯುರೋಪಿಯನ್ನರನ್ನು ಕಾಡುತ್ತಿತ್ತು.

1450-1750ರ ವರ್ಷಗಳ ನಡುವೆ ಯುರೋಪಿನಲ್ಲಿ ‘ಮಾಟಗಾತಿಯರ ಬೇಟೆ’ (ವಿಚ್ ಹಂಟಿಂಗ್) ಉಗ್ರರೀತಿಯಲ್ಲಿ ಜಾರಿ ಯಲ್ಲಿತ್ತು. ಮಾಯ-ಮಂತ್ರ, ಮಾಟ- ವಾಮಾಚಾರ ಗಳಲ್ಲಿ ತೊಡಗಿದ್ದ ಸುಮಾರು 50000 ಜನ ರನ್ನು ಬಹಿರಂಗವಾಗಿ ಕೊಂದ, ಸುಟ್ಟ ಪ್ರಕರಣಗಳು ನಡೆದವು. 21ನೇ ಶತಮಾನದಲ್ಲೂ ಮಾಟವನ್ನು ಕಲಿಸುವ ಶಾಲೆಗಳು ಪಾಶ್ಚಾತ್ಯ ದೇಶಗಳಲ್ಲಿವೆ ಎಂದರೆ ನಂಬು ವುದೇ ಕಷ್ಟ.

ಪ್ರಸ್ತುತ, ಮಾಟಗಾತಿಯರಿಗೆ ಇದೆ ಎನ್ನಲಾದ ಮುಖ್ಯಲಕ್ಷಣವೊಂದರ ಬಗ್ಗೆ ಚರ್ಚಿ ಸೋಣ. ಮಾಟಗಾತಿಯರು ಹಾರಬಲ್ಲರಂತೆ. ಹ್ಯಾರಿ ಪಾಟರ್ ಕಾದಂಬರಿಗಳನ್ನು ಓದಿದವರು ಅಥವಾ ಚಲನಚಿತ್ರಗಳನ್ನು ನೋಡಿದವರು, ಮಾಟ-ಮಂತ್ರದಲ್ಲಿ ತೊಡಗು ವವರು ಕೋಲುಪೊರಕೆಯ ಮೇಲೆ ಕುಳಿತು ವೇಗವಾಗಿ ಹಾರುವುದನ್ನು, ಎಲ್ಲಿ ಬೇಕೆಂದ ರಲ್ಲಿಗೆ ಪಯಣಿಸುವುದನ್ನು ನೋಡಿರು ತ್ತಾರೆ. ಚಲನಚಿತ್ರದಲ್ಲಿ ಇದನ್ನು ನಿರ್ದೇಶಕರ ಕಲ್ಪನೆಯೆಂದು ಖುಷಿಯಿಂದ ನೋಡಬಹುದು. ಆದರೆ ಮಧ್ಯಯುಗದ ಯುರೋಪಿನಲ್ಲಿ ಇಂಥವರು ವಾಸ್ತವದಲ್ಲಿ ಇದ್ದರು ಎಂಬ ಕಥನವಿದೆ.

ಪೊರಕೆ ಎಂದರೆ ನಾವು ಉಪಯೋಗಿಸುವ ಮೊಂಡು ಪೊರಕೆಯಲ್ಲ, ಒಂದು ಉದ್ದಕೋಲಿನ ತುದಿಯಲ್ಲಿ ಕಟ್ಟಿರುವ ಪೊರಕೆ, ಮನೆಯ ಸೂರಿನಲ್ಲಿ ಕಟ್ಟಿರುವ ಜೇಡನಬಲೆ ತೆಗೆಯಲು ಬಳಸುವಂಥದ್ದು. ಮಾಟಗಾತಿಯರು ಇಂಥ ಪೊರಕೆಯ ಮೇಲೆ ಕುಳಿತು ಹಾರಬಲ್ಲರು. ಕೆಲವು ಮಾಟಗಾತಿಯರು ಬೆಕ್ಕು, ಹಂದಿ, ಮೇಕೆಯಂಥ ಪ್ರಾಣಿಗಳ ಮೇಲೂ ಸವಾರಿ ಮಾಡಬಲ್ಲವರಾಗಿದ್ದರಂತೆ.
ಪಾಶ್ಚಾತ್ಯರಲ್ಲಿ ‘ಸಬ್ಬತ್’ ಎನ್ನುವ ಪ್ರಯೋಗವಿದೆ. ಸಬ್ಬತ್ ಎಂದರೆ ವಿಶ್ರಾಂತಿ. ಕ್ರೈಸ್ತರ ನಂಬಿಕೆಯನ್ವಯ ದೇವರು 6 ದಿನಗಳ ಅವಧಿಯಲ್ಲಿ ಬ್ರಹ್ಮಾಂಡವನ್ನುಸೃಷ್ಟಿಸಿ, 7 ನೆಯ ದಿನವಾದ ಭಾನುವಾರ ವಿಶ್ರಾಂತಿ ಪಡೆದನಂತೆ.

ಹಾಗಾಗಿ ಕ್ರೈಸ್ತರೆಲ್ಲ ಸಾಮಾನ್ಯವಾಗಿ ಭಾನುವಾರ ತಮ್ಮ ಕೆಲಸಕ್ಕೆ ವಿಶ್ರಾಂತಿ ನೀಡುವುದುಂಟು. ಯುರೋಪಿಯನ್ನರು, ಮುಖ್ಯ ವಾಗಿ ಬ್ರಿಟಿಷರು ಆಳಿದ ಎಲ್ಲ ದೇಶಗಳಲ್ಲಿ ಸಾಮಾನ್ಯವಾಗಿ ಭಾನುವಾರವೇ ರಜೆ. ಯಹೂದಿಗಳು ‘ಸಬ್ಬತ್’ ಅನ್ನು ಶನಿವಾರ ಆಚರಿಸುತ್ತಾರೆ. ಮಾಟಗಾತಿಯರೂ ಹೆಚ್ಚುಕಡಿಮೆವಾರಕ್ಕೊಮ್ಮೆ ‘ಸಬ್ಬತ್’ ಆಚರಿಸುತ್ತಾರೆ, ಅದು ನಡೆಯುವುದು ಮಧ್ಯರಾತ್ರಿ ಯಲ್ಲಿ. ಮಾಟಗಾತಿಯರೆಲ್ಲ ಕೋಲು ಪೊರಕೆಯ ಮೇಲೆ ಕುಳಿತು, ನೂರಾರು ಮೈಲು ದೂರದ ಅಜ್ಞಾತ ಸ್ಥಳದಲ್ಲಿ ಸಮಾವೇಶ ಸೇರುತ್ತಾರೆ.

ಅವರೊಂದಿಗೆ ನಾನಾ ದೆವ್ವ-ಭೂತ-ಸೈತಾನರೆಲ್ಲ ಸೇರುವುದುಂಟು. ಮಾಟಗಾತಿಯರು ದುಷ್ಟಶಕ್ತಿಗಳ ಜತೆ ಲೈಂಗಿಕ ಸಮಾರಾ ಧನೆಯನ್ನೂ ನಡೆಸುವುದುಂಟು. ಒಟ್ಟಿನಲ್ಲಿ ಮಾಟಗಾತಿಯರ ಸಬ್ಬತ್ ಎಂದರೆ ದೊಡ್ಡ ‘ಪಾರ್ಟಿ’ಯಂತೆ. ಇದು ಅಂದು ಪ್ರಚಲಿತವಾಗಿದ್ದ ನಂಬಿಕೆ. ಅಂದಿನ ದಿನಗಳಲ್ಲಿ ಯಾರಾದರೂ ಮಾಯ-ಮಾಟ-ಮಂತ್ರಗಳಲ್ಲಿ ತೊಡಗಿದ್ದಾರೆಂದರೆ, ಬಹಿರಂಗ ವಾಗಿ ಅವರ ವಿಚಾರಣೆ ನಡೆದು, ಅಪರಾಧ ಸಾಬೀತಾದರೆ ಮರಣದಂಡನೆಯೇ ಶಿಕ್ಷೆಯಾಗಿರುತ್ತಿತ್ತು.

ಅವರನ್ನು ಬೀದಿಯಲ್ಲಿನ ಕಂಬಕ್ಕೆ ಕಟ್ಟಿ ಬೆಂಕಿ ಹಚ್ಚುತ್ತಿದ್ದರು ಇಲ್ಲವೇ ನೇಣುಹಾಕುತ್ತಿದ್ದರು. ಆದರೂ ಮಾಟಗಾತಿಯರಾಗುವ ಅವಕಾಶವನ್ನು ಮಹಿಳೆಯರು ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂಬುದು ಕುತೂಹಲಕರ ಸಂಗತಿ. ಮಾಟಗಾತಿಯರು ಕೋಲುಪೊರಕೆಯ ಮೇಲೆ ಕುಳಿತು ರಾತ್ರಿಯಲ್ಲಷ್ಟೇ ಹಾರುತ್ತಿದ್ದರು ಮತ್ತು ಆಗ ಅವರು ನಗ್ನವಾಗಿರಬೇಕಿತ್ತು ಹಾಗೂ ಮುಖ್ಯ ವಾಗಿ ಒಂದು ವಿಶೇಷವಾದ ‘ಮಾಟಗಾತಿಯರ ಹಾರುವ ಲೇಪನ’ವನ್ನು ಅವರು ಮೈಗೆ ಬಳಿದುಕೊಳ್ಳಬೇಕಿತ್ತು. ಇದನ್ನು ‘ವಿಚೆಸ್ ಫ್ಲೈಯಿಂಗ್ ಆಯಿಂಟ್ಮೆಂಟ್, ಗ್ರೀನ್ ಆಯಿಂಟ್ಮೆಂಟ್, ಮ್ಯಾಜಿಕ್ ಸ್ಯಾಲ್ವ್, ಲೈಕ್ಯಾಂಥ್ರೋಪಿಕ್ ಆಯಿಂಟ್ಮೆಂಟ್’ ಎಂದೆಲ್ಲ ಕರೆಯುತ್ತಿದ್ದರು.

ಬವೇರಿಯಾದ ವೈದ್ಯ ಜೋಹಾನೆಸ್ ಹಾರ್ಟ್ಲೀಬ್ (1410-1468) ಬರೆದಿರುವ ‘Book on all forbidden arts, superstition and sorcery’ ಎಂಬ ಪುಸ್ತಕದಲ್ಲಿ ಮಾಟಗಾತಿಯರ ಹಾರುವ ಲೇಪನಗಳ ಬಗೆಗಿನ ಮೊದಲ ಪ್ರಸ್ತಾಪವಿದೆ. ಮಾಟಗಾತಿಯರು ನಿಜಕ್ಕೂ ಕೋಲುಪೊರಕೆ, ಬೆಕ್ಕು, ಗೂಬೆ, ಮೇಕೆಯ ಮೇಲೆ ಕುಳಿತು ಹಾರುತ್ತಿದ್ದರೆ? ಖಂಡಿತ ಇಲ್ಲ. ಅದು ಅಸಾಧ್ಯವೆಂದು ಅಂದಿನವರಿಗೂ ಗೊತ್ತಿತ್ತು, ಇಂದಿನವರಿಗೂ ಗೊತ್ತಿದೆ. ಆದರೂ ಅವರು ಕೋಲು ಪೊರಕೆಯ ಮೇಲೆ ಕುಳಿತು ಜಗತ್ತಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು ಎಂಬ ನಂಬಿಕೆ ಬಂದಿದ್ದು, ಉಳಿದಿದ್ದು ಹೇಗೆ? ಇದಕ್ಕೆ ಕಾರಣ, ಅವರು ನಗ್ನದೇಹದ ಮೇಲೆ ಹಚ್ಚಿಕೊಳ್ಳುತ್ತಿದ್ದ ‘ಮಾಟಗಾತಿಯರ ಹಾರುವ ಲೇಪನ’.

ಇದನ್ನು ಹಚ್ಚಿಕೊಂಡುಬಿಟ್ಟರೆ ಹಾರುವಶಕ್ತಿ ಬಂದುಬಿಡುವುದೇ? ಖಂಡಿತ ಇಲ್ಲ. ಆದರೂ ಅಂಥ ಶಕ್ತಿ ಬರುತ್ತದೆ ಎಂಬ ನಂಬಿಕೆ ಯಿದ್ದದ್ದು ಸುಳ್ಳಲ್ಲ. ಇದಕ್ಕೆ ಕಾರಣ, ಆ ಲೇಪನದ ತಯಾರಿಕೆಯಲ್ಲಿ ಬಳಸುತ್ತಿದ್ದ ನಾನಾ ರೀತಿಯ ಮೂಲಿಕೆಗಳು. ಅವುಗಳಲ್ಲಿನ ರಾಸಾಯನಿಕ ವಸ್ತುಗಳು ಮಾಟಗಾತಿಯರ ಚರ್ಮದ ಮೂಲಕ ಹಾದು, ಅವರ ದೇಹದ ರಕ್ತಪ್ರವಾಹದಲ್ಲಿ ಬೆರೆಯುತ್ತಿದ್ದವು. ಈ ಭ್ರಾಮಕಜನ್ಯ ರಾಸಾಯನಿಕಗಳು ಅವರ ಮಿದುಳು-ಮನಸ್ಸಿನ ಮೇಲೆ ನೇರಪ್ರಭಾವ ಬೀರುತ್ತಿದ್ದವು. ಲೇಪನ ಹಚ್ಚಿಕೊಳ್ಳುವ ಮೊದಲು ಅವರ ಮನದಲ್ಲಿ ಯಾವ್ಯಾವ ವಿಚಾರಗಳು ಇರುತ್ತಿದ್ದವೋ, ಅವು ಭ್ರಮಾಲೋಕದಲ್ಲಿ ವಾಸ್ತವವಾಗಿ ನಡೆಯುತ್ತಿರು ವಂತೆ ಭಾಸವಾಗುತ್ತಿದ್ದವು.

ಹಾಗಾಗಿ ಮಾಟಗಾತಿಯರು ಕೋಲುಪೊರಕೆಯ ಮೇಲೆ ಕುಳಿತು ಹಾರಬಲ್ಲರು ಎನ್ನುವುದು ಭ್ರಮೆಯಷ್ಟೇ ಆಗಿತ್ತು. ಮಹಿಳೆಯರು ನಗ್ನರಾಗಿ ಮೈಗೆಲ್ಲ, ವಿಶೇಷವಾಗಿ ಯೋನಿ ಪ್ರದೇಶಕ್ಕೆ ಲೇಪನ ಹಚ್ಚಿಕೊಂಡು ಕೋಲುಪೊರಕೆಯ ಮೇಲೆ ಕೂರುತ್ತಿದ್ದರು. ಅದರ ಕೋಲನ್ನು ಎರಡು ತೊಡೆಗಳ ನಡುವೆ ಸಿಕ್ಕಿಸಿಕೊಂಡು ಹಾರಲೆತ್ನಿಸುವಾಗ ಉಂಟಾಗುವ ಘರ್ಷಣೆಯಿಂದ ಆ ಲೇಪನವು ಯೋನಿಭಿತ್ತಿಯ ಮೂಲಕ ಸುಲಭವಾಗಿ ರಕ್ತಪರಿಚಲನೆಯಲ್ಲಿ ಬೆರೆಯುತ್ತಿತ್ತು. ಈ ಅವಧಿಯಲ್ಲಿ ಹಸ್ತಮೈಥುನದಂಥ ಅನುಭವ ವಾಗಿ ಭ್ರಮೆಗೊಳಗಾಗುತ್ತಿದ್ದ ಅವರು, ದುಷ್ಟಶಕ್ತಿಗಳು ತಮ್ಮೊಡನೆ ಸಂಭೋಗಿಸುತ್ತಿವೆ ಎಂದು ಕಲ್ಪಿಸಿಕೊಂಡು ಸುಖಿಸುತ್ತಿದ್ದರು.

ಲೇಪನದ ಪ್ರಭಾವ ತೀವ್ರವಾಗುತ್ತಿದ್ದ ಹಾಗೆ ಅವರು ಮೈಮರೆತು ಅಲ್ಲೇ ಮಲಗಿಬಿಡುತ್ತಿದ್ದರು. ಇದೇ ಮತ್ತಿನಲ್ಲಿ ಪ್ರಜ್ಞಾಹೀನರಾಗಿ
ಬೆಳಗಿನವರೆಗೂ ಗಾಳಿಯಲ್ಲಿ ತೇಲಿದ ಅನುಭವ ಪಡೆಯುತ್ತಿದ್ದರು. ಬಾರ್ಥಲೋಮಿಯೋ ಸ್ಪಿನ (1494) ಎಂಬ ಇಟಲಿಯ
ದೈವಶಾಸ್ತ್ರಜ್ಞ ಮತ್ತು ದಾರ್ಶನಿಕ, ಈ ಲೇಪನಗಳ ಬಗ್ಗೆ ೨ ಪ್ರಕರಣಗಳನ್ನು ದಾಖಲಿಸಿದ್ದಾನೆ. ಅವು ‘ಟ್ರಾಕ್ಟಟಸ್ ಡಿ ಸ್ಟ್ರೈಜಿಬಸ್ ಸಿವ್ ಮ್ಯಾಲಫೀಸೀಸ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಮೊದಲನೆಯ ಪ್ರಕರಣ ಹೀಗಿದೆ: ಅಗಸ್ಟಸ್  ಡಿ ತುರ್ರೆ ಎಂಬಾತ ಪಾವಿಯ ನಗರದಲ್ಲಿ ವೈದ್ಯಕೀಯವನ್ನು ಕಲಿಯುತ್ತಿದ್ದಾಗೊಮ್ಮೆ ರಾತ್ರಿ ತಡವಾಗಿ ತನ್ನ ವಸತಿಗೃಹಕ್ಕೆ ಬಂದ.

ಬಾಗಿಲು ತೆರೆದು ಅವನನ್ನು ಒಳಗೆ ಕರೆದುಕೊಳ್ಳಲು ಯಾರೂ ಇರದ ಕಾರಣ, ಕಂಬ ಹಿಡಿದು ಹತ್ತಿ ಮೊದಲ ಮಹಡಿಗೆ ಹೋದ ಆತ ಕಿಟಕಿಯ ಮೂಲಕ ಒಳಗೆ ಧುಮುಕಿ ನೋಡಿದಾಗ, ಬಾಗಿಲು ತೆರೆದು ಒಳಗೆ ಬಿಟ್ಟುಕೊಳ್ಳಬೇಕಿದ್ದ ಸೇವಕಿ ತನ್ನ ಕೋಣೆಯಲ್ಲಿ ಅಸ್ತವ್ಯಸ್ತವಾಗಿ, ಎಚ್ಚರಿಸಲು ಸಾಧ್ಯವಿಲ್ಲದಷ್ಟು ಮೈಮರೆತು ಮಲಗಿದ್ದಳು. ಮರುದಿನ ತುರ್ರೆ, ‘ನಿನ್ನೆ ರಾತ್ರಿ ಬಾಗಿಲನ್ನೇಕೆ ತೆರೆಯಲಿಲ್ಲ?’ ಎಂದು ಕೇಳಿದಾಗ ‘ನಾನು ಸಂಚಾರದಲ್ಲಿದ್ದೆ’ ಎಂದು ಆಕೆ ಉತ್ತರಿಸಿದಳು.

2ನೇ ಪ್ರಕರಣ ಹೀಗಿದೆ: ಲುಗಾನೊ ನಗರದ ವ್ಯಕ್ತಿಯೊಬ್ಬ ಬೆಳಗ್ಗೆ ಎದ್ದು ನೋಡಿದಾಗ ಹೆಂಡತಿ ಮನೆಯಲ್ಲಿರಲಿಲ್ಲ. ಮನೆಯಿಂದ ಹೊರಬಂದು ತೋಟದಲ್ಲೆಲ್ಲ ಹುಡುಕಿ, ಕೊನೆಗೆ ಹಂದಿಗಳ ಕೊಟ್ಟಿಗೆಗೆ ಬಂದಾಗ ಅಲ್ಲಿ ಆಕೆ ನಗ್ನವಾಗಿ, ತೊಡೆಯನ್ನು  ಅಗಲಿಸಿ ಕೊಂಡು ಬಿದ್ದಿದ್ದಳು. ಅವಳಿಗೆ ಮೈಮೇಲೆ ಪ್ರಜ್ಞೆಯಿರಲಿಲ್ಲ. ತನ್ನ ಹೆಂಡತಿ ಓರ್ವ ಮಾಟಗಾತಿ ಎಂಬುದು ಆ ವ್ಯಕ್ತಿಗೆ ತಕ್ಷಣವೇ ತಿಳಿದು, ಅವಳನ್ನು ಅಲ್ಲಿಯೇ ಕೊಲ್ಲಲು ಮುನ್ನುಗ್ಗಿದನಾದರೂ ಕೊಂಚ ಸಂಭಾಳಿಸಿಕೊಂಡು ಆಕೆಗೆ ಪ್ರಜ್ಞೆ ಬರುವವರೆಗೂ ಕಾದ. ಕೋಪಾವಿಷ್ಟನಾಗಿದ್ದ ಗಂಡನನ್ನು ನೋಡಿ ಆಕೆ ಕೂಡಲೇ ಶರಣಾದಳು.

ಹಿಂದಿನ ರಾತ್ರಿ ತಾನು (ಕೋಲುಪೊರಕೆಯ ಮೇಲೆ ಕುಳಿತು) ದೂರದೂರಿಗೆ ಪಯಣಿಸಿದ್ದಾಗಿ ಒಪ್ಪಿಕೊಂಡಳು. ಯುರೋಪಿನ ಮಾಟಗಾತಿಯರ ಇತಿಹಾಸದಲ್ಲಿ ಇಂಥ ವರ್ಣನೆಗಳು ಸಾಕಷ್ಟಿವೆ. ಫ್ರಾನ್ಸ್‌ನ ಪ್ರೂಮ್ ನಗರದಲ್ಲಿದ್ದ ರೆಜಿನೋ ‘ಡಿ ಸೈನೋಡಾಲಿ ಬಸ್ ಕಾಸೀಸ್ ಡಿಸಿಪ್ಲಿನಸ್ ಎಕ್ಲೆಸಿಯಾಸ್ಟಿಸೀಸ್ ಲಿಬ್ರಿ ಡುವೊ’ ಎಂಬ ದಾಖಲೆಯಲ್ಲಿ ‘ದುಷ್ಟಶಕ್ತಿಗಳು ಇರುಳಲ್ಲಿ ಮಹಿಳೆಯರನ್ನು ಮೋಹಿಸಿ, ಕೆಲವು ಪ್ರಾಣಿಗಳ ಮೇಲೆ ಸವಾರಿ ಮಾಡುವಂತೆ ಪ್ರೇರೇಪಿಸುತ್ತವೆ.

ಪೇಗನ್‌ಗಳ ದೇವತೆಯಾದ ಡಯಾನ ಅವರ ಜತೆಯೇ ಪಯಣಿಸುತ್ತಾಳೆ. ಅವರು ನಡುರಾತ್ರಿಯಲ್ಲಿ ಬಹುದೂರ ಹೋಗುತ್ತಾರೆ…’
ಇತ್ಯಾದಿಯಾಗಿ ವರ್ಣಿಸಿದ್ದಾನೆ. ಮಧ್ಯ ಯುರೋಪಿನಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಟಗಾತಿಯರು ಬಳಸುತ್ತಿದ್ದ ಲೇಪನದ ರಾಸಾಯನಿಕ ಸಂಯೋಜನೆಯನ್ನು ತಿಳಿಯಲು ಹಲವು ಅಧ್ಯಯನಗಳಾದವು. ಯುರೋಪಿನ ವಿಭಿನ್ನ ಕಾಲಘಟ್ಟಗಳಲ್ಲಿ ವಿಭಿನ್ನ ಲೇಪನಗಳನ್ನು ಬಳಸುತ್ತಿದ್ದ ಕಾರಣ, ಅವುಗಳಲ್ಲಿ ಬಳಸುತ್ತಿದ್ದ ಮೂಲಿಕೆಗಳೂ ಭಿನ್ನವಾಗಿದ್ದವು.

ಹಾಗಾಗಿ ಆ ಲೇಪನಗಳ ನಿಖರ ರಾಸಾಯನಿಕ ಸಂಯೋಜನೆ ತಿಳಿಯುವುದು ಕಷ್ಟವಾಗುತ್ತಿತ್ತು. ಆದರೂ ಲಂಡನ್ನಿನ ಯೂನಿ ವರ್ಸಿಟಿ ಕಾಲೇಜಿನ ಆಲ್ ಫ್ರೆಡ್ ಜೋಸೆಫ್ ಕ್ಲಾರ್ಕ್ ಎಂಬ ಔಷಧ ವಿಜ್ಞಾನದ ಪ್ರಾಚಾರ್ಯರು, ಇಂಥ ಲೇಪನಗಳಲ್ಲಿರಬಹು ದಾದ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳಲ್ಲಿರಬಹುದಾದ ರಾಸಾಯನಿಕಗಳ ಮಾಹಿತಿ ನೀಡಿದರು. ಅವು ಅಫೀಮು ರಸ (ಪೆಪಾವರಮ್ ಸಾಮ್ನಿ ಫಾರಂ), ಅಟ್ರೋಪ ಬೆಲ್ಲಡೋನ, ಹೆನ್ಬೇನ್ (ಹೊಯಾಸಿಮಸ್ ನೈಗರ್), ಮಾಂಡ್ರೇಕ್ (ಮ್ಯಾಂಡ್ರ ಗೋರ ಅಫಿಶಿನೇರಮ್), ವತ್ಸನಾಭಿ (ಅಕೋನಿಟಮ್ ಫೆರಾಕ್ಸ್) ಮುಂತಾದವು ಇದ್ದಿರಬಹುದು ಎನ್ನಲಾಗಿದೆ.

ಪೆಪಾವರಂ ಸಾಮ್ನಿಫಾರಂ ಎಂದರೆ ಗಸಗಸೆ ಗಿಡ. ಗಸಗಸೆ ಪಾಯಸವನ್ನು ಹೊಟ್ಟೆತುಂಬ ಕುಡಿದರೆ ಸುಖನಿದ್ರೆ ಬರುತ್ತದೆ. ಗಸಗಸೆಯಲ್ಲಿ ಅತ್ಯಲ್ಪ ಪ್ರಮಾಣದ ಮಾರ್ಫಿನ್ ಇರುವುದೇ ಇದಕ್ಕೆ ಕಾರಣ. ಮಾಟಗಾತಿಯರ ಲೇಪನದಲ್ಲಿ ಎಷ್ಟು ಪ್ರಮಾಣದ ಮಾರ್ಫಿನ್ ಇರುತ್ತಿತ್ತೆಂದು ಹೇಳುವುದು ಕಷ್ಟ. ವತ್ಸನಾಭಿಯು ನೇರವಾಗಿ ಹೃದಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ, ಹೀಗಾಗಿ ಹೃದಯ ಜೋರಾಗಿ ಪಟಪಟನೆ ಹೊಡೆದುಕೊಳ್ಳುತ್ತದೆ.

ಇದು ಬಹುಶಃ ಹಾರುವ ಅನುಭವ ನೀಡುತ್ತಿತ್ತು ಎನಿಸುತ್ತದೆ. ಬೆಲ್ಲಡೋನವು ಭಾವೋನ್ಮಾದವನ್ನು ಅಥವಾ ಉದ್ರೇಕವನ್ನು
ಉಂಟುಮಾಡುತ್ತದೆ; ಅದನ್ನು ಬಹುಶಃ ಅವರು ರೋಮಾಂಚಕರ ಅನುಭವ ಎಂದು ಭಾವಿಸಿರಬಹುದು. 1692ರಲ್ಲಿ ಅಮೆರಿಕದ ಮಸಾಚುಸೆಟ್ಸ್‌ನಲ್ಲಿ 19 ಮಹಿಳೆಯರನ್ನು ಮಾಟಗಾತಿಯರೆಂದು ಬಹಿರಂಗವಾಗಿ ನೇಣುಹಾಕಿದರು. ಯುರೋಪಿ ನಲ್ಲಿ ಮಾಟಗಾತಿಯರಿಗೆ ಮರಣದಂಡನೆ ನೀಡುವ ಪ್ರವೃತ್ತಿ 18ನೆಯ ಶತಮಾನದ ನಂತರ ನಿಂತಿತು. ಆದರೆ ‘ಮಾಟಗಾತಿಯರ ಹಾರುವ ಲೇಪನ’ದ ತಯಾರಿಯ ಅನಧಿಕೃತ ಯತ್ನಗಳು ಇಂದೂ ನಡೆಯುತ್ತಿವೆ ಎನ್ನಲಾಗಿದೆ.

error: Content is protected !!