Friday, 7th May 2021

ಮೋದಿಗಿಂತ ಹಿಂದುಳಿದ ವರ್ಗಗಳ ಧೀಮಂತ ನಾಯಕ ಇನ್ನಾರು?: ಡಿಸಿಎಂ ಕಾರಜೋಳ

ಬೆಂಗಳೂರು: ವಿವೇಚನೆ ಅಥವಾ ಸಾಮಾನ್ಯ ಪರಿಜ್ಞಾನವಿಲ್ಲದೆ ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ದೇಶದ ಪ್ರಧಾನಿ ಯವರನ್ನು ದೂಷಿಸಿ, ಪ್ರಚಾರಗಿಟ್ಟಿಸಲು ಮುಂದಾಗಿದ್ದಾರೆ. ಇದು ದುರದೃಷ್ಟಕರ. ಪ್ರಜ್ಞಾವಂತ ಕನ್ನಡಿಗರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರ ಕುತಂತ್ರ ಮತ್ತು ಸತ್ಯಕ್ಕೆ ದೂರವಾದ ಟೀಕೆಗಳನ್ನು ಗಣನೆಗೆ ತೆಗೆದು ಕೊಳ್ಳುವುದಿಲ್ಲ ಎನ್ನುವ ಖಚಿತ ನಂಬಿಕೆ ನನಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಯಾವುದೇ ಮೇಲ್ಜಾತಿ, ಮೇಲ್ವರ್ಗ, ಉದ್ದಿಮೆ ಅಥವಾ ವಂಶಪಾರಂಪರ್ಯದ ಹಿನ್ನೆಲೆಯಿಂದ ಪ್ರಧಾನಿ ನರೇಂದ್ರಮೋದಿ ಯವರು ಮೇಲೆ ಬಂದಿಲ್ಲ ಎನ್ನುವುದು ದೇಶದ ಜನತೆ ಹಾಗೂ ಕನ್ನಡಿಗರಿಗೆ ಗೊತ್ತು. ಅಧಿಕಾರಕ್ಕಾಗಿ ವಂಶಪಾರಂಪರ್ಯಕ್ಕೆ ದಾಸರಾದ ಕಾಂಗ್ರೆಸ್ ನಾಯಕರು ನರೇಂದ್ರಮೋದಿಜಿಯವರ ದಕ್ಷತೆಯನ್ನಾಗಲಿ, ಕಾರ್ಯದೀಕ್ಷೆಯನ್ನಾಗಲಿ, ತತ್ವಸಿದ್ದಾಂತ ವನ್ನಾಗಲಿ ತಿಳಿದುಕೊಳ್ಳಲೇ ಇಲ್ಲ. ಈ ಮಾತು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಇವರೇ ಮೊದಲಾದ ಎಲ್ಲಾ ನಾಯಕರಿಗೂ ಅನ್ವಯಿಸುತ್ತದೆ.

2001 ರವರೆಗೆ ಕೇವಲ ಒಬ್ಬ ಸಾಧಾರಣ ಭಾಜಪ ಕಾರ್ಯಕರ್ತನಾಗಿ ಸೇವೆಸಲ್ಲಿಸಿದ ಹೆಗ್ಗಳಿಕೆ ಮೋದಿಯವರಿಗಿದೆ. ಸ್ವಂತ ಪ್ರತಿಭೆ, ಪರಿಶ್ರಮ, ಸೇವೆ ಮತ್ತು ಸಾಧನೆಯಿಂದ ಗುಜರಾತ್‍ ರಾಜ್ಯದ ಮುಖ್ಯಮಂತ್ರಿಯಾಗಿ ನಂತರ ಪ್ರಧಾನಮಂತ್ರಿಯಾಗಿ ದೇಶದ ಸರ್ವತೋಮುಖ ಏಳಿಗೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಮಹಾನ್ ಜನನಾಯಕ ನರೇಂದ್ರಮೋದಿ. ಮೋದಿಯವರ ಸೇವೆ ಚರಿತ್ರಾರ್ಹ- ವಿಶೇಷವಾಗಿ ಶೋಷಿತವರ್ಗದ ಜನರ ಏಳಿಗೆಗಾಗಿ ದುಡಿಯುತ್ತಿರುವ ರಾಷ್ಟ್ರಸೇವಕರು ನರೇಂದ್ರಮೋದಿ. ಭಾರತೀಯ ಜನತಾಪಕ್ಷವಷ್ಟೇ ಅಲ್ಲದೇ ದೇಶದ ಎಲ್ಲಾ ರಾಜಕೀಯ ಪಕ್ಷಗಳು ನರೇಂದ್ರಮೋದಿಯವರ ಬಗೆಗೆ ಹೆಮ್ಮೆ ಹೊಂದಿರು ವುದು ಸಹಜವಾಗಿದೆ.

ಕಾಂಗ್ರೆಸ್ ನಾಯಕರಿಗೆ ಶ್ರೀ ನರೇಂದ್ರಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಬಡಜನರು, ಶೋಷಿತ ವರ್ಗಗಳ ಮತ್ತು ದೀನದಲಿತರ ಸಲುವಾಗಿ ಅನುಷ್ಠಾನಕ್ಕೆ ತಂದ “ಗುಜರಾತ್ ಮಾದರಿ” ಆಡಳಿತ ಸಹಿಸದಂತಾಗಿದೆ. 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾಜಪ ಪಕ್ಷ ಮತ್ತು ಶ್ರೀ ನರೇಂದ್ರಮೋದಿಯವರು ದೇಶದ ಮಹಾಜನತೆಯ ಆಶೀರ್ವಾದ ಗಳಿಸಲು ಗುಜರಾತ್ ಮಾದರಿ ದಾರಿದೀಪವಾಯಿತು ಎನ್ನುವುದನ್ನೂ ಕಾಂಗ್ರೆಸ್ ನಾಯಕರು ಮರೆಯಬಾರದು.

ಮೋದಿಯವರೆಂದೂ ತಮ್ಮ ಜಾತಿ ಹೆಸರನ್ನಾಗಲಿ, ಸಂಕೇತಗಳನ್ನಾಗಲಿ ಎಂದೂ ಹೇಳಿಕೊಳ್ಳದಿರುವುದು ಮತ್ತು ಮೊದಲು ಮುಖ್ಯಮಂತ್ರಿ ಹಾಗೂ ತದನಂತರ ಪ್ರಧಾನಮಂತ್ರಿಯಾಗಿ ಸತತವಾಗಿ 20 ವರ್ಷಗಳ ಕಾಲ ನಂಬರ್ ಒಂದನೇ ಸ್ಥಾನದಲ್ಲಿಯೇ ಮುಂದುವರಿದಿರುವುದು ಭಾರತೀಯ ಜನತಾಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವ ಮತ್ತು ಸಹಜಪ್ರತಿಭೆ ಹಾಗೂ ಸಾಮರ್ಥ್ಯವಿರುವುದನ್ನು ನಾಯಕತ್ವಕ್ಕೆ ಉತ್ತೇಜಿಸುವ ರಾಜಕೀಯ ಸಂಸ್ಕೃತಿಯೇ ಕಾರಣ ಎಂದು ನಮ್ಮ ಎದುರಾಳಿಗಳೂ ಒಪ್ಪಲೇಬೇಕಿದೆ.

ತಮ್ಮ ಸುಧೀರ್ಘ ಅಧಿಕಾರಾವಧಿಯಲ್ಲಿ ಯಾವತ್ತೂ ತಮ್ಮ ವ್ಯಕ್ತಿತ್ವಕ್ಕೆ ಜಾತೀಯತೆ, ಸ್ವಜನಪಕ್ಷಪಾತ, ಕುಟುಂಬವ್ಯಾಮೋಹ ಮತ್ತು ಭ್ರಷ್ಠಾಚಾರದ ಕಳಂಕ ಅಂಟದಂತೆ ಕಠೋರವಾದ ಶಿಸ್ತನ್ನು ರೂಡಿಸಿಕೊಂಡು ಬಂದಿರುವುದರಿಂದಲೇ ಈ ದೇಶದ ಜನ ಅದರಲ್ಲೂ ವಿಶೇಷವಾಗಿ ಎಲ್ಲಾ ಜಾತಿ-ಧರ್ಮಗಳ ಜನಸಾಮಾನ್ಯರು ಶ್ರೀ ನರೇಂದ್ರಮೋದಿಜಿಯವರಲ್ಲಿ ನಂಬಿಕೆ, ವಿಶ್ವಾಸ ವಿರಿಸಿಕೊಳ್ಳಲು ಸಾಧ್ಯವಾಯಿತೇ ಹೊರತು ಪ್ರತಿಪಕ್ಷಗಳು ಹೇಳುವಂತೆ ಮಾಧ್ಯಮಗಳ ಪ್ರಚಾರದ ಭರಾಟೆಯಿಂದೇನಲ್ಲ.

ದಿನನಿತ್ಯ ಶ್ರೀ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸುತ್ತ, ಕೀಳು ಮಾತುಗಳಲ್ಲಿ ನಿಂದಿಸುತ್ತ, ಅವಮಾನಿಸುತ್ತ ಸಾಗಿರುವ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ನಾಯಕರು ತನ್ಮೂಲಕ ತಮ್ಮನ್ನು ತಾವೇ ಜನತೆಯ ಕಣ್ಣಲ್ಲಿ ಸಣ್ಣವರನ್ನಾಗಿ ಮಾಡಿ ಕೊಳ್ಳುತ್ತಿದ್ದಾರೆಯೇ ಹೊರತು, ಅವರುಗಳ ಇಂತಹ ಟೀಕೆ-ಟಿಪ್ಪಣಿಗಳಿಂದ ಶ್ರೀ ಮೋದಿಯವರ ಜನಪ್ರೀಯತೆಯಲ್ಲೇನೂ ವ್ಯತ್ಯಾಸವಾಗುವುದಿಲ್ಲ.

ಮೋದಿಯವನ್ನು ಸರ್ವಾಧಿಕಾರಿ ಎಂದೂ, ಭಾಜಪ ಪಕ್ಷದ ಫ್ಯಾಸಿಸ್ಟ್ ಎಂದು ಟೀಕಿಸುವ ನಾಯಕರು ಹಾಗೂ ಒಂದು ವರ್ಗದ ಬುದ್ದಿಜೀವಿಗಳು ಯಾಕೆ ಕಾಂಗ್ರೆಸ್ ಪಕ್ಷ ರಾಜಕೀಯ ಸಂಸ್ಕೃತಿಯನ್ನೇಕೆ ಪ್ರಶ್ನಿಸುತ್ತಿಲ್ಲ? ವ್ಯಕ್ತಿಪೂಜೆ, ಭಟ್ಟಂಗಿತನ ಮತ್ತು ಗುಲಾಮ ನಿಷ್ಠೆ ತೋರುವ ಕಾಂಗ್ರೆಸ್ ನಾಯಕರು ಯಾಕೆ ತಮ್ಮ ರಾಷ್ಟ್ರೀಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೆರಿಟ್ ಆಧರಿಸಿದ ಚುನಾವಣೆಯೂ ಇಲ್ಲ, ಆಯ್ಕೆ ಪ್ರಕ್ರಿಯೆಯೂ ಇಲ್ಲ ಎಂಬ ಅಸಂಗತ ನಾಟಕ ಕುರಿತು ಏನು ಹೇಳುತ್ತಾರೆ? ಅಹಿಂದ, ಅಹಿಂದೇತರ ಎಂಬ ಮಂತ್ರ ಪಠಿಸುತ್ತಿರುವ ಶ್ರೀ ಸಿದ್ದರಾಮಯ್ಯನವರನ್ನೇಕೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರಲ್ಲ?  ಮಲ್ಲಿಕಾರ್ಜುನ ಖರ್ಗೆಯವರನ್ನೇಕೆ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸುತ್ತಿಲ್ಲ? ಎಂದು ಪ್ರಶ್ನಿಸಿದರು.

 

Leave a Reply

Your email address will not be published. Required fields are marked *