Friday, 7th May 2021

ಮಾರಾಮಾರಿ ಪ್ರಕರಣ: ಭದ್ರಾವತಿ ಶಾಸಕನ ಪುತ್ರ ಬಸವರಾಜ್ ಬಂಧನ

ಶಿವಮೊಗ್ಗ: ವಿಧಾನಸೌಧದಲ್ಲೂ ಸದ್ದು ಮಾಡಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ರ ಹಿರಿಯ ಪುತ್ರ ಬಸವರಾಜ್ ರನ್ನು ಕಬಡ್ಡಿ ಪಂದ್ಯಾವಳಿಯ ಪ್ರಶಸ್ತಿ ‌ವಿತರಣೆ ವೇಳೆಯಲ್ಲಿ ಮಾರಾಮಾರಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಸವರಾಜ್ ರನ್ನು ಶನಿವಾರ ಬೆಳಗಿನ ಜಾವ ಬಂಧಿಸಿದ ಭದ್ರಾವತಿ ಪೊಲೀಸರು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ದ್ದಾರೆ. ಜಿಲ್ಲೆಯ ಭದ್ರಾವತಿ ಪಟ್ಟಣದ ಕನಕ ಮಂಟಪ ಮೈದಾನದಲ್ಲಿ ಫೆ.28 ರಂದು ಕಬಡ್ಡಿ ಪಂದ್ಯಾಟದ ವೇಳೆ ಗಲಾಟೆ ನಡೆದಿತ್ತು. ಪಂದ್ಯದ ಪ್ರಶಸ್ತಿ ಸ್ವೀಕರಿಸುವ ವೇಳೆ ಸ್ನೇಹ ಜೀವಿ ಉಮೇಶ್ ಎಂಬವರ ಮಲ್ನಾಡ್ ವಾರಿಯರ್ಸ್ ಹಾಗೂ ಧರ್ಮಪ್ರಸಾದ್ ಎಂಬವರ ಸ್ಟೀಲ್ ಟೈಂ ತಂಡಗಳ ನಡುವೆ ಗಲಾಟೆಯಾಗಿತ್ತು.

ಮಲ್ನಾಡ್ ವಾರಿಯರ್ಸ್ ಫೈನಲ್ ಪಂದ್ಯಾವಳಿಯಲ್ಲಿ ಗೆದ್ದಿದ್ದರೆ, ಸ್ಟೀಲ್ ಟೈಂ ತಂಡ ರನ್ನರ್ ಅಪ್ ಆಗಿತ್ತು. ಆದರೆ ಪ್ರಶಸ್ತಿ ಸ್ವೀಕಾರ ಸಮಾರಂಭದ ವೇಳೆ ಸ್ಟೀಲ್ ಟೈಂ ತಂಡದ ಹುಡುಗನೋರ್ವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ವೇಳೆ ಶಾಸಕ ಸಂಗಮೇಶ್ ಪುತ್ರ ಹಾಗೂ ಬೆಂಬಲಿಗರಿಂದ ಸ್ಟೀಲ್ ಟೈಂ ತಂಡದ ಮೇಲೆ ಹಲ್ಲೆಯಾಗಿತ್ತು ಎನ್ನಲಾಗಿದೆ.

ಪ್ರಕರಣ ದಲ್ಲಿ ಭದ್ರಾವತಿ ಶಾಸಕರ ಪುತ್ರ ಬಸವರಾಜ್ ಎ4 ಆರೋಪಿಯಾಗಿದ್ದಾನೆ. ಗಲಾಟೆ ಸಂಬಂಧ 20 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದುವರೆಗೆ 15ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನೂ ಘಟನೆ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಬಳಿಕ ಆರೋಪಿಗಳು ಪರಾರಿಯಾಗಿದ್ದರು.

Leave a Reply

Your email address will not be published. Required fields are marked *