Friday, 24th September 2021

ಮನುಕುಲದ ಆದಿವೈದ್ಯರನ್ನು ರೂಪಿಸಿದ ಪ್ರಾಣಿಗಳು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಕ್ರಿ.ಪೂ.60000 ವರ್ಷಗಳಿಂದ ಇಂದಿನವರೆಗೆ ಜಗತ್ತಿನ ಎಲ್ಲ ಸಂಸ್ಕೃತಿಗಳು ಹಾಗೂ ಬುಡಕಟ್ಟುಗಳು ಅಜ್ಞಾತ ಪ್ರಾಣಿಮೂಲಿಕಾ ತಜ್ಞರು ನಾವು ನಮ್ಮ ಪೂರ್ವ ಸೂರಿಗಳ ಹೆಗಲನ್ನೇರಿ, ಒಂದು ಸಲ ಜೀವ ಜೀವಜಗತ್ತಿನತ್ತ ಪಕ್ಷಿನೋಟವನ್ನು ಹರಿಸಿದರೆ, ಅಲ್ಲಿ ಒಂದು ಜೀವಿಯನ್ನು ಮತ್ತೊಂದು ಜೀವಿಯು ಕೊಂದು ತಿನ್ನುವುದು ಒಂದು ಅಲಿಖಿತ ಧರ್ಮವಾಗಿರುವುದು ಕಂಡುಬರುತ್ತದೆ.

ನಮ್ಮ ಬರಿಗಣ್ಣಿಗೆ ಕಾಣದ ರೋಗಜನಕಗಳು ಸಸ್ಯಗಳು, ಪ್ರಾಣಿಗಳು ಹಾಗೂ ಮನುಷ್ಯರ ಮೇಲೆ ಆಕ್ರಮಣವನ್ನು ಮಾಡಿ ತಾವು ಬದುಕುತ್ತವೆ ಹಾಗೂ ತಮ್ಮ ಸಂತಾನ ವರ್ಧನೆಯನ್ನು ನಡೆಸುತ್ತವೆ. ರೋಗಜನಕಗಳು ತಮ್ಮ ಅಸ್ತಿತ್ವ ಸಂರಕ್ಷಣೆಗಾಗಿ ನಡೆಸುವ ಈ ಹೋರಾಟದಲ್ಲಿ, ಸಸ್ಯಗಳಿಗೂ ಹಾಗೂ ಪ್ರಾಣಿಗಳಿಗೂ ನಾನಾ ರೋಗಗಳು ಬರುತ್ತವೆ. ಈ ರೋಗಜನಕಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಸ್ಯಗಳು ನಾನಾ ರಾಸಾಯನಿಕಗಳನ್ನು ಸಿದ್ಧ ಪಡಿಸಿಕೊಳ್ಳುತ್ತವೆ.

ಉದಾಹರಣೆಗೆ ಪೆನಿಸಿಲ್ಲಿಯಂ ಶಿಲೀಂಧ್ರವು ತನ್ನ ಬಳಿ ಯಾವುದೇ ಬ್ಯಾಕ್ಟೀರಿಯ ಬರಬಾರದು ಎಂದು ಪೆನಿಸಿಲಿನ್ ಎನ್ನುವ ರಾಸಾಯನಿಕವನ್ನು ಸಿದ್ಧಪಡಿಸಿಟ್ಟು ಕೊಂಡು ಆತ್ಮರಕ್ಷಣೆಯನ್ನು ಮಾಡಿಕೊಳ್ಳುತ್ತದೆ. ಶತ್ರುವಿನ ಶತ್ರು ನಮ್ಮ ಮಿತ್ರನಲ್ಲವೆ! ಹಾಗಾಗಿ ಪ್ರಾಣಿಗಳು, ಸಸ್ಯಗಳು ಉತ್ಪಾದಿಸುವ ರಾಸಾಯನಿಕಗಳನ್ನು ತಾವು ಬಳಸಿ ಕೊಂಡು ರೋಗಜನಕಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಕಲೆಯನ್ನು ಕಲಿತವು.

ಮತಿವಂತ ಮಾನವ
ಹೋಮೋ ಸೆಪಿಯನ್ಸ್ (ಮತಿವಂತ ಮಾನವ) ಹೆಸರೇ ಸೂಚಿಸುವ ಹಾಗೆ, ಅಪಾರ ಬುದ್ಧಿಯಿರುವ ಜೀವಿ. ನಮ್ಮ ಪೂರ್ವಜರು ರೋಗಗ್ರಸ್ತ ಪ್ರಾಣಿಗಳು, ತಮ್ಮ ತಮ್ಮ ರೋಗ ರುಜಿನಗಳನ್ನು ಗುಣಪಡಿಸಿಕೊಳ್ಳಲು ಏನು ಮಾಡು ತ್ತವೆ ಎನ್ನುವುದನ್ನು ನಿಕಟವಾಗಿ ಗಮನಿಸಿದರು. ತಮಗೂ ಅಂತಹುದೇ ರೋಗ ಲಕ್ಷಣಗಳು ಕಂಡುಬಂದಾಗ, ಅದೇ ಸಸ್ಯಗಳನ್ನು ತಿಂದರು. ಹಲವು ಸಲ ಜೀವವು ಉಳಿಯಿತು.

ಕೆಲವು ಸಲ ಜೀವವು ಹೋಯಿತು. ಪ್ರಾಣಿಗಳ ವರ್ತನೆಯನ್ನು ಅನುಕರಣೆಯನ್ನು ಮಾಡಿದ್ದು, ನಮ್ಮ ಪೂರ್ವಜರ ಮಾಡಿದ ಬಹು ದೊಡ್ಡ ಬುದ್ಧಿವಂತಿಕೆಯ ಕೆಲಸ ಎನ್ನಬಹುದು. ಈ ಅನುಕರಣೆಯ ಪೂರ್ಣವಾಗಿ ಯಶಸ್ವಿಯಾಗಲು ಸಹಸ್ರಮಾನಗಳು ಬೇಕಾದವು. ಕ್ರಿ.ಪೂ.60000 ವರ್ಷಗಳ ಹಿಂದೆ ಆರಂಭವಾದ ಈ ವೀಕ್ಷಣಾ ಹಾಗೂ ಅನುಭವ ಜ್ಞಾನವು ಸುಮಾರು ಕ್ರಿ.ಪೂ.13000ರವರೆಗೆ ಅವ್ಯಾಹತವಾಗಿ ಮುಂದುವರೆಯಿತು. ಈಗಲೂ ಮುಂದುವರೆಯುತ್ತಿದೆ.

ಪ್ರಾಣಿಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ, ಸೇವಿಸುವ ಗಿಡ ಮೂಲಿಕೆಗಳ ಅಧ್ಯಯನಕ್ಕೆ ಪ್ರಾಣಿ ಔಷಧ ಮೂಲಿಕೆ ವಿಜ್ಞಾನ (ಜ಼ೂಫಾರ್ಮಕಾಗ್ನಸಿ) ಎನ್ನುವ ಹೆಸರನ್ನು ನೀಡಿದ್ದೇವೆ. ಇದು ಗ್ರೀಕ್ ಮೂಲದ ಶಬ್ದ. ಜ಼ೂ ಎಂದರೆ ಪ್ರಾಣಿ. ಫಾರ್ಮಾ ಎಂದರೆ ಔಷಧ. ಗ್ನಸಿ ಎಂದರೆ ತಿಳಿಯುವುದು. ಪ್ರಾಣಿಗಳು ಅನಾರೋಗ್ಯವಾದಾಗ ಸಸ್ಯಗಳನ್ನು, ಮಣ್ಣನ್ನು ಹಾಗೂ ಕೀಟಗಳನ್ನು ತಿನ್ನುತ್ತವೆ ಅಥವ ಅವನ್ನು ತಮ್ಮ ಮೈಮೇಲೆ ಲೇಪಿಸಿಕೊಳ್ಳುತ್ತವೆ. ರೋಗಕಾರಕಗಳ
ಅಥವ ಅವು ಉತ್ಪಾದಿಸುವ ವಿಷಪ್ರಭಾವದಿಂದ ತಾತ್ಕಾಲಿಕ ಶಮನವನ್ನು ಪಡೆಯಲು ಮನೋಕ್ರಿಯಾತ್ಮಕ ಔಷಧಗಳನ್ನು (ಸೈಕೋಆಕ್ಟಿವ್) ಔಷಧಗಳನ್ನೂ ಸೇವಿಸುವ ಪರಿಯು ಕುತೂಹಲಕರವಾಗಿದೆ. (ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಬಯಸುವವರು ಸಿಂಡಿ ಎಂಜೆಲ್ ಎನ್ನುವ ಲೇಖಕಿ ಬರೆದಿರುವ ವೈಲ್ಡ್ ಹೆಲ್ತ್: ಹೌ ಅನಿಮಲ್ಸ್ ಕೀಪ್ ದೆಮ್ ಸೆಲ್ವ್ಸ್ ವೆಲ್ ಅಂಡ್ ವಾಟ್ ವಿ ಕ್ಯನ್ ಲರ್ನ್ ಫ್ರಮ್ ದೆಮ್ ಎನ್ನುವ ಪುಸ್ತಕವನ್ನು ಓದಬಹುದು) ನಾವು ನಮ್ಮ ಮನೆಯಲ್ಲಿ ರುವ ಬೆಕ್ಕು ನಾಯಿಗಳಿಗೆ ಅನಾರೋಗ್ಯವಾದಾಗ ಅವುಗಳ ವರ್ತನೆಯನ್ನು ಗಮನಿಸುವುದು ಒಳಿತು. ಅವು ಮೊದಲು ತಮ್ಮ ದೈನಂದಿನ ಚಟುವಟಿಕೆಯನ್ನು ನಿಲ್ಲಿಸುತ್ತವೆ.

ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹೆಚ್ಚೆಂದರೆ ನೀರು ಕುಡಿಯಬಹುದಷ್ಟೇ! ಆನಂತರ ನಾಯಿ, ಬೆಕ್ಕುಗಳು ಹುಲ್ಲನ್ನು ಜಗಿದು ತಿನ್ನುತ್ತವೆ. ಕಾಡಿನಲ್ಲಿರುವ ಪ್ರಾಣಿಗಳು ತಮ್ಮ ಆರೋಗ್ಯವನ್ನು ಸರಿಪಡಿಸಬಹುದಾದಂತಹ ಗಿಡವನ್ನೋ, ಎಲೆಯನ್ನೋ ಇಲ್ಲವೇ ಮೂಲಿಕೆಯನ್ನೋ ತಿನ್ನುತ್ತವೆ. ಈ ಸಸ್ಯಗಳನ್ನು ತಿಂದ ಮೇಲೆ ಆ ಪ್ರಾಣಿಯು ವಾಂತಿಯನ್ನು ಮಾಡಿಕೊಳ್ಳಬಹುದು ಇಲ್ಲವೇ ಅದಕ್ಕೆ ಭೇದಿಗೆ ಹೋಗಬಹುದು.

ವಾಂತಿ ಅಥವ ಭೇದಿಯ ಮೂಲಕ ಅನಾರೋಗ್ಯವನ್ನು ಉಂಟು ಮಾಡಿರುವ ಆಹಾರ/ಪರೋಪಜೀವಿಯು ಹೊರಗೆ ಬರುತ್ತದೆ. ಇದನ್ನು ಗಮನಿಸಿದ ನಮ್ಮ ಪೂರ್ವಜರು ಲಂಘ ನಂ ಪರಮೌಷಧಂ ಎಂದರು. ಅನಾರೋಗ್ಯವಾದಾಗ ಉಪವಾಸವೇ ಪರಮ ಔಷಧ ಎನ್ನುವುದು ಈ ಮಾತಿನ ಸಾರ. ರೋಗರಕ್ಷಣೆ
ಪ್ರಾಣಿಗಳು, ರೋಗಗಳು ಬಂದಮೇಲೆ ಸ್ವಯಂ ಚಿಕಿತ್ಸೆಯನ್ನು ಮಾಡಿಕೊಳ್ಳುವುದರ ಜತೆಗೆ, ಕೆಲವು ರೋಗಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಸಸ್ಯಗಳನ್ನು ರೋಗರಕ್ಷಕವಾಗಿ (ಪ್ರೊಫೈಲಾಕ್ಸಿಸ್) ಸೇವಿಸುತ್ತವೆ ಎನ್ನುವುದು ಆಶ್ಚರ್ಯ ಹಾಗೂ ಕುತೂಹಲಕರ ವಿಷಯ.

ಚಿಂಪಾಂಜ಼ಿಗಳು ಸುಮಾರು 40 ನಮೂನೆಯ ಗಿಡ ಮರಗಳನ್ನು ವಿವಿಧ ರೋಗಗಳ ಚಿಕಿತ್ಸೆ ಹಾಗೂ ನಿಯಂತ್ರಣದಲ್ಲಿ ಬಳಸುವುದನ್ನು ಗಮನಿಸಿದ್ದೇವೆ. ಚಿಂಪಾಂಜ಼ಿಗಳು ಮನುಷ್ಯನ ನಿಕಟ ಸಂಬಂಧಿಗಳು. ಮನುಷ್ಯ ಹಾಗೂ ಚಿಂಪಾಂಜ಼ಿಗಳ ನಡುವೆ ಶೇ.98.8 ವಂಶವಾಹಿಗಳು (ಜೀನ್ಸ್) ಏಕರೂಪವಾಗಿವೆ. ಶಿಸ್ಟೋಸೋಮ ಎಂಬ ಪರಾವಲಂಬಿ ಚಪ್ಪಟೆ ಹುಳುವು ಮನುಷ್ಯ ಹಾಗೂ ಚಿಂಪಾಂಜ಼ಿಗಳ ಮೂತ್ರಾಶಯದಲ್ಲಿ ಬೀಡುಬಿಟ್ಟು ಮೂತ್ರಾಶಯ ಕ್ಯಾನ್ಸರಿಗೆ
ಕಾರಣವಾಗಬಹುದಾದ ಪರೋಪಜೀವಿ. ಪ್ಲಾಸ್ಮೋಡಿಯಂ ಮಲೇರಿಯವನ್ನು ಉಂಟುಮಾಡುತ್ತದೆ.

ಲೀಶ್ಮೇನಿಯ ಎನ್ನುವ ಸೂಕ್ಷ್ಮಜೀವಿಯು ಕಾಲ-ಅeರ್ ಎನ್ನುವಂತಹ ಮಾರಕ ಚರ್ಮ ಹಾಗೂ ಕರುಳ ಸೋಂಕನ್ನು ಉಂಟುಮಾಡಬಲ್ಲ ಪರಾವಲಂಬಿ ಜೀವಿ. ಚಿಂಪಾಂಜ಼ಿಗಳು ಈ ಮೂರು ನಮೂನೆಯ ಪರವಾಲಂಬಿಗಳ ಕಾಟದಿಂದ ಮುಕ್ತವಾಗಲು ವೆರ್ನೋನಿಯ ಅಮಿಗ್ಡಾಲಿನ ಎನ್ನುವ ಗಿಡದ ಎಲೆಗಳನ್ನು ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತದೆ. ಈ ಗಿಡವು ಚಿಂಪಾಂಜ಼ಿಯ ಸಹಜ ಆಹಾರವಲ್ಲ. ಚಿಂಪಾಂಜ಼ಿಯು ಆರೋಗ್ಯವಾಗಿದ್ದಾಗ ಈ ಗಿಡದ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ಅನಾರೋಗ್ಯ ಪೀಡಿತವಾಗಿರುವ ಸಮಯದಲ್ಲಿ ಈ ಗಿಡವನ್ನು ಹುಡುಕಿಕೊಂಡು ಬಂದು ಎಲೆಯನ್ನು ಮಾತ್ರ ತಿನ್ನುತ್ತದೆ.

ನಮ್ಮ ಕರುಳಿನಲ್ಲಿ ನಾನಾ ರೀತಿಯ ಪರಾವಲಂಬಿ ಕರುಳುಹುಳುಗಳು ವಾಸಿಸುವಂತೆ ಚಿಂಪಾಂಜ಼ಿಯ ಕರುಳಿನಲ್ಲಿ ವಾಸಿಸುತ್ತವೆ. ಮಳೆಗಾಲದಲ್ಲಿ ಈ ಕರುಳು ಹುಳುಗಳ ಕಾಟ ಅಧಿಕ. ಹಾಗಾಗಿ ಚಿಂಪಾಂಜ಼ಿಗಳು ಮಲೆಗಾಲದ ಮೊದಲೇ ಆಸ್ಪೀಲಿಯ ಎನ್ನುವ ಗಿಡದ ಎಲೆಗಳನ್ನು ತಿನ್ನುವುದುಂಟು. ಹುಳುಗಳು ಕರುಳಿನಲ್ಲಿ ದ್ದಾಗಲು ಈ ಎಲೆಯನ್ನು ತಿನ್ನುತ್ತವೆ. ತಿನ್ನುತ್ತವೆ ಎಂದರೆ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯುವುದಿಲ್ಲ. ಬದಲಿಗೆ ಮಕ್ಕಳು ಎಲೆಯನ್ನು ಪೀಪಿ ಮಾಡಲು ಹೇಗೆ ಸುತ್ತುತ್ತಾರೋ ಹಾಗೆ ಸುತ್ತುತ್ತವೆ.

ಒಮ್ಮೆಲೆ 15-35 ಎಲೆಗಳ ಸುರುಳಿಗಳನ್ನು ಸುತ್ತಿ ನುಂಗಿಬಿಡುತ್ತವೆ. ಜೇನ್ ಮಾರಿಸ್ ಗೂಡಾಲ್ ಸುಮಾರು 20 ವರ್ಷಗಳ ಕಾಲ ಆಫ್ರಿಕಾದ ಕಾಡುಗಳಲ್ಲಿ
ಚಿಂಪಾಂಜ಼ಿಗಳ ಜತೆಯಲ್ಲಿ ಏಕಾಂಗಿಯಾಗಿ ಕಳೆದು, ಅವುಗಳ ಬದುಕನ್ನು ನಿಕಟವಾಗಿ ಅಧ್ಯಯನವನ್ನು ಮಾಡಿ ಹೊಸ ಹೊಳಹುಗಳನ್ನು ನೀಡಿರುವುದುಂಟು. ಅನಿಲೀಮ ಏಕ್ವಿನಾಕ್ಟಿಯೇಲ್ ಎನ್ನುವ ಸಸ್ಯದ ಎಲೆಗಳ ಮೇಲೆ ಮುಳ್ಳುಗಳಂತಹ ರೋಮಗಳಿರುತ್ತವೆ. ಮುಟ್ಟಲು ಒಂದು ರೀತಿಯ ಅಂಟು ಅಂಟು! ಮಳೆಗಾಲ ದಲ್ಲಿ ಚಿಂಪಾಂಜ಼ಿಗಳನ್ನು ಕಾಡುವ ಮುಖ್ಯ ಪರೋಪ ಜೀವಿಗಳಲ್ಲಿ ಈಸೋಫೇಗೋಸ್ಟೋಮಮ್ ಸ್ಟಿಫಾನೋಸ್ಟೋಮಮ್ ಎನ್ನುವ ಅನ್ನನಾಳದ ಪರೋಪಜೀವಿ ಹುಳು ಮುಖ್ಯವಾದದ್ದು. ಚಿಂಪಾಂಜ಼ಿಯು ಈ ಗಿಡದ ಎಲೆಗಳನ್ನು ಇಡಿಯಾಗಿ ನುಂಗುತ್ತದೆ. ಅಗೆಯುವುದಿಲ್ಲ. ವಿಜ್ಞಾನಿಗಳು ಚಿಂಪಾಂಜ಼ಿಗಳ ಮಲವನ್ನು ಗಮನಿಸಿ ದಾಗ ಅದರಲ್ಲಿ ಇಡಿಯಾದ ಎಲೆಗಳು ಹಾಗೂ ಹುಳುಗಳು ಬಿದ್ದಿದ್ದವು!

ಪ್ರಸವ: ಪ್ರಸವ ಎನ್ನುವುದು ಮರುಹುಟ್ಟು ಎನ್ನುವುದು ನಮ್ಮ ಅನುಭವಕ್ಕೆ ಬಂದಿರುವ ಸತ್ಯ. ಇದು ಮನುಷ್ಯರಿಗೆ ಮಾತ್ರ ಅನ್ವಯವಾಗಬೇಕಾಗಿಲ್ಲ. ಪ್ರಾಣಿಲೋಕ ದಲ್ಲೂ ಹೆಚ್ಚು ಸತ್ಯವಾದ ಮಾತು. ಮನುಷ್ಯರಲ್ಲಿ ಯಶಸ್ವೀ ಪ್ರಸವಕ್ಕೆ ಮತ್ತೋರ್ವ ಮನುಷ್ಯನು, ವೈದ್ಯನೋ ಇಲ್ಲವೇ ಸೂಲಗಿತ್ತಿ ಯೋ ನೆರವಾಗುವುದುಂಟು. ಆದರೆ ಕಾಡಿನಲ್ಲಿ? ಅದರಲ್ಲೂ ಆಫ್ರಿಕಾ ಆನೆಯಂತಹ (ಲಾಕ್ಸೋಡಾಂಟ ಆಫ್ರಿಕಾನ) ಬೃಹತ್ ಜೀವಿಯು, ಹೆರಲು ಸಿದ್ಧವಾದಾಗ ಯಾರು ಅದಕ್ಕೆ ಹೆರಿಗೆಯನ್ನು ಮಾಡಿಸುತ್ತಾರೆ? ತಾಯಿ ಆನೆಯು ಪ್ರಸವಕಾಲದಲ್ಲಿ ಹೆಬ್ಬೇವು (ಮೀಲಿಯ ಅಜ಼ಡೆರಾಕ್) ಮರದ ತೊಗಟೆಯನ್ನು ತಿನ್ನುತ್ತದೆ.

ಈ ತೊಗಟೆಯು ಪ್ರಸವವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ಕೋಟಿ (ನಾಸುವ ನಾರಿಕ) ಎನ್ನುವುದು ಅಮೆರಿಕದಲ್ಲಿ ವಾಸಿಸುವ ಒಂದು ಸ್ತನಿಯು ತನ್ನ ಮೈಮೇಲೆ ವಾಸಮಾಡುತ್ತಾ ರಕ್ತವನ್ನು ಹೀರುವ ಹೇನು, ಚಿಗಟ, ನುಸಿಗಳನ್ನು ನಿವಾರಿಸಲು ಟ್ರಾಟ್ಟಿನಿಕಿಯ ಆಸ್ಪೆರ ಎನ್ನುವ ಮರದ ತೊಗಟೆ ಯನ್ನು ತನ್ನ ಹರಿತ ಉಗುರುಗಳಿಂದ ಕೆರೆದು, ಆ ರಸವನ್ನು ತನ್ನ ಮೈಗೆ ಹಚ್ಚಿಕೊಳ್ಳುತ್ತದೆ. ಹಂದಿಗಳು ಲಾಡಿಹುಳುಗಳ ಕಾಟದಿಂದ ಮುಕ್ತಿಯನ್ನು ಪಡೆಯಲು ದಂಟುಕಳೆ (ಅಮರಾಂಥಸ್) ಇಲ್ಲವೇ ದಾಳಿಂಬೆ ಗಿಡದ ಬೇರುಗಳನ್ನು ಜಗಿದು ತಿನ್ನುತ್ತವೆ.

ತಪೀರ್, ಆನೆ, ಕೊಲಬಸ್ ಮಂಗ, ಬೆಟ್ಟದ ಗೊರಿಲ್ಲ, ಚಿಂಪಾಂಜ಼ಿಗಳು ಹೊಟ್ಟೆ ಕೆಟ್ಟಾಗ ಜೇಡಿ ಮಣ್ಣನ್ನು ತಿನ್ನುತ್ತವೆ. ಇದರಿಂದ ಬ್ಯಾಕ್ಟೀರಿಯ ಸೋಂಕಿನ
ಕಾರಣದಿಂದ ಆಗುತ್ತಿರುವ ಭೇದಿಯು ನಿಯಂತ್ರಣಕ್ಕೆ ಬರುತ್ತದೆ. ದನಕರುಗಳು ವಿಷಯುಕ್ತ ಆಹಾರವನ್ನು ಸೇವಿಸಿದಾಗ, ಅದನ್ನು ನಿಗ್ರಹಿಸಲು ಹುತ್ತದ ಮಣ್ಣನ್ನು ಗೆದ್ದಲು ಸಮೇತ ತಿನ್ನುತ್ತದೆ. ಇದು ಕರುಳು ಹುಳುಗಳನ್ನು ಹಾಗೂ ಹಣ್ಣುಗಳಲ್ಲಿರಬಹುದಾದ ವಿಷಪದಾರ್ಥಗಳನ್ನು ನಾಶಪಡಿಸುತ್ತವೆ. ಅಮೆರಿಕ, ಆಫ್ರಿಕಾ ಹಾಗೂ ಪಪುವ ನ್ಯೂಗಿನಿಯಲ್ಲಿರುವ ಹಲವು ಗಿಣಿಗಳು ರಂಗೋಲೆ (ಕೆಯೋಲಿನ್) ಅಥವ ಜೇಡಿಮಣ್ಣನ್ನು ತಿನ್ನುತ್ತವೆ. ಈ ಮಣ್ಣು ಗಿಣಿಗಳಿಗೆ ಅಗತ್ಯವಾದ ಖನಿಜಗಳನ್ನು ಒದಗಿಸುವುದರ ಜತೆಗೆ ತಿಂದಿರುವ ಆಹಾರದಲ್ಲಿರುವ ವಿಷ ಪದಾರ್ಥಗಳನ್ನು ತಟಸ್ಥಗೊಳಿಸುತ್ತವೆ.

ಜೀವಜಗತ್ತಿನ ಪ್ರಾಣಿಗಳು, ಹಕ್ಕಿಗಳು, ಕೀಟಗಳು ನಮ್ಮ ಪೂರ್ವಜರಿಗೆ ವೈದ್ಯಕೀಯ ವಿಜ್ಞಾನದ ಪ್ರಾಥಮಿಕ ಪರಿಚಯವನ್ನು ಮಾಡಿಕೊಟ್ಟ ಗುರುಸ್ವರೂಪಿಗಳು. ಇವು ಮನುಕುಲದ ಆದಿವೈದ್ಯರನ್ನು ರೂಪಿಸಿದವು ಎಂದರೆ ಅದು ಅತಿಶಯೋಕ್ತಿಯಾಗಲಾರದು.

Leave a Reply

Your email address will not be published. Required fields are marked *