Sunday, 17th January 2021

ಮತಾಂತರಗೊಂಡವರನ್ನು ಮನೆಗೆ ಕರೆತರುವ ಕೆಲಸವಾಗಬೇಕಿದೆ

ಅಭಿವ್ಯಕ್ತಿ

ಉಮಾ ಮಹೇಶ ವೈದ್ಯ

ಮತಾಂತರದ ಪಿಡುಗು ಹಲವು ಶತಮಾನಗಳಿಂದ ನಮ್ಮ ದೇಶವನ್ನು ಹಾಗೂ ಸನಾತನ ಧರ್ಮೀಯರನ್ನು ಕಾಡುತ್ತಿದೆ.

ಕೆಲವು ಬಾರಿ ಪ್ರಾಣಕ್ಕೆ ಹೆದರಿ ಮತಾಂತರಗೊಂಡರೆ, ಇನ್ನೂ ಕೆಲವು ಬಾರಿ ಆಸೆ ಆಮಿಷಗಳಿಗೆ ಹಾಗೂ ವೈಯಕ್ತಿಕ ದೌರ್ಬಲ್ಯ ಗಳಿಗೆ ಬಲಿಯಾಗಿ ಮತಾಂತರಗೊಂಡಿರುವುದನ್ನು ಇತಿಹಾಸದುದ್ದಕ್ಕೂ ನಾವು ಕಾಣುತ್ತೇವೆ ಹಾಗೂ ಇಂದಿಗೂ ಕಾಣುತ್ತಿದ್ದೇವೆ. ಮತಾಂತಗೊಂಡವರೆಲ್ಲ, ತಮ್ಮ ಪೂರ್ವ ಮತದ ತತ್ತ್ವಗಳ ಹಾಗೂ ಪಾಲನೆಯ ಆಳ ಉದ್ದಗಲಗಳನ್ನು ಅರಿತು ತಮ್ಮಿಷ್ಟದ ಮತಕ್ಕೆ ಅಥವಾ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನುವ ಪೂರ್ವಭಾವನೆಯನ್ನು ಮಾಡಿಕೊಳ್ಳುವಂತಿಲ್ಲ.

ಜನ್ಮತಃ ಸ್ವಧರ್ಮದ, ಮತದ ಕಿಂಚಿತ್ತು ಅರಿವು ಹೊಂದದೇ, ವಿನಾ ಕಾರಣ ದೂಷಿಸಿ, ಯಾವುದೋ ಪ್ರಲೋಭನೆಗೆ ಒಳಗಾಗಿ
ಪರ ಮತ ಅಥವಾ ಧರ್ಮವನ್ನು ಒಪ್ಪಿಕೊಂಡು, ಅಪ್ಪಿಕೊಂಡ ನಂತರ ಗೊತ್ತಾಗತೊಡಗುತ್ತದೆ, ಎಂಥ ತಪ್ಪನ್ನು ಮಾಡಿದೆ ಎಂದು. ಅರಿಯದೇ ಇರುವ ಆಚರಣೆಗಳು, ತಿಳಿಯಲು ಕಷ್ಟಕರವಾಗಿರುವ ತತ್ತ್ವಗಳು, ಜೀರ್ಣಿಸಿಕೊಳ್ಳಲು ಬಾರದ ನಡುವಳಿಕೆಗಳು ಉಸಿರುಗಟ್ಟುವ ವಾತಾವರಣ ನಿರ್ಮಿಸಿದ ನಂತರ, ಎಲ್ಲವನ್ನೂ ಕಿತ್ತೊಗೆದು ಮರಳಿ ಸ್ವಧರ್ಮಕ್ಕೆ ತನ್ನ
ಮೂಲ ಮತದ ಮನೆಗೆ ಬರಬೇಕೆನ್ನುವವರಿಗೆ ನಿಜಕ್ಕೂ ನಿರಾಸೆ ಕಾದಿದೆ.

ಒಂದು ಬಾರಿ ಮತಾಂತರಗೊಂಡರೆ ಪುನಃ ತನ್ನ ಸ್ವಧರ್ಮಕ್ಕೆ ಅಥವಾ ಮತಕ್ಕೆ ತಿರುಗಿ ಬರಲು ಅವಕಾಶಗಳನ್ನೇ ನೀಡದ ಹಿನ್ನೆಲೆ
ಯಲ್ಲಿ ಅತ್ತ ‘ನ ಘರ್ ಕಾ ನಾ ಘಾಟ ಕಾ’ ಎನ್ನುವ ತ್ರಿಶಂಕು ಮನೋಸ್ಥಿತಿಯಲ್ಲಿ ಜೀವ ಸವೆಸುತ್ತಿದ್ದಾರೆ. ಇಂಥ ಜನರನ್ನು ಮರಳಿ ಮೂಲ ಮನೆಗೆ ಕರೆತರುವ ಹಾಗೂ ಸಾರ್ಥಕ ಬದುಕಿಗೆ ದಾರಿ ಮಾಡಿಕೊಡಲು ಸನಾತನ ಧರ್ಮದ ಧಾರ್ಮಿಕ ಮುಖಂಡರುಗಳು
ಹಾಗೂ ರಾಜಕೀಯ ಮುಖಂಡರುಗಳು ಸೂಕ್ತವಾದ ವೇದಿಕೆ ಹಾಗೂ ದಾರಿಯನ್ನು ಕಲ್ಪಿಸಿಕೊಡುವ ಅಗತ್ಯತೆ ಇದೆ.

ಈ ವಿಷಯಕ್ಕೆ ಪೂರಕವಾಗಿ ನಡೆದ ಒಂದು ಸತ್ಯ ಘಟನೆ ತಮ್ಮ ಗಮನಕ್ಕೆ ತರಲೇಬೇಕು. ಸುಮಾರು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿನ ಮರಾಠಾ ಸಮಾಜದ ಹುಡುಗಿಯೊಬ್ಬಳು ದಿನನಿತ್ಯದ ದುಡಿಮೆಗೆ ಹುಬ್ಬಳ್ಳಿಗೆ ಹೋಗಿ ಬರುತ್ತಿದ್ದಳು. ಅದೇ ಊರಿನ ಅನ್ಯ ಕೋಮಿನ ಹುಡುಗನೊಬ್ಬನ ಪರಿಚಯ ಪ್ರಣಯಕ್ಕೆ ತಿರುಗಿ ಅವರಿಬ್ಬರು ಮದುವೆಯಾದರು. ಮದುವೆಗಾಗಿ ಆ ಹುಡುಗಿ ಆ ಅನ್ಯ ಕೋಮಿನ ಧರ್ಮವನ್ನು ಸ್ವೀಕರಿಸಿ ಮತಾಂತರಗೊಂಡಳು.

ದಾಂಪತ್ಯದ ಫಲವಾಗಿ ಒಂದು ಗಂಡು ಮಗು ಜನಿಸಿತು. ಸಂಸಾರ ಸುಖವಾಗಿದೆ ಎನ್ನುವಷ್ಟರಲ್ಲಿಯೇ ಅಪಘಾತದಲ್ಲಿ ಗಂಡ
ನನ್ನು ಕಳೆದುಕೊಂಡಳು. ಯಾವ ಹುಡುಗನಿಗಾಗಿ ತನ್ನ ಧರ್ಮ ಹಾಗೂ ಮತವನ್ನು ಧಿಕ್ಕರಿಸಿ ಬಂದಿದ್ದಳೋ ಈಗ ಆ ಗಂಡ ತನ್ನೊಂದಿಗಿಲ್ಲ ಆದರೆ ಧರ್ಮಾಂತರದ, ಮತಾಂತರದ ಪರಿಣಾಮವಾಗಿ ಆ ಅನ್ಯ ಕೋಮಿನ ಧರ್ಮಾಚರಣೆಗಳನ್ನು ಕಡ್ಡಾಯ
ವಾಗಿ ಪಾಲಿಸಲೇಬೇಕಾದ ಅನಿವಾರ್ಯತೆ ನಡುವೆ ಅತ್ತೆ ಮಾವ ಮನೆಯಲ್ಲಿ ಇರಬೇಕೆಂದರೆ ತನ್ನ ಏಕೈಕ ಮಗನನ್ನು ಕಿತ್ತುಕೊಂಡು ಈ ಮಗು ನಮ್ಮ ಧರ್ಮಕ್ಕೆ ಸೇರಿದ್ದು, ಮಗುವನ್ನು ಬಿಟ್ಟು ನಿನಗೆ ತಿಳಿದಂತೆ ಮಾಡು ಇಲ್ಲವೇ ಮೈದುನನನ್ನು ಮದುವೆಯಾಗಿ ಮನೆಯಲ್ಲಿರು ಎಂದು ಒತ್ತಾಯಿಸತೊಡಗಿದರು.

ತನ್ನ ಹಿಂದಿನ ಧರ್ಮದಲ್ಲಿ ಮೈದುನ ಅಂದರೆ ಮಗನ ಸಮ ಎಂದು ತಿಳಿದ ಭಾವನೆಗಳಿಗೆ ವಿರುದ್ಧವಾಗಿ ಇಲ್ಲಿ ಪತಿಯ ಸ್ಥಾನ ನೀಡಬೇಕಾದ ಆಚರಣೆಗಳು ಅಪಸವ್ಯಗಳೆನಿಸಿ, ಇಲ್ಲಿರುವುದು ಬೇಡವೆಂದು ತವರು ಮನೆಯ ಆಶ್ರಯ ಕೇಳಿದಳು. ಓಡಿ ಹೋಗಿ
ಮತಾಂತರಗೊಂಡ ಮಗಳು ತವರಿನ ಪಾಲಿಗೆ ಸತ್ತಂತೆ ಎಂಬ ನಿಷ್ಠುರ ಮಾತುಗಳಿಂದ ನೊಂದು ಅತ್ತ ಗಂಡನ ಮನೆಯ ರಕ್ಷಣೆಯಿಲ್ಲ ಇತ್ತ ತವರಿನ ನೆರಳಿಲ್ಲ ಎಂಬ ಅನಾಥ ಭಾವದಲ್ಲಿ ಹೇಗಾದರೂ ಮಾಡಿ ನ್ಯಾಯಾಲಯದ ಮೂಲಕವಾದರೂ ಮಗುವನ್ನು ಪಡೆಯಬೇಕೆಂಬ ಅವಳ ಹೋರಾಟದಲ್ಲಿ ಅವಳ ಪರವಾಗಿ ಯಾರೂ ಇರದೇ ಇದ್ದ ಸಂದರ್ಭದಲ್ಲಿ ಅವಳು ಅಸಹಾಯಕತೆಯಿಂದ ಊಹಿಸಿರದ ಮಾತುಗಳೇ ‘ದಯಟ್ಟು ಮನೆಯ ಬಾಗಿಲ ತೆರೆಯಿರಿ ನಾನು ಮತ್ತೆ ನನ್ನ ಮತಕ್ಕೆ ಮರಳುವೆ, ನೆಮ್ಮದಿಯ ಜೀವನ ಕಾಣಲು ಅವಕಾಶ ಮಾಡಿಕೊಡಿ’ ಎಂಬ ಅಂಗಲಾಚುವ ನುಡಿಗಳು.

ಅವಳನ್ನು ಪುನಃ ಮರಾಠಾ ಸಮಾಜಕ್ಕೆ ಕರೆತರಲು ಅವಕಾಶವಿದೆಯೇ ಎಂದು ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚಿಸ ದಾಗ ಬಂದ ಉತ್ತರ ಸನಾತನ ಧರ್ಮ ಇತರ ಧರ್ಮೀಯರನ್ನು ಅಥವಾ ಮತದವರನ್ನು ತನ್ನ ಒಡಲೊಳಗೆ ಸೇರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿಲ್ಲ, ಜನ್ಮತಃ ಸನಾತನ ಧರ್ಮೀಯನಾಗಿದ್ದು ಮತಾಂತರಗೊಂಡರೆ ಅವನಿಗೆ ಪುನಃ ಮರಳುವ ಅವಕಾಶವೇ ಇಲ್ಲ ಎಂದು.

ವಿಚಿತ್ರವೆಂದರೆ, ಆ ಹುಡುಗಿ ಅನ್ಯ ಕೋಮಿಗೆ ಮತಾಂತರಗೊಂಡಾಗ ಪ್ರತಿಭಟನೆ ಮಾಡದ ಧಾರ್ಮಿಕ ಮುಖಂಡರುಗಳು ಅವಳು ಪುನಃ ತನ್ನ ಮೂಲ ಧರ್ಮ ಹಾಗೂ ಮತಕ್ಕೆ ಮರಳಿ ಬರುತ್ತೇನೆಂದು ಸ್ವ ಖುಷಿಯಿಂದ ಒಪ್ಪಿಕೊಂಡಾಗ ಅದಕ್ಕೆ ತೀವ್ರವಾಗಿ ತಕ ರಾರು ಮಾಡತೊಡಗಿದರು. ಆ ಸಮಯದಲ್ಲಿ ಆ ಮಹಿಳೆ ಕೇಳಿದ ಪ್ರಶ್ನೆ ನಿಜಕ್ಕೂ ಮಾರ್ಮಿಕವಾಗಿತ್ತು.

ತಾನು ಅನ್ಯ ಕೋಮಿಗೆ ಮತಾಂತರಗೊಳ್ಳುತ್ತಿರುವಾಗ ಕೇವಲ ಐದು ಸಾಲುಗಳ ಒಂದು ಪ್ರತಿಜ್ಞೆಯನ್ನು ಅಥವಾ ಬೋಧನೆ ಯನ್ನು ಹೇಳಿಸಿ ತಮ್ಮ ಧರ್ಮಕ್ಕೆ ಮುಕ್ತವಾಗಿ ಪ್ರವೇಶ ಕೊಡುವ ವಿಶಾಲ ಅವಕಾಶ ಸನಾತನ ಧರ್ಮಕ್ಕಿಲ್ಲವಾಯಿತೇ? ಜನ್ಮತಃ ಸನಾತನ ಧರ್ಮಿಯಳಾದ ತಾನು ಕೇವಲ ಕೆಲವು ಸಾಲುಗಳ ಬೋಧನೆಯಿಂದ ಶಾಶ್ವತವಾಗಿ ಸನಾತನ ಧರ್ಮದಿಂದ ಬೇರ್ಪಟ್ಟೆ ಎಂದು ಹೇಗೆ ಭಾವಿಸುತ್ತೀರಿ? ಈ ಪ್ರಶ್ನೆಗಳಿಗೆ ಯಾವುದೇ ರಾಜಕೀಯ ಮುಖಂಡನಿಂದ ಅಥವಾ ಸಮಾಜದ ಹಿರಿಯರಿಂದ ಉತ್ತರವಿರಲಿಲ್ಲ ಎನ್ನುವುದಕ್ಕಿಂತ ಉತ್ತರಿಸಲು ಧೈರ್ಯರಲಿಲ್ಲವೆಂದೇ ಹೇಳಬೇಕು.

ಕೊನೆಗೆ ತಾನೇ ಸ್ವತಃ ಅಂಬಾ ಭವಾನಿ ದೇವಸ್ಥಾನಕ್ಕೆ ಶುಚೀರ್ಭೂತಳಾಗಿ ಹೋಗಿ ಪೂಜೆ ಮಾಡಿ ಹಣೆಗೆ ಕುಂಕುಮ ಇಟ್ಟುಕೊಂಡು ತಾನು ಇಂದಿನಿಂದ ಮರಳಿ ತನ್ನ ಮನೆಗೆ ಬಂದಿದ್ದೇನೆ ಎಂದು ಹೇಳಿದಳು. ಈ ರೀತಿಯ ಮರಳುವಿಕೆ ಎಷ್ಟು ಸಮಂಜಸ ಎನ್ನುವ ವಾದ – ವಿವಾದಗಳಲ್ಲಿ ಸಮಾಜದ ಮುಖಂಡರುಗಳು ಕಾಲಹರಣ ಮಾಡತೊಡಗಿದರೇ ಹೊರತು ಮತಾಂತರದಿಂದ ನೊಂದ
ವ್ಯಕ್ತಿಗಳು ಮರಳಿ ಮನೆಗೆ ಬರಲು ಇಚ್ಛಿಸಿದರೆ ಹೇಗೆ ಸೇರಿಸಿಕೊಳ್ಳಬೇಕು? ಎಂಬುದರ ಬಗ್ಗೆ ಚಿಂತನೆ ಮಾಡಲೇ ಇಲ್ಲವೆಂಬುದೇ ವಿಪರ್ಯಾಸ.

ಕೇವಲ ಹರಿವ ನೀರಿನಲ್ಲಿ ಅಥವಾ ನಿಂತ ನೀರಿನಲ್ಲಿ ಕೆಲವು ಬಾರಿ ಮುಳುಗು ಹಾಕಿಸಿ ಶಿಲುಬೆ ಮುಟ್ಟಿಸಿ, ಅತ್ಯಂತ ಸರಳವಾಗಿ ಕ್ರೈಸ್ತ ಮತಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಒಂದೆಡೆಯಾದರೆ, ಅಲ್ಲಾಹ ಒಬ್ಬನೇ ದೇವರು, ಮಹಮ್ಮದ್ ಪೈಗಂಬರರೇ ಕೊನೆಯ
ಪ್ರವಾದಿಗಳೆಂದು ಒಪ್ಪಿಕೊಳ್ಳುತ್ತೇನೆಂದು ಹೇಳಿ ಕಲ್ಮಾ ಪಠಿಸಿ ಇಸ್ಲಾಂ ಧರ್ಮಕ್ಕೆ ಪ್ರವೇಶ ನೀಡುವ ಸರಳ ವಿಧಾನ ಇನ್ನೊಂದೆಡೆ. ಇದೇ ರೀತಿಯಲ್ಲಿ ಬೌದ್ಧ ಮತಕ್ಕೆ ತೊಂದರೆ ಇಲ್ಲದೇ ಮತಾಂತರಗೊಳ್ಳುವ ಅವಕಾಶಗಳೂ ಇವೆ.

ಇನ್ನೂ ಸರಳವಾಗಿ ಈ ಧರ್ಮಗಳಿಂದ ಅಥವಾ ಮತಗಳಿಂದ ವಿಮುಖನಾಗಿ ಬೇರೆ ಧರ್ಮವನ್ನು ಅಥವಾ ಮತವನ್ನು ಒಪ್ಪಿ
ಕೊಂಡರೂ ಮತ್ತೇ ತಮ್ಮ ಮೂಲ ಧರ್ಮಕ್ಕೆ ಅಥವಾ ಮತಕ್ಕೆ ಅಷ್ಟೇ ಸರಳವಾಗಿ ಮರಳಲು ಮುಕ್ತ ಅವಕಾಶವಿದೆ. ಆದರೆ ಈ ರೀತಿಯ ಮುಕ್ತ ಅವಕಾಶಗಳು ಸನಾತನ ಧರ್ಮದಲ್ಲಿ ಏಕೆ ಇಲ್ಲ? ಜನ್ಮತಃ ಬೇರೇ ಧರ್ಮೀಯರಾಗಿದ್ದು ಅವರಿಗೆ ಪ್ರವೇಶ ನಿರಾ ಕರಣೆ ಒಂದು ಅರ್ಥದಲ್ಲಿ ಸರಿ ಇರಬಹುದು.

ಆದರೆ ಸನಾತನ ಧರ್ಮದಲ್ಲಿಯೇ ಹುಟ್ಟಿ, ಬೆಳೆದು ಯಾವುದೋ ಕಾರಣಕ್ಕೆ ಮತಾಂತರಗೊಂಡವರು ಮರಳಿ ತಮ್ಮ ಮೂಲ ಮತಕ್ಕೆ ಮರಳಲು ಅವಕಾಶ ನೀಡದೇ ಇರುವುದು ನಿಜಕ್ಕೂ ಮಾನವೀಯತೆಯಲ್ಲ. ಇದರ ಪರಿಣಾಮವಾಗಿ ಆ ವ್ಯಕ್ತಿಗಳು ತಮ್ಮ ಆಸೆ ಕೈಗೂಡದೇ ಇದ್ದ ಸೇಡಿನ ಭಾವದಿಂದ ತಮ್ಮ ಮೂಲ ಮತ ಹಾಗೂ ಧರ್ಮವನ್ನು ನಖಶಿಖಾಂತ ದೂಷಿಸ ತೊಡಗುತ್ತಾರೆ. ಹಾಗೆಯೇ ಮಾರಕವಾಗಿ ಪರಿಣಮಿಸುತ್ತಾರೆ. ಇದಕ್ಕೆ ಉದಾಹರಣೆಗಳನ್ನು ಬುದ್ಧಿಜೀವಿಗಳ ಜಗತ್ತಿನಲ್ಲಿ ಸಾಕಷ್ಟು ನೋಡ ಬಹುದು.

ಈ ಹಿನ್ನೆಲೆಯಲ್ಲಿ, ನಮ್ಮ ಧಾರ್ಮಿಕ ಚಿಂತಕರು, ಮಠಾಧೀಶರುಗಳು ಹಾಗೂ ರಾಜಕೀಯ ಮುಖಂಡರು ಪರಿಣಾಮಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳದೇ ಇರುವುದರಿಂದ ದಯಾನಂದ ಸರಸ್ವತಿಯವರು ಆರ್ಯ ಸಮಾಜವನ್ನು ಸ್ಥಾಪಿಸಿದರು. ಆದರೂ ಆರ್ಯ ಸಮಾಜವನ್ನು ಸನಾತನ ಧರ್ಮಿಯರು ಮಾನ್ಯತೆ ನೀಡದೇ ಇದ್ದುದರಿಂದ ಇಂದಿನ ಈ ಎಲ್ಲ ಅಪಸವ್ಯಗಳಿಗೆ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಒಳ ಬರುವ ದ್ವಾರವನ್ನು ಮುಚ್ಚುವುದರಿಂದ ವಿಶಾಲ ತಳಹದಿಯ, ಗಟ್ಟಿ ಬೇರುಗಳನ್ನೊಳಗೊಂಡ ಒಂದು ಧರ್ಮವನ್ನು ಹೊರಗಿನಿಂದ ನೋಡುವ ವ್ಯಕ್ತಿಗಳಿಗೆ ಈ ಧರ್ಮ ಸಂಕುಚಿತ ಮನೋಭಾವದ್ದು ಎಂಬ ಭಾವನೆಯನ್ನು ತಳೆಯುವಂತೆ ಮಾಡುತ್ತದೆ. ಈ ರೀತಿಯ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಈ ಒಳ ಬರುವ ಮಾರ್ಗವನ್ನು ಮುಕ್ತವಾಗಿ ತೆಗೆದಿರಿಸಿ ಹೊರ ಹೋದ ವ್ಯಕ್ತಿಗಳನ್ನು ಮತ್ತೇ ಈ ಸನಾತನ ವೃಕ್ಷದಡಿ ಆಶ್ರಯ ಪಡೆಯುವಂತೆ ಅವಕಾಶ ನಿರ್ಮಾಣ ಮಾಡುವುದು ಇಂದಿನ ಧಾರ್ಮಿಕ ಚಿಂತಕರ ಹಾಗೂ ಮಠಾಧೀಶರುಗಳ ಪ್ರಮುಖ ಕರ್ತವ್ಯವಾಗಬೇಕಾಗಿದೆ. ತನ್ನ ಶರಣು ಬಯಸಿ ಬರುವವರಿಗೆ ಆಶ್ರಯ ನೀಡಿ ರಕ್ಷಿಸುವುದೇ ನಿಜವಾದ ಧರ್ಮವೆಂದು ಹೇಳುವ ಧರ್ಮದಲ್ಲಿ ಪ್ರವೇಶಿಸಲು ಒಂದೇ ಮಾರ್ಗವಿಲ್ಲ, ಕೆಲವು ಆಚರಣೆಗಳು ಹಾಗೂ ನಂಬಿಕೆಗಳನ್ನು ಒಪ್ಪಿಕೊಳ್ಳುವುದರ ಮೂಲಕ ನಮ್ಮ ಜತೆ ಮತ್ತೆ ಸೇರಬಹುದು ಎಂಬುದನ್ನು ಮನದಟ್ಟು ಮಾಡಿ ಕೊಡುವ ಕೆಲಸವಾಗಬೇಕಾಗಿದೆ.

ಈಗಾಗಲೇ ಹಲವು ಧಾರ್ಮಿಕ ಮುಖಂಡರುಗಳು ಈ ಮತಾಂತರದ ಅಪಾಯವನ್ನು ಮನಗಂಡು ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಸೂಕ್ತವಾದ ಕ್ರಮಕೈಗೊಂಡಿದ್ದಾರೆ. ಆದರೆ ಇತರ ಮಠಾಽಶರುಗಳ ಹಾಗೂ ರಾಜಕೀಯ ಇಚ್ಛಾ ಶಕ್ತಿಯ ಬೆಂಬಲವಿಲ್ಲದೇ ಹಲವು ಬಾರಿ ನಿರಾಸೆಯ ನಿಟ್ಟುಸಿರಿನಲ್ಲಿ ಅಧರ್ಮ ತಾಂಡವ ವಾಡತೊಡಗಿದಾಗ ಮತ್ತೇ ಧರ್ಮ ರಕ್ಷಣೆಗೆ ಬರುತ್ತೇನೆಂದು ಹೇಳಿದ
ಭಗವಂತ ಬರುತ್ತಿಲ್ಲವೇಕೆ? ಎಂದು ಮೌನದಲ್ಲಿಯೇ ಪ್ರಶ್ನಿಸುತ್ತಿದ್ದಾರೆ.

ಇದಕ್ಕೆ ಉತ್ತರವನ್ನು ಕಂಡುಕೊಳ್ಳುವ ಹಾಗೂ ಸೂಕ್ತ ಹೆಜ್ಜೆ ಇಡುವ ಕಾಲ ಪಕ್ವವಾಗಿದೆ. ಎಲ್ಲಾ ಧಾರ್ಮಿಕ ಮುಖಂಡರುಗಳು ತಮ್ಮ ಅನುಯಾಯಿಗಳಿಗೆ ಈ ನಿಟ್ಟಿನಡೆ ಕಾರ್ಯೋನ್ಮುಖವಾಗಲು ಸೂಚಿಸುವುದು ಉತ್ತಮ. ಮರಳಿ ಮೂಲ ಮತದ ಮನೆಗೆ ಬರಲಿಚ್ಛಿಸುವವರನ್ನು ಬಹಿರಂಗವಾಗಿ ಅದ್ಧೂರಿಯಾಗಿ ಬರಮಾಡಿಕೊಂಡು ಅವರ ಮನದಲ್ಲಿನ ದ್ವಂದ್ವಗಳಿಗೆ, ಗೊಂದಲ
ಗಳಿಗೆ ಪರಿಹಾರವನ್ನು ನೀಡಿ ಸಂತೈಸಿ ನಿಮ್ಮೊಂದಿಗೆ ನಾವಿದ್ದೇವೆ ಹೆದರಬೇಡಿ ಎಂಬ ಸಾಮಾಜಿಕ ಹಾಗೂ ನೈತಿಕ ಧೈರ್ಯ ತುಂಬುವ ಕೆಲಸವಾಗಬೇಕಾಗಿದೆ.

ಇತರ ಧರ್ಮೀಯರು ಅಥವಾ ಮತದವರು ಸ್ವ- ಸಂತೋಷದಿಂದ ಈ ಧರ್ಮದ ಮಹಾ ಮನೆಯ ಸದಸ್ಯರಾಗಲು ಇಚ್ಛಿಸಿದಲ್ಲಿ ಅವರನ್ನು ಆದರ ಪೂರ್ವಕವಾಗಿ ಕರೆದುಕೊಂಡು ಯಾವುದೇ ಬೇದ – ಭಾವವಿಲ್ಲದೇ ಸಮಾನ ರೀತಿಯಲ್ಲಿ ನೋಡಿಕೊಳ್ಳುವ ಹಾಗೂ ಇತರ ಧರ್ಮಗಳಿಗೂ ಆದರ್ಶವಾಗಿರುವಂತೆ ಆಚರಣೆಗಳನ್ನು ರೂಢಿಸಿಕೊಳ್ಳುವ ಸಮಯ ಸಂದರ್ಭ ಇಂದು ಉಂಟಾಗಿದೆ.

ಈ ಕುರಿತಂತೆ ಜಟಿಲವಾಗಿರುವ ಕೆಲವು ಸಂಪ್ರದಾಯಗಳನ್ನು, ಆಚರಣೆಗಳನ್ನು ಮೂಲ ತತ್ತ್ವಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸರಳೀಕರಿಸುವ ಕೆಲಸವಾಗಬೇಕಾಗಿದೆ. ಅಜ್ಜ ನೆಟ್ಟ ಆಲದ ಮರವೆಂದು ಜೋತು ಬೀಳದೇ ಭವಿಷ್ಯದ ಭವ್ಯತೆಗಾಗಿ ಕೆಲವು ಮಾರ್ಪಾಟುಗಳನ್ನು ಮಾಡಿಕೊಳ್ಳುವುದರಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು ಎನ್ನುವುದನ್ನು ಮನಗಾಣ ಬೇಕಾಗಿದೆ. ಮನುಷ್ಯ ಮೊದಲೇ ಭಾವನಾ ಜೀವಿ, ಯಾವುದೋ ದುರ್ಬಲ ಸಮಯದಲ್ಲಿ ಆತುರದಲ್ಲಿ ಅಥವಾ ಅನಿವಾರ್ಯತೆಯಲ್ಲಿ ತಗೆದುಕೊಂಡ ಕೆಲ ನಿರ್ಧಾರಗಳಿಂದ ಅವನನ್ನು ಶಾಶ್ವತವಾಗಿ ಬಹಿಷ್ಕೃತನನ್ನಾಗಿ ಮಾಡುವುದಿಲ್ಲ.

ಅರಿವು ಮೂಡಿದಂತೆ ತನ್ನ ತಪ್ಪುಗಳಿಂದ ಪ್ರಾಯಶ್ಚಿತ್ತಪಟ್ಟು ಮರಳಿ ತನ್ನ ಮೂಲಕ್ಕೆ ಅಥವಾ ಮನೆಗೆ ಬರುತ್ತೇನೆಂದು ಬಯಸಿ ಬರುವವರಿಗೆ ಬರಮಾಡಿಕೊಳ್ಳುವುದೇ ಮಾನವ ಧರ್ಮದ ಮೊದಲ ತತ್ತ್ವವಲ್ಲವೇ? ಆದ್ದರಿಂದ ಮತಾಂತರಗೊಂಡವರನ್ನು ಮರಳಿ ಮನೆಗೆ ಕರೆತರುವ ಕೆಲಸವಾಗಬೇಕಲ್ಲವೇ?

Leave a Reply

Your email address will not be published. Required fields are marked *