Monday, 3rd October 2022

ನರ ರಾಕ್ಷಕರ ಮಟ್ಟ ಹಾಕಿದ ಮರ್ದಿನಿ

ನನ್ನ ಪಾತ್ರಕ್ಕೆ ನಾನು ಎಷ್ಟು ಹೊಂದುಕೊಂಡಿದ್ದೆ ಎಂದರೆ ನಾನು ನಿಜವಾದ ಪೊಲೀಸ್ ಅಧಿಕಾರಿಯೇ ಅನ್ನಿಸುತ್ತದೆ. ನಾನು ಪಾತ್ರದ ಗುಂಗಿನಿಂದ ಇನ್ನು ಹೊರಬಂದಿಲ್ಲ.

ಚಂದನವನದಲ್ಲಿ ಮತ್ತೊಂದು ಮಹಿಳಾ ಪ್ರಧಾನ ಕಥೆಯ ಸಿನಿಮಾ, ಮರ್ದಿನಿ ತೆರೆಗೆ ಬಂದಿದೆ. ಮಹಿಳಾ ಪ್ರಧಾನ ಕಥೆ ಎಂದಾ ಕ್ಷಣ ಬಹುತೇಕ ಚಿತ್ರಗಳು ಕಲಾತ್ಮಕವಾಗಿಯೇ ಮೂಡಿಬರುತ್ತವೆ. ಆದರೆ ಮರ್ದಿನಿ ಕಮರ್ಷಿಯಲ್ ಅಂಶಗಳ ಜತೆಗೆ ಮರ್ಡರ್ ಮಿಸ್ಟರಿ ಕಥೆಯನ್ನು ಒಳಗೊಂಡಿದೆ. ಒಂದು ಕೊಲೆಯ ಸುತ್ತ ಚಿತ್ರದ ಕಥೆ ಸಾಗುತ್ತದೆ. ಈ ಚಿತ್ರದ ಬಗ್ಗೆ ನಾಯಕಿ ರಿತನ್ಯಾ ಹೂವಣ್ಣ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿ :ಮರ್ಡರ್ ಮಿಸ್ಟರಿ ಕಥೆಯ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ?
ರಿತನ್ಯಾ : ನಾನು ಮೂಲತಃ ರೂಪದರ್ಶಿ. ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಇದೇ ರೀತಿಯ ಕಥೆಯ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಯಾಗುತ್ತಾನೆ ಎಂದುಕೊಂಡಿರಲಿಲ್ಲ. ನನ್ನ ಅದೃಷ್ಟ ಒಳ್ಳೆಯ ಕಥೆಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದೇನೆ. ಕಥೆಯಲ್ಲಿ ಗಟ್ಟಿತನವಿತ್ತು. ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸ್ಟೋರಿಯೂ ಇತ್ತು. ಹಾಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಮೊದಲ ಚಿತ್ರದಲ್ಲಿಯೇ ಸೂಪರ್ ಕಾಪ್ ಆಗಿ ಮಿಂಚಿದ್ದೇನೆ.

ವಿ.ಸಿ : ಚಿತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು ?
ರಿತನ್ಯಾ: ನಿರ್ದೇಶಕರು ಹೇಳಿದ ಕಥೆ ಕೇಳಿ ತುಂಬಾ ಇಷ್ಟವಾಯಿತು. ಆಗಲೇ ನನ್ನ ಮನ ದಲ್ಲಿ ಸಿದ್ಧತೆ ಆರಂಭಿಸಿದೆ. ನನ್ನ ಪಾತ್ರದ ಬಗ್ಗೆ ಹೇಳಿದಾಗ, ಮನದಲ್ಲಿ ಹೊಸ ಆಸೆ ಮೂಡಿತು. ಮಹಿಳಾ ಪೊಲೀಸ್ ಅಧಿಕಾರಿಗಳ ಕುರಿತ ಚಿತ್ರಗಳನ್ನು ನೋಡಿದೆ. ಮಾಲಾಶ್ರೀ, ಶ್ರಿಶಾಂತಿ, ನಯನಾ ತಾರಾ ಅಭಿನ ಯಿಸಿರುವ ಸಿನಿಮಾಗಳನ್ನು ವೀಕ್ಷಿಸಿದೆ. ಅಲ್ಲದೆ ಒಂದಷ್ಟು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಅಲ್ಲಿನ ಪೊಲೀಸ್ ಅಧಿಕಾರಿ ಗಳಿಂದ ನನ್ನ ಪಾತ್ರಕ್ಕೆ ಪೂರಕವಾದ ವಿಚಾರಗಳನ್ನು ಕಲೆ ಹಾಕಿದೆ.

ಸುಮಾರು ನಾಲ್ಕು ತಿಂಗಳು ಮೆಥಡ್ ಆಕ್ಟಿಂಗ್ ಕಲಿತೆ. ಪ್ರಾಕ್ಟಿಸ್ ಮಾಡುವಾಗ ಪೊಲೀಸ್ ಸಮವಸ್ತ್ರದಲ್ಲಿಯೇ ಇರುತ್ತಿದ್ದೆ. ನನ್ನ ವಾಕಿಂಗ್ ಸ್ಟೈಲ್ ಕೂಡ ಬದಲಾಯಿಸಿಕೊಂಡೆ. ಹಾಗಾಗಿ ಕ್ಯಾಮೆರಾ ಮುಂದೆ ನಿಂತಾಗ, ನಾನು ಪೊಲೀಸ್ ಅಧಿಕಾರಿಯೇ ಎಂದು ಭಾಸವಾಗುತ್ತಿತ್ತು. ಸಿನಿಮಾದಲ್ಲಿ ನಟಿಸಲು ಸುಲಭವಾಯಿತು.

ವಿ.ಸಿ: ಪೊಲೀಸ್ ಅಧಿಕಾರಿಯ ಪಾತ್ರ ಆಯ್ದುಕೊಳ್ಳಲು ಕಾರಣ ?
ರಿತನ್ಯಾ : ನಾನು ಚಿಕ್ಕಂದಿನಲ್ಲಿ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುವಾಗ ಬಲು ಖುಷಿ ಪಡುತ್ತಿದ್ದೆ. ನಾನು ಅವರಂತೆ ಯೇ ಸಿನಿಮಾದಲ್ಲಿ ನಟಿಸಬೇಕು. ಅದು ಪೊಲೀಸ್ ಅಧಿಕಾರಿಯಾಗಿಯೇ ಕಾಣಿಸಿಕೊಳ್ಳಬೇಕು ಎಂಬ ಆಸೆ ಮನದಲ್ಲಿ ಚಿಗುರಿತ್ತು. ಅಂದು ಕಂಡ ಕನಸು ಈಗ ನನಸಾಗಿದೆ. ಹಾಗಾಗಿಯೇ ಈ ಚಿತ್ರದಲ್ಲಿ ನಟಿಸಲು ಸಂತಸದಿಂದಲೇ ಒಪ್ಪಿದೆ.

***

ಪ್ರಮಾಣಿಕ ಪ್ರಯತ್ನಕ್ಕೆ ಸಿಗಲಿದೆ ಫಲ

ಮರ್ದಿನಿ ಮಹಿಳಾ ಪ್ರಧಾನ ಕಥೆಯ ಸಿನಿಮಾ. ಜತೆಗೆ ಸಸ್ಪೆನ್ಸ್, ಮರ್ಡರ್ ಮಿಸ್ಟರಿಯ ಚಿತ್ರ. ಟ್ರೇಲರ್‌ನಲ್ಲಿ ನಾವು ಏನು ಹೇಳಿದ್ದೇವೋ ಅದೆಲ್ಲವೂ ಚಿತ್ರದಲ್ಲಿದೆ. ಒಂದು ಕೊಲೆಯನ್ನು ಮಹಿಳಾ ಪೊಲೀಸ್ ಅಧಿಕಾರಿ ಹೇಗೆ ಭೇಧಿಸುತ್ತಾರೆ ಎಂಬ ರೋಚಕ ಕಥೆ ಚಿತ್ರದಲ್ಲಿದೆ. ಮರ್ಡರ್ ಮಿಸ್ಟರಿ ಎಂದಾಕ್ಷಣ ಅಲ್ಲಿ ಅನಗತ್ಯ ದೃಶ್ಯಗಳಿಲ್ಲ. ಇಡೀ ಕುಟುಂಬ ಸಮೇತ ಕುಳಿತು ನೊಡುವ ಚಿತ್ರ ಇದಾಗಿದೆ.

ಸಮಾಜಕ್ಕೆ ಸಂದೇಶ
ಎಲ್ಲಾ ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿದರೆ ಎಂತಹ ಪ್ರಕರಣವನ್ನಾದರೂ ಭೇದಿಸಬಹುದು ಎಂಬುದನ್ನು ಚಿತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಅದನ್ನು ತೆರೆಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಎಂತಹ ಕೊಲೆಗಾರನಾದರು ಒಂದಾದರೂ ಸಾಕ್ಷ್ಯವನ್ನು ಬಿಟ್ಟಿರುತ್ತಾನೆ. ಅಂತೆಯೇ ಈ ಚಿತ್ರದಲ್ಲಿಯೂ ಬಲವಾದ ಸಾಕ್ಷ್ಯ ವಿರುತ್ತದೆ. ಅದು ಏನು ಎಂಬುದನ್ನು ಚಿತ್ರ ನೋಡಿ ತಿಳಿಯಬೇಕು.ಎನ್ನುತ್ತಾರೆ ನಿರ್ದೇಶಕ ಕಿರಣ್ ಶೆಟ್ಟಿ .

ಕಾಲ್ಪನಿಕತೆಗೆ ನೈಜತೆಯ ಸ್ಪರ್ಶ
ಈ ಹಿಂದೆ ನಡೆದ ಒಂದು ಕೊಲೆಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಕಾಲ್ಪನಿಕತೆಗೆ ನೈಜತೆಯ ಸ್ಪರ್ಶ ನೀಡಿ ತೆರೆಗೆ ತರಲಾಗಿದೆ. ಯಾಕಾಗಿ ಹುಡುಗಿಯ ಕೊಲೆಯಾಯಿತು. ಕೊಲೆಗೆ ಕಾರಣ ಯಾರು, ಕೊಲೆಗಾರನನ್ನು
ಪೊಲೀಸ್ ಅಧಿಕಾರಿ ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದನ್ನು ತೆರೆಯಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ.