Sunday, 3rd July 2022

ತಾಯಿಯೇ ನನ್ನ ಆಶಾಕಿರಣ

ಎ.ಜಿ.ಪೇರರಿವಳನ್‌

ಸುಪ್ರೀಂ ಕೋರ್ಟ್ ನನ್ನ ಬಿಡುಗಡೆಗೆ ಪೂರ್ವಾಹ್ನ ೧೦.೪೦ಕ್ಕೆ ಆದೇಶ ಜಾರಿಮಾಡಿದಾಗ ನಾನು ಒಂದು ಪಬ್ಲಿಕ್ ಹಾಲ್‌ನಲ್ಲಿದ್ದೆ. ನಾನು ದೆಹಲಿಯಿಂದ ಬರಬಹುದಾದ ವರದಿಗಾಗಿ ಕಾದಿದ್ದೆ. ವಿಚಾರ ತಿಳಿದ ನಂತರ ನಾನು ಮನೆಗೆ ಹೋದೆ. ನನಗಾಗಿ ವರುಷಗಟ್ಟಲೆ ಹೋರಾಟ ಮಾಡುತ್ತ ಬಂದ ನನ್ನ ಅಮ್ಮ ಅರ್ಪುತಮ್ಮಾಳ್ ಅಳುತ್ತಿದ್ದಳು. ಜತೆಗೆ ನನ್ನಕ್ಕ ಕೂಡ ಕಣ್ಣಿರಾಗಿದ್ದಳು. ನಾನು ಆಕೆ ಅತ್ತಿದ್ದನ್ನು ಇದುವರೆಗೆ ಕಂಡಿರಲಿಲ್ಲ. ಅವರನ್ನು ಸಂತೈಸಲು ನಾನು ಹರಸಾಹಸ ಪಡಬೇಕಾಯಿತು. ಕೊಂಚ ಹೊತ್ತಿನಲ್ಲಿ ಮನೆಗೆ ಬಂದ ನನ್ನ ಕಿರಿಯ ಸಹೋದರಿ ಮತ್ತು ನನ್ನ ತಂದೆ (ಅವರು ನಿವೃತ್ತ ತಮಿಳು ಶಿಕ್ಷಕ) ಖುಷಿಯಾಗಿದ್ದರು.

ಅಂದು ನನ್ನಮ್ಮ ನನ್ನೊಡನೆ ಮಾತನಾಡಲಿಲ್ಲ, ಅವಳು ಅಳುತ್ತಲೇ ಇದ್ದಳು. ಆಕೆಯನ್ನು ಸಂತೈಸಲು ನಾನು ಯತ್ನಿಸುತ್ತಲೇ ಇದ್ದೆ. ನಾನು ಅಮ್ಮನೊಂದಿಗೆ ಕುಳಿತು ಆಕೆಯೊಂದಿಗೆ ಮಾತನಾಡಲು ಬಯಸಿz. ಸುಪ್ರೀಂ ಕೋಟ್ ಆದೇಶ ಬಂದ ಕೆಲ ಹೊತ್ತಿನ ಅನೇಕ ಮಂದಿಯ ದೂರವಾಣಿ ಕರೆಗಳಿಗೆ ಉತ್ತರಿಸಿದ ನಂತರ ನನಗೆ ತುಂಬಾ ಬಳಲಿಕೆಯ ಅನುಭವವಾಯ್ತು. ಈ ಸಂದರ್ಭದಲ್ಲಿ ನನ್ನೊಂದಿಗೆ ಜೀವಂತವಾಗಿ ಇರಬೇಕಾಗಿದ್ದ ಕೆಲವರನ್ನು ನಾನು ಸ್ಮರಿಸಿದೆ. ನನಗೆ ಇದೊಂದು ಸುದೀರ್ಘ ಹೋರಾಟ. ನನ್ನಮ್ಮ ನನಗೋಸ್ಕರ ಎಷ್ಟು ಗಟ್ಟಿಯಾಗಿ ನಿಂತು ಹೋರಾಟ ಮಾಡುತ್ತಿ
ದ್ದರು ಎಂಬುದನ್ನು ನಾನು ಬಲ್ಲೆ.

೬/೯ ಅಡಿ ಅಳತೆಯ ಸೆಲ್ ನಲ್ಲಿ ಏಕಾಂಗಿಯಾಗಿ ನಾನು ೧೧ ವರ್ಷಗಳನ್ನು ಕಳೆದಿದ್ದೇನೆ. ನಾನು ಆಗಿಂದಲೇ ಮನಸ್ಸನ್ನು ಗಟ್ಟಿಮಾಡಿಕೊಂಡಿದ್ದೆ. ನಾನಿದ್ದ ಕೋಣೆ ಖಾಲಿಯಾಗಿತ್ತು, ಗೋಡೆಗಳ ವಿನಾ ಅನೂ ಇರಲಿಲ್ಲ. ಏನೂ ಮಾಡಲು ತೋಚದೇ ನಾನು ಗೋಡೆಯ ಇಟ್ಟಿಗೆಗಳನ್ನು ಎಣಿಸುತ್ತ ಕಾಲಕಳೆದೆ. ಜೈಲಿನಲ್ಲಿದ್ದಾಗ ಒಂದು ಪುಟ್ಟ ಮಗುವನ್ನು ನೋಡಬೇಕೆಂಬ ಬಯಕೆ ನನಗೆ ತೀವ್ರ ವಾಗಿತ್ತು. ನಾನು ಜೈಲಿಗೆ ಹೋಗುವ ಸಂದ ರ್ಭದಲ್ಲಿ ಹುಟ್ಟಿದ್ದ ಮಕ್ಕಳೆಲ್ಲ ಈಗ ಬೆಳೆದು ದೊಡ್ಡವರಾಗಿದ್ದಾರೆ. ನನ್ನಕ್ಕನ ಮಗಳು ಸಎಂಚೋಳಿ ಈಗ ನನ್ನೊಂದಿಗಿದ್ದಾಳೆ.

ಆಕೆ ತುಂಬಾ ಗಟ್ಟಿಗಿತ್ತಿ. ನಾನೊಂದು ಟ್ರೀಟ್ ಕೊಡ ಬೇಕೆಂದು ಆಕೆ ಬಯಸಿದ್ದಳು. ಸಿಹಿತಿನಿಸುಗಳನ್ನು ಇನ್ನಷ್ಟೇ ತರಬೇಕಿದೆ. ನನ್ನಕ್ಕನ ಮಕ್ಕಳಾ
ದ ಅಗರನ್ ಮತ್ತು ಇನಿಮೈ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅಗರನ್ ಯು.ಎಸ್.ನಲ್ಲಿದ್ದಾಳೆ. ಇನಿಮೈ ಕಾಲೇಜಿನಲ್ಲಿ
ಓದುತ್ತಿದ್ದಾಳೆ, ಇನ್ನಷ್ಟೇ ಮನೆಗೆ ಬರಬೇಕಿದೆ.  ಕಳೆದ ಕೆಲ ತಿಂಗಳ ಹಿಂದೆ ವಿದೇಶಕ್ಕೆ ಹೋಗಿರುವ ಅಣ್ಣ ಸೆಲ್ವರಾಜರನ್ನೂ ನಾನು ಮಿಸ್ ಮಾಡಿಕೊಳ್ಳು ತ್ತಿದ್ದೇನೆ. ನನ್ನ ಪರವಾಗಿ ಹೋರಾಟ ಮಾಡುವುದಕ್ಕೆ ಅಮ್ಮನಿಗೆ ಆಸರೆ ಯಾಗಿದ್ದವನೆಂದರೆ ಅವನೊಬ್ಬನೇ. ನನ್ನ ಹೋರಾಟದಲ್ಲಿ ಜತೆಯಾಗಿದ್ದ ವಕೀಲ ಎಸ್.ಪ್ರಭು ರಾಮಸುಬ್ರಹ್ಮಣ್ಯನ್ ನೆನಪೂ ಕಾಡುತ್ತದೆ. ಚೆನ್ನೈಗೆ ಬನ್ನಿ ಎಂದು ಆಹ್ವಾನವಿತ್ತಿದ್ದೆ, ಆದರೆ ಅವರಿಗೆ ಅದೆಷ್ಟೋ ಹೋರಾಟದ ಕೆಲಸಗಳಿವೆ. ನನ್ನ ಸ್ನೇಹಿತ ಮತ್ತು ಸಹೋದರ ಶಂಕರ್ ಈ ಪ್ರಕರಣದಲ್ಲಿ ಆರೋ ಪಿ ಯಾಗಿದ್ದವನು ಬಿಡುಗಡೆಯಾಗಿದ್ದಾನೆ. ಆತ ಕೂಡ ಈಗ ವಿದೇಶದಲ್ಲಿದ್ದಾನೆ.

೧೯೯೯ರಲ್ಲಿ ಆತ ಬಿಡುಗಡೆಯಾದಾಗ ಆತ ನನಗೊಂದಷ್ಟು ಉಡುಗೊರೆ ಕೊಟ್ಟಿದ್ದ. ಒಂದು ಜತೆ ಶೂಸ್, ಶರ್ಟು, ಪ್ಯಾಂಟು ಎಲ್ಲವನ್ನೂ ಕೊಟ್ಟಿದ್ದ. ನನಗೀಗ ಐವತ್ತು ವರ್ಷವಾಗಿದೆ, ಆತ ಪ್ರೀತಿ ಯಿಂದ ಕೊಟ್ಟ ದಿರಿಸು ನನಗೆ ಧರಿಸಲಾಗುತ್ತಿಲ್ಲ. ಆದರೂ ಅದನ್ನೊಂದು ನಿಧಿ ಎಂಬಂತೆ ಕಾಪಿಟ್ಟಿದ್ದೇನೆ.
ನನಗೆ ಮರಣದಂಡನೆ ವಿಧಿಸಲಾಗಿದೆ ಎಂದು ತಿಳಿದಾಗ, ಕಾನೂನು ಹೋರಾಟಕ್ಕೆ ಹಣ ಹೊಂದಿಸಲು ತನ್ನ ಚಿನ್ನದ ತಾಳಿಯನ್ನೇ ಕೊಟ್ಟು ಕಳಿಸಿದ್ದ ಅಕ್ಕ ತೇನ್ಮೋಳಿಯನ್ನು ನಾನು ಮರೆಯಲಾರೆ. ಆಕೆ ಈಗ ಇಲ್ಲ. ಕ್ಯಾನ್ಸರ್‌ನಿಂದ ಅಸುನೀಗಿದ್ದಾಳೆ.

ಆಕೆಯನ್ನು ಭೇಟಿಮಾಡುವ ಅವಕಾಶವೇ ನನಗೆ ಸಿಗಲಿಲ್ಲ. ನಾನು ಸೇಲಮ್ ಜೈಲಿನಲ್ಲಿದ್ದಾಗ ೧೯೯೭ರಲ್ಲಿ ನನ್ನನ್ನು ಭೇಟಿ ಮಾಡಿ ಧೈರ್ಯತುಂಬಿ ನಾನು ನಿನ್ನೊಂದಿಗಿದ್ದೇನೆ ಎಂದು ಹೇಳಿದ್ದ ಪತ್ರಕರ್ತ ಮತ್ತು ಹೋರಾಟಗಾರ ದಿವಂಗತ ಮುಕುಂದನ್ ಸಿ.ಮೆನನ್ ಅವರನ್ನು ನಾನೆಂದಿಗೂ ಮರೆಯಲಾರೆ. ಅವರ ಮಾತುಗಳು ನನ್ನ ಮೇಲೆ ಬೀರಿದ್ದ ಪ್ರಭಾವ ಮರೆಯಲಾಗದು.ನನ್ನ ಹೋರಾಟದ ಹಾದಿಯಲ್ಲಿ  ಆಸರೆಯಾದವರು ಜಸ್ಟಿಸ್ ವಿ.ಆರ್. ಕೃಷ್ಣ
ಅಯ್ಯರ್. ನನ್ನನ್ನು ನಂಬಿದ್ದ ಕೆಲವೇ ಕೆಲವರಲ್ಲಿ ಅವರೂ ಒಬ್ಬರು.

ಅವರ ಫೋಟೋಗೆ ನಮಿಸಿ ನನ್ನ ಗೌರವ ಸಲ್ಲಿಸಿದ್ದೇನೆ. ನನಗೆ ಜಾರಿಯಾದ ಮರಣದಂಡನೆಯನ್ನು ಪ್ರತಿಭಟಿಸುವ ವೇಳೆ ಆತ್ಮಾಹುತಿ ಮಾಡಿಕೊಂಡ ಇಪ್ಪತ್ತರ ಹರೆಯದ ಪಿ. ಸೇನ್ಕೋಡಿ ತ್ಯಾಗವನ್ನು ನಾನು ಮರೆಯಲಾರೆ. ಒಬ್ಬ ಅಪ್ರಾಮಾಣಿಕನ ಏಳಿಗೆ ಮತ್ತು ಇನ್ನೊಬ್ಬ ಪ್ರಾಮಾಣಿಕನ ಯಾತನೆ ಇವೆರಡು ಕೂಡ ಸಾರ್ವಜನಿಕವಾಗಿ ಪರಿಶೀಲನೆಗೆ ಒಳಗಾಗಬೇಕು. ಏಕೆಂದರೆ ಇವೆರಡೂ ಪ್ರಕೃತಿಯ ಕಾಯಿದೆಗೆ ವಿರುದ್ಧವಾದ ಸಂಗತಿಗಳು- ಎಂದು
ತಿರುಕ್ಕುರಳ್ ಹೇಳುತ್ತದೆ. ಅಂತೆಯೇ ನನ್ನ ೩೨ ವರ್ಷಗಳ ಸುದೀರ್ಘ ವೇದನೆಗೆ ವಿಶ್ವಾದ್ಯಂತ ಲಕ್ಷಗಟ್ಟಲೆ ಜನ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಆದರೆ ನನ್ನ ಭರವಸೆ ಎಂದರೆ ನನ್ನಮ್ಮ. ಬಿರುಗಾಳಿಗೆ ತತ್ತರಿಸಿದ ಸಾಗರದ ನಡುವಿನಲ್ಲಿದ್ದರೂ ಎದೆಗುಂದದೇ ಮುನ್ನುಗ್ಗಿದ ಆಕೆಯ ಧೈರ್ಯಕ್ಕೆ ಸಾಟಿ ಇಲ್ಲ. ನನ್ನ ನ್ಯಾಯಾಂಗದ ಸುದೀರ್ಘ ಹೋರಾಟದ ಹಾದಿಯಲ್ಲಿ ಧೈರ್ಯ ತುಂಬಿದ ಎಲ್ಲರಿಗೂ ನಮನಗಳು. ನನ್ನ ಊರು ಜೋಲಾರ್ ಪೇಟ್‌ನಲ್ಲಿ ಯುವಕನಾಗಿ ನಾನು ಕಳೆದ ದಿನಗಳು ಈಗ ಮತ್ತೆ ನೆನಪಾಗುತ್ತಿವೆ. ನಾನೀಗ ಮಧ್ಯ ವಯಸ್ಕ. ಜೀವನಾನುಭವ ನನ್ನನ್ನು ಪಕ್ವವಾಗಿಸಿದೆ. ಈ ನಡು
ವಣ ಅಂತರವನ್ನು ನಾನು ಹೇಗೆ ಸಮೀ ಕರಿಸಲಿ. ನನಗೆ ಗೊತ್ತಾಗುತ್ತಿಲ್ಲ. ಮೂರು ದಶಕಗಳ ಕಾಲ ನನ್ನೂರೆಂಬ ಪುಟ್ಟ ಗೂಡನ್ನು ನಾನು ಕಳೆದುಕೊಂಡೆ.

ರಾಜೀವ ಗಾಂಧಿ ಹತ್ಯೆಗೆ ಸಂಬಂಧ ಪಟ್ಟಂತೆ ಪೇರಾರಿವಳನ್‌ನನ್ನು ಸಿಬಿಐ ಜೂನ್ ೧೧, ೧೯೯೯ರಂದು ಡಿ.ಎಂ.ಕೆ. ಕೇಂದ್ರ ಕಚೇರಿಯಲ್ಲಿ ವಶಕ್ಕೆ ಪಡೆದಿತ್ತು. ೧೯೯೮ರಲ್ಲಿ ಟಾಡಾ ಕೋರ್ಟ್ ಶಿಕ್ಷೆ ಜಾರಿಮಾಡಿತ್ತು. ನಂತರ ಅದು ೧೯೯೯ರಲ್ಲಿ ಮರಣದಂಡನೆಗೆ ಪರಿವರ್ತಿತವಾಯಿತು. ೨೦೧೪ರಲ್ಲಿ ಸುಪ್ರೀಂ ಕೋರ್ಟ್ ಅದನ್ನು ಮರುಪರಿಶೀಲಿಸಿ ಮತ್ತೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. ೨೦೧೭ರಲ್ಲಿ ಮೊದಲ ಬಾರಿಗೆ ಆತ ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ.