Tuesday, 9th August 2022

ಕರ್ನಾಟಕದಂತೇ ಆದೀತೇ ಮಹಾ?

ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ಮೈತ್ರಿ ಮೂಲಕ ಆಡಳಿತ ನಡೆಸುತ್ತಿರುವ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟ ಸರಕಾರ ತಲೆ ಕೆಳಗಾಗುವ ಹಂತದಲ್ಲಿದೆ. ಸಾಂಪ್ರದಾಯಿಕವಾಗಿ ಬಹುಕಾಲದ ಮಿತ್ರ ಮತ್ತು ತಾತ್ವಿಕ ವಾಗಿ ಸಹೋದರ ಪಕ್ಷವಾಗಿರುವ ಬಿಜೆಪಿಯ ಸಖ್ಯ ಬಿಟ್ಟು ಎನ್‌ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸಿದ ಶಿವಸೇನೆಗೆ ಬಂಡಾಯದ ಬಿಸಿ ತಾಕಿದೆ.

ಏಕನಾಥ್ ಶಿಂಧೆ ಸಂಗಡಿಗರು ಬಂಡಾಯದ ಬಾವುಟ ಹಾರಿಸಿ ಸಂಚಲನ ಸೃಷ್ಟಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ ಪಕ್ಷದ ಶಾಸಕರ ಒಟ್ಟು ಸಂಖ್ಯೆ 55. ಇವರಲ್ಲಿ ಬರೋಬ್ಬರಿ 44 ಶಾಸಕರು ಏಕನಾಥ್ ಶಿಂಧೆ ಬಣದಲ್ಲಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಸಭೆಗೆ ಗುರುವಾರ ಹಾಜರಾದವರ ಸಂಖ್ಯೆ ಕೇವಲ 11 ಮಾತ್ರ. ಇಲ್ಲಿ ಮೇಲ್ನೋಟಕ್ಕೆ ಉದ್ಧವ್ ಠಾಕ್ರೆ ಜೊತೆಗಿರುವ ಶಾಸಕರು ಬೆರಳೆಣಿಕೆಯಷ್ಟೇ ಕಾಣುತ್ತಾರೆ. ಏಕನಾಥ್ ಶಿಂದೆ ಬಲ ಹೆಚ್ಚಿದಂತೆ ಕಾಣುತ್ತಿರುವುದು ಹೌದು. ಬಲಾಬಲ ಏನೇ ಇದ್ದರೂ ಪಕ್ಷದೊಳಗೆ ಭಿನ್ನಮತ ಎದ್ದರೆ ಮೊದಲು ಪರಿಗಣಿಸಲಾಗುವ ಅಂಶ ಎಂದರೆ ಪಕ್ಷಾಂತರ ನಿಷೇಧದ ಕಾನೂನು. ಏಕನಾಥ್ ಶಿಂದೆ ಮತ್ತವರ ತಂಡದ ನೆತ್ತಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಕತ್ತಿ ಬೀಳುತ್ತದಾ ಎಂಬುದು ಪ್ರಶ್ನೆ.

ರಾಜಕೀಯದಲ್ಲಿ ಶಿಸ್ತು ತರಲೆಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಒಂದು ಪಕ್ಷದ ಒಟ್ಟಾರೆ ಶಾಸಕರ ಸಂಖ್ಯೆಯಲ್ಲಿ ಮೂರನೇ ಎರಡರಷ್ಟು ಶಾಸಕರು ಬಂಡಾಯ ಎದ್ದು ಬೇರೆ ಬಣ ಮಾಡಿಕೊಂಡರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಬಣಕ್ಕೆ ಒಳ್ಳೆಯ ಸಂಖ್ಯೆ ಇದೆ ಎಂಬುದು ಮೇಲ್ನೋಟಕ್ಕೆ ತೋರುತ್ತಿದೆ. ಇದು ನಿಜವೇ ಆದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇವರ ಮೇಲೆ ಜಾರಿ ಮಾಡಲು ಆಗುವುದಿಲ್ಲ.

ಆದರೆ, ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆ ಮಾಡಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ಹಾಗೂ ಶಾಸಕ ರಿಗೆ ಶಿಕ್ಷೆ ವಿಧಿಸುವುದು ಈ ಅಧಿಕಾರ ವಿಧಾಸನಭಾ ಅಧ್ಯಕ್ಷ ಅಥವಾ ಸ್ಪೀಕರ್‌ಗೆ ಇರುತ್ತದೆ. ಸ್ಪೀಕರ್ ನೋಟಿಸ್‌ಗೆ ಉತ್ತರಿಸಿ, ಪಕ್ಷ ತ್ಯಜಿಸಲು ಶಾಸಕರು ಸಕಾರಣ ಕೊಟ್ಟು, ಸ್ಪೀಕರ್‌ಗೆ ಅದು ಸಮಾಧಾನವಾದಲ್ಲಿ ಕಾಯ್ದೆ ಅನ್ವಯ ಮಾಡದೇ ಹೋಗಬಹುದು. ಅದರೆ, ತೃಪ್ತಿಕರ ಉತ್ತರ ಕೊಡದಿದ್ದಲ್ಲಿ ಸ್ಪೀಕರ್ ಶಿಸ್ತಿನ ಕ್ರಮ ಕೈಗೊಳ್ಳಬಹುದು. ಮಹಾರಾಷ್ಟ್ರದಲ್ಲಿ ಸ್ಪೀಕರ್ ಸ್ಥಾನ ಸದ್ಯ ಖಾಲಿ ಇದೆ.

ಕರ್ನಾಟಕದಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ 17 ಶಾಸಕರು ಬಂಡಾಯ ಎದ್ದು, ಆ ಪೈಕಿ 16 ಶಾಸಕರನ್ನು ಅನರ್ಹಗೊಳಿಸ ಲಾಯಿತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆಯಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಕೋರ್ಟ್ ತೀರ್ಪು ಕೊಟ್ಟಿತ್ತು. ಈಗ ಮಹಾರಾಷ್ಟ್ರದಲ್ಲಿ ಇಂಥದ್ದೇ ಬೆಳವಣಿಗೆ ಆದರೂ ಆಗಬಹುದು.