Friday, 2nd December 2022

ದೆಹಲಿ ಗಲ್ಲಿಗಳಲ್ಲಿ ಮಾವಿನ ಘಮ

ಕಿಸಾನ್ ರೈಲ್‌ನಲ್ಲಿ 250 ಟನ್ ಹಣ್ಣು ರವಾನೆ

ಸಂಸದರಿಂದ ಹಸಿರು ನಿಶಾನೆ

ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ

ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಕೋಲಾರದ ಮಾವು ಘಮಘಮಿಸಲಿದ್ದು ಕರೋನಾ ಕಾರ್ಮೋಡದಲ್ಲೂ ರೈತನ ಮುಖದಲ್ಲಿ ಮಂದಹಾಸ ಮೂಡಲಿದೆ.

ಹೌದು, ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರೈತರು ಬೆಳೆದ ಬೆಳೆ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ 2020-21ನೇ ಬಜೆಟ್‌ನಲ್ಲಿ ಘೋಷಣೆ ಆಗಿದ್ದ ಕಿಸಾನ್ ರೈಲ್ ಯೋಜನೆಯನ್ನು ಬಳಸಿ ಕೊಂಡು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ 250 ಟನ್ ಮಾವನ್ನು ದೆಹಲಿಯ ಆದರ್ಶ್ ನಗರಕ್ಕೆ ಸಾಗಣಿಕೆ ಮಾಡುತ್ತಿದ್ದು
ಇದರಿಂದಾಗಿ ರೈತರು ಆರ್ಥಿಕವಾಗಿ ಕೊಂಚ ನಿರಾಳರಾಗಲಿದ್ದಾರೆ.

ರೈತ ಸ್ನೇಹಿ ರೈಲಿಗೆ: ಚಿಂತಾಮಣಿ ತಾಲೂಕಿನ ದೊಡ್ಡನತ್ತ ರೈಲ್ವೆ ನಿಲ್ದಾಣದಲ್ಲಿ ದೇಶದ ಮೊದಲ ಕಿಸಾನ್ ರೈಲ್‌ಗೆ ಶನಿವಾರ ಸಂಸದ ಎಸ್. ಮುನಿಸ್ವಾಮಿ ಹಸಿರು ನಿಶಾನೆ ತೋರಿಸಿದರು. ರೈಲು 32 ಗಂಟೆಗಳಲ್ಲಿ ದೆಹಲಿ ತಲುಪಲಿದ್ದು ಕೆಜಿ ಮಾವಿಗೆ 2.82 ಪೈಸೆ ಸಾಗಾಣಿಕೆ ವೆಚ್ಚ ಬೀಳಲಿದೆ. ರಸ್ತೆ ಮಾರ್ಗದಲ್ಲಿ ಕೆಜಿಯೊಂದಕ್ಕೆ 7 ರಿಂದ 8 ರು. ವೆಚ್ಚವಾಗಲಿದ್ದು ಗಮ್ಯ ತಲುಪಲು ಕನಿಷ್ಠ
4 ದಿನ ಬೇಕಾಗುತ್ತದೆ. ಹೀಗಾಗಿ ಕಿಸಾನ್ ರೈಲ್ ರೈತರಿಗೆ ಸಮಯ ಮತ್ತು ಹಣವನ್ನು ಉಳಿಸುವ ಮೂಲಕ ವರದಾನವಾಗಿದೆ.

ಪ್ರಾಯೋಗಿಕವಾಗಿ ಮಾವಿಗೆ ಕಿಸಾನ್ ರೈಲ್ ಸೌಲಭ್ಯ ಕಲ್ಪಿಸಲಾಗಿದ್ದು ರೈತರ ಪ್ರತಿಕ್ರಿಯೆಯನ್ನು ಅನುಸರಿಸಿ ಟೋಮೆಟೋ, ಈರುಳ್ಳಿ ಮತ್ತಿತರೆ ಕೃಷಿ ಉತ್ಪನ್ನಗಳಿಗೂ ಸೌಲಭ್ಯವನ್ನು ವಿಸ್ತರಣೆ ಮಾಡಲಾಗುವುದು. ಪ್ರತಿ 3 ದಿನಕ್ಕೊಮ್ಮೆ ಕರ್ನಾಟಕದಿಂದ ದೇಶದ ನಾನಾ ಭಾಗಗಳಿಗೆ ಟ್ರೈನ್ ಕಳುಹಿಸುವ ಸಂಕಲ್ಪ ತೊಡಲಾಗಿದೆ.

ಎಕ್ಸ್‌ಪ್ರೆಸ್ ಟ್ರೈನ್ ಮಾದರಿಯಲ್ಲಿ ಕಿಸಾನ್ ರೈಲ್‌ಗೆ ಆದ್ಯತೆ ನೀಡುವಂತೆ ರೈಲ್ವೆ ಸಿಬ್ಬಂದಿಗೆ ಕಟ್ಟಪ್ಪಣೆ ಮಾಡಲಾಗಿದ್ದು ಹೀಗಾಗಿ ಮಾಲು ಸಕಾಲಕ್ಕೆ ಮಾರುಕಟ್ಟೆ ತಲುಪಲಿದೆ. ಕಿಸಾನ್ ರೈಲ್‌ನಲ್ಲಿ ಶೇ.50 ಸಾಗಾಣಿಕಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುವು ದರಿಂದಾಗಿ ರೈತರಿಗೆ ಸಹಾಯ ಆಗುತ್ತದೆ ಎಂದು ಸೌತ್ ವೆಸ್ಟ್ರನ್ ರೈಲ್ವೆಯ ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಷ್ ಹೆಗಡೆ ತಿಳಿಸಿದ್ದಾರೆ.

ಸದ್ದಿಲ್ಲದ ಯೋಜನೆ: ಮುನಿಸ್ವಾಮಿ ಸಾಧನೆ ಕರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗೆ ಸರಳವಾಗಿ ಸಂಸದ ಮುನಿಸ್ವಾಮಿ ಚಾಲನೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ತೋಟಗಾರಿಕೆ ಇಲಾಖೆ ಹಾಗೂ ಮಾವು ಮಂಡಳಿ
ಗಮನಕ್ಕೂ ಬಾರದೆ ಸಂಸದರು ನೇರವಾಗಿ ರೈತರನ್ನು ಸಂಪರ್ಕಿಸುವ ಮೂಲಕ 250 ಟನ್ ಮಾವನ್ನು ಸಂಗ್ರಹಿಸಿ ದೆಹಲಿಗೆ ರವಾನಿಸುವ ಮೂಲಕ ಸಂಘಟನೆ ಮೆರೆದಿದ್ದಾರೆ.

ಕಾರ್ಯಕ್ರಮದ ಕುರಿತಂತೆ ಚಿಕ್ಕಬಳ್ಳಾಪುರ ಡಿಸಿ ಲತಾ ಅವರಿಗೂ ಮಾಹಿತಿ ಇರಲಿಲ್ಲ. ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಕಾರ್ಯಕ್ರಮದಲ್ಲಿದ್ದರೂ ಎಂಪಿಯೊಬ್ಬರೇ ಇಡೀ ಯೋಜನೆಯ ಮೈಲೇಜ್ ಪಡೆದುಕೊಳ್ಳುವ ಮೂಲಕ ಜಾಣ್ಮೆ ಮೆರೆದರು.

ಆಂಧ್ರ ಸರ್ಕಾರ ತೋತಾಪುರಿ ಮಾವಿಗೆ ಕ್ವಿಂಟಾಲ್‌ಗೆ 11 ಸಾವಿರ ರು. ಬೆಲೆ ನಿಗದಿ ಮಾಡಿದ್ದು ಆದರೆ ಸ್ಥಳೀಯವಾಗಿ 6 ಸಾವಿರ
ರು.ಗೆ ಮಾರಾಟ ಆಗುತ್ತಿರುವುದರಿಂದಾಗಿ ಕೋಲಾರ- ಮತ್ತು ಚಿಕ್ಕಬಳ್ಳಾಪುರ ರೈತರ ನಿಯೋಗವನ್ನು ಮುಖ್ಯಮಂತ್ರಿ ಯಡಿಯೂ ರಪ್ಪ ಅವರ ಬಳಿಗೆ ಕರೆದುಕೊಂಡು ಹೋಗಿ ಕರ್ನಾಟಕದಲ್ಲೂ ಮಾವಿಗೆ ಬೆಲೆ ನಿಗದಿ ಮಾಡುವ ಜತೆಗೆ ಸಹಾಯಧನ ಬಿಡುಗಡೆಗೆ ಮನವಿ ಮಾಡಲಾಗುವುದು. ಅಂತೆಯೇ ಮಳೆಗಾಲದಲ್ಲಿ ಚಿಂತಾಮಣಿಯ ಉನಿಕಿಲಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ಕೊಳ್ಳುವ ಮೂಲಕ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಪುರಸಭೆ ಸದಸ್ಯ ನಾಗರಾಜ್ ಅವರು ಮಾಹಿತಿ ನೀಡಿದ್ದು ತಕ್ಷಣ ರೈಲ್ವೆ ಅಧಿಕಾರಿಗಳ ಸಭೆ ನಡೆಸುವ ಮೂಲಕ ಸಮಸ್ಯೆ ನಿವಾರಿಸಲಾಗುತ್ತದೆ.
– ಎಸ್.ಮುನಿಸ್ವಾಮಿ ಸಂಸದ ಕೋಲಾರ