Wednesday, 29th June 2022

ಅವರು ಮಹಾದೇವ ದೇಸಾಯಿ, ಗಾಂಧೀಜಿ ಪೆನ್ನಿನ ಶಾಯಿ!

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್

ಗಾಂಧೀಜಿ ಅವರೇನಾದರೂ ಬದುಕಿದ್ದಿದ್ದರೆ, ನಾಳೆ ಅವರಿಗೆ 151 ಮೇಣದಬತ್ತಿಗಳನ್ನು ಬೆಳಗಿ ಅವರ ಜನ್ಮದಿನವನ್ನು ಆಚರಿಸು ತ್ತಿದ್ದೆವು. ನಾವು ಬಾಲ್ಯದಿಂದಲೇ ನೋಡಿದ, ಕೇಳಿದ, ಓದಿದ ವ್ಯಕ್ತಿಯೆಂದರೆ ಗಾಂಧೀಜಿ. ಪ್ರಾಯಶಃ ಅವರಷ್ಟು ಕಾಡಿದ, ಪ್ರಭಾವ ಬೀರಿದ, ತಟ್ಟಿದ ಇನ್ನೊಬ್ಬ ವ್ಯಕ್ತಿಯಿರಲಿಕ್ಕಿಲ್ಲ. ಅವರು ನಮ್ಮನ್ನಗಲಿ ಎಪ್ಪತ್ಮೂರು ವರ್ಷಗಳಾದರೂ ಗಾಂಧಿವಾದ ಇಂದಿಗೂ ಪ್ರಸ್ತುತ. ಇಂದಿಗೂ ಅವರು ಆದರ್ಶ. ಒಂದಿಲ್ಲೊಂದು ರೀತಿಯಲ್ಲಿ ಅವರ ಸ್ಮರಣೆಯಿಲ್ಲದೇ, ಅವರ ದರ್ಶನವಿಲ್ಲದೇ (ಕನಿಷ್ಠ ನೋಟಿನಲ್ಲಾದರೂ) ನಮ್ಮ ದಿನ ಕಳೆಯುವುದಿಲ್ಲ. ಅಷ್ಟರಮಟ್ಟಿಗೆ ಅವರು ಸಮಸ್ತ ಭಾರತವನ್ನು ಮತ್ತು ವಿಶ್ವವನ್ನು ಆವರಿಸಿ ಕೊಂಡಿದ್ದಾರೆ. ಹಾಗಂತ ಗಾಂಧಿ ಟೀಕೆ, ವಿರೋಧಗಳಿಂದ ಹೊರತಾದವರೇನೂ ಅಲ್ಲ.

ಆದರೂ ಅವರನ್ನು ನಿರಾಕರಿಸುವುದು ಸಾಧ್ಯವೇ ಇಲ್ಲ. ಅಚ್ಚರಿಯೆಂದರೆ, ವರ್ಷ ವರ್ಷ ಕಳೆದರೂ ಗಾಂಧಿ ಮತ್ತಷ್ಟು ಗಟ್ಟಿ ಯಾಗುತ್ತಿದ್ದಾರೆ, ಅವರ ಸಿದ್ದಾಂತ, ವಾದ ಮತ್ತಷ್ಟು ಪ್ರಸ್ತುತವಾಗುತ್ತಿದೆ. ಗಾಂಧಿ ಆಪ್ತರಾಗುತ್ತಿದ್ದಾರೆ. ಗಾಂಧೀಜಿ ಅಹಿಂಸಾ ವಾದ, ಸತ್ಯಾಗ್ರಹ, ಪ್ರತಿಭಟನೆ ಇಂದಿಗೂ ಜಗತ್ತಿನಾದ್ಯಂತ ಸರ್ವಮಾನ್ಯ. ಈ ಕಾರಣದಿಂದ ಅವರು ವಿಶ್ವದೆಲ್ಲೆಡೆ ಗೌರವಕ್ಕೆ ಪಾತ್ರರಾಗಿ ದ್ದಾರೆ.

ಗಾಂಧೀಜಿ ಅವರ ಮತ್ತೊಂದು ಜನ್ಮದಿನ ಆಚರಿಸುವ ಈ ಸಂದರ್ಭದಲ್ಲಿ, ನನಗೆ ಅವರ ನೆರಳಿನಂತಿದ್ದ, ಅವರ ದೇಹದ ವಿಸ್ತೃತ
ಅಥವಾ ಮುಂದುವರಿದ ಭಾಗವೇ ಆಗಿದ್ದ ಒಬ್ಬ ಅಪರೂಪದ, ಅಸಾಧಾರಣ ವ್ಯಕ್ತಿಯೊಬ್ಬರ ಬಗ್ಗೆ ಹೇಳೋಣ ಎನಿಸುತ್ತಿದೆ. ಅವರು ಗಾಂಧೀಜಿಗೇ ತಮ್ಮ ಇಡೀ ಬದುಕನ್ನು, ಸರ್ವಸ್ವವನ್ನು ಮುಡಿಪಾಗಿಟ್ಟಿದ್ದರು. ಕೆಲವೊಮ್ಮೆ ನಾಯಕರನ್ನು ಅವರ
ಸಂಗಾತಿಗಳು ರೂಪಿಸುತ್ತಾರೆ. ಈ ಸಂಗಾತಿಗಳು ಇಲ್ಲದಿದ್ದರೆ, ನಾಯಕರೇ ಇಲ್ಲ. ನಾಯಕರ ಜೀವನದ ಪಕಳೆಗಳಲ್ಲಿ ಇವರು
ಮಕರಂದ ಸ್ವರೂಪಿ. ಜಗತ್ತಿನ ಯಾವುದೇ ನಾಯಕನನ್ನು ನೋಡಿ, ಅವರ ಪಕ್ಕದಲ್ಲಿ, ಹಿಂಬದಿಗೆ ಇಂಥ ಸಂಗಾತಿ, ಸಹಾಯಕರು ಇದ್ದೇ ಇರುತ್ತಾರೆ.

ಅವರ ತ್ಯಾಗ, ಪರಿಶ್ರಮಗಳ ಧಾರೆಯಿಂದ ನಾಯಕ ರೂಪುಗೊಂಡಿರುತ್ತಾನೆ. ಗಾಂಧೀಜಿಗೆ ಅಂಥ ಒಬ್ಬ ನೆರಳು, ಸಂಗಾತಿ ಯಿದ್ದರು. ಅವರ ಹೆಸರು ಮಹಾದೇವ ದೇಸಾಯಿ! ದೇಸಾಯಿ ಇಲ್ಲದಿದ್ದರೆ, ಗಾಂಧೀಜಿ ಏನಾಗುತ್ತಿದ್ದರು ಎಂದು ಚರ್ಚಿಸುವುದು ಸಮಂಜಸವೆನಿಸಲಿಕ್ಕಿಲ್ಲ. ಆದರೆ ದೇಸಾಯಿ ಇಲ್ಲದಿದ್ದರೆ ಗಾಂಧೀಜಿ, ಗಾಂಧೀಜಿ ಆಗಿರುತ್ತಿರಲಿಲ್ಲ. ಅವರಲ್ಲಿ ಒಂದಷ್ಟು ಕೊರತೆ ಗಳು ಖಂಡಿತ ಕಾಣುತ್ತಿದ್ದವು. ಆ ಎಲ್ಲಾ ಕೊರತೆಗಳನ್ನು ನೀಗಿ, ಗಾಂಧೀಜಿ ಎಂಬ ಪೂರ್ಣ ವಿಗ್ರಹವನ್ನು ಕಡೆದವರು ದೇಸಾಯಿ. ಅವರು ಗಾಂಧೀಜಿಯವರ ಕೇವಲ ನೆರಳಾಗಿರಲಿಲ್ಲ, ಅದಕ್ಕಿಂತ ಹೆಚ್ಚಿನವರಾಗಿದ್ದರು. ಅವರು ಗಾಂಧೀಜಿಯವರ ಕಣ್ಣು, ಕಿವಿ ಮಾತ್ರ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನವರಾಗಿದ್ದರು. ಅವರು ಗಾಂಧೀಜಿಯವರ ಕೇವಲ ಆಪ್ತ ಸಹಾಯಕ ಅಥವಾ ಸಂಗಾತಿ, ಹಿಂಬಾಲಕರಷ್ಟೇ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನವರಾಗಿದ್ದರು.

ಗಾಂಧೀಜಿಯವರ ಬದುಕಿನಲ್ಲಿ ಅವರಿಗೆ ಅನಿವಾರ್ಯ (indispensable) ಎನಿಸಿದ ಒಬ್ಬನಿದ್ದರೆ ಅವರು ದೇಸಾಯಿ. ಗಾಂಧೀಜಿ ಎಲ್ಲಿಯೇ ಹೋಗಲಿ, ಬರಲಿ, ಕುಳಿತಿರಲಿ, ನಿಂತಿರಲಿ, ಅವರ ಪಕ್ಕದಲ್ಲಿ ಸ್ಥಾಯಿಯಾಗಿರುತ್ತಿದ್ದರು. ಮೂಷಕನಿಲ್ಲದ ಗಣಪತಿ ಯಂತೆ, ದೇಸಾಯಿ ಇಲ್ಲದ ಗಾಂಧೀಜಿ ! ಅದು ಬೇರ್ಪಡಿಸಲಾಗದ ಜೋಡಿ ಮತ್ತು ಸಂಬಂಧ. ದೇಸಾಯಿ ಅವರನ್ನು ಗಾಂಧೀಜಿ ಅವರ ‘ಪೀರ್ – ಬಾಬರ್ಚಿ – ಭಿಶತಿ – ಖರ್’ (ಮಾರ್ಗದರ್ಶಕ – ಅಡುಗೆಭಟ್ಟ – ಅಂಬಿಗ – ಕೂಲಿ) ಎಂದು ಬಣ್ಣಿಸುತ್ತಾರೆ.

ಗಾಂಧೀಜಿಗೆ ಸಂಬಂಧಿಸಿದ ಯಾವುದೇ ಕೆಲಸವಿರಲಿ, ಅವರು ನಗುಮೊಗದಿಂದ ಮಾಡುತ್ತಿದ್ದರು. ಅವರ ಸೇವೆಯೇ ಮಹಾ ಪ್ರಸಾದ. ಅವರು ತಮ್ಮ ಪತ್ನಿಯ ಹೆಸರನ್ನು ಅಷ್ಟು ಕರೆದಿರಲಿಕ್ಕಿಲ್ಲ. ಆದರೆ ಸದಾ ‘ಮಹಾದೇವ್’ ಎಂದು ಕರೆಯುತ್ತಲೇ ಇದ್ದರು. ಅವರಿಗೆ ಮಹಾದೇವ್ ಇರಬೇಕಾಗಿತ್ತು. ಆಗಲೇ ತಾವು ಪೂರ್ತಿ ಎಂದು ಅನಿಸುತ್ತಿತ್ತು. ಅವರ ಬಟ್ಟೆೆ ತೊಳೆಯುವುದಿರಲಿ, ಭಾಷಣ ಸಿದ್ಧಪಡಿಸುವುದಿರಲಿ, ಚಪ್ಪಲಿ ಎತ್ತಿಡುವುದಿರಲಿ, ಪತ್ರಿಕೆಗಳಿಗೆ ಗಾಂಧೀಜಿ ಹೆಸರಲ್ಲಿ ಲೇಖನ ಬರೆಯುವುದಿರಲಿ, ಎಲ್ಲಕ್ಕೂ ದೇಸಾಯಿ ಸೈ. ದೇಸಾಯಿ ಅನಾರೋಗ್ಯದಿಂದ ಒಂದು ದಿನ ಮಲಗಿದರೆ, ಗಾಂಧೀಜಿ ಅಸ್ವಸ್ಥ.

ಅಷ್ಟರಮಟ್ಟಿಗೆ ಅವರ ಮೇಲೆ ಅವಲಂಬಿತರಾಗಿದ್ದರು. ದೇಸಾಯಿ ಕರಡು ಸಿದ್ಧಪಡಿಸಿ ಮೂಲತಃ ಪತ್ರಕರ್ತರೂ, ಉತ್ತಮ
ಬರಹಗಾರರೂ ಆಗಿದ್ದ ಗಾಂಧೀಜಿ ಅನುಮತಿಗೆ ಮುಂದಿಟ್ಟರೆ, ಒಂದೇ ಒಂದು ತಿದ್ದುಪಡಿಗೆ ಆಸ್ಪದವಿರುತ್ತಿರಲಿಲ್ಲ. ಗಾಂಧೀಜಿ
ಕೆಲವು ಸಲ ಈ (ಮೋಹನದಾಸ) ಬದಲು MKG (ಮೋಹನದಾಸ ಕರಮಚಂದ ಗಾಂಧಿ) ಎಂದೋ, ಇನ್ನು ಕೆಲವು ಸಲ, ಬರೀ ಗಾಂಧಿ ಎಂದೋ ತಿದ್ದಿ ಕಳಿಸುತ್ತಿದ್ದರು.

ದೇಸಾಯಿ ಬರೆದರೆಂದರೆ ಅಷ್ಟು ಕರಾರುವಾಕ್ಕು. ಸ್ವತಃ ಅವರೇ ಬರೆದರೂ, ನಂತರ ದೇಸಾಯಿ ನೋಡಲೇ ಬೇಕಿತ್ತು. ತಮ್ಮ
ಸಂಪಾದಕತ್ವದ ಪತ್ರಿಕೆಗಳಿಗೆ, ಸಂಪಾದಕೀಯ ಮತ್ತು ಲೇಖನಗಳನ್ನು ಗಾಂಧೀಜಿ ಡಿಕ್ಟೇಟ್ ಮಾಡುತ್ತಿದ್ದರು. ದೇಸಾಯಿ ಅದನ್ನು
ಬರೆದುಕೊಳ್ಳುತ್ತಿದ್ದರು. ಕೆಲವು ಸಲ ಗಾಂಧೀಜಿ ಕೇವಲ ಪಾಯಿಂಟ್ಸ್ ಹೇಳುತ್ತಿದ್ದರು. ಅವರ ವಿಚಾರಗಳನ್ನು ಅವಲಂಬಿಸಿ, ದೇಸಾಯಿ ಲೇಖನದ ಸ್ವರೂಪ ಕೊಡುತ್ತಿದ್ದರು. ಕೊನೆ ಕೊನೆಗೆ ದೇಸಾಯಿ ಬರೆದಿದ್ದನ್ನು ಓದಲು ಸಮಯ ಇಲ್ಲದಾಗ, ಗಾಂಧೀಜಿ ಹಾಗೇ ಮುದ್ರಣಕ್ಕೆ ಕಳಿಸುತ್ತಿದ್ದರು.

‘ಮಹದೇವ್ ಬರೆದಿದ್ದಾನೆಂದರೆ, ನಾನೇನು ತಿದ್ದಲಿ? ಆತ ಅಲ್ಪವಿರಾಮವನ್ನೂ ಹಾಕಲು ಅವಕಾಶ ನೀಡುವುದಿಲ್ಲ. ನನಗೆ ಓದಲು ಸಮಯವಿಲ್ಲ, ಹಾಗೆ ಕಳಿಸಿ’ ಎಂದು ಗಾಂಧೀಜಿ ಹೇಳುತ್ತಿದ್ದರು. ಇದು ಒಂಥರಾ ಖಾಲಿ ಹಾಳೆ ಮೇಲೆ ರುಜು ಹಾಕಿದಂತೆ. ದೇಸಾಯಿ ಮೇಲೆ ಅಂಥ ಭರವಸೆ, ನಂಬಿಕೆ. ಏನೇ ಮಾಡಿದರೂ ಮಹಾದೇವ್ ತಪ್ಪು ಮಾಡುವುದಿಲ್ಲ ಎಂಬ ವಿಶ್ವಾಸ.
ದೇಸಾಯಿ ಅದೇ ರೀತಿ ಬದುಕಿದರು. ಗಾಂಧೀಜಿಯನ್ನು ಕನಸಿನಲ್ಲಿಯೂ ದಿಕ್ಕು ತಪ್ಪಿಸಲಿಲ್ಲ. ಅವರ ಸಾಮೀಪ್ಯ ಮತ್ತು
ನಂಬಿಕೆಗೆ ದ್ರೋಹ ಬಗೆಯಲಿಲ್ಲ.

ದೇಸಾಯಿ ಬರೆದಿದ್ದನ್ನು ನೋಡದೇ, ಗಾಂಧೀಜಿ ವಿಶ್ವಾಸವಿರಿಸಿ ಯಥಾವತ್ತು ಮುದ್ರಣಕ್ಕೆ ಕಳಿಸಿದಾಗ, ಅದು ಪ್ರಕಟವಾಗಿ ಬಂದ ನಂತರ, ಒಮ್ಮೆಯೂ ಯಡವಟ್ಟಾಗದಂತೆ, ಮುಜುಗರವಾಗದಂತೆ ನೋಡಿಕೊಂಡರು. ‘ನಾನು ಬರೆದಿದ್ದು ನನ್ನದಲ್ಲ, ಅವ್ಯಾವವೂ ನನ್ನ ಬರಹವಲ್ಲ, ಅವು ಬಾಪು (ಗಾಂಧೀಜಿ) ಬರಹ. ಅವೆಲ್ಲವೂ ಅವರ ವಿಚಾರ. ನಾನು ಕೇವಲ ಅವರ ಪೆನ್ನು ಅಷ್ಟೇ’ ಎಂದು ದೇಸಾಯಿ ಹೇಳುತ್ತಿದ್ದರು. ತನ್ನ ಭಾವನೆಗಳನ್ನು, ವಿಚಾರಗಳನ್ನು ಮಹದೇವ್‌ಗಿಂತ ಬೇರೆ ಯಾರೂ ಕರಾರು ವಾಕ್ಕಾಗಿ ಗ್ರಹಿಸುವುದಿಲ್ಲ ಎಂಬುದು ಗಾಂಧೀಜಿಯವರಿಗೂ ಖಾತ್ರಿಯಾಗಿತ್ತು. ಗಾಂಧೀಜಿ ಜೈಲಿನಲ್ಲಿದ್ದಾಗ,  ಕಾರ್ಯಕ್ರಮ ಗಳಲ್ಲಿ ನಿರತರಾಗಿದ್ದಾಗ, ದೇಸಾಯಿಯೇ ಅವರ ಬರಹಗಳನ್ನೆಲ್ಲಾ ನಿರ್ವಹಿಸುತ್ತಿದ್ದರು. ಗಾಂಧೀಜಿ ಬರೆದಿದ್ದನ್ನು ಇಡೀ ಭಾರತವೇ ಕೇಳಿಸಿಕೊಳ್ಳುತ್ತಿತ್ತು, ಚರ್ಚಿಸುತ್ತಿತ್ತು. ದೇಸಾಯಿ ಬರೆದಿದ್ದನ್ನು ನೋಡಲೂ ಆಗುತ್ತಿರಲಿಲ್ಲ.

ಒಮ್ಮೆ ಗಾಂಧೀಜಿ ಜೈಲಿನಲ್ಲಿದ್ದಾಗ, ತಮ್ಮ ಪತ್ರಿಕೆಯನ್ನು ನೋಡಿ, ‘ಭೇಷ್ ಮಹದೇವ್! ನಾನೇ ಬರೆದಿದ್ದರೂ ಇಷ್ಟು ಚೆನ್ನಾಗಿ ಬರೆಯುತ್ತಿರಲಿಲ್ಲ’ ಎಂದು ಹೇಳಿದ್ದರಂತೆ. ದೇಸಾಯಿ ಸರ್ವಸ್ವವನ್ನೂ ಬಾಪುಗೆ, ಅವರ ಆಶ್ರಮಕ್ಕೆ ಸಮರ್ಪಿಸಿಕೊಂಡಿದ್ದರು. ಅವರು ಗಾಂಧೀಜಿಯವರಲ್ಲಿ ಭಗವಂತನನ್ನು ಕಂಡಿದ್ದರು. ‘ಬಾಪು ನಡೆದಾಡುವ ಸಾಕ್ಷಾತ್ ದೇವರು’ ಎಂದೇ ಭಾವಿಸಿದ್ದರು. ಗಾಂಧೀಜಿ ಸಂಪಾದಕರಾಗಿದ್ದ ‘ಯಂಗ್ ಇಂಡಿಯಾ’, ‘ಹರಿಜನ’ ಮತ್ತು ‘ನವಜೀವನ’ ಪತ್ರಿಕೆಗಳಲ್ಲಿ ದೇಸಾಯಿ ಬರೆದಿದ್ದೇ ಜಾಸ್ತಿ. ಇದಲ್ಲದೇ ಬಾಂಬೆ ಕ್ರಾನಿಕಲ್, ಹಿಂದೂಸ್ತಾನ್ ಟೈಮ್ಸ್, ಫ್ರೀ ಪ್ರೆಸ್, ಅಮೃತ್ ಬರ್ಜಾ ಪತ್ರಿಕಾ, ದಿ ಹಿಂದೂ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮುಂತಾದ ಪತ್ರಿಕೆಗಳಿಗೂ ಗಾಂಧಿ ಹೆಸರಿನಲ್ಲಿ ದೇಸಾಯಿ ಬರೆಯುತ್ತಿದ್ದರು.

ಸ್ವಾತಂತ್ರ್ಯ ಹೋರಾಟ ತೀವ್ರತೆಯನ್ನು ಪಡೆದಾಗ, ತಾವು ಪದೇ ಪದೆ ಬಂಧನಕ್ಕೊಳಗಾದಾಗ, ತಮ್ಮ ‘ಯಂಗ್ ಇಂಡಿಯಾ’ ಮತ್ತು ‘ನವಜೀವನ’ ಪತ್ರಿಕೆಗಳ ಸಂಪಾದಕ ಹೊಣೆಗಾರಿಕೆಯನ್ನು ದೇಸಾಯಿ ಹೆಗಲಿಗೆ ಹಾಕಿದರು. ಆನಂತರ ತಮ್ಮ ಪ್ರೀತಿಯ ಪತ್ರಿಕೆ ‘ಹರಿಜನ’ದ ಸಂಪಾದಕತ್ವವನ್ನು ದೇಸಾಯಿಗೆ ವಹಿಸಿಕೊಟ್ಟಿದ್ದರು. ಅದನ್ನು ದೇಸಾಯಿ ತಾವು ಕೊನೆಯುಸಿರೆಳೆಯುವ ತನಕವೂ ನಿಭಾಯಿಸಿದರು. ಈ ಪತ್ರಿಕೆಗಳಿಗೆ ಅವರು ಬರೆದಿದ್ದು ಹತ್ತಾರು ಸಾವಿರ ಪುಟಗಳನ್ನೂ ಮೀರುತ್ತವೆ.

ಗಾಂಧೀಜಿ ಯಾರನ್ನೇ ಭೇಟಿ ಮಾಡಲಿ, ಅವರ ಮಾತುಕತೆಯನ್ನು ಪಕ್ಕದಲ್ಲಿ ಕುಳಿತು ದೇಸಾಯಿ ದಾಖಲಿಸಿಕೊಳ್ಳುತ್ತಿದ್ದರು. ಗಾಂಧೀಜಿ ಭಾಷಣಕ್ಕೆ ನಿಂತರೆ, ದೇಸಾಯಿ ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಂಡು ಬರೆದುಕೊಳ್ಳುತ್ತಿದ್ದರು. ಗಾಂಧೀಜಿಯವರ ಮಾತಿನ ವೇಗದಷ್ಟೇ ದೇಸಾಯಿ ಬರಹದ ವೇಗವಿತ್ತು. ಬಾಪು ಅವರ ಇಡೀ ದಿನದ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ದಿನಚರಿಯಲ್ಲಿ ಬರೆದೇ ಮಲಗುತ್ತಿದ್ದರು. ಈ ದಿನಚರಿಯಲ್ಲಿ ಗಾಂಧೀಜಿಯವರ ಮನಸ್ಸಿನ ತೊಳಲಾಟ, ಚಿಂತನೆ, ದುಗುಡ, ಆಲೋಚನೆ, ಸುಪ್ತ ಭಾವನೆ, ಆಶಯಗಳನ್ನೆಲ್ಲಾ ದಾಖಲಿಸಿರುವುದು ವಿಶೇಷ. ಗಾಂಧೀಜಿಯವರನ್ನು ಅವರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು ಎಂಬುದಕ್ಕೆೆ ಈ ದಿನಚರಿಗಳೇ ಸಾಕ್ಷಿ. ತಮ್ಮ ಇಪ್ಪತ್ತೈದನೇ ವಯಸ್ಸಿಗೆ ಗಾಂಧೀಜಿವರ ಆಪ್ತ
ಸಹಾಯಕ, ಕಾರ್ಯದರ್ಶಿಯಾಗಿ ಸೇರಿದ ದೇಸಾಯಿ, ತಮ್ಮ ಐವತ್ತನೇ ವಯಸ್ಸಿನಲ್ಲಿ ನಿಧನರಾಗುವ ತನಕ, ಅಂದರೆ ಕಾಲು
ಶತಮಾನ, ತಮ್ಮ ಬದುಕನ್ನು ಬಾಪು ಅವರಿಗಾಗಿ ಸಮರ್ಪಿಸಿದರು.

ಗಾಂಧೀಜಿ ನಿಧನ ನಂತರ, ಅವರ ಕುರಿತು ಪ್ರಕಟವಾದ ಸಾವಿರಾರು ಕೃತಿಗಳಿಗೆ, ದೇಸಾಯಿ ಬರೆದಿಟ್ಟ ದಿನಚರಿಗಳೇ ಮೂಲ
ಆಕರ ಎಂಬುದನ್ನು ಮರೆಯುವಂತಿಲ್ಲ. ಇವು ಭಾರತ ಸ್ವಾತಂತ್ರ್ಯದ ಹೊರಳುನೋಟವನ್ನೂ ನೀಡುತ್ತವೆ. ಗಾಂಧೀಜಿ ಮೊಮ್ಮಗ
ರಾಜಮೋಹನ ಗಾಂಧಿ ಬರೆದ ಒಂದು ಸಾಲು ದೇಸಾಯಿ ಜೀವನವನ್ನು ಇಡಿಯಾಗಿ ಕಟ್ಟಿಕೊಡುತ್ತದೆ. ಅವರು ಹೀಗೆ ಬರೆದಿದ್ದಾರೆ – Waking up before Gandhi in pre – dawn darkness, and going to sleep long after his Master, Desai lived Gandhi’s day
thrice over – first in an attempt to anticipate it, next in spending it alongside Gandhi, and finally in recording it into his diary. . ದೇಸಾಯಿ ಗುಜರಾತಿ, ಬಂಗಾಳಿ ಮತ್ತು ಇಂಗ್ಲೀಷಿನಲ್ಲಿ ಸಲೀಸಾಗಿ ಬರೆಯುತ್ತಿದ್ದರು. (ಗುಜರಾತಿ ಭಾಷೆಯ ಉತ್ತಮ
ಸಾಹಿತಿ ಮತ್ತು ಅನುವಾದಕರು ಎಂದು ಈಗಲೂ ಅವರನ್ನು ನೆನೆಯುವುದು ಬೇರೆ ಮಾತು) ಗಾಂಧೀಜಿಯವರಿಗೆ ಸಂಬಂಧಿಸಿದ
ಬರಹಗಳನ್ನಲ್ಲದೇ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ.

ಅವುಗಳಲ್ಲಿ Gandhiji in Indian Villages, With Gandhiji in Ceylon, The Story of Bardoli, Unworthy of Vardha, The Eclipse of Faith, A Righteous Struggle ಮತ್ತು The Geeta According to Gandhi ಮುಖ್ಯವಾಗಿವೆ. ತಮ್ಮ ಜೀವನ ಚರಿತ್ರೆ ಯನ್ನು ದೇಸಾಯಿ ಮಾತ್ರ ಸಮರ್ಪಕವಾಗಿ ಬರೆಯಬಲ್ಲರು ಎಂದು ಗಾಂಧೀಜಿಯವರೊಂದೇ ಅಲ್ಲ, ಸರ್ದಾರ ಪಟೇಲರೂ ಭಾವಿಸಿದ್ದರು. ಗಾಂಧೀಜಿ ತಮ್ಮ ಆತ್ಮಕಥೆ ಬರೆದಾಗ, ದೇಸಾಯಿ ಅದನ್ನು ಗುಜರಾತಿಯಿಂದ ಇಂಗ್ಲಿಷಿಗೆ ಅನುವಾದಿಸಿ ದರು. ಅಷ್ಟೇ ಅಲ್ಲ, ಜವಾಹರಲಾಲ್ ನೆಹರು ಅವರ ಆತ್ಮಕಥೆಯನ್ನು ಇಂಗ್ಲಿಷಿನಿಂದ ಗುಜರಾತಿ ಭಾಷೆಗೆ ತರ್ಜುಮೆ ಮಾಡಿದರು. ತಮ್ಮ ಪತ್ರಿಕೆಯ ಸಂಪಾದಕತ್ವವನ್ನು ದೇಸಾಯಿಯವರೇ ವಹಿಸಿಕೊಳ್ಳಲಿ ಎಂದು ನೆಹರು ಬಯಸಿದ್ದರು. ಆದರೆ ಗಾಂಧೀಜಿ ಕೆಲಸ ನಿರ್ವಹಿಸುವುದನ್ನು ಬಿಟ್ಟು, ಅನ್ಯ ಜವಾಬ್ದಾರಿಯನ್ನು ನಿರ್ವಹಿಸಲು ಇಷ್ಟವಿರಲಿಲ್ಲ.

ನೆಹರು ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದರು. ಗಾಂಧೀಜಿಗೆ ಆಪ್ತರಾದ ನಾಯಕರೆಲ್ಲರಿಗೂ ದೇಸಾಯಿಗೆ ಹತ್ತಿರದವರಾ ದರೂ, ಬಾಪು ಬಗ್ಗೆೆ ಒಂದೇ ಒಂದು ಮಾಹಿತಿಯನ್ನು ನೀಡುತ್ತಿರಲಿಲ್ಲ. ಅಂಥ ನಂಬುಗಸ್ಥ ! 1942ರಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿ ಆರಂಭಿಸುವುದಾಗಿ ಬ್ರಿಟಿಷರಿಗೆ ಎಚ್ಚರಿಕೆ ನೀಡಿದಾಗ, ಗಾಂಧೀಜಿ ಜತೆ ದೇಸಾಯಿ ಅವರನ್ನೂ ಪುಣೆಯ ಅಗಾ ಖಾನ್ ಅರಮನೆಯಲ್ಲಿ ಬಂಧಿಸಲಾಯಿತು. ಆಗ ತಾವು ಅಮರಣಾಂತ ಉಪವಾಸ ಆರಂಭಿಸುವುದಾಗಿ ಗಾಂಧೀಜಿ ಘೋಷಿಸಿದರು. ಆದರೆ ಅವರ ದೇಹಸ್ಥಿತಿ ಸರಿಯಿರಲಿಲ್ಲ. ಅಂಥ ಕ್ರಮಕ್ಕೆ ಮುಂದಾಗಬೇಡಿ ಎಂದು ದೇಸಾಯಿ, ಬಾಪು ಅವರನ್ನು ಬೇಡಿಕೊಂಡರೂ ಪ್ರಯೋಜನವಾಗಲಿಲ್ಲ. ಇದು ದೇಸಾಯಿ ಉದ್ವೇಗ ಹೆಚ್ಚಲು ಕಾರಣವಾಗಿರಬೇಕು. ಮರುದಿನ ದೇಸಾಯಿ ಹಠಾತ್ ಅಸ್ವಸ್ಥ ರಾದರು. ಈ ವಿಷಯ ಬಾಪುಗೇ ಗೊತ್ತಾಯಿತು. ಅವರು ದೇಸಾಯಿ ಬಳಿ ಧಾವಿಸಿ ಬಂದು, ಏರಿದ ದನಿಯಲ್ಲಿ, ‘ಮಹಾದೇವ್ ! ಮಹಾದೇವ್!’ ಎಂದು ಕೂಗಿದರು. ಆದರೆ ಅಷ್ಟರೊಳಗೆ ದೇಸಾಯಿ ಪ್ರಾಣಪಕ್ಷಿ ಹಾರಿಹೋಗಿತ್ತು.

‘ಬಾಪು, ಯಾಕೆ ಅಷ್ಟು ಜೋರಾಗಿ ಕಿರುಚಿದಿರಿ?’ ಎಂದು ಆನಂತರ ಯಾರೋ ಕೇಳಿದ್ದಕ್ಕೆ ಗಾಂಧೀಜಿ ಹೇಳಿದರಂತೆ – ‘ಒಂದು
ವೇಳೆ ಮಹದೇವ್ ಕಣ್ಣು ಬಿಟ್ಟು ನನ್ನನ್ನು ನೋಡಿದ್ದಿದ್ದರೆ, ಎದ್ದೇಳು ಎಂದು ಹೇಳಬೇಕು ಅಂದುಕೊಂಡಿದ್ದೆ. ಆತ ತನ್ನ ಜೀವನದಲ್ಲಿ ನಾನು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದವನಲ್ಲ. ಆತನಿಗೆ ನನ್ನ ಮಾತುಗಳು ಕೇಳಿಸಿದ್ದರೆ, ಸಾವನ್ನು ಕೊಡವಿ ಮೇಲೆದ್ದು ಬರುತ್ತಿದ್ದ ಎಂಬ ವಿಶ್ವಾಸವಿತ್ತು’ ಎಂದು ಕಣ್ಣೀರಿಟ್ಟರಂತೆ. ಅರಮನೆ ಆವರಣದಲ್ಲಿ ದೇಸಾಯಿ ಪಾರ್ಥಿವ ಶರೀರವನ್ನು ತಂದಿಟ್ಟಾಗ, ಗಾಂಧೀಜಿ ಬಿಕ್ಕಿಬಿಕ್ಕಿ ಅತ್ತರು. ನಂತರ ಆತನ ಮೃತದೇಹವನ್ನು ಸ್ವತಃ ತೊಳೆದು, ಗಂಧವನ್ನು ಹಣೆಗೆ ಲೇಪಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ‘ನಾನು ನನ್ನ ಮಗನನ್ನು ಕೆಳೆದುಕೊಂಡೆ’ ಎಂದು ಅಂತ್ಯಸಂಸ್ಕಾರ ಮುಗಿಸಿ ವಿರೋಧಿಸಿದರು.

ಅರಮನೆಯ ಆವರಣದಲ್ಲಿಯೇ ದೇಸಾಯಿ ಸಮಾಧಿ ನಿರ್ಮಿಸುವಂತೆ, ಬಾಪು ವಿನಂತಿಸಿಕೊಂಡರು. ಅಲ್ಲಿಂದ ಬಿಡುಗಡೆಯಾಗು ವವರೆಗೂ, ಪ್ರತಿದಿನ ಸಮಾಧಿ ಸ್ಥಳಕ್ಕೆ ಹೋಗಿ ಪ್ರಾರ್ಥನೆ ಮಾಡಿ ಬರುತ್ತಿದ್ದರು. (ಇಂದಿಗೂ ಅಲ್ಲಿ ಮಹಾದೇವ ದೇಸಾಯಿ ಸಮಾಧಿಯಿದೆ.) ‘ಹರಿಜನ’ ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಖುದ್ದು ಗಾಂಧೀಜಿ ಮುಖಪುಟದಲ್ಲಿ ದೇಸಾಯಿ ಬಗ್ಗೆ ಶ್ರದ್ದಾಂಜಲಿ ಲೇಖನ ಬರೆದರು. ದೇಸಾಯಿ ನಿಧನದ ಎಷ್ಟೋ ದಿನಗಳವರೆಗೂ, ಗಾಂಧೀಜಿ ಅಭ್ಯಾಸಬಲದಿಂದ ‘ಮಹಾದೇವ್, ಮಹಾದೇವ್’ ಎಂದು ಕರೆಯುತ್ತಿದ್ದರಂತೆ. ತಕ್ಷಣ ಅವರಿಲ್ಲದಿರುವುದು ಅರಿವಿಗೆ ಬಂದು, ‘ಆತ ನಮ್ಮನ್ನೆೆಲ್ಲ ಬಿಟ್ಟುಹೋಗಿದ್ದಾನೆ, ಈಗೆಲ್ಲಿದ್ದಾನೋ?’ ಎಂದು ತಮ್ಮಷ್ಟಕ್ಕೆ ಹೇಳಿಕೊಂಡು ಕೆಲಕ್ಷಣ ಮೌನಕ್ಕೆ ಜಾರುತ್ತಿದ್ದರಂತೆ.

ದೇಸಾಯಿ ನಿಧನರಾಗಿ ಒಂದು ವರ್ಷದವರೆಗೂ, ಬಾಪು ತಮ ಆಪ್ತರ ಮುಂದೆ ಹಠಾತ್ ಅಳಲಾರಂಭಿಸುತ್ತಿದ್ದರಂತೆ. ಅದಾದ
ನಂತರವೂ, ಆಗಾಗ ಮಹಾದೇವ್ ಇರಬೇಕಿತ್ತು… ಆತ ಇದ್ದಿದ್ದರೆ.. ಆತ ಹೀಗೆ ಮಾಡುತ್ತಿದ್ದ.. ಹಾಗೆ ಮಾಡುತ್ತಿದ್ದ… ಈ ರೀತಿ
ಹೇಳುತ್ತಿದ್ದ .. ಎಂದು ತಮ್ಮಷ್ಟಕ್ಕೆ ಕೊರಗುತ್ತಿದ್ದರಂತೆ. ‘ಮಹಾದೇವನ ಸ್ಥಾನವನ್ನು ಯಾರೂ ತುಂಬಲಾರರು. ಆತ ಬಿಟ್ಟು  ಹೋದ ಶೂನ್ಯ ನನ್ನನ್ನು ಸದಾ ಕಾಡಲಿದೆ. ಮಹಾದೇವ್ ನನ್ನಲ್ಲಿ ಯಾವತ್ತೂ ಇದ್ದಾನೆ’ ಎಂದು ಬಾಪು ತಮ್ಮ ಆಪ್ತರ ಮುಂದೆ ಸ್ಮರಿಸಿಕೊಳ್ಳುತ್ತಿದ್ದರು.

ಗಾಂಧಿ ಜಯಂತಿಯ ಮುನ್ನಾದಿನವಾದ ಇಂದು, ಮಹಾತ್ಮನ ಬದುಕನ್ನು ರೂಪಿಸುವಲ್ಲಿ ತನ್ನ ಜೀವನವನ್ನು ಮುಡಿಪಾಗಿಟ್ಟ ಆ
ಮಹಾದೇವನನ್ನೂ ಸ್ಮರಿಸೋಣ !