Monday, 16th May 2022

ಕುಮಾರಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಿಂಡಿಕೇಟ್ ಸದಸ್ಯ ಆಗ್ರಹ

ತುಮಕೂರು: ಸಿಂಡಿಕೇಟ್ ಸದಸ್ಯರು ಕೆಲಸ ಮಾಡಿಕೊಡುವುದಕ್ಕೆ ಲಕ್ಷ ಲಕ್ಷ ಹಣವನ್ನು ಕೇಳುತ್ತಾರೆ ಎಂಬ ಆರೋಪಕ್ಕೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುನೀಲ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ರಾಜಕೀಯ ಲಾಭಕ್ಕಾಗಿ ಇಲ್ಲ ಸಲ್ಲದ ಆರೋಪ ಗಳನ್ನು ಮಾಡಿಕೊಂಡು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸತ್ಯಕ್ಕೆ ದೂರವಾದ ವಿಚಾರವನ್ನು ತಮ್ಮ ರಾಜಕೀಯ ಹಿತಾಸಕ್ತಿ ಹಾಗೂ ಪ್ರಚಾರಕ್ಕಾಗಿ ಮಾಡು ತ್ತಿದ್ದಾರೆ. ಕುಮಾರಸ್ವಾಮಿ ಅವರು ಮಾಡಿರುವ ಆರೋಪವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಶ್ವವಿದ್ಯಾನಿಲಯಗಳಲ್ಲಿ ಪ್ರಸ್ತುತ ಸಿಂಡಿಕೇಟ್ ಸದಸ್ಯರಾಗಿರುವವರು ಶೈಕ್ಷಣಿಕ ಪರಿಸರದಲ್ಲಿ ಕೆಲಸ ಮಾಡಿ, ವಿದ್ಯಾರ್ಥಿ, ಶಿಕ್ಷಕರು ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಾಳಜಿ ಇರುವವರೇ ಆಗಿದ್ದಾರೆ. ನಾನೂ ಸಹ ವಿದ್ಯಾರ್ಥಿ ಹೋರಾಟದ ಹಿನ್ನೆಲೆಯಿಂದಲೇ ಬಂದಿದ್ದು, ಕೊರೊನಾದಂತಹ ಈ ಕಠಿಣ ಸಂದರ್ಭದಲ್ಲಿಯೂ ವಿದ್ಯಾರ್ಥಿ ಸಮುದಾಯಕ್ಕೆ ಯಾವುದೇ ಹೊರೆಯನ್ನು ನೀಡದೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೊಂಚವೂ ಕೊರತೆ ಯಾಗದಂತೆ ಹಲವಾರು ದಿಟ್ಟ ಕ್ರಮಗಳನ್ನ ಅನುಸರಿಸಿ. ವಿಶ್ವವಿದ್ಯಾನಿಲಯದಲ್ಲಿ ಸಮರ್ಪಕವಾದ ಶಿಕ್ಷಣ ವ್ಯವಸ್ಥೆಗೆ ಶ್ರಮಿಸುತ್ತಿದ್ದಾರೆ.

ಸಿಂಡಿಕೇಟ್ ಸದಸ್ಯರು ವಿಶ್ವವಿದ್ಯಾನಿಲಯದ ಗುಣಮಟ್ಟ ಮತ್ತು ಮೌಲ್ಯವರ್ಧನೆಗೆ ಶ್ರಮಿಸುತ್ತಿದ್ದು, ನನ್ನನ್ನೂ ಸೇರಿದಂತೆ ಹಲವು ಸದಸ್ಯರು ತಮ್ಮ ಸ್ವಂತ ಹಣವನ್ನು ಖರ್ಚುಮಾಡಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಯವನ್ನು ಶ್ಲಾಘಿಸುವುದನ್ನ ಬಿಟ್ಟು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಆರೋಪ ಮಾಡುವುದು ಸರಿಯಲ್ಲ.

ಎಚ್ಡಿಕೆ ಮಾಡಿರುವ ಆರೋಪವನ್ನು ಸಾಭೀತುಪಡಿಸಿದರೆ ಆ ಕ್ಷಣವೇ ರಾಜೀನಾಮೆ ನೀಡುವುದಕ್ಕೆ ಸಿದ್ದನಿದ್ದೇನೆ. ವಂಶಾಡಳಿತ ಅಥವಾ ಅಧಿಕಾರಕ್ಕಾಗಿ ಅಂಟಿ ಕೂರುವಂತಹ ಸಂಸ್ಕಾರ ನಮಗೆ ದೊರೆತಿಲ್ಲ. ಈ ರೀತಿಯ ಹಗುರವಾದ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದರೆ ಕಾನೂನು ಹೋರಾಟಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಸಿದ್ದಾರೆ.