Monday, 30th January 2023

ಮೌಸ್ಮಾಯಿ ಎಂಬ ಭೂಪದರ ಒಳಗೆ…

ಅಲೆಮಾರಿಯ ಡೈರಿ

mehandale100@gmail.com

ಬಹುಶಃ ಮನುಷ್ಯನಿಗೆ ಮನೆಗಳ ಕಲ್ಪನೆ ಬರಲು ಕಾರಣ ಅಲ್ಲಲ್ಲಿ ಎರಡು ಗುಡ್ಡಗಳ ಸಂದುಗಳಲ್ಲಿ ಆಸರೆಯಂಥ ಜಾಗ ಸಿಕ್ಕಿ ಅನಿರೀಕ್ಷಿತವಾಗಿ ಸಂಸಾರ ಎನ್ನುವ ಭಾವಕ್ಕೂ ಪಕ್ಕಾಗಿ, ಹಾಗಿzಗಲೇ ಕೋಶಕಾಂಡಗಳು ಬೆರಗಾಗಿ ಮೊರೆದು ಉತ್ಪತ್ತಿಯ
ಮೂಲಕ್ಕೆ ತಿರುಗಲು ಕಾರಣವಾದದ್ದು ಕಾಲಾನುಕ್ರಮದಲ್ಲಿ ಇದನ್ನೆ ಗುಹೆ ಎಂದು ಕರೆದು ಅಲ್ಲಲ್ಲಿ ಅನುಕೂಲಕರ ಮತ್ತು ತಕ್ಕುದಾದ ಅರೆಗಳನ್ನು ಹುಡುಕಿಕೊಂಡು ಮನುಷ್ಯ ಭೂಮಿಯ ಚಹರೆ ಬದಲಿಸಲು ಯತ್ನಿಸಿದನಲ್ಲ, ಅದಕ್ಕಿಂತಲೂ ಪುರಾತನವಾದ ಪ್ರಕೃತಿಯ ರಚನೆ ಎಂದರೆ ಗುಹೆಗಳೇ.

ಮನುಷ್ಯನಿಗೂ ಮೊದಲು ಪೂರ್ತಿ ಭೂಮಿಯ ಪರಿನಿರ್ಮಾಣದ ಮೊದಲ ಹೊಸ್ತಿಲಲ್ಲಿ ಹುಟ್ಟಿಕೊಂಡಿದ್ದೇ ಗುಹೆಗಳು. ಈಗಲೂ ಜಗತ್ತಿನ ಅತಿ ಹೆಚ್ಚು ಗುಹೆಗಳು, ಎರಡನೆಯ ಅತಿ ಉದ್ದದ ಗುಹೆ ಇರುವುದೆಲ್ಲಿ ಗೊತ್ತೆ? ಜಗತ್ತಿನಲ್ಲಿ ‘ಗುಹೆ ಪ್ರವಾಸೋದ್ಯಮ’ ಎಂದೇನಾ ದರೂ ಇದ್ದಿದ್ದೇ ಆದರೆ ಅದೆಲ್ಲಿ ಗೊತ್ತೆ? ಹೋಗಲಿ ನಿಮಗೆ ಗುಹೆಯಲ್ಲಿ ಬೋಟಿಂಗು, ಶೂಟಿಂಗು ಮತ್ತು ಲೈಟಿಂಗು ಮಾಡಿ ಕೂತು, ದುನಿ ಹಾಕಿಕೊಂಡು ಇದ್ದು ಬರಬೇಕೆ? ಅದಕ್ಕೂ ಸಾಧ್ಯತೆಗಳನ್ನು ಅನ್ವೇಷಿಸಿದ್ದಾರೆ ಗುಹೆಗಳ ಜತೆಗೆ ಎಲ್ಲಿ ಗೊತ್ತೇ? ನಮ್ಮ ದೇಶದ ಮೇಘಾಲಯ ಇವತ್ತು ಗುಹೆಗಳ ತವರೂರು.

ಅನಾಮತ್ತಾಗಿ 1800ಕ್ಕೂ ಹೆಚ್ಚು ಗುಹೆಗಳಿರುವ ಏಕೈಕ ರಾಜ್ಯ ಮತ್ತು ಜಗತ್ತಿನ ಅತಿಹೆಚ್ಚು ಪತ್ತೆಯಾದ, ಪತ್ತೆಯಾಗದೆ ಉಳಿದ ಗುಹೆಗಳ ಸಾಲಿನಲ್ಲಿ ಮೇಘಾಲಯ ಮೊದಲ ಸಾಲಿನಲ್ಲಿದೆ. ಇವತ್ತು ಇಲ್ಲಿ ಪ್ರವಾಸೋದ್ಯಮ ಇದ್ದಿದ್ದೇ ಆದರೆ, ಮಳೆಕಾಡಿನ ಆಕರ್ಷಣೆ ಕಳೆದುಕೊಂಡ ನಂತರವೂ ಉಳಿದಿದ್ದೇನಾದರೂ ಇದ್ದರೆ ಅದಕ್ಕೆ ಕಾರಣ ಗುಹಾಪ್ರವಾಸ.

ಹೌದು. ಚಿರಾಪುಂಜಿಯ ಮಳೆಕಾಡಿನ ಹೊರತಾಗಿ ಮೌಸನ್ರ್ಯಾಮ್ (ಹಿಂದೊಮ್ಮೆ ಈ ಬಗ್ಗೆ ಉಲ್ಲೇಖಿಸಿದ್ದೆ. ಇದನ್ನು ಜಗತ್ತಿನ ಒದ್ದೆ ಮರುಭೂಮಿ ಎನ್ನುತ್ತಾರೆ) ಜಾಗತಿಕವಾಗಿ ಮಳೆ ಬೀಳುವುದೆಲ್ಲ ತನ್ನದೇ ಸೊತ್ತು ಎಂದು ಗುರುತಿಸಿಕೊಂಡಿತಲ್ಲ. ಆಗಲೇ ಜನರ ಗಮನ ಈ ಮೌಸನ್ರ್ಯಾಮ್‌ಗೂ ಮಿಗಿಲಾಗಿ ಡಬಲ್ ಡೆಕ್ಕರ್ ತೂಗುಸೇತುವೆ ಕಡೆಗೂ ಹರಿದಿತ್ತಲ್ಲ. ಅಲ್ಲ ಹಾಗೆ ಜನವಸತಿ ಇಲ್ಲದೆಯೂ ಬಳಕೆಗೆ ಲಭ್ಯವಾಗುತ್ತಿದ್ದ ಕನಿಷ್ಠ ಐದಾರು ದಶಕ ಬೇಡುವ ತೂಗುಸೇತುವೆಗಳು ನೈಜವಾಗಿ ಬೆಳೆದಿದ್ದುವಲ್ಲ, ಅದರ ಹಿಂದೆ ಬಿದ್ದ ಮೇಘಾಲಯ ಪ್ರಾಧಿಕಾರಕ್ಕೆ ದೊರಕಿದ್ದೇ ಈ ಗುಹಾ ಪ್ರವಾಸೋದ್ಯಮ.

ಹಾಗಂತ ಇದೆಲ್ಲ ಆಗಲೇ ಹೊಳೆದದ್ದೇನೆಲ್ಲ. ಕಾಲಕ್ರಮೇಣ ಕೈಕಾಲು ಆಡಿಸಿದಲ್ಲೆಲ್ಲ ಜೈಂತಿಯಾ ಜಿಲ್ಲೆಯ ಪರ್ವತ ಬೆಟ್ಟ ಗಳೆಲ್ಲವೂ ಗುಹೆಯ ಒಡಲೇ ಆದಾಗ. ಎಂದರಲ್ಲಿ ನೈಜವಾಗಿ ನಿರ್ಮಿತವಾಗಿರುವ, ಮನುಷ್ಯ ಸಹಜ ಕುತೂಹಲಕ್ಕೆ ಕಾರಣವಾಗಿ ತೆರೆದುಕೊಳ್ಳಬಹುದಾದ ಈ ಗುಹಾಸಮೂಹಗಳನ್ನು ಮೇಘಾಲಯ ಎಡ್ವೆಂಚರ್ಸ್ ಅಸೋಸಿಯೇಷನ್ ಮತ್ತು ಮೇಘಾಲಯ ಕೇವ್ಸ್ ಅಸೋಸಿಯೇಷನ್ ಇತ್ಯಾದಿಗಳು ಅನ್ವೇಷಣೆಯ ದಾರಿಗೆ ತಂದವು ಮೊದಲ ಬಾರಿಗೆ.

ಆಗ ರಂಗಕ್ಕಿಳಿದಾಗ ದಕ್ಕಿದ ಸಾಲುಸಾಲು ಗುಹೆಗಳು ಒಂದೆರಡಲ್ಲ, ಬರೀ ಬಾಗಿಲವರೆಗೆ ಹೋಗಿ ತಲುಪಿರುವ ಸಂಖ್ಯೆ ಅನಾಮತ್ತು 1600 ಚಿಲ್ರೆ. ಅದರಲ್ಲಿ ಮನುಷ್ಯ ಯಾವುದೇ ಭೀತಿಯಿಲ್ಲದೆ ಅಪಾಯವಿಲ್ಲದೆ ಒಳಹೋಗಿ ಅದ್ಭುತ ಪ್ರಕೃತಿ ರಚನೆಗಳನ್ನು ನೋಡಿ ಬರಬಹುದಾದ ಲೆಕ್ಕಕ್ಕೆ ಸಿಕ್ಕಿರುವ ಈ ಒಳವಲಯದ ಸಂಖ್ಯೆ 980ಕ್ಕೂ ಹೆಚ್ಚು. ಇದೇ ಮುಂದೆ ಸಾಹಸ ಪ್ರವಾಸೋದ್ಯಮಕ್ಕೆ ದಾರಿಯಾಗುವುದರೊಂದಿಗೆ ಜಾಗತಿಕವಾಗಿ ಗುಹೆ ಅನ್ವೇಷಣೆ ಪ್ರಾಧಿಕಾರದ ಸೊತ್ತಾಗಿ ಹೆಚ್ಚಿನವು ಈಗ ಸರಕಾರದ ನಿಗಾವಣೆ ಯಲ್ಲಿವೆ.

ನೆನಪಿರಲಿ ಅನಾಮತ್ತು ಮೈಲುಗಟ್ಟಲೆ ದೂರದವರೆಗೆ ಸಲೀಸಾಗಿ ನಡೆದುಕೊಂಡು ಹೋಗಬಹುದಾದ ಗುಹೆಗಳು ಲೆಕ್ಕದ ಹೊರ ಗಿವೆ. ಇವತ್ತು ಮೇಘಾಲಯ ಖೋರಾ ಕೇವ್ಸ್ ಸರಣಿ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ. 1884ರಲ್ಲಿ ಮೊದಲ ಬಾರಿಗೆ ಇಲ್ಲಿನ ಒಳ ನಾಡಿಗೆ ಕಾಲಿಟ್ಟ ಬ್ರಿಟಿಷ್ ಅಽಕಾರಿ ಎಲ್ಟೀಯೂಲ್ ಸತತವಾಗಿ 7 ದಿನ ಕುದುರೆ ಸವಾರಿ ಮಾಡಿಕೊಂಡು ಬಂದು ನಿಂತಾಗ ಸಿಕ್ಕಿದ್ದು ಮೌವಾಯ್ ಕೇವ್ಸ್ ಸರಣಿ. ಅಲ್ಲಿಂದ ಶುರುವಾಯಿತು ನೋಡಿ ಈ ಹೊಸ ಅವಿಷ್ಕಾರದ ರುಚಿ.

ಅಲ್ಲಿಂದೀಚೆಗೆ ಇವತ್ತಿನವರೆಗೂ ಹೊಸಹೊಸ ಗುಹೆಗಳನ್ನು ಗುರುತಿಸಿ ಅದರ ಅಪಾಯ, ಪ್ರವೇಶ, ಸುರಕ್ಷತೆ, ಆಳ, ಅಗಲ,
ಬಾಯಿಯ ಪ್ರವೇಶಿಕೆಯ ನಿರ್ಧಾರ ಮಾಡಲಾಗುತ್ತಿದೆ. ಕೆಲವು ಗುಹೆಗಳ ಪ್ರವೇಶ ಅಕ್ಷರಶಃ ಬಾವಿಯಲ್ಲಿ ಇಳಿದಂತೆ ಇರುತ್ತದೆ. ಅದನ್ನು ಮೊದಲಿಗೆ ಅಂಥ ಅಪಾಯ ಎದುರಿಸಿ ಒಳಗೆ ಪ್ರವೇಶ ಮಾಡಲೇಬೇಕೆನ್ನುವಷ್ಟು ಅದ್ಭುತತೆ ಇದ್ದರೆ, ಅದಕ್ಕಾಗಿ ಆ ಬಾವಿಯ ಬಾಯನ್ನು ಸರಿಪಡಿಸಿ ಇಳಿಯಲು ಅನುಕೂಲವಾಗುವಂತೆ ಮೆಟಲ್ ರೋಪ್‌ಗಳು ಅಲ್ಲಲ್ಲಿ ಕಾಲೂರಲು ಹಿಡಿ ಮೆಟ್ಟಿಲುಗಳನ್ನು ನಿರ್ಮಿಸಿ ಆಮೇಲೆ ಎಲ್ಲಿಯವರೆಗೆ ಸಾಮಾನ್ಯ ಮಾನವ ಪ್ರವೇಶಕ್ಕೆ ಅನುಕೂಲ ಮತ್ತು ಅಪಾಯರಹಿತ ಮಾಡಲು ಸಾಧ್ಯ ಎಂದು ಲೆಕ್ಕಿಸಲಾಗುತ್ತದೆ.

ಯಾವ ಲೆಕ್ಕದಲ್ಲೂ ಉದುರಿ ಬೀಳದ, ನೆಲ ಕುಸಿಯದ, ಪಕ್ಕದ ಗೋಡೆಗಳು ಅದುರಿ ಅಪಾಯ ಆಗದ, ಶಿಲಾರಚನೆಗಳು ಧಕ್ಕೆ ಯಾಗದ ರೀತಿಯ ಪ್ರವೇಶ, ಬೆಳಕು, ಆಮ್ಲಜನಕ ಪ್ರಮಾಣ, ಆಳ, ಉದ್ದದ ಪರಿಽ, ಇವೆಲ್ಲ ಮಾನದಂಡ ಹಾಗೂ ವ್ಯವಸ್ಥೆಯ ಮೇಲೆ ಒಂದು ಗುಹೆಯ ಸಿದ್ಧತೆ ಮುಗಿಯುತ್ತದೆ. ಮಿನಿಮಮ್ ಮಾದರಿ ಗುಹೆಯ ರೂಪಕ್ಕೆ ಅದರ ಗುಣಲಕ್ಷಣ ಹೊಂದಿಕೆಯಾದ ಮೇಲೆ ಅದಕ್ಕೊಂದು ನಂಬರ್ ಮತ್ತು ಹೆಸರು ಬೀಳುತ್ತದೆ.

ಬರೀ ಪ್ರವಾಸ ಮಾತ್ರವಲ್ಲ ಈ ಕೆಲಸದಲ್ಲೂ ನೀವು ಪಾಲ್ಗೊಳ್ಳಬಹುದು. ನಿರಂತರ ಅನ್ವೇಷಣೆ ಈಗಲೂ ಮೇಘಾಲಯದಲ್ಲಿ ಜಾರಿಯಿದ್ದು ಇನ್ನೂ ಖಾಸಿ ಹಿಲ್ಸ್ ಸರಣಿಯ ಎಣಿಕೆಯೇ ಮುಗಿದಿಲ್ಲ. ಅಷ್ಟೊಂದು ನಿಸರ್ಗ ನಿರ್ಮಿತ ಈ ರೀತಿಯ ವಿಭಿನ್ನ ಮತ್ತು ಅಪರೂಪದ ಗುಹೆಗಳ ಉದ್ದದ ಸರಣಿ ಕೆಲವೊಮ್ಮೆ ಒಂದು ಕಡೆಯಿಂದ ಆರಂಭವಾಗಿ ಇನ್ನೊಂದು ಕಡೆಯಿಂದ ಹೊರಕ್ಕೆ ಬರುವ ಮೂಲಕ ಮುಕ್ತಾಯವಾಗುವುದೂ ಇದೆ.

ನಾನು ಮೌಸ್ಮಾಯಿ ಗುಹೆಯ ಭೇಟಿಯಲ್ಲಿ ಅಗಾಧ ಎತ್ತರದ ಪ್ರವೇಶಿಕೆಯ ಮೂಲಕ ಒಳಬಂದಿದ್ದೆ. ಆದರೆ ನಂತರದಲ್ಲಿ ಅಚಾನಕ್ ಆಗಿ ಬಾಯಿ ಕಿರಿದಾಗಿಸಿಕೊಳ್ಳುವ ಇದು ಒಳಗೆ ನೀರಿನ ನಿರಂತರ ಒರತೆ ಮತ್ತು ಹರಿಯುವಿಕೆಯನ್ನು ಹೊಂದಿದೆ. ತೀರ ಕೆಲವೆಡೆಗೆ ಒಳಗೆ ದಾರಿ ಕುಳಿತು ತೆವಳಿ ಹೋಗುವಷ್ಟು ಕಿರಿದಾಗಿ ಮತ್ತೆ ಅಗಲವಾಗುತ್ತದೆ. ಅಲ್ಲದೆ ಖಂಡಿತ ಎಷ್ಟೇ ಹುಷಾರಿನಿಂದ ಜರುಗುತ್ತಿದ್ದರೂ ಮೊಳಕೈ, ಭುಜ, ತಲೆ ಅಲ್ಲಲ್ಲಿ ಢಿಕ್ಕಿ ಹೊಡೆಯುವುದು ಶತಸ್ಸಿದ್ಧ.

ಪ್ರವೇಶಕ್ಕೂ ಮೊದಲೇ ಈ ಬಗ್ಗೆ ಎಚ್ಚರಿಕೆ ಸಿಕ್ಕಿರುತ್ತದಾದರೂ ನಾವು ಹುಷಾರಾಗುವುದು ಮಾತ್ರ ಒಂದೆರಡು ಬಾರಿ ಸಟಕ್ಕನೆ ತಲೆಗೊ ಭುಜಕ್ಕೊ ಜಪ್ಪಿಕೊಂಡಾಗಲೆ. ಸಂಕೀರ್ಣವಾಗಿ ರಚಿತವಾಗಿರುವ ಇಂಥ ಗುಹೆಯನ್ನು ದರ್ಶಿಸುವಾಗ ಆದಷ್ಟೂ ಯಾವ
ರೀತಿಯ ವಸ್ತುಗಳೂ ಜತೆಗಿರದಿದ್ದರೆ ಉತ್ತಮ. ಕ್ಯಾಮೆರಾ ಹೊರತುಪಡಿಸಿ ಮತ್ತು ಒಂದು ಸಣ್ಣ ಟಾರ್ಚ್ ಬಿಟ್ಟರೆ ಬಾಕಿ ಹೊರ ಗಿಡುವುದೇ ಕ್ಷೇಮ.

ಸಂಪೂರ್ಣ ಸುಣ್ಣದ ಕಲ್ಲಿನ ರಚನೆಗಳನ್ನು ಹೊಂದಿರುವ, ಅಲ್ಲಲ್ಲಿ ಶತಮಾನಗಳಿಂದ ಸೋರಿಕೆಗೆ ಸಿಕ್ಕು ಮೇಲ್ಚಾವಣಿಯಿಂದ ನೇತಾಡುವ ಕಲಾಕೃತಿಯಾಗಿ ರೂಪಗೊಂಡಿರುತ್ತದಲ್ಲ, ಅದಕ್ಕೆಲ್ಲ ವಿನ್ಯಾಸ ಎಂಬುವುದನ್ನು ವಿವರಿಸಲು ಸಾಧ್ಯವಿಲ್ಲ. ಯಾವ ಮಾರ್ವೆಲ್ ಎಂಜಿನಿಯರಿಂಗ್‌ಗೂ ಸವಾಲಾಗಬಲ್ಲ ಈ ನೈಜ ರಚನೆಗಳ ವಿನ್ಯಾಸ ಪ್ರತಿ ಕೋನದಲ್ಲೂ ಅದ್ಭುತವೇ. ಅದರಲ್ಲೂ ಹಾಗೆ ಮೇಲ್ಚಾವಣಿಯಿಂದ ನೆಲದವರೆಗೂ ಬಂದು, ಕ್ರಮೇಣ ಅಲ್ಲ ರಚನೆಗೆ ಅಧಾರ ದೊರಕಿ ಬುಡವೆಲ್ಲ ಅಗಲ ಆಗಿ ಸ್ತಂಭಾ ಕಾರದಲ್ಲೂ, ಅದರ ಮೇಲೆಲ್ಲ ನುಣುಪು ವೃತ್ತಾಕಾರದ ವಿನ್ಯಾಸಭರಿತ ರಚನೆಗಳೂ ಕ್ರಮೇಣ ಮೈದೋರಿರುತ್ತವಲ್ಲ, ಅದರ ಜೌಗು ಮೈ ಸವರುವ ಅನುಭವಕ್ಕೆ ಪಕ್ಕಾಗಲಾದರೂ, ಒಮ್ಮೆ ಸುಮ್ಮನೆ ಮೇಘಾಲಯಕ್ಕೆ ಹೊರಡಬೇಕು ನೀವು.

ಶಿಂಗ್‌ನಿಂದ ೬೦ ಕಿ.ಮೀ. ದೂರದಲ್ಲಿ ಮೌಸ್ಮಾಯಿ ಗುಹೆಗಳ ಮೊದಲ ಸರಣಿ ಆರಂಭವಾಗುತ್ತದೆ. ಆಮೇಲೆ ಹೊರಟಂತೆ ಸಿಕ್ಕಿದ್ದನ್ನೆಲ್ಲ ಪ್ರವೇಶ ಮತ್ತು ಸಮಯ ಹೊಂದಿಸಿಕೊಳ್ಳುವ ನಿಮ್ಮ ಉಮೇದು ಮತ್ತು ಅಭೀಪ್ಸೆಯ ಮೇಲೆ ಎಷ್ಟು ನೋಡುತ್ತೀರಿ ನಿರ್ಧಾರವಾಗುತ್ತದೆ. ನೂರಾರು ಲೆಕ್ಕ ಹೋಗಿ ಸಾವಿರ ಲೆಕ್ಕದಲ್ಲಿ ಗುರುತಿಗೆ ಸಿಕ್ಕಿರುವ, ಗುರುತಿಸದಿರುವ ಇಷ್ಟು ದೊಡ್ಡಮಟ್ಟದ
ರಚನೆಯಲ್ಲಿ ಕೆಲವು ಗುಹೆಗಳು ಒಳಗೊಳಗೆ ಒಂದಕ್ಕೊಂದು ಜೋಡಣೆಯಾಗಿದ್ದರೆ, ಕೆಲವಕ್ಕೆ ಕೇವಲ ಎರಡಡಿ ಬಾಯಿ
ಇದ್ದು ಒಳಗೆ ಎರಡು ಮೂರಲ್ಲ ೨೦ ಕಿ.ಮೀ. ಉದ್ದ ಅಗಾಧತೆ ಸಂದಿವೆ.

ಗುಹೆಯಲ್ಲೂ ಏರ್‌ಬೋಟಿಂಗ್ ಈಗಿನ ಸಾಹಸಮಯ ಹವ್ಯಾಸ. ಹತ್ತಿಪ್ಪತ್ತು ಕಿ.ಮೀ.ನಿಂದ ೨-೩ ಕಿ.ಮೀ. ಉದ್ದದ ಗುಹೆಯಲ್ಲಿ ಅತ್ಯಂತ ಶುದ್ಧ ನೀರಿನಡಿಯ ಚಿತ್ರಣ ಕಾಣುವಷ್ಟು ಚೆಂದದ ನೀರಿನ ಮೇಲೆ ಏರ್ ಬೋಟಿಂಗ್ ಮಾಡಿಸಬಲ್ಲವರಿದ್ದಾರೆ. ಇದಕ್ಕೆಲ್ಲ ನೀವು ಸಮಯ ಇರಿಸಿಕೊಂಡು ಹೋದರೆ ಮಾತ್ರ ಸಾಧ್ಯ. ಇದೆಲ್ಲ ನೋಡುತ್ತಿದ್ದರೆ ದೇವ್ರಾಣೆ ನೀವು ಒಂದು ಕಾಲದ ಖ್ಯಾತ ಚಿತ್ರ ‘ಮೆಕೆನ್ನಾಸ್ ಗೋಲ್ಡ’ ನೆನೆಸಿಕೊಳ್ಳುತ್ತಿರಿ, ಹಿಂದೆಯೆ ನೆನಪಾಗುವುದು ‘ಇಂಡಿಯಾನ ಜೋನ್ಸ್’ ಚಿತ್ರ.

ಅದಕ್ಕಾಗಿ ಎಲ್ಲಾ ತಿರುಗುವ ಬದಲಿಗೆ ಸುಮ್ಮನೆ ಲೈಟುಗಳನ್ನೆತ್ತಿಕೊಂಡು ಹೀರೋಯಿನ್ ಜತೆಗೆ ಇಲ್ಲಿ ಇಳಿದಿದ್ದರೆ ಅದಕ್ಕಿಂತ ಅದ್ಭುತ ಚಿತ್ರ ಮಾಡಿಕೊಳ್ಳುತ್ತಿದ್ದರೇನೋ. ಮೂಲತಃ ಭೂಮಿಯ ಪದರ ಬಾಯ್ಬಿಡುವಾಗ ಉಂಟಾದ ಅಪಾಯರಹಿತ ಬಿರುಕುಗಳೇ ಗುಹೆಗಳಾದುವೇ ಹೊರತಾಗಿ ಇವ್ಯಾವುವೂ ಮಾನವ ನಿರ್ಮಿತವಲ್ಲ. ಪುರಾತನ ಕಾಲದಲ್ಲೂ ಇಂಥದ್ದೇ ಅಡ್ಡ ಒರಗಿದ್ದ ಬಾಯ್ದೆರೆದ ಶಿಲಾಪದರದ ಅಡಿಗೆ ಆಶ್ರಯ ಪಡೆಯುತ್ತಿದ್ದ ಮಾನವ ಕ್ರಮೇಣ ಇವುಗಳನ್ನೆ ಆಶ್ರಯಿಸಿದ. ಹಿಮಾಲಯ ಶ್ರೇಣಿಗೆ ಹತ್ತಿರ ಮತ್ತು ಮೇಲ್ಭಾಗದಲ್ಲಿರುವ ಕಾರಣ ಯಾವಾಗೆಲ್ಲ ಭೂಮಿಯ ಸ್ತರಗಳು ಆಚೀಚೆ ಕದಲುತ್ತವೆಯೋ ಅಗೆಲ್ಲ ಇಂತಹ ರಚನೆಗಳು ಉದ್ಭವವಾಗುತ್ತವೆ.

ಅಪಾಯರಹಿತವಾಗಿದ್ದರೆ ನಾವು ಲಕ್ಕಿ. ತಪ್ಪಿ ನಮ್ಮ ಹುಡುಗಾಟಕ್ಕೆ ಏನಾದರೂ ಆಗಿ ಒಂದು ಪದರ ಹಿಸಿದರೆ ಅವಲಕ್ಕಿ.. ಡೌಟೇ ಬೇಡ. ಅಂದ ಹಾಗೆ, ಬೇರೇನೂ ವಸ್ತುಗಳ ಒಯ್ಯದಿರಿ ಎಂದೇನಲ್ಲ. ಕಾರಣ ಹಾಗೆ ಮೌಸ್ಮಾಯಿ ಗುಹೆ ಹೊಕ್ಕು ಹೊರಬಂದು ತಾಸು ಡ್ರೈವ್ ಮುಗಿದ ಮೇಲೆ ಜೇಬಿಗೆ ಕೈಹಾಕಿ ನೋಡಿಕೊಂಡರೆ ನನ್ನ ಫೇವರಿಟ್ ‘ರೇಬಾನ್’ ಕನ್ನಡಕ ಗುಹೆಯ ಯಾವುದೋ ಸಂದಿನಲ್ಲಿ ಬಿದ್ದು ಹೋಗಿದೆ. ಅರೆಬರೆ ಬೆಳಕಿನ ಸಹವಾಸದಲ್ಲಿ ಇದು ಕಾಮನ್. ಅದಕ್ಕೆ ಜಾಗ್ರತೆ ಇರಲಿ ಎಂದಿದ್ದು. ಅಷ್ಟಕ್ಕೂ ಅಲೆಮಾರಿಯ ಅನುಭವದಲ್ಲಿ ಇದೆಲ್ಲ ಆಗುವಂಥದ್ದೇ ಬಿಡಿ.

error: Content is protected !!