Thursday, 1st December 2022

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ : ಸಚಿವ ಗೋವಿಂದ ಕಾರಜೋಳ

ಹೊಸಪೇಟೆ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಜಾರಿಗೆ ಯಾರ ಅಪ್ಪಣೆಯೂ ಬೇಕಿಲ್ಲ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ರಾಜ್ಯದ ಹಿತಾಸಕ್ತಿ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದರು.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸುವುದಕ್ಕೂ ಮುನ್ನ ವೈಕುಂಠ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇಕೆದಾಟು ಯೋಜನೆ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಈ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಖಾತೆ ಹಂಚಿಕೆಯ ಗೊಂದಲದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲ್ಲ. ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ಖಾತೆ ಬದಲಿಸಬೇಕೆಂದು ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಅವರು ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಗೈರಾಗಿರುವುದರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅದರ ಬಗ್ಗೆ ನಾನೇನೂ ಮಾತನಾಡಲಾರೆ. ಸಿ.ಎಂ‌ ಬಗೆಹರಿಸುತ್ತಾರೆ ಎಂದರು.

ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕ ಬಸವರಾಜ ಧಡೇಸುಗೂರು ಇತರರಿದ್ದರು.

ಜಲಾಶಯಕ್ಕೆ ಬಾಗಿನ ಅರ್ಪಣೆ: ತುಂಗಾಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತುಂಗಾಭದ್ರಾ ಜಲಾಶಯಕ್ಕೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ವಿಶೇಷ ಪೂಜೆ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ‌ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಬಸವರಾಜ ದಡೇಸೂಗುರ, ಪರಣ್ಣ ಮನಳ್ಳಿ, ವೆಂಕಟರಾವ ನಾಡಗೌಡ ಜತೆಗಿದ್ದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸಕಿಶೋರ ಸುರಳ್ಕರ, ಬಳ್ಳಾರಿ/ವಿಜಯನಗರ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ.ಗುಂಗೆ, ಮುಖ್ಯ ಅಭಿಯಂತರ ಕೃಷ್ಣಾಜಿ ಚೌವ್ಹಣ್, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಲ್.ಬಸವರಾಜ್, ತುಂಗಭದ್ರಾ ನಾಲಾ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರವಪಿ.ಬಿ.ಪ್ರಕಾಶ್, ಕಾರ್ಯಪಾಲಕ ಅಭಿಯಂತರ ಕೆ.ಬಿ.ಹೆಚ್.ಶಿವಶಂಕರ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಮತ್ತಿತರರು ಇದ್ದರು.

ನಂತರ ಅವರು ಮುನಿರಾಬಾದ್ ಗೆ ತೆರಳಿ ನೀರಾವರಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಿಂಗ್ ಗೈರು: ವಿಜಯನಗರ ಕ್ಷೇತ್ರ ವ್ಯಾಪ್ತಿಯ ತುಂಗಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಿಸುವ ಕಾರ್ಯ್ರಮಕ್ಕೆ ಸಚಿವ ಆನಂದ್ ಸಿಂಗ್ ಭಾಗವಹಿಸದೆ ಯಲ್ಲಾಪುರಕ್ಕೆ ತೆರಳಿದರು. ಸಿಂಗ್ ‌ಪಯಣ ರಾಜಕೀಯ ವಲಯದಲ್ಲಿ ‌ಚರ್ಚೆಗೆ ಗ್ರಾಸವಾಗಿದೆ.