Sunday, 17th January 2021

ಅವನು ನನ್ನ ಮಹಾಗುರು !

ಮೊಮ್ಮಗನ ಪಾಲನೆಯಲ್ಲಿ ಮುದ್ದುಕೃಷ್ಣನನ್ನು ಕಂಡ ಕ್ಯೂಟ್ ಅಜ್ಜಿ

ಕೆ.ಎಚ್‌.ಸಾವಿತ್ರಿ

ಶುಭ್ರ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಆ ಪೋರನನ್ನು ಪ್ರೀತಿಯಿಂದ ಎದೆಗಪ್ಪಿಕೊಳ್ಳಲಷ್ಟೇ ನನಗೆ ಸಾಧ್ಯವಾಗಿದ್ದು. ಬಹುಷಃ ಅವನಿಗೆ ನನ್ನ ಭಾವನೆ ಅರ್ಥವಾಗಿರಬೇಕು. ನಿದ್ದೆಯಲ್ಲೇ ಕಿರುನಗೆ ಬೀರಿದ. ಸುಮಾರು ಇಪ್ಪತ್ತಾರು ವರುಷ ಗಳ ನಂತರ ನನ್ನ ಕೈಯಲ್ಲಿ ನನ್ನ ಮಗಳ ಪ್ರತಿಬಿಂಬ! ಅವನ ಬೆರಳು ನೇವರಿಸಿದೆ. ಅದೆಂಥಾ ಸುಖದ ಅನುಭೂತಿ. ಅಂದಿನಿಂದ ಇಂದಿನವರೆಗೆ ಅವನು ಪ್ರತಿಕ್ಷಣವೂ ಹೊಸ ಹೊಸ ಅನುಭವಗಳನ್ನು ಪುನರ್ ಮನನ ಮಾಡುತ್ತಾ ಹೋದ. ನನ್ನ ಮಗಳನ್ನು ಬಿಟ್ಟರೆ ಹಸುಗೂಸನ್ನುಎತ್ತಿಕೊಂಡಿದ್ದು ಮೊದಲ ಬಾರಿ. ಅದೆಂಥಾ ಪುಳಕ-ಖುಷಿ!

ಸದಾ ಪತ್ರಿಕೋದ್ಯಮದ ಗಿರಣಿಯಲ್ಲಿ ಸಿಲುಕಿ ನನ್ನನ್ನು, ನನ್ನತನವನ್ನು ಮರೆತು ಕಚೇರಿ, ಡೆಡ್ ಲೈನ್ ಎಂದು ಮುಳುಗೇಳುತ್ತಾ ಸಂಸಾರದ ಜವಾಬ್ದಾರಿ ಯನ್ನೂ ನಿಭಾಯಿಸುತ್ತಿದ್ದವಳು ನಾನು. ಆದರೆ ನಾನು ಏನು ಕಳೆದು ಕೊಂಡಿದ್ದೆ ಎಂಬುದನ್ನು ಮತ್ತೆ ನೆನಪಿಗೆ ತಂದು ಕೊಟ್ಟ ಬದುಕಿನ ಇನ್ನೊಂದು ಆಯಾಮವನ್ನು ತೋರಿಸಿಕೊಟ್ಟ ಮಹಾನ್ ಚೇತನ ಅವನು.

ಬದುಕನ್ನು ಹೀಗೂ ನೋಡಬಹುದು, ಆನಂದಿಸಬಹುದು, ನಿದ್ದೆಗೆಟ್ಟರೂ, ಊಟ, ತಿಂಡಿ ಮರೆತರೂ ಅದರಲ್ಲೂ ಸುಖವಿದೆ, ಆನಂದವಿದೆ, ನೆಮ್ಮದಿ ಇದೆ ಎಂದು ತೋರಿಸಿದವನು ಆ ಪುಟ್ಟ ಅದಮ್ಯ ಚೈತನ್ಯ. ಆ ಹದಿನಾರು ತಿಂಗಳು ಗಳು! ಅದೊಂದು ಅದ್ಭುತ ಲೋಕ. ಕಳೆದ ಹದಿನಾರು ತಿಂಗಳುಗಳಲ್ಲಿ ಆಗಾಗ್ಗೆ ಬರೆಯುತ್ತಾ, ಅನುವಾದ, ಕಂಪೋಸ್ ಮಾಡುತ್ತಿದ್ದದ್ದು ಬಿಟ್ಟರೆ ಆ ಮಹಾಗುರುವಿನಲ್ಲಿ ನಾನು ಕಳೆದು ಹೋಗಿದ್ದೆ. ಮಗಳನ್ನು ಬಿಟ್ಟರೆ ಬೇರಾವ ಚಿಕ್ಕ ಮಗುವನ್ನು ಎತ್ತಿ ಆಡಿಸುವುದು, ಸುಧಾರಿಸುವುದನ್ನು ಮಾಡಿ ಅಭ್ಯಾಸವಿಲ್ಲದವಳು ನಾನು.

ಹೀಗಾಗಿ ಮಗಳು ದಿಶಾಳಿಗೆ ಮಗುವಾದರೆ ನನಗೆ ನೋಡಿಕೊಳ್ಳಲು ಬಾರದು ಎಂದು ನಾನೂ ಸೇರಿದಂತೆ ಎಲ್ಲರೂ ನಂಬಿದ್ದರು. ಆದರೆ ಆ ನಂಬಿಕೆಯನ್ನು ಹುಸಿ ಮಾಡಿದವನು ಅವನು. ನನ್ನಿಂದ ಅವನನ್ನು ಜತನದಿಂದ ನೋಡಿಕೊಳ್ಳುವುದು ಅಸಾಧ್ಯ ಎಂದುಕೊಂಡಿದ್ದವರೆಲ್ಲಾ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ ಆ ಪುಟ್ಟ ದೇಹದಲ್ಲಿ ಅದೆಷ್ಟು ಶಕ್ತಿ ಅಡಗಿರಬಹುದು. ಈಗ ನೆನಪಿಸಿಕೊಂಡರೆ ಅದೆಲ್ಲವನ್ನೂ ನಾನೇ ಮಾಡಿದೆನಾ ಎಂದು ಅಚ್ಚರಿ ಮೂಡುತ್ತದೆ.

ಪ್ರತಿ ದಿನ ಹತ್ತಾರು ಪುಟಗಳನ್ನು ಬರೆದು, ಅವೆಲ್ಲವನ್ನು ಕಂಪೋಸ್ ಮಾಡಿಸಿ, ಕರಡು ತಿದ್ದಿ, ಪುಟಗಳನ್ನು ವಿನ್ಯಾಸಗೊಳಿಸಿ ಅದು ಮುದ್ರಣಗೊಂಡು ಓದುಗರ ಕೈ ಸೇರಿ ಅವರಿಂದ ಮೆಚ್ಚುಗೆ ಬಂದಾಗ ನನ್ನ ಶ್ರಮ ಸಾರ್ಥಕವಾಯಿತು ಎಂದು ಕೊಳ್ಳುತ್ತಿದ್ದೆ. ಅದೇ ಜೀವನದ ಪರಮ ಗುರಿ ಎಂದುಕೊಂಡಿದ್ದೆ.

ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಬಂದ ನನಗೆ ಸಿಕ್ಕಷ್ಟು ವಿಪುಲ ಅವಕಾಶಗಳು ಬೇರಾರಿಗೂ ಸಿಕ್ಕಿಲ್ಲವೇನೋ. ಅದರಲ್ಲೂ ಮಹಿಳೆಯರಿಗೆ ಇಷ್ಟೆಲ್ಲಾ ಅವಕಾಶ ಗಳು ಕನ್ನಡ ಪತ್ರಿಕೋದ್ಯಮದಲ್ಲಿ ಸಿಕ್ಕಿದ್ದು ಬೆರಳೆಣಿಕೆಯಷ್ಟು ಮಂದಿಗೆ. ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡಿದ ಕಾರಣಕ್ಕೋ ಏನೋ ಕ್ರೈಮ್ ಸುದ್ದಿಯಿಂದ ರಾಜಕೀಯದ ವರೆಗೆ, ರಂಗಭೂಮಿಯಿಂದ ಸಿನಿಮಾದವರೆಗೆ, ಶೈಕ್ಷಣಿಕ ಕ್ಷೇತ್ರ, ಗಲಭೆಗಳ ವರದಿ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸಮ್ಮೇಳನಗಳು, ಪ್ರಧಾನಮಂತ್ರಿ, ರಾಷ್ಟ್ರಪತಿಯವರೆಗೆ … ಒಂದೇ ಎರಡೇ…

ಸಾಮಾನ್ಯ ವರದಿಗಾರಳಿಂದ ಸಂಪಾದಕಿಯಾಗುವವರೆಗೆ ನಡೆದು ಬಂದ ದಾರಿ ಯನ್ನು ಒಮ್ಮೆ ತಿರುಗಿ ನೋಡಿದರೆ ಸಾರ್ಥಕ ವಾಯಿತು ಬದುಕು ಎನಿಸುತ್ತದೆ.

ಭಾವನೆಗಳಿಗೆ ಅಕ್ಷರ ರೂಪ ನೀಡಲು ಸೋತೆ
ಅಷ್ಟೇ ಧನ್ಯತೆಯ ಭಾವ ಹುಟ್ಟಿಸಿದ್ದು ನನ್ನ ಮುದ್ದಿನ ಕಂದ ತನ್ನ ಮುದ್ದಿನ ಕಂದನಿಗೆ ಜನ್ಮ ನೀಡಿ ನನ್ನ ಕೈಗಿತ್ತಾಗ. ಪುಟ್ಟ ಪುಟ್ಟ ಮುದ್ದಾದ ಕೈಗಳು, ಪುಟ್ಟ ಪುಟ್ಟ ಕಾಲುಗಳು, ರೋಸ್ ಹಚ್ಚಿದಂತಹ ತುಂಬುಗೆನ್ನೆಗಳು, ಕಪ್ಪನೆಯ ತುಂಬು ಕೂದಲು… ಕಣ್ಣು ಮುಚ್ಚಿ ನಿದ್ರಿಸುತ್ತಿದ್ದ ಆ ಹಸುಗೂಸಿನ ಪ್ರಥಮ ಸ್ಪರ್ಶದ ಅನುಭವವನ್ನು ವರ್ಣಿಸಲು ಜೀವನದಲ್ಲಿ ಮೊದಲ ಬಾರಿಗೆ ಪದಗಳ ಕೊರತೆ ಕಾಣಿಸಿತು. ಭಾವನೆಗಳಿಗೆ ಅಕ್ಷರ ರೂಪ ನೀಡಲು ಸೋತ ಕ್ಷಣಗಳವು.

ಶುಭ್ರ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಆ ಪೋರನನ್ನು ಪ್ರೀತಿಯಿಂದ ಎದೆಗಪ್ಪಿ ಕೊಳ್ಳಲಷ್ಟೇ ನನಗೆ ಸಾಧ್ಯವಾಗಿದ್ದು. ಬಹುಷಃ ಅವನಿಗೆ ನನ್ನ ಭಾವನೆ ಅರ್ಥವಾಗಿರಬೇಕು. ನಿದ್ದೆಯಲ್ಲೇ ಕಿರುನಗೆ ಬೀರಿದ. ಸುಮಾರು ಇಪ್ಪತ್ತಾರು ವರುಷಗಳ ನಂತರ ನನ್ನ ಕೈಯಲ್ಲಿ ನನ್ನ ಮಗಳ ಪ್ರತಿಬಿಂಬ! ಅವನ ಬೆರಳು ನೇವರಿಸಿದೆ. ಅದೆಂಥಾ ಸುಖದ ಅನುಭೂತಿ.

ಅಂದಿನಿಂದ ಇಂದಿನವರೆಗೆ ಅವನು ಪ್ರತಿಕ್ಷಣವೂ ಹೊಸ ಹೊಸ ಅನುಭವಗಳನ್ನು ಪುನರ್ ಮನನ ಮಾಡುತ್ತಾ ಹೋದ. ನನ್ನ ಮಗಳನ್ನು ಬಿಟ್ಟರೆ ಹಸುಗೂಸನ್ನು ಎತ್ತಿಕೊಂಡಿದ್ದು ಮೊದಲ ಬಾರಿ. ಅದೆಂಥಾ ಪುಳಕ-ಖುಷಿ. ಲೇಬರ್ ವಾರ್ಡ್‌ನಿಂದ ಮಗು ವನ್ನು ಎತ್ತಿಕೊಂಡ ಬಂದ ನರ್ಸ್ ನಿಮ್ಮ ಮಗು ಎತ್ತಿಕೊಳ್ಳಿ ಎಂದು ಕೈ ಚಾಚಿದಾಗ ‘ನಾನಾ…’ ಎಂದೆ.

‘ನೀವು ಇವನ ಅಜ್ಜಿ ತಾನೇ’ ಎಂದರು ಆಕೆ. ಹೌದು ಎಂದು ತಲೆಯಾಡಿಸಿದೆ. ‘ನನಗೆ ಇಷ್ಟು ಚಿಕ್ಕ ಕೂಸನ್ನು ಎತ್ತಿಕೊಂಡು ಅಭ್ಯಾಸ ವಿಲ್ಲ’ ಎಂದಾಗ ಆ ತರುಣಿ ವಿಚಿತ್ರ ಪ್ರಾಣಿ ಎಂಬಂತೆ ನನ್ನತ್ತ ನೋಡಿ ‘ಎಲ್ಲವೂ ಅಭ್ಯಾಸವಾಗುತ್ತದೆ’ ಎಂದು ನನ್ನ ಕೈಯಲ್ಲಿ ಮಗುವನ್ನಿಟ್ಟು ಹೊರಟೇ ಹೋದರು. ನಡುಗುವ ಕೈಗಳಿಂದ ಆ ಪುಟ್ಟ ಪೋರನನ್ನು ಅಪ್ಪಿಕೊಂಡೆ. ಅವನು  ಆರಾಮ ವಾಗಿ ನಿದ್ರಿಸುತ್ತಿದ್ದ. ಆಗ ತಾನೇ ಕುಡಿದ ಎದೆಹಾಲಿನ ತೇವ ಅವನ ತುಟಿಯಂಚಿನಲ್ಲಿತ್ತು. ಲೇಬರ್ ರೂಮಿನಿಂದ ಹೊರಬಂದ ಅಳಿಯ ವಿನಯಕೃಷ್ಣ ‘ಹೇಗಿದ್ದಾನಮ್ಮಾ ಮೊಮ್ಮಗ’ ಎನ್ನುವಾಗ ಅವರ ಮುಖದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಏನು ಹೇಳ ಬೇಕೆಂದು ತೋಚದೆ ನಕ್ಕೆ. ಪುಟ್ಟ ಕಂದ ಮತ್ತೊಮ್ಮೆ ನಿದ್ದೆ ಕಣ್ಣಲ್ಲಿ ನಕ್ಕ.

ನಮ್ಮ ಕನಸುಗಳ ಮುಂದುವರೆದ ಭಾಗವಾದ ನಮ್ಮದೇ ಪ್ರತಿಬಿಂಬ ನಮ್ಮ ಮಡಿಲು ತುಂಬಿದಾಗ ಆಗುವ ಆನಂದವೇ ಬೇರೆ. ಅದರಲ್ಲೂ ಹೆಣ್ಣು ಮಗು ವಾದಾಗ ‘ನಾನು ಜೀವನದಲ್ಲಿ ಮಾಡಲಿಕ್ಕೆ ಆಗದೇ ಬಾಕಿ ಉಳಿದಿರುವ ಎಲ್ಲವನ್ನೂ ಅವಳು ಮಾಡುತ್ತಾಳೆ, ಅವಳಿಂದ ಮಾಡಿಸುತ್ತೇನೆ. ಅವಳ ಜೀವನದ ಪ್ರತಿಕ್ಷಣದಲ್ಲೂ ಅವಳ ಜೊತೆ ಗಟ್ಟಿಯಾಗಿ ನಿಲ್ಲುತ್ತೇನೆ’ ಎಂದು ಮನದಲ್ಲೇ ಪ್ರತಿಜ್ಞೆ ಮಾಡುವುದೇ ಬೇರೆ. ಆಗಿನ್ನು ನಮಗೆ ಪ್ರಪಂಚ ಏನು ಎಂಬುದು ಸಂಪೂರ್ಣವಾಗಿ ಅರಿವಾಗಿರುವುದಿಲ್ಲ. ಆದರೆ ಮಗಳಿಗೆ ಮಗು ವಾದಾಗ, ನಾವು ಅಜ್ಜಿಯಾದಾಗ ಯೋಚಿಸುವುದೇ ಬೇರೆ. ಆಗಿನ ಹುಡುಗಾಟವೇ ಬೇರೆ. ಈಗಿನ ಪ್ರಬುದ್ಧ ಮನಸ್ಸೇ ಬೇರೆ. ಜೀವನದ ಪ್ರತಿ ಹಂತದಲ್ಲೂ ಬದುಕು ಕಲಿಸುವ ಪಾಠಕ್ಕಿಂತ ಬೇರೆ ಗುರು ಬೇಕೆ?

ಹಲವು ಭಾವನೆಗಳ ಸಮ್ಮಿಶ್ರಣ
ಆದರೆ ನನ್ನ ಮಹಾಗುರು ನನಗೆ ಪ್ರತಿನಿತ್ಯ ಏನಾದರೂ ಹೊಸದನ್ನು ಕಲಿಸುತ್ತಲೇ ಇದ್ದಾನೆ. ಮೊದಲ ದಿನ ಮಧ್ಯರಾತ್ರಿ ಅವನು ನನ್ನ ಕೈಗೆ ಬಂದಾಗ ಇಡೀ ರಾತ್ರಿ ನಿದ್ದೆಗೆಟ್ಟು ಅವನ ಬರುವಿಕೆಗೆ ಕಾದಿದ್ದು ಸಾರ್ಥಕ ಎನಿಸಿದ ಕ್ಷಣಗಳವು. ಅವನು ವಾರ್ಡ್‌ಗೆ ಬಂದಾಗ ನಡುರಾತ್ರಿ 3 ಗಂಟೆ. ಆ ಒಂದೊಂದು ಕ್ಷಣವೂ ಖುಷಿ, ಆತಂಕ ಒಂದು ರೀತಿಯ ಒತ್ತಡ.

ಒಟ್ಟಾರೆ ಹಲವು ಭಾವನೆಗಳ ಸಮ್ಮಿಶ್ರಣ. ಈ ಪುಟ್ಟ ಗೊಂಬೆಯನ್ನು ನಿಭಾಯಿಸುವುದು ಹೇಗೆ ಎಂಬ ಯೋಚನೆ. ನಾರ್ಮಲ್
ಡೆಲಿವರಿಯಾದರೂ ಮಗಳು ತುಂಬಾ ಸುಸ್ತಾಗಿದ್ದಳು. ಎರಡು ಜೀವಗಳ ಸಂರಕ್ಷಣೆ. ಅಳಿಯ ಹೆಗಲಿಗೆ ಹೆಗಲು ಕೊಟ್ಟು ನಿಂತಿ ದ್ದರು. ನಮ್ಮಿಬ್ಬರಿಗೂ ಅಂದು ಶಿವರಾತ್ರಿ !

ಹಾಡಿಗೆ ಮನಸೋತೋ? ಕೇಳಲಾರದೆ?

ಅವನು ನಮ್ಮ ಮನೆಗೆ ಬಂದದ್ದು ಸ್ವಾತಂತ್ರ್ಯ ದಿನದ ಮರುದಿನ. ಆಗಸ್ಟ್‌ 16 ರಂದು. ಅವನ ಬರುವಿಕೆಯನ್ನು ಅವನ ಮುತ್ತಜ್ಜಿ (ನಮ್ಮತ್ತೆ), ನಮ್ಮ ಮನೆಯ ದೇವರು, ನಮ್ಮಕ್ಕ, ಮನೆಯ ಹುಡುಗರು ಕಾತರದಿಂದ ಕಾಯುತ್ತಿದ್ದರು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಅವನನ್ನು ನೂತನ ಅಪ್ಪ ಅಮ್ಮನೊಂದಿಗೆ ಆರತಿ ಬೆಳಗಿ ಮನೆಯೊಳಗೆ ಕರೆತಂದೆವು.

ಅಂದಿನಿಂದ ಅವನ ಸುತ್ತಲೇ ನನ್ನ ಜಗತ್ತು ಸುತ್ತಲಾರಂಭಿಸಿತು. ಅವನಿಗಾಗಿ ಕೃಷ್ಣನ ಹಾಡಗಳನ್ನು ಹೇಳಲು ಕಲಿತೆ. ಲಾಲಿ
ಲಾಲಿ ಲಾಲಿ ಲಾಲಿ ಮುದ್ದು ಲಾಲಿ…. ಅವನು ಈ ಹಾಡು ಹೇಳಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಮಲಗಿ ನಿದ್ರಿಸುತ್ತಿದ್ದ. ಈಗಲೂ ಅವನು ಈ ಹಾಡು ಹೇಳುತ್ತಿದ್ದಂತೆ ಮಲಗುತ್ತಾನೆ. ಅವನಿಗೆ ಈ ಹಾಡು ತುಂಬಾ ಇಷ್ಟ. ಆದರೆ ಅವನು ನನ್ನ ಹಾಡಿಗೆ ಮನಸೋತು ಮಲಗುತ್ತಾನೋ? ಅಥವಾ ಕೇಳಲಾರೆ ಎಂದು ನಿದ್ದೆಯ ಮೊರೆ ಹೋಗುತ್ತಾನೋ ಆ ಶ್ರೀಕೃಷ್ಣನೇ ಬಲ್ಲ.

ನನಗೋ ನಿದ್ದೆ ಬಲುಪ್ರಿಯ. ಆದರೆ ಸಮಯ ಸಿಗುವುದಿಲ್ಲ ಎಂಬುದು ಬೇರೆ ಮಾತು. ಮಲಗಿದಾಕ್ಷಣ ನಿದ್ರಾದೇವಿಯ
ಆಲಿಂಗನ. ಪುಟ್ಟ ಕಂದ ರಾತ್ರಿ ಆರೇಳು ಬಾರಿ ಏಳುತ್ತಿದ್ದ. ಮಗಳು ನಿದ್ದೆಯ ವಿಷಯದಲ್ಲಿ ನನ್ನ ಅಪರಾವತಾರ. ತೊಟ್ಟಿಲ ಪಕ್ಕದಲ್ಲೇ ಮಲಗುತ್ತಿದ್ದ ನಾನು ಅವನು ಹಾಲು ಕುಡಿದು ಮಲಗುತ್ತಿದ್ದಂತೆ ಕಣ್ಣು ಮುಚ್ಚುತ್ತಿದ್ದೆ. ಅದು ಅರೆ ಪ್ರಜ್ಞಾಸ್ಥಿತಿ. ಅವನು ಎದ್ದು ಬಿಟ್ಟರೆ, ನನಗೆ ಎಚ್ಚರವಾಗದಿದ್ದರೆ ಎಂಬ ಕಳವಳ. ಈ ಮನಸ್ಥಿಿತಿಯಿಂದ ನಾನು ಹೊರಬರಲು ನಾಲ್ಕೈದು ತಿಂಗಳುಗಳೇ ಬೇಕಾಯಿತು. ಅಂತಹ ಸಂದರ್ಭದಲ್ಲಿ ನನಗೆ ಆತ್ಮಸ್ಥೆೆರ್ಯ ತುಂಬಿದವರು ಖ್ಯಾತ ಮಕ್ಕಳ ತಜ್ಞೆ ಡಾ.ಆಶಾ ಬೆನಕಪ್ಪ.

ನಮ್ಮ ಪುಟ್ಟಣ್ಣ ಸದಾ ಹಸನ್ಮುಖಿ. ಹಸಿವು, ನಿದ್ದೆ ಮಾಡುವ ಸಂದರ್ಭಗಳನ್ನು ಬಿಟ್ಟರೆ ಅವನು ಅತ್ತಿದ್ದು ಬಹಳ ಕಡಿಮೆ.
ನಾಲ್ಕು ತಿಂಗಳು ತುಂಬಿದ ಮರುದಿನವೇ ಅವನ ನಾಮಕರಣ. ಯಾವ ಹೆಸರಿಡಬೇಕು ಎಂದು ಎಲ್ಲರೂ ಹುಡುಕಿದ್ದೇ
ಹುಡುಕಿದ್ದು. ಅವನ ಅಪ್ಪ, ಅಮ್ಮ ತೀರ್ಮಾನಿಸಿದ್ದು ವಿಕ್ರಾಂತ್ ನಂದ. ನಂದ ನಮ್ಮ ಅಳಿಯನ ತಂದೆ ಹೆಸರು.

ರಾಮಚಂದ್ರನಂತೆ ಪ್ರಥಮ ಭಾಷಿ

ನನ್ನ ಮೊಮ್ಮಗ ಎಂದು ಕೊಚ್ಚಿಕೊಳ್ಳುವುದಲ್ಲ. ಅವನು ರಾಮಚಂದ್ರನಂತೆ ಪ್ರಥಮ ಭಾಷಿ. ಎದುರಿಗೆ ಯಾರೇ ಬಂದರೂ ಮೊದಲು ಸ್ವಾಗತಿಸುವುದೇ ಅವನ ಬೊಚ್ಚುಬಾಯಿಯ ಸುಂದರ ನಗು. ಮಗು ನಕ್ಕರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಪ್ರತಿಯೊಬ್ಬರೂ ಅವನನ್ನು ಮಾತನಾಡಿಸಬೇಕು. ಅವನನ್ನು ಎತ್ತಿಕೊಳ್ಳಬೇಕು.

ಎತ್ತಿಕೊಳ್ಳದಿದ್ದರೆ ‘ಏಯ್’ ಎಂದು ಕೂಗಿ ಅವರು ಎತ್ತಿಕೊಳ್ಳುವಂತೆ ಮಾಡುವುದು ಅವನ ಯೋಜನೆ. ನಾನು ಯಾವಾಗಲೂ ಮಗಳಿಗೆ ಹೇಳುತ್ತಿರುತ್ತೇನೆ. ಅವನು ತುಂಬಾ ಒಳ್ಳೆಯ ಮಗು. ಕಿರಿಕಿರಿ ಇಲ್ಲ. ಕೊನೆಯವರೆಗೆ ಹೀಗೆ ಇದ್ದರೆ ಸಾಕು. ಅವಳು ನಕ್ಕು ‘ತಡಿಯಮ್ಮಾ ಈಗಲೇ ಏನೂ ಹೇಳಲು ಆಗುವುದಿಲ್ಲ. ಆದರೆ ನಿನ್ನಾ ಆಸೆ ಈಡೇರಲಿ. ತಥಾಸ್ತು’ ಎನ್ನುತ್ತಾಳೆ.

ನಾನು ‘ಬೆಳೆಯುವ ಸಿರಿ ಮೊಳಕೆಯಲ್ಲಿ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ’ ಎನ್ನುತ್ತೇನೆ. ಆದರೂ ದಿನವೂ ಹಲವಾರು ಮಕ್ಕಳನ್ನು ನೋಡುತ್ತಿರುವ, ಆರೈಕೆ ಮಾಡುತ್ತಿರುವ ಅವಳ ಅನುಭವ ದೊಡ್ಡದು. ನಮ್ಮ ಮಲೆನಾಡಿನ ಕಡೆ ಮಗು ಹುಟ್ಟಿದ ಹನ್ನೆರಡನೇ ದಿನ ಕಿವಿ ಚುಚ್ಚುವುದು, ತೊಟ್ಟಿಲು ಶಾಸ್ತ್ರ ಮಾಡುವುದು ಪದ್ಧತಿ. ಹನ್ನೆೆರಡನೇ ದಿನ ಆಚಾರರು ಬಂದು ಅವನ ಕಿವಿ ಚುಚ್ಚಿದಾಗ ಅವನು ಜೋರಾಗಿ ಬೊಬ್ಬೆೆ ಹೊಡೆದ. ಎಲ್ಲರ ಕಣ್ಣಲ್ಲಿ ನೀರು. ಅವನ ತಾತ-ನಮ್ಮ ಮನೆಯವರು ನನಗೆ ಇದೆಲ್ಲಾ
ನೋಡಲು ಆಗುವುದಿಲ್ಲ ಎಂದು ಹೊರಗೆ ಹೋದರು.

ಒಂದು ಗಳಿಗೆ ಅತ್ತ. ಹಾಲು ಕುಡಿದ ನಿದ್ದೆೆಗೆ ಜಾರಿದ. ನನಗೆ, ನನ್ನ ಮಗಳಿಗೆ ಮಗು ರಾತ್ರಿ ಇನ್ನೆಷ್ಟು ಸಂಕಟ ಪಡುತ್ತದೋ,
ಅಳುತ್ತದೋ ಎಂಬ ಆತಂಕ. ಆದರೆ ಪುಣ್ಯಾತ್ಮಮಾಮೂಲಿನಂತಿದ್ದ. ಹಾಲಿಗಾಗಿ ಮಾತ್ರ ಅಳುತ್ತಿದ್ದ. ಹಾಲು ಕುಡಿದ ನಂತರ ನಿದ್ರಿಸುತ್ತಿದ್ದ.

ಬೋರಲಾದಾಗ ಪಾಯಸದ ಸಿಹಿ

ಅವನಲ್ಲಾಗುವ ಪ್ರತಿಯೊಂದು ಬದಲಾವಣೆಯೂ ನನಗೆ ಅಚ್ಚರಿ, ಸಂತಸ. ಅವನು ನಕ್ಕರೂ ಖುಷಿ. ಅತ್ತರೆ ಬೆರಗು. ಅವನು ಬೋರಲಾದಾಗ ಜಗತ್ತಿನಲ್ಲಿಮೊದಲ ಬಾರಿಗೆ ಮಗುವೊಂದು ಬೋರಲಾಯಿತೆಂಬ ಸಡಗರ. ಅದು ಸಹಜ ಪ್ರಕ್ರಿಯೆ ಇರಬಹುದು. ಆದರೆ ಅಂದು ಮನೆಯಲ್ಲಿ ಸಂತಸದ ಮಹಾಪೂರ. ಫೋನ್ ಮಾಡಿ ಅವನ ತಾತನಿಗೆ ಹೇಳಿ ಖುಷಿಪಟ್ಟಿದ್ದೇ ಪಟ್ಟಿದ್ದು. ಪುಟ್ಟಣ್ಣ ಮಗ್ಗುಲಾದ ಎಂದು ಬ್ರೇಕಿಂಗ್ ನ್ಯೂಸ್ ಕೊಟ್ಟವಳು ನಾನು. ನಾಲ್ಕೈದು ದಿನಗಳ ಸತತ ಪ್ರಯತ್ನದಿಂದ ಸಲೀಸಾಗಿ ಮಗ್ಗಲಾಗಲು ಕಲಿತ.

ಅದೊಂದು ವಿಶಿಷ್ಟ ಪ್ರಸಂಗ ಎಂಬಂತೆ ಮನೆಮಂದಿ ಎಲ್ಲರೂ ಖುಷಿಪಟ್ಟರು. ಅಂದು ಅವನ ಹೆಸರಿನಲ್ಲಿ ಪಾಯಸದ ಅಡಿಗೆ.
ಅವನು ಮಗ್ಗಲೇನೋ ಆದ. ಮಾರನೆಯ ದಿನದಿಂದ ನನಗೆ ಆತಂಕ. ಅರೆ ಗಳಿಗೆ ಬಿಟ್ಟರೂ ಎಲ್ಲಿ ಮಂಚದಿಂದ ಉರುಳುತ್ತಾನೋ   ಟೆನ್‌ಷನ್. ಏಳನೇ ತಿಂಗಳು ಪೂರ್ಣಗೊಳ್ಳುತ್ತಿದ್ದಂತೆ ಕೈಯನ್ನು ಆಧಾರವಾಗಿಟ್ಟುಕೊಂಡು ಮುಂದೆ ಹೋಗಲು ಪ್ರಯತ್ನಿಸು ತ್ತಿದ್ದ.

ಆದರೆ ಗೊತ್ತಾಗದೆ ಅಳುತ್ತಿದ್ದ. ಅಂದು ನಾನು, ನನ್ನ ಮಗಳು, ಅಳಿಯ ಹರಟೆ ಹೊಡೆಯುತ್ತಾ ಕುಳಿತಿದ್ದೆವು. ಅವನನ್ನೇ ನೋಡು ತ್ತಿದ್ದ ಮಗಳು ಅವನು ಮುಂದಕ್ಕೆ ತೆವಳಿದ ಎಂದು ಜೋರಾಗಿ ಕೂಗಿದಳು. ‘ಇಷ್ಟು ಬೇಗ ಆಗಲ್ಲ. ನಿನಗೆ ಭ್ರಮೆ’ ಎಂದೆ. ಅರ್ಧ ಗಂಟೆಯ ನಂತರ ಅವನು ಮತ್ತೆ ತೆವಳಿದ. ನಾವು ಮೂವರೂ ಎಷ್ಟು ಜೋರಾಗಿ ಕೂಗಿದೆವು ಎಂದರೆ ವಿಕ್ರಾಂತ ಗಾಬರಿಯಿಂದ ನಮ್ಮತ್ತ ನೋಡಿದ. ಅಂದು ಅವನು ಮತ್ತೆ ಆ ಸಾಹಸ ಮಾಡುವ ಗೋಜಿಗೇ ಹೋಗಲಿಲ್ಲ. ಮಾರನೆಯ ದಿನ ನನ್ನಕ್ಕ ಮಗಳ ಮನೆಗೆ ಬಂದಾಗ ಮತ್ತೆ ಮುಂದಡಿ ಇಟ್ಟ. ಮಗಳು ಅದನ್ನು ವಿಡಿಯೋ ಮಾಡಿ ನಮ್ಮ ಫ್ಯಾಮಿಲಿ ಗ್ರೂಪ್ ನಲ್ಲಿ ಹಾಕಿ ಖುಷಿ ಹಂಚಿಕೊಂಡಳು.

ದೇವರೂ ಒಂದೇ ಚಪ್ಪಲಿಯೂ ಒಂದೇ

ಇದಾದ ಹತ್ತು ದಿನದಿಂದ ಅವನನ್ನು ಹಿಡಿಯುವುದೇ ದೊಡ್ಡ ಸಾಹಸವಾಗತೊಡಗಿತು. ಮನೆ ತುಂಬಾ ತೆವಳುತ್ತಾನೆ. ಕೈಗೆ ಏನೇ ಸಿಕ್ಕರೂ ಅದು ನೇರವಾಗಿ ಬಾಯಿಗೆ ಹೋಗುತ್ತದೆ. ಜಗತ್ತಿನಲ್ಲಿ ಇರುವುದೆಲ್ಲಾ ತಿನ್ನುವುದಕ್ಕೆ ಎಂದು ಅವನು ಭಾವಿಸಿದಂತಿದೆ. ಮನೆಯಲ್ಲಿ ಮಗಳು ಅಲಂಕಾರಕ್ಕೆಂದು ಎಲ್ಲೆಲ್ಲಿಂದಲೋ ತಂದ ಬುದ್ಧ, ಗಣೇಶ, ಸ್ಪೈಡರ್ ಮ್ಯಾನ್, ಹಡಗು… ಎಲ್ಲಾ ಅವನ ದಾಳಿಗೆ ಹೆದರಿ ನೆಲಕಚ್ಚಿವೆ.

ಇನ್ನಷ್ಟು ಅಟ್ಟ ಏರಿವೆ. ಅವು ರಬ್ಬರ್‌ನಿಂದ ಮಾಡಿರುವುದರಿಂದ ಮುಕ್ಕಾಗಿಲ್ಲ. ಬಣ್ಣ ಬಣ್ಣದ ಗೊಂಬೆಗಳನ್ನು ಹಿಡಿಯಲು ಕೈ ಚಾಚುತ್ತಾನೆ. ಆದರೆ ಅವನ ಪುಟ್ಟ ಕೈಗಳ ಒಳಗೆ ಅವುಗಳು ಬರುವುದಿಲ್ಲ. ಹೋ ಎಂದು ಕೂಗುತ್ತಾನೆ. ಇನ್ನೊಂದು ತಿಂಗಳು. ಅವುಗಳ ಸ್ಥಾನ ಕೂಡಾ ಪಲ್ಲಟವಾಗಲಿವೆ. ಅವನಮ್ಮ ಮನೆಯಲ್ಲಿ ಹಾಕಿಕೊಳ್ಳುವ ಬಣ್ಣ ಬಣ್ಣದ ಚಪ್ಪಲಿಗಳಂತೂ ಅವನಿಗೆ ಪಂಚಪ್ರಾಣ. ನೋಡಿದ ತಕ್ಷಣ ಓಡಿ ಹೋಗಿ ಅಕ್ಷರಶಃ ಬಾಯಿಗೆ ತುರುಕಿಕೊಳ್ಳುತ್ತಾನೆ. ಅವಳೀಗ ಎಲ್ಲೆಂದರಲ್ಲಿ ಚಪ್ಪಲಿ ಬಿಡುವ ಸ್ವಾತಂತ್ರ್ಯದಿಂದ ವಂಚಿತಳು. ಮಕ್ಕಳು ದೇವರ ಸಮಾನ ಎನ್ನುತ್ತಾರೆ. ಆ ಮಾತು ನೂರಕ್ಕೆ ನೂರು ನಿಜ. ಅವನು ಗಣೇಶನ ವಿಗ್ರಹವನ್ನು ಬಾಯಿಗಿಡುತ್ತಾನೆ.

ಚಪ್ಪಲಿಯನ್ನು ಚಪ್ಪರಿಸುತ್ತಾನೆ. ಅವನಿಗೆ ದೇವರೂ ಒಂದೇ, ಚಪ್ಪಲಿಯೂ ಒಂದೇ. ಅವನನ್ನು ನಾನು ಮಹಾಗುರು ಎಂದೆ. ಕಾರಣ ಅವನು ನನಗೆ ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿದ. ನನ್ನ ಜಗತ್ತನ್ನು ಅವನ ಜಗತ್ತನ್ನಾಗಿಸಿದ. ಅವನ ಪುಟ್ಟ ಪುಟ್ಟ ಚಟುವಟಿಕೆಗಳನ್ನು ನಾನು ನಿಬ್ಬೆೆರಗಾಗಿ ನೋಡುವಂತೆ ಮಾಡಿದ. ಅವನು ಅತ್ತಾಗ ನನಗೆ  ಸಂಕಟವಾಗು ತ್ತದೆ. ಅವನು ನಕ್ಕಾಗ ನನಗರಿವಿಲ್ಲದಂತೆ ನಗುತ್ತೇನೆ. ಅವನ ಒಂದು ನಗುವಿಗಾಗಿ, ಸಮಾಧಾನಕ್ಕಾಗಿ ನಾನು ವಿದೂಷಕಳೂ ಆಗುತ್ತೇನೆ. ಅವನನ್ನು ಸುಮ್ಮನಿರಿಸಲು ಬೌಬೌ, ಮಿಯಾಂವ್ ಎನ್ನುತ್ತೇನೆ. ಅವನು ನಾಯಿ, ಬೆಕ್ಕು ಬಂದಿದೆ ಎಂದುಕೊಂಡು ತಕರಾರಿಲ್ಲದೆ ಊಟ ಮಾಡುತ್ತಾನೆ.

ಮಗುವಿನೊಂದಿಗೆ ಮಗುವಾಗುತ್ತೇನೆ

ಒಮ್ಮೆ ನನ್ನ ಆತ್ಮೀಯರೊಬ್ಬರು ಫೋನ್ ಮಾಡಿದಾಗ ವಿಕ್ರಾಂತನನ್ನು ಹೆದರಿಸಲು ಜೋರಾಗಿ ಬೌ ಬೌ ಎಂದೆ. ಅತ್ತ ಕಡೆಯಿಂದ ‘ಸಾವಿತ್ರಿ ನಿಮ್ಮ ಮನೆಯಲ್ಲಿ ನಾಯಿ ಸಾಕಿದ್ದೀರಾ’ ಎಂದರು. ‘ಹೌದು ಸರ್, ಅದು ಈಗ ನಿಮ್ಮ ಬಳಿ ಮಾತನಾಡುತ್ತಿ’ ಎಂದಾಗ ಅವರು ನಕ್ಕರು. ಅವನು ನನಗೆ ಇನ್ನಷ್ಟು ತಾಳ್ಮೆ ಕಲಿಸಿದ. ಮನಸಾರೆ ನಗುವುನ್ನು ಕಲಿಸಿದ. ಅವನ ಕಣ್ಣುಗಳ ಮೂಲಕ ಜಗತ್ತನ್ನು ನೋಡುತ್ತೇನೆ. ಅವನಿಗೆ ಮರಗಳೆಂದರೆ ಬಲು ಇಷ್ಟ. ಹಟ ಮಾಡಿದಾಗ ಅವನನ್ನು ಮಹಡಿ ಮೇಲೆ ಕರೆದುಕೊಂಡು ಹೋಗಿ ಎದುರಿಗಿರುವ ಮರಗಳನ್ನು ತೋರಿಸುತ್ತೇನೆ. ಎಲೆಗಳು ಅಲ್ಲಾಡುವುದನ್ನು ನೋಡಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ನಗುತ್ತಾನೆ.

ಸಂಜೆ ಹೊತ್ತಿಗೆ ನಮ್ಮ ಮನೆಯ ಅಕ್ಕಪಕ್ಕ ಪಾರ್ಕ್‌ಗಳಲ್ಲಿ ಆಶ್ರಯ ಪಡೆದಿರುವ ವಿವಿಧ ರೀತಿಯ ನೂರಾರು ಪಕ್ಷಿಗಳು ನಮ್ಮ
ಮನೆಯ ಮೇಲೆ ಹಾರಿ ಹೋಗುವಾಗ ಅವನಂತೆ ನಾನೂ ಅಚ್ಚರಿಯಿಂದ ನೋಡುತ್ತೇನೆ. ಎಷ್ಟೋ ವರುಷಗಳ ನಂತರ
ಕೆಲಸದ ಒತ್ತಡ ಮರೆತು ಅವನೊಂದಿಗೆ ಮಗುವಾಗುತ್ತೇನೆ. ಕಳೆದುಕೊಂಡದ್ದು ಸಿಕ್ಕಿದ ಸಂಭ್ರಮದಲ್ಲಿ ಮೈಮರೆಯುತ್ತೇನೆ.
ಅವನಮ್ಮ ತಂದಿಟ್ಟಿರುವ ಪಂಚತಂತ್ರ ಕಥೆಗಳನ್ನು ಅವನಿಗಾಗಿ ಓದಿ ಹೇಳುತ್ತೇನೆ. ಬಹಳ ಅರ್ಥವಾದಂತೆ ಅವನು ಚಿತ್ರಗಳನ್ನು ನೋಡುತ್ತಾನೆ. ಅವೆಲ್ಲವೂ ಇಂಗ್ಲೀಷ್ ನಲ್ಲಿವೆ. ಅದನ್ನು ಕನ್ನಡೀಕರಿಸಿ ಇದು ಸಿಂಹ-ಲಯನ್, ನರಿ- ಜಾಕಲ್, ಹುಲಿ-ಟೈಗರ್-ಶೇರ್, ನಾಯಿ-ಡಾಗ್- ಕುತ್ತಾ, ಬೆಕ್ಕು-ಕ್ಯಾಟ್-ಬಿಲ್ಲಿ …ಎಂದೆಲ್ಲಾ ಹೇಳುತ್ತೇನೆ.

ಅವನಿಗೆ  ಅದೆಷ್ಟು ಅರ್ಥವಾಗುತ್ತದೋ ಗೊತ್ತಿಲ್ಲ. ಇದು ಸಿಂಹ ಎಂದು ಚಿತ್ರದ ಮೇಲೆ ಕೈಯಿಟ್ಟು ಹೇಳಿದಾಗ ಅವನು ಅದರ ಮೇಲೆ ತನ್ನ ಪುಟ್ಟ ಕೈಗಳಿಂದ ಜೋರಾಗಿ ಬಡಿಯುತ್ತಾನೆ. ಇದು ನನ್ನ ನಿತ್ಯದ ಕಾಯಕ. ಆಸ್ಪತ್ರೆಯಲ್ಲಿದ್ದಾಗ ವೈದ್ಯರೊಬ್ಬರು  ‘ನೀವು ಒಟ್ಟಿಗೆ ಮೂರು ಭಾಷೆಗಳಲ್ಲಿ ಹೇಳಿ. ಅವರಿಗೆ ಈಗ ಅರ್ಥವಾಗದಿದ್ದರೂ ದೊಡ್ಡವರಾದ ಮೇಲೆ ಚಿಕ್ಕವರಿದ್ದಾಗ
ಕೇಳಿದ ಈ ಭಾಷೆಗಳು ನೆನಪಿಗೆ ಬರುತ್ತವೆ’ ಎಂದಿದ್ದರು.

ಅದನ್ನು ಪಾಲಿಸುತ್ತಿದ್ದೇನೆ. ಲೇಬರ್ ವಾರ್ಡ್‌ನಲ್ಲಿ ನೋವು ತಾಳಲಾರದೆ ‘ಕೃಷ್ಣ’ ಎಂದು ಮಗಳು ಜೋರಾಗಿ ಕೂಗಿದಾಗ ಈ ಜಗತ್ತನ್ನು ಪ್ರವೇಶಿಸಿದವನು ನಮ್ಮ ಪುಟ್ಟಣ್ಣ. ಕೃಷ್ಣ ಅವಳ ಆರಾಧ್ಯ ದೈವ. ಹೀಗಾಗಿ ಅವನಿಗೆ ಊಟ ಮಾಡಿಸುವಾಗ ಕೃಷ್ಣನ ಕಥೆಯನ್ನೇ ಹೇಳುತ್ತೇನೆ. ಸಲೀಸಾಗಿ ರಾಗಿ ಸರಿ, ಊಟ ಅವನ ಹೊಟ್ಟೆ ಸೇರುತ್ತದೆ. ಒಟ್ಟಿನಲ್ಲಿ ಅವನಿಗೆ ಕಥೆ, ಮಾತು ಇಷ್ಟ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ.

ನನ್ನ ಬಾಲ್ಯದ ಸಮೀಕರಣ
ಅವನಿಗೆ ಕಥೆ ಹೇಳುವ ಮೂಲಕ ನಮ್ಮಮ್ಮ, ನಮ್ಮಜ್ಜ ನಮ್ಮನ್ನೆಲ್ಲಾ ಕೂರಿಸಿಕೊಂಡು ಹೇಳುತ್ತಿದ್ದ ಮಹಾಭಾರತ, ರಾಮಾಯಣ, ಭಾಗವತ, ಏಳು ಸುತ್ತಿನ ಮಲ್ಲಿಗೆ ತೂಕದ ರಾಜಕುಮಾರಿ, ರಾಜ, ರಾಣಿಯರ ಕಥೆಗಳು ನೆನಪಾಗುತ್ತವೆ. ಮನಸು ಬಾಲ್ಯಕ್ಕೆ ಜಾರುತ್ತದೆ. ಅವನ ಬಾಲ್ಯದ ಜೊತೆ ನನ್ನ ಬಾಲ್ಯವನ್ನು ಸಮೀಕರಿಸಿಕೊಳ್ಳುವ ಗುಂಗಿನಲ್ಲೇ ಅವನಿಗೆ ಕಥೆ ಮುಂದುವರಿಸುತ್ತೇನೆ.
ಮಕ್ಕಳು ತುಂಬು ಕುಟುಂಬದಲ್ಲಿ ಬೆಳೆಯಬೇಕು ಎಂದು ಹಿರಿಯರು ಏಕೆ ಹೇಳುತ್ತಾರೆ ಎಂಬುದು ಈಗ ಮನದಟ್ಟಾಗುತ್ತದೆ.

ನನ್ನ ಕೆಲಸದ ಒತ್ತಡದಲ್ಲಿ ನನ್ನ ಮಗಳಿಗೆ ಅವಳ ಬಾಲ್ಯದಲ್ಲಿ ಪೂರ್ಣ ಸಮಯ ಕೊಡಲಾಗಲಿಲ್ಲವಲ್ಲ ಎಂಬ ಕೊರಗನ್ನು ನನ್ನ ಮೊಮ್ಮಗ ನಿವಾರಿಸುತ್ತಿದ್ದಾನೆ. ಈಗ ಕೊರಗುವ ಸರದಿ ನನ್ನ ಮಗಳದು. ತಾತ್ಕಾಲಿಕವಾಗಿ ಪತ್ರಿಕೋದ್ಯಮದಿಂದ ಬಿಡುವು ಪಡೆದು
ಅವನ ಜೊತೆ ಕಾಲ ಕಳೆಯುತ್ತಿದ್ದೇನೆ. ಅವನು ಮಲಗಿದಾಗ ಓದುತ್ತೇನೆ. ಭಾಷಾಂತರ ಮಾಡುತ್ತೇನೆ. ಲೇಖನ ಬರೆಯುತ್ತೇನೆ. ಅಡಿಗೆ, ಮನೆ ಕೆಲಸ, ಊಟ, ತಿಂಡಿ, ಐದು ಗಂಟೆಗಳ ನಿದ್ದೆ, ಬರವಣಿಗೆ ಬಿಟ್ಟರೆ ಉಳಿದೆಲ್ಲಾ ಸಮಯ ಅವನಿಗೆ ಮೀಸಲು.

ಅವನು ಅಂಬೆಗಾಲಿಟ್ಟು ಮುದ್ದು ಕೃಷ್ಣನಂತೆ ಮನೆ ತುಂಬಾ ಓಡಾಡುತ್ತಿದ್ದಾಗ ಮಗಳು ದಿಶಾ ಅವನಿಗೆ ಕೃಷ್ಣನ ವೇಷಭೂಷಣ ತೊಡಿಸಿ ಫೋಟೋ ಷೂಟ್ ಮಾಡಿಸಿದಳು. ಥೇಟ್ ಕೃಷ್ಣನೇ ಎನಿಸಿದ. ಅವನು ಪುಸ್ತಕ ಪ್ರಿಯ. ನಾನು ಓದಲು, ಬರೆಯಲು ಕುಳಿತರೆ ಪಕ್ಕಕ್ಕೆ ಬಂದು ಭಾರೀ ಓದುವವನಂತೆ ಪುಸ್ತಕ ತಿರುವಿ ಹಾಕುತ್ತಾನೆ. ಆಚೆ ಈಚೆ ನೋಡಿ ಸೀದಾ ಬಾಯಿಗೆ
ಇಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಹರಿಯುವುದಿಲ್ಲ. ನಾನು ‘ಪುಟ್ಟಣ್ಣ, ಅದು ಹೊಟ್ಟೆಗೆ ಊಟವಲ್ಲ, ತಲೆಗೆ ಊಟ’ ಎಂದರೆ ಭಾರೀ ಅರ್ಥವಾದಂತೆ ಜೋರಾಗಿ ನಗುತ್ತಾನೆ.

ಪೆನ್ ಸಿಕ್ಕರಂತೂ ಅವನಿಗೆ ಸುಗ್ಗಿ. ಎಲ್ಲಂದರಲ್ಲಿ ಗೀಚುತ್ತಾನೆ. ಮಕ್ಕಳು ತುಂಬಾ ಸೂಕ್ಷ್ಮ. ನಮ್ಮ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನೇ ಅನುಕರಿಸಲು ಪ್ರಯತ್ನಿಸುತ್ತಾರೆ. ಅವನ ಎದುರಿಗೆ ನಾವೇನೂ ಮಾಡಿದರೂ ಅದನ್ನು ತಾನೂ ಮಾಡಲು ಪ್ರಯತ್ನಿಸುತ್ತಾನೆ. ಅಲ್ಮೇರಾದ ಬಾಗಿಲು ತೆರೆಯುವುದಿರಬಹುದು, ಕಪಾಟನ್ನು ತೆರೆದು ಅದರಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುವುದಿರಬಹುದು.

ಮೆಟ್ಟಿಲುಗಳನ್ನು ಹತ್ತಿ ಮಾಳಿಗೆಗೆ ಓಡುವುದಿರಬಹುದು. ಒಟ್ಟಿನಲ್ಲಿ ಅವನು ತುಂಬಾ ಬಿಜಿ. ‘ತಾಯಿ’ ಎಂದು ನನ್ನನ್ನು
ಕರೆಯುತ್ತಾನೆ. ಅದು ಅವನೇ ಕಂಡುಕೊಂಡ ಪದ. ಈಗ ಅವನಿಗೆ 15 ತಿಂಗಳು. ಏಳು ಹಲ್ಲುಗಳು ಬಂದಿವೆ. ನಮ್ಮ ಮನೆಯಲ್ಲಿ ಕೈ ಹಾಕಿದ ಕಡೆಗಳಲ್ಲಿ ಪುಸ್ತಕಗಳು, ಪತ್ರಿಕೆಗಳು. ಅವನೀಗ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಸ್ವತಂತ್ರವಾಗಿ ನಡೆಯಲು ಕಲಿತಿದ್ದಾನೆ.  ಹೀಗಾಗಿ ಪುಸ್ತಕಗಳೆಲ್ಲವೂ ಮೇಲಿನ ಕಪಾಟುಗಳಲ್ಲಿ ಭದ್ರವಾಗಿ ಕುಳಿತು ಅವನ ದಾಳಿಯಿಂದ ಪಾರಾಗಿವೆ. ಅವನು ನಡೆಯುವಾಗ ಮಾಡಿ ಕೊಳ್ಳುವ ಬ್ಯಾಲೆನ್ಸ್‌, ತೊದಲು ಮಾತು, ತನಗೆ ಬೇಕಾದ್ದನ್ನು ಪಡೆಯಲು ಅವನು ಕೈ ತೋರಿಸುವ ರೀತಿ, ಅವನ ಬಾಲಭಾಷೆ ಎಲ್ಲವೂ ಆಸ್ಥೆ ಹುಟ್ಟಿಸುವ ವಿಷಯಗಳೇ.

ನಾವು ಹೇಳಿದ್ದು ಅವನಿಗೆ ಅರ್ಥವಾಗುವಂತೆ ಅವನ ಬಾಲ ಭಾಷೆ ನಮಗೂ ಅರ್ಥವಾಗುತ್ತದೆ. ಇದಲ್ಲವೇ ಅನುಬಂಧ-ಬಾಂಧವ್ಯ! ಕರೋನಾದಿಂದಾಗಿ ಸುಮಾರು ಒಂದು ವರುಷದ ಕಾಲ ಗೃಹ ಬಂಧಿಯಾಗಿದ್ದ ಅವನಿಗೆ ಈಗ ಹೊರ ಪ್ರಪಂಚದ ಅರಿವಾಗುತ್ತಿದೆ. ನಮ್ಮ ಮನೆಯ ರಸ್ತೆಯಲ್ಲಿ ಅಡ್ಡಾಡುವುದೆಂದರೆ ಅವನಿಗೆ ಅಚ್ಚುಮೆಚ್ಚು. ಬೆಳಗ್ಗೆೆ ಸೂರ್ಯಸ್ನಾನ ಕಡ್ಡಾಯ.
ಎದ್ದ ತಕ್ಷಣ ಮಾಳಿಗೆಯ ಮೇಲೆ ಕರೆದೊಯ್ಯಬೇಕು. ನಂತರ ತಿಂಡಿ. ಎಳೆ ಬಿಸಿಲಿನಲ್ಲಿ ವಾಕಿಂಗ್. ಸಂಜೆ ಅಕ್ಕಪಕ್ಕದ ಮಕ್ಕಳ
ಜೊತೆ ಆಟ. ಅವನ ಲೋಕ ಮನೆಯ ನಾಲ್ಕು ಗೋಡೆಗಳಿಂದ ಹೊರ ಜಗತ್ತಿಗೆ ನಿಧಾನವಾಗಿ ವಿಸ್ತರಿಸುತ್ತಿದೆ.

ಅವನಿಗೆ ಬಾಳೆಹಣ್ಣೆೆಂದರೆ ಬಲು ಇಷ್ಟ. ದೇವರಿಗೆ ಇಟ್ಟ ಬಾಳೆಹಣ್ಣು ಅವನಿಗೆ ನೈವೇದ್ಯವಾಗುತ್ತದೆ. ನಾವು ಕೊಡಬೇಕೆಂದಿಲ್ಲ.
ಸೀದಾ ದೇವರ ಮನೆಗೆ ಹೋಗಿ ಸಿಪ್ಪೆೆ ಸಹಿತ ತಿನ್ನಲು ಹವಣಿಸುತ್ತಾನೆ. ಅನೇಕರು ‘ನೀವು ಅಜ್ಜಿ ಎಂದರೆ ನಂಬಲು ಕಷ್ಟವಾಗುತ್ತದೆ’
ಎನ್ನುತ್ತಾರೆ. ಅದು ಮನಸಾರೆ ಹೇಳಿದ ಮಾತಿರಬಹುದು. ಇಲ್ಲವೆ ಅಜ್ಜಿ ಎಂದರೆ ನಾನೆಲ್ಲಿ ಬೇಸರ ಮಾಡಿಕೊಳ್ಳುತ್ತೇನೋ ಎಂಬ ಕಾಳಜಿಯೂ ಇರಬಹುದು. ನನ್ನ ಗೆಳತಿಯೊಬ್ಬರು ನೀನು ‘ಕ್ಯೂಟ್ ಅಜ್ಜಿ’ ಎಂದರು. ನಾನು ಅದನ್ನು ಮನಪೂರ್ವಕವಾಗಿ ಒಪ್ಪಿ ‘ಹೌದ್ರಿ ನಾನು ಕ್ಯೂಟ್ ಅಜ್ಜಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ನಾವು ಮಗಳು, ತಂಗಿ, ಪತ್ನಿ, ಸೊಸೆ, ಅತ್ತಿಗೆ, ಅಮ್ಮ, ಸೋದರತ್ತೆ… ಈ ಎಲ್ಲಾ ಪಾತ್ರಗಳನ್ನು ಖುಷಿಯಿಂದ ಒಪ್ಪಿಕೊಂಡಾಗ ಕ್ಯೂಟ್ ಅಜ್ಜಿ ಏಕಾಗಬಾರದು? ಇಂತಹ ದೊಡ್ಡ ಪದವಿಯನ್ನು ಕರುಣಿಸಿದ ನನ್ನ ಮಗಳಿಗೆ ಕೃತಜ್ಞತೆ ಹೇಳಿದರೆ ಔಪಚಾರಿಕವೆನಿಸಬಹುದು. ಆದರೂ ಥ್ಯಾಂಕ್ಸ್ !

Leave a Reply

Your email address will not be published. Required fields are marked *