Tuesday, 27th October 2020

ಬ್ರಿಟಿಷರ ವಿರುದ್ದ ಹೋರಾಟ ಸನ್ಯಾಸಿ ಆಂದೋಲನ

ಡಾ.ಜಯಂತಿ ಮನೋಹ‌ರ್‌

ನಮ್ಮ ದೇಶದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವುದಕ್ಕಿಂತ ಸುಮಾರು ಒಂದು ಶತಮಾನದ ಮೊದಲು, ಬ್ರಿಟಿಷರ ವಿರುದ್ದ ಸನ್ಯಾಸಿಗಳ ಪಡೆಯೊಂದು ಹೋರಾಟ ನಡೆಸಿತ್ತು. ವ್ಯಾಪಾರಿಗಳಾಗಿದ್ದ ಈಸ್ಟ್ ಇಂಡಿಯಾ ಕಂಪೆನಿ ಯ ಅಧಿಕಾರಿಗಳು ನಮ್ಮ ದೇಶದ ಅಮಾಯಕರ ಮೇಲೆ ನಾನಾ ರೀತಿಯ ದಂಡ, ಶುಲ್ಕ, ಕರ ವಿಧಿಸಿ, ಹಣವನ್ನು ಸಂಗ್ರ ಹಿಸಿ ತಮ್ಮ ದೇಶಕ್ಕೆ ಸಾಗಿಸು ತ್ತಿದ್ದರು. ಇದರಿಂದ ವಿಹ್ವಲಗೊಂಡ ಜನರ ಪರಿತಾಪವನ್ನು ಕಂಡು, ಅಂದಿನ ಸಮಾಜ ದಲ್ಲಿ ಪ್ರಮುಖ ಸ್ಥಾನಮಾನ, ಗೌರವ ಪಡೆದಿದ್ದ ಸನ್ಯಾಸಿಗಳು ಜನರ ಸಹಾಯಕ್ಕೆ ಧಾವಿಸಿದರು. ಕೊಲ್ಕೊತ್ತಾವನ್ನು ಕೇಂದ್ರವನ್ನಾಗಿಸಿಕೊಂಡು, ಬಂಗಾಳ ಪ್ರಾಂತ್ಯದಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರ ಬಂಟರನ್ನು ಎದುರಿಸಿ, ಹೋರಾಡಿದರು. ನಾಲ್ಕು ದಶಕಗಳ ಕಾಲ ನಡೆದ ಈ ಹೋರಾಟವನ್ನು ಕಂಪೆನಿಯವರು ಬಗ್ಗು ಬಡಿದದ್ದು ನಿಜವಾ ದರೂ, ಆ ಹೋರಾಟವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿಯನ್ನು ನೀಡಿದ ವಿಚಾರ ವಿಶಿಷ್ಟ ಎನಿಸು ತ್ತದೆ. ಪರಂಗಿ ಜನರ ವಿರುದ್ದ ಸಿಡಿದೆದ್ದ ಸನ್ಯಾಸಿಗಳ ಹೋರಾಟದ ಇತಿಹಾಸವು ಒಂದು ಕುತೂಹಲಕಾರಿ ಅಧ್ಯಾಯ.

ಆಂದೋಲನಗಳು ಇಂದು ಸಾಮಾನ್ಯ ಸಂಗತಿ. ಆದರೆ ಸನ್ಯಾಸಿಗಳಿಂದ ಆಂದೋಲನ ಎಂದರೆ ಹುಬ್ಬೇರುತ್ತದೆ. ಇದು ಇಂದಿನ ತಲೆಮಾರಿನವರಿಗೆ ಸುಲಭವಾಗಿ ಅರ್ಥವಾಗದ ವಿಚಾರ. 250 ವರ್ಷಗಳ ಹಿಂದೆ ನಮ್ಮ ರಾಷ್ಟ್ರದಲ್ಲಿ ಹೊತ್ತಿದ ಕಿಡಿ  ದಾವಾನಲ ವಾಗಿ ಈಸ್ಟ್‌ ಇಂಡಿಯಾ ಕಂಪನಿಯ ಗರ್ವವನ್ನು ಬಗ್ಗುಬಡಿದ ಇತಿಹಾಸವೊಂದನ್ನು ಬಿ.ಪಿ.ಪ್ರೇಮಕುಮಾರ್ ರಚಿಸಿದ ಕೃತಿ ‘ಸನ್ಯಾಸಿ ಆಂದೋಲನ’ ನಮ್ಮ ಮುಂದೆ ತೆರೆದಿಡುತ್ತದೆ. ಭಾರತೀಯ ಚಿಂತನೆಯಲ್ಲಿ ಅಧ್ಯಾತ್ಮ ಜ್ಞಾನಕ್ಕೆ ಒತ್ತು ಕೊಟ್ಟಂತೆಯೇ, ಈ ಲೋಕದಲ್ಲಿ ನೂರು ವರ್ಷ ಆನಂದದಿಂದ ಸಾರ್ಥಕವಾಗಿ ಬಾಳುವ ಆಶಯವು ಕಾಣುತ್ತದೆ.

ವೇದಮಂತ್ರಗಳಲ್ಲಿ, ಋಷಿಗಳು ‘ಪಶ್ಯೇಮ ಶರದಃ ಶತಮ್ ಎನ್ನುವಂತೆಯೇ ಅದೀನಸ್ಯಾಮ ಶರದಃ ಶತಮ್ – ದೀನರಾಗದೆ –
ಅವಮಾನವನ್ನು ಸಹಿಸದೆ ನೂರು ವರುಷ ಬಾಳೋಣ’ ಎನ್ನುತ್ತಾರೆ. ಎಂದರೆ, ದಾಸ್ಯವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ.
ಸನ್ಯಾಸಿಗಳೆಂದರೆ ಯಾರು? ಈ ಹೊತ್ತಿಗೆಯ ಪ್ರಸ್ತಾವನೆಯಲ್ಲಿ ಎಸ್.ಆರ್.ರಾಮಸ್ವಾಮಿಯವರು ಕ್ರಿ.ಪೂ.6 ನೇ ಶತಮಾನ ದಿಂದಲೇ ಕಾಣಸಿಗುವ ಸನ್ಯಾಸಿ ಪರಂಪರೆಯನ್ನು ಗುರುತಿಸುತ್ತಾರೆ.

ಬಹಳ ಹಿಂದಿನ ಕಾಲದಿಂದಲೂ ರಾಜರು ಧೀರ ಯೋಗಿ ತಂಡಗಳನ್ನು ರಕ್ಷಣೆಗಾಗಿ ನೇಮಿಸಿಕೊಳ್ಳುವ ಪರಿಪಾಠವಿತ್ತು. ಅಂದಿ ನಿಂದ ಇಂದಿನವರೆಗೂ ಸನ್ಯಾಸಿಗಳಿಗೆ ನಮ್ಮ ಸಮಾಜದಲ್ಲಿ ಗೌರವಸ್ಥಾನ. ಹಲವಾರು ಅಪವಾದಗಳಿದ್ದಾಗ್ಯೂ, ಅವರ ಜೀವನ ಕ್ರಮವೇ ಈ ಗೌರವಕ್ಕೆ ಪ್ರಮುಖ ಕಾರಣ. ಯೋಗಿಗಳು ಸಮಾಜದ ಹಿತಕ್ಕಾಗಿ ಶಸ್ತ್ರ ಹಿಡಿದದ್ದು ನಮ್ಮ ಚರಿತ್ರೆಯಲ್ಲಿ ಹಲವೆಡೆ ಕಂಡುಬರುತ್ತದೆ. ಈ ವಿಚಾರವನ್ನು ‘ಸಮರೋತ್ಸಾಹಿ ವಿರಕ್ತರು’ ಎನ್ನುವ ಅಧ್ಯಾಯದಲ್ಲಿ ಲೇಖಕರು ವಿಶದವಾಗಿ ಹೇಳಿದ್ದಾರೆ.

ನಮ್ಮ ಗುರುಕುಲಗಳಲ್ಲಿ ಹಿಂದಿನಿಂದಲೂ ಶಾಸ್ತ್ರದೊಂದಿಗೆ ಶಸ್ತ್ರವಿದ್ಯೆಯೂ ದೊರೆಯುತ್ತಿದ್ದ ಸಂಗತಿ ತಿಳಿದಿರುವಂತಹುದೇ.
ಪರಿವ್ರಾಜಕರಾಗಿ ಕಾಡಿನಲ್ಲಿ ವಾಸ ಮಾಡುತ್ತಿದ್ದ ಸನ್ಯಾಸಿಗಳು ಆತ್ಮರಕ್ಷಣೆಗಾಗಿ ಶಸ್ತ್ರಧಾರಿಗಳಾಗಿದ್ದರು. 1790 ರಲ್ಲಿ ಮರಾಠ ದೊರೆ ಸಿಂಧಿಯ ಹಾಗೂ ಜೋಧಪುರ ರಾಜರ ನಡುವೆ ನಡೆದ ಕಾಳಗದಲ್ಲಿ 5,000 ಬೈರಾಗಿಗಳು ಭಾಗಿಯಾಗಿದ್ದರು.

ಉದಯಪುರದ ರಾಣಾ ಭೀಮ್ ಸಿಂಗ್ ಸನ್ಯಾಸಿಗಳನ್ನು ತನ್ನ ಸೇನೆಯಲ್ಲಿ ನೇಮಿಸಿಕೊಂಡಿದ್ದು ಕಾಣುತ್ತದೆ. ಜೈಪುರದ  ಮಹಾರಾ ಜರ ಬಳಿ ಸುಮಾರು ಹತ್ತು ಸಾವಿರ ನಾಗಾ ಸನ್ಯಾಸಿಗಳು ಇದ್ದರು. ಹೀಗೆ ಕ್ಷಾತ್ರ ಗುಣವನ್ನು ಹೊಂದಿದ್ದ ಈ ಸನ್ಯಾಸಿಗಳು ಪ್ರತಿ ಕೂಲ ಸಮಯದಲ್ಲಿ ರಕ್ಷಣೆ ಕೊಡಲು ಜನರೊಂದಿಗೆ ಸೇರುತ್ತಿದ್ದರು. ಭಾರತದಲ್ಲಿ ಮುಸ್ಲಿಮ್ ಪ್ರಾಬಲ್ಯ ಉಂಟಾದ ಮೇಲೆ ಎಂದರೆ, ಕ್ರಿ.ಶ.14 ನೇ ಶತಮಾನದ ನಂತರ ನಮ್ಮ ಸನ್ಯಾಸಿಗಳಂತೆಯೇ ಪರಿವ್ರಾಜಕರಾಗಿದ್ದ ಕೀರರೂ ಕಾಣುತ್ತಾರೆ. ಅವರು ಮೊದಲಿಂದಲೂ ಶಸ್ತ್ರಧಾರಿಗಳಾಗಿದ್ದರು. ಕೆಲವೊಮ್ಮೆ ಈ ಎರಡೂ ಪಂಗಡಗಳ ನಡುವೆ ಘರ್ಷಣೆ ನಡೆದದ್ದೂ ಕಾಣುತ್ತದೆ. ಹಾಗಾಗಿ ಅಕ್ಬರನ ರಾಜ್ಯಭಾರದ ಸಮಯದಲ್ಲಿ ಮಧುಸೂದನ ಸರಸ್ವತಿಗಳ ಪ್ರಭಾವದಿಂದ ಕ್ಷತ್ರಿಯರಿಗೂ ಸನ್ಯಾಸ ದೀಕ್ಷೆ ದೊರಕಿತು. ಅದರ ಫಲವಾಗಿ ಕ್ರಮೇಣ ಗೋಸಾವಿ (ಗೋಸ್ವಾಮಿ)ಗಳೂ, ನಾಗಾ ಪಂಥದವರೂ ಶಸ್ತ್ರಧಾರಿಗಳಾಗಿ  ಪ್ರಭಾವಿ ಗಳಾದದ್ದು ಕಾಣಿಸುತ್ತದೆ.

ಈ ದಿಸೆಯಲ್ಲಿ ನೋಡಿದಾಗ, ಸುಮಾರು ಇನ್ನೂರು ವರ್ಷಗಳಷ್ಟು ದೀರ್ಘ ಕಾಲ ನಮ್ಮ ದೇಶವನ್ನು ಆಳಿದ, ನಾನಾವಿಧದಲ್ಲಿ ಲೂಟಿ ಮಾಡಿದ ಬ್ರಿಟಿಷರ ತಂತ್ರ-ಕುತಂತ್ರ, ದಬ್ಬಾಳಿಕೆಗಳನ್ನು ಅವರ ಕಠೋರ ಶಾಸನಗಳನ್ನು – ಹಗಲು ದರೋಡೆಗಳನ್ನು ನಮ್ಮವರು ಹೇಗೆ ಸಹಿಸಿದರು ಎಂದು ಮನಸ್ಸು ಘಾಸಿಗೊಳ್ಳುತ್ತದೆ. ವ್ಯಾಪಾರಕ್ಕೆಂದು ಕಾಲಿಟ್ಟ ಇವರನ್ನು ಮುಕ್ತಹಸ್ತದಿಂದ ಸ್ವಾಗತಿಸಿದ ರಾಜ ಮಹಾರಾಜರನ್ನೂ ಕ್ರಮೇಣ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟ ಈ ಧೂರ್ತರ ವಿರುದ್ಧ ನಡೆದ ಸಂಘರ್ಷ ಗಳು ತಿಳಿದಿರುವಂತಹುದೇ. ಆದರೆ, 1857 ರಲ್ಲಿ ಸಾಮಾನ್ಯ ಜನರ ಸಹಕಾರದೊಡನೆ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಿಂದಿನ – ಮುಂದಿನ ಕಾಲಘಟ್ಟದಲ್ಲಿ ಜನಸಾಮಾನ್ಯರಿಂದ ಪ್ರತಿಭಟನೆ ನಡೆಯಲೇ ಇಲ್ಲವೇ? ಬ್ರಿಟಿಷರಿಗೆ ನಮ್ಮ ಜನರ ದಾಸ್ಯ ಅಷ್ಟು ಸುಲಭವಾಗಿ ದಕ್ಕಿತೇ? ಎಂಬ ಪ್ರಶ್ನೆಗಳಿಗೆ ಈ ಕೃತಿ ಆಧಾರ ಸಹಿತವಾಗಿ ಉತ್ತರ ಕೊಡುತ್ತದೆ.

ನಿರ್ದಯವಾಗಿ ಜನರನ್ನು ಘಾಸಿಗೊಳಿಸುತ್ತಿದ್ದ ಬ್ರಿಟಿಷರಿಗೆ ಸುಮಾರು ನಾಲ್ಕು ದಶಕಗಳ ಕಾಲ ಚಳ್ಳೆಹಣ್ಣು ಮುಕ್ಕಿಸಿದ ಜನಾಂ
ದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ ಸನ್ಯಾಸಿಗಳ ಹಾಗೂ ಅವರೊಂದಿಗೆ ಅಲ್ಲಲ್ಲಿ ಕೈಜೋಡಿಸಿದ ಫಕೀರರ ದಿಟ್ಟ ಹೋರಾಟ ಗಳನ್ನು ಎಳೆ ಎಳೆಯಾಗಿ ಈ ಕೃತಿ ಬಿಚ್ಚಿಡುತ್ತದೆ. ಹಲವಾರು ಹಿಂದಿನ ಕೃತಿಗಳ ಉಲ್ಲೇಖಗಳೊಂದಿಗೆ ಬ್ರಿಟಿಷ್ ಅಧಿಕಾರಿಗಳು ಅವರ ವರದಿಗಳಲ್ಲಿ ಹಾಗೂ ಪತ್ರಗಳಲ್ಲಿ ದಾಖಲಿಸಿರುವ ಸಂಗತಿಗಳ ಮುಖಾಂತರ ಆಧಾರ ಒದಗಿಸುತ್ತದೆ.

ಮೂರೇ ದಿನಗಳಲ್ಲಿ ಒಂದು ಸಾವಿರ ಹತ ಬ್ರಿಟಿಷ್ ವಸಾಹುತದಾರರ ಮಿತಿಮೀರಿದ ದುರಾಸೆಯಿಂದಾಗಿ ಅಂದು ಈ ಕರ ಹಿಂದಿ ಗಿಂತಲೂ 5 ಪಟ್ಟು ಹೆಚ್ಚಾಗಿ ತೀವ್ರ ಸ್ವರೂಪವನ್ನು ಪಡೆದಿತ್ತು. ಅದರಲ್ಲಿಯೂ 1769 – 70 ರ ತೀವ್ರ ಬರಗಾಲದ ಸಮಯ ದಲ್ಲಿ ಬಂಗಾಳದ ಸಾಮಾನ್ಯ ರೈತರ ಮೇಲೆ ಇದು ಮಾಡಿದ ಪರಿಣಾಮ ಭೀಕರ. ಪ್ಲಾಸಿ ಕದನದಲ್ಲಿ ಕುತಂತ್ರದಿಂದ ಸಾಧಿಸಿದ ಜಯ ಹಾಗೂ ಆನಂತರದ 1763 ರಲ್ಲಿ ಬಕ್ಸರ್ ವಿಜಯದ ಫಲವಾಗಿ ಬಂಗಾಳ, ಬಿಹಾರ ಹಾಗೂ ಒರಿಸ್ಸ ರಾಜ್ಯಗಳಲ್ಲಿ ಬ್ರಿಟಿಷರಿಗೆ ದಿವಾನಿ ಹಕ್ಕು ಲಭಿಸಿತು. ದಿವಾನಿ ಹಕ್ಕೆಂದರೆ ಮೂಲತಃ ಆಯಾ ಪ್ರಾಂತ್ಯದಿಂದ ಕಂದಾಯ ಸಂಗ್ರಹಣೆಯ ಅಧಿಕಾರ.

ಅದರೊಂದಿಗೆ, ಆ ಪ್ರಾಂತ್ಯಗಳ ಒಡೆತನವೂ ತಮ್ಮದೆಂದು ಘೋಷಿಸಿಕೊಂಡು ಮಾನವೀಯತೆಯ ಎಲ್ಲೆ ಮೀರಿ ನಿರ್ದಯವಾಗಿ
ಜನರಿಗೆ ಕೊಟ್ಟ ಹಿಂಸೆಯ ವಿವಿಧ ರೂಪಗಳನ್ನು ಈ ಪುಸ್ತಕದಲ್ಲಿ ಇಂದು ಓದಿದಾಗಲೂ ಕರಳು ಕಿತ್ತುಬರುವಂತಹುದು.
ಬರಗಾಲದಿಂದ ತತ್ತರಿಸುತ್ತಿದ್ದ ಬಂಗಾಳದ ಜನರ ಸಂಕಟವನ್ನು ಸ್ಥಳೀಯ ಅಧಿಕಾರಿಗಳು ಮೇಲಿನವರಿಗೆ ತಿಳಿಸಿದರೂ ಅದಕ್ಕೆ
ಯಾವುದೇ ರಿಯಾಯತಿ ಸಿಗುತ್ತಿರಲಿಲ್ಲ. ಕರ ಕೊಡಲಾಗದವರಿಗೆ ಚಾಟಿ ಏಟು ಕೊಡುವುದು ಮುಂತಾದ ಹಿಂಸೆಗೆ ಇಳಿಯು ತ್ತಿದ್ದರು.

ಪೂರ್ಣಿಯಾ ಜಿಲ್ಲೆೆಯಲ್ಲಿ 1770 ರ ಫೆಬ್ರವರಿ ತಿಂಗಳಿನಲ್ಲಿ ಕೇವಲ ಮೂರು ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶವಗಳನ್ನು
ಹುಗಿಯಲಾಯಿತು ಎಂದು ಅಲ್ಲಿನ ಫೌಜುದಾರ ರೆಸಿಡೆಂಟನಿಗೆ ಪತ್ರದಲ್ಲಿ ತಿಳಿಸುತ್ತಾನೆ. (ಪು.24-25).  ‘ಈಸ್ಟ್‌ ಇಂಡಿಯಾ ಕಂಪನಿ 1765 ರಿಂದ 135 ವರ್ಷಗಳ ಕಾಲ ನಡೆಸಿದ ಜನಾಂಗೀಯ ಹತ್ಯೆ ಮಾನವ ಇತಿಹಾಸದಲ್ಲಿಯೇ ಅಸದೃಶ. 1770 ರ ಭೀಕರ ಬರಗಾಲ ದಿಂದ ಬಂಗಾಳದ 10 ದಶಲಕ್ಷ ಮಂದಿ ಸಾವನ್ನಪ್ಪಿದರು. ಇದು ಬಂಗಾಳದ ಆಗಿನ ಒಟ್ಟು ಜನಸಂಖ್ಯೆಯ ಮೂರನೆಯ ಒಂದಂಶ …  1890 ರ ವೇಳೆಗೆ ಬ್ರಿಟಿಷ್ ಸಾಮ್ರಾಜ್ಯದ ರೀತಿನೀತಿಗಳು 49 ದಶಲಕ್ಷ ಭಾರತೀಯರ ಜೀವಹಾನಿಗೆ ಕಾರಣವಾಗಿವೆ’ (ಪು:31) ಎಂದು, ತನ್ನ ಆಡಳಿತದುದ್ದಕ್ಕೂ ಭಾರತದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಬರಗಾಲದ ಸಮಯದಲ್ಲಿ ನಡೆಸಿದ ಜನಾಂಗೀಯ ಹತ್ಯೆೆಯ ಅಂಕಿ ಅಂಶಗಳನ್ನು ಅಮೆರಿಕನ್ ಲೇಖಕ ಸ್ಟೀವ್ ಡಗ್ಲಾಸ್ ದಾಖಲಿಸಿರುವುದು ಅಂದಿನ ಸ್ಪಷ್ಟ ಚಿತ್ರಣ ಕೊಡುತ್ತದೆ.

ಜನರ ಸಂಕಷ್ಟಗಳಿಗೆ ಕುರುಡಾಗಿ, ಕಿವುಡಾಗಿ ತಮ್ಮ ಐಷಾರಾಮಿ ಜೀವನ ನೃತ್ಯಕೂಟಗಳನ್ನು ನಡೆಸುತ್ತಾ, ಇಂಗ್ಲೆಂಡಿಗೆ ಕಳುಹಿಸು ತ್ತಿದ್ದ ಸಂಪತ್ತಿನಲ್ಲಿ ಕಡಿಮೆಯಾಗದಂತೆ, ಬರಗಾಲದಲ್ಲಿಯೂ ಹೆಚ್ಚಾಗಿಯೇ ಕರ ಸಂಗ್ರಹಿಸಿದ ವರದಿಗಳು ಇಲ್ಲಿವೆ. ಆ ಸಮಯ ದಲ್ಲಿ ಇಲ್ಲಿಂದ ಅಲ್ಲಿಗೆ ಹರಿದ ಸಂಪತ್ತಿನ ಮೊತ್ತ 1855-59 ರಲ್ಲಿ ರು. 6.7 ದಶಲಕ್ಷವಾದರೆ, ಅದು ಹತ್ತೇ ವರ್ಷಗಳಲ್ಲಿ (1870-72) ರು. 31 ದಶಲಕ್ಷಕ್ಕೇರುತ್ತದೆ. ಅಂದು ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದ ಕೈಗಾರಿಕಾ ಕ್ರಾಂತಿಗೆ ಬೆಲೆ ತೆತ್ತ ಭಾರತದ ಸ್ಥಿತಿಯನ್ನು ನೋಡು ವಾಗ ಆ ಶೋಷಣೆಯ ಉಗ್ರ ಸ್ವರೂಪದ ಅರಿವಾಗುತ್ತದೆ. ಭಾರತೀಯರು ನೀಡುವ ಭೂ ಕಂದಾಯದಿಂದ ಭಾರತ ದಲ್ಲಿಯೇ ಉತ್ಪನ್ನವಾಗುವ ವಸ್ತುಗಳನ್ನು ಅತ್ಯಂತ ಅಗ್ಗದ ಬೆಲೆಗೆ ಕೊಂಡು ಅದನ್ನು ಇಂಗ್ಲೆಂಡಿಗೆ ರ್ತು ಮಾಡುವುದು ಹಾಗೂ ಅದರಿಂದ ಬರುವ ಆದಾಯ ಭಾರತಕ್ಕೆ ಸೇರುವ ಬದಲು ಇಂಗ್ಲೆಂಡಿನ ಕೈಗಾರಿಕಾ ಅಭಿವೃದ್ಧಿಗೆ ನೇರವಾಗಿ ಹೋಗುವಂತಹ ಹುನ್ನಾರವನ್ನು ಮಾಡಿ ಹಗಲು ದರೋಡೆ ನಡೆಸಿದರು. ಅದರೊಂದಿಗೆ ಅಲ್ಲಿ ತಯಾರಾದ ವಸ್ತುವನ್ನು ದುಬಾರಿ ಬೆಲೆಗೆ ಕೊಳ್ಳಬೇಕಾದ ಸಿದ್ಧ ಮಾರುಕಟ್ಟೆಯಾಯಿತು ನಮ್ಮ ನಾಡು.

ಸನ್ಯಾಸಿಗಳ ಸಂಪತ್ತು
ಜನರು ಭಕ್ತಿ ಪ್ರೀತಿಯಿಂದ ತಾವಾಗಿಯೇ ಕೊಡುತ್ತಿದ್ದ ಹಣ, ಸಂಪತ್ತು, ದವಸ ಧಾನ್ಯಗಳು, ಕಾಣಿಕೆಗಳು, ಹಲವಾರು ಕಡೆ
ವ್ಯವಸ್ಥಿತವಾಗಿ ಅವರು ಸಂಗ್ರಹಿಸುತ್ತಿದ್ದ ಕರ, ಬ್ರಿಟಿಷ್ ಕಂಪನಿ ಸರಕಾರ ಸಂಗ್ರಹಿಸಿಟ್ಟಿದ್ದ ಕರವನ್ನು ಲೂಟಿ ಮಾಡಿ ಬಂದದ್ದು –
ಹೀಗೆ ದೊರಕಿದ ಹಣವನ್ನು ಕಾಡಿನಲ್ಲಿ ವಾಸಮಾಡುತ್ತಿದ್ದ ಸನ್ಯಾಸಿಗಳು ಏನು ಮಾಡುತ್ತಿದ್ದರು? ಅವರಿಗೇನೂ ಐಷಾರಾಮಿ ಜೀವನ ಬೇಕಿರಲಿಲ್ಲ. ಆಂದೋಲನಕ್ಕೆ ಬೇಕಾದ ಶಸ್ತ್ರಾಸ್ತ್ರಕ್ಕಾಗಿ, ಹೊಸದಾಗಿ ಸೇರ್ಪಡೆಯಾದವರ ತರಬೇತಿಗಾಗಿ, ಮಿತಿಮೀರಿದ ಕಂದಾಯದ ಹೊರೆ ಹಾಗೂ ಬರಗಾಲದಲ್ಲಿ ಕಂಗೆಟ್ಟಿದ್ದ ಬಡ ರೈತಾಪಿ ಜನರಿಗಾಗಿ ತಮ್ಮಲ್ಲಿದ್ದ ಐಶ್ವರ್ಯವನ್ನೆಲ್ಲವನ್ನೂ ಬಳಸು ತ್ತಿದ್ದರು.

ಹಾಗಾಗಿಯೇ, ಧೀರ ಸನ್ಯಾಸಿಗಳಿಂದ ನಡೆದ ಆಂದೋಲನ ಸಾಮಾನ್ಯ  ಜನರ ಸಹಯೋಗದೊಂದಿಗೆ ನಾಲ್ಕು ದಶಕಗಳ ಕಾಲ ಮುಂದುವರಿಯಲು ಸಾಧ್ಯವಾಯಿತು. ಅಂತಹ ಬೃಹತ್ ಕಾರ್ಯಾಚರಣೆಯನ್ನು, ಎಲ್ಲೋ ಅಲ್ಲಲ್ಲಿ ನಡೆದ ಲೂಟಿಕೋರ ತಂಡಗಳ ಕಾರ್ಯ ಎಂದು ನಮೂದಿಸಿ ಅವರಿಗಾದ ಅವಮಾನವನ್ನು ಮರೆ ಮಾಚಿದ್ದು ಬ್ರಿಟಿಷರ ಧೋರಣೆಗೆ ತಕ್ಕಂತಹುದೇ. ಅದೇನೇ ಇರಲಿ, ಈ ಹೊತ್ತಿಗೆಯಲ್ಲಿ ಕಾಣುವ ವಾಸ್ತವ ಸಂಗತಿ ಹೇಳುವಂತೆ, ಬ್ರಿಟಿಷ್ ಪ್ರಭುತ್ವಕ್ಕೆ ಸಡ್ಡುಹೊಡೆದ ಸನ್ಯಾಸಿ ಪಡೆಗಳು ಎರಡು ವರ್ಷಗಳಷ್ಟು ದೀರ್ಘಕಾಲ ರಾಜಶಾಹಿ, ರಂಗಪುರ, ಪೂರ್ಣೀ, ದೀನಜಪುರ, ಢಾಕಾ ಮೊದಲಾದ ವಿಶಾಲ
ದೇಶಭಾಗದ ಮೇಲೆ ಪೂರ್ಣ ಪ್ರಭುತ್ವ ಸ್ಥಾಪಿಸುವುದರಲ್ಲಿ ಸಫಲವಾಗಿದ್ದು ಹಾಗೂ ಕೆಲವೆಡೆ ಅವರ ಕಾರ್ಖಾನೆಗಳೆಲ್ಲ ಸನ್ಯಾಸಿ ಪಡೆಗಳ ವಶದಲ್ಲಿದ್ದುದು ಈ ಆಂದೋಲನದ ಅಗಾಧತೆಯನ್ನು ತೋರಿಸುತ್ತದೆ. 1770 ರಲ್ಲಿ ಪ್ರಬಲವಾಗಿ ಕಾಣಿಸಿಕೊಂಡ ಸನ್ಯಾಸಿ – ಕೀರರ ಜನಾಂದೋಲನ 19 ನೇ ಶತಮಾನದ ಆರಂಭದ ಕೆಲವು ವರ್ಷಗಳೂ ಮುಂದುವರೆದದ್ದು ಕಾಣುತ್ತದೆ. ಆನಂತರ ಅವರ
ತೀವ್ರ ಚಟುವಟಿಕೆಗಳನ್ನು ನಿಯಂತ್ರಿಸಲು ಬ್ರಿಟಿಷ್ ಸಮರ್ಥರಾದರೂ, ಅದು ಜನಮಾನಸದಲ್ಲಿ ಹೊತ್ತಿಸಿದ ಕಿಚ್ಚು ಕಾಲಾಂತರದಲ್ಲಿ ಭಾರತದ ಪ್ರಥಮ ಸಂಗ್ರಾಮಕ್ಕೆ ಸಜ್ಜುಗೊಳಿಸಿತು ಎನ್ನಬಹುದು.

ಬಂಕಿಮಚಂದ್ರರ ಆನಂದಮಠ
ಈ ಆಂದೋಲನ ನಡೆದು ಒಂದು ಶತಮಾನದ ನಂತರ ಬಂಕಿಮಚಂದ್ರರು 1882ರಲ್ಲಿ ಬರೆದ ಕಾದಂಬರಿ ‘ಆನಂದಮಠ’ದಲ್ಲಿ
ಕಾಣುವ ಹಲವಾರು ಕಾಲ್ಪನಿಕ ಪಾತ್ರಗಳು ಬಿ.ಪಿ.ಪ್ರೇಮಕುಮಾರ್ ಅವರು ಅಪಾರ ಶ್ರಮದಿಂದ ಆಧಾರಸಹಿತವಾಗಿ ರಚಿಸಿರುವ
‘ಸನ್ಯಾಸಿ ಆಂದೋಲನ’ (ರಾಷ್ಟ್ರೋತ್ಥಾನ ಪ್ರಕಾಶನ, ಬೆಂಗಳೂರು) ಓದುವಾಗ ಜೀವಂತವಾಗಿ ಕಣ್ಣಮುಂದೆ ಬಂದು ನಿಲ್ಲುತ್ತವೆ.
ಆನಂದಮಠದ ಸನ್ಯಾಸಿಗಳ ಗೀತೆ, ವಂದೇ ಮಾತರಂ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ
ಒಂದು ಜೀವಂತ ಪಾತ್ರವಹಿಸಿದ್ದೊಂದು ನೈಜ ಇತಿಹಾಸ.

ಬ್ರಿಟಿಷ್ ದೌರ್ಜನ್ಯದಲ್ಲಿ ನರಳುತ್ತಿದ್ದ ಜನರಿಗೆ ನಾಲ್ಕು ದಶಕಗಳ ಕಾಲ, ಒಂದಷ್ಟು ಆಸರೆಯಾಗಿ ನಿಂತ ಸನ್ಯಾಸಿ ಆಂದೋಲನದ ನೈಜ ಇತಿಹಾಸವನ್ನು 22 ಅಧ್ಯಾಯಗಳಲ್ಲಿ ವಿಶದವಾಗಿ ಕಟ್ಟಿಕೊಡುವ ಈ ಹೊತ್ತಿಗೆ, ನಮ್ಮ ದೇಶದ ಐತಿಹಾಸಿಕ ಹೋರಾಟಗಳ ಪರಂಪರೆಯನ್ನು ಜನಸಾಮಾನ್ಯರಿಗೆ ಚೆನ್ನಾಗಿ ಪರಿಚಯಮಾಡಿಕೊಡುತ್ತದೆ. ಈ ಪುಸ್ತಕವನ್ನು ಓದಿದ ಮೇಲೆ ಮನಸ್ಸನ್ನು ಬಹುಕಾಲ ಕಾಡುವ ವಿಷಾದದೊಂದಿಗೆ ಅಂದಿನ ವಿಷಮ ಸ್ಥಿತಿಯಲ್ಲಿಯೂ ಬ್ರಿಟಿಷರ ಕ್ರೌರ್ಯಕ್ಕೆ ಧೀರ ಸನ್ಯಾಸಿಗಳು ನೀಡಿದ ಸವಾಲು ಹೆಮ್ಮೆ ತರಿಸುವಂತಹುದು. ಇಂದಿನ ನಮ್ಮ ಸ್ವಾತಂತ್ರ್ಯಕ್ಕೆ ಬೆಲೆ ತೆತ್ತ ಲಕ್ಷಾಂತರ ಧೀರರನ್ನು ನೆನೆಯುತ್ತಾ, ಈಗ ನಮ್ಮನ್ನು ಕಾಡುತ್ತಿರುವ ಪರದೇಶೀ ವ್ಯಾಮೋಹದಂತಹ ಹೊಸ ಬಗೆಯ ದಾಸ್ಯದಿಂದ ಹೊರಬರುವ ಸಂಕಲ್ಪಕ್ಕೆ ಮುಂದಾಗ ಬಹುದು.

ಕುಶಲಕರ್ಮಿಗಳ ವಿನಾಶ
ಈಸ್ಟ್‌ ಇಂಡಿಯಾ ಕಂಪೆನಿಯ ಬ್ರಿಟಿಷ್ ಅಧಿಕಾರಿಗಳ ನೀತಿಯಂತೆ, ಕಚ್ಚಾವಸ್ತುಗಳ ಏಕಮುಖ ರಪ್ತಿಗೆ ಮೊದಲು ಬಲಿಯಾದ ವರು ಢಾಕಾದ ಮಸ್ಲಿನ್ ಬಟ್ಟೆಯ ನೇಕಾರರು. ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು, ಸ್ಥಳೀಯ ಉತ್ಪನ್ನಗಳನ್ನು ನಾಶ ಮಾಡಿದ ಕಂಪೆಯನಿಯ ದಬ್ಬಾಳಿಕೆ ಬಹು ಕ್ರೂರ ಮತ್ತು ನಮ್ಮ ದೇಶದ ಪುರಾತನ ಕುಶಲಕರ್ಮ ಕೌಶಲವನ್ನು ಕಣ್ಮರೆಗೊಳಿಸಿತು. 1758 ರಿಂದ 1763 ರ ಐದು ವರ್ಷಗಳ ಅವಧಿಯಲ್ಲಿ ಅಲ್ಲಿನ ಎಲ್ಲಾ ಕುಶಲಕರ್ಮಿಗಳೂ ನಿರುದ್ಯೋಗಿ ಗಳಾಗಿಬಿಟ್ಟಾಗ ಅವರೊಂದಿಗೆ ಕೈಜೋಡಿಸಿದ ಕೀರರು ಢಾಕಾ ಕಾರ್ಖಾನೆಯ ಮೇಲೆ ಹಲ್ಲೆ ಮಾಡುತ್ತಾರೆ. ಅದೇ ವರ್ಷದಲ್ಲಿ ಸನ್ಯಾಸಿ ಪಡೆಯು ರಾಂಪುರ್ ಬೋವಾಲಿಯದ ಕಾರ್ಖಾನೆಯ ದರೋಡೆಗೆ ಮುಂದಾಗುತ್ತದೆ.

Leave a Reply

Your email address will not be published. Required fields are marked *