Friday, 18th June 2021

ತಾನು ಬರಲಾರದ ದೇವರು ತಾಯಿಯನ್ನು ಕಳಿಸಿದ

ಬದುಕು-ಜಟಕಾಬಂಡಿ

ಡಾ.ಡಿ.ಮಂಗಳಾ ಪ್ರಿಯದರ್ಶಿನಿ

ತಾಯಿ ಹಕ್ಕಿ ತನ್ನ ಗೂಡನ್ನು ಕಾಪಾಡುವಲ್ಲಿ, ಮರಿಗಳಿಗೆ ಆಹಾರ ನೀಡುವಲ್ಲಿ ತೋರಿದ ಪ್ರೀತಿ, ತಾದಾತ್ಮ್ಯವಾದರೂ ಎಂಥದ್ದು! ಅದಕ್ಕೇ ಅಲ್ಲವೆ ದೇವರು ಈ ಜಗತ್ತಿಗೆ ತಾನು ಬರಲಾಗದೆ, ತಾಯಿಯನ್ನು ಕಳಿಸಿದ ಎಂದು ಹೇಳುವುದು.

ಅಮೆರಿಕೆಯ ಆರು ತಿಂಗಳ ವಾಸದಿಂದ ‘ಜನನಿ ಜನ್ಮ ಭೂಮ್ಯಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತುಗಳನ್ನು ಅನುಭವಕ್ಕೆ ತಂದುಕೊಳ್ಳುತ್ತಲೇ ನ್ಯೂಯಾರ್ಕಿನಿಂದ ಹಾರಿ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಳಿದು ಬಂದು ನಾಗರಭಾವಿಯ ಮನೆ ತಲುಪಿ ಬಾಗಿಲು ತೆರೆದಾಗ, ಮನೆಯಲ್ಲಿ ತಿಂಗಳಿಗೊಂದಿಂಚಿನಂತೆ ಶೇಖರಣೆಯಾಗಿದ್ದ ಆರಿಂಚು ಧೂಳು!

ಅಡಿಗೆ ಮನೆಗೆ ಕಾಲಿಟ್ಟರೆ, ಹತ್ತಾರು ಜಿರಲೆಗಳು ತಮ್ಮ ಮಕ್ಕಳು ಮರಿಗಳೊಂದಿಗೆ ನಿರ್ಭಯ ವಾಗಿ ಓಡಾಡುತ್ತಿದ್ದವು. ಇವುಗಳನ್ನು ಕಾಯುತ್ತಾ ಗೋಡೆಯ ಮೇಲಿನ ಹಲ್ಲಿಗಳು ಅಸಹನೆ ಯಿಂದ ಹಲ್ಲು ಮಸೆಯುತ್ತಿದ್ದವು. ಇದರ ನಡುವೆಯೇ ವಾಷಿಂಗ್ ಮೆಷೀನಿ ನಿಂದ ಇಲಿಯ ಮ್ಮನ ವೀಣಾ ವಾದನ. ಇನ್ನು ಹಿತ್ತಿಲ ಬಾಗಿಲು ತೆರೆದರೆ, ಕೆಂಜುಗವೊಂದು ತನ್ನ ಸಂಸಾರಕ್ಕೆ ಎಲ್ಲಿ ಗೂಡು ಕಟ್ಟಲಿ ಎಂದು ಲೊಕೇಷನ್ ಹುಡುಕುತ್ತಿತ್ತು.

ಇದ್ದಬದ್ದ ಶಕ್ತಿಯನ್ನು ಹೇಗೋ ಸಂಚಯಿಸಿಕೊಂಡು ಗುಡಿಸಿ, ಒರೆಸಿ ಮನೆಯನ್ನು ಒಂದು ಹದಕ್ಕೆ ತರಬೇಕಾದರೆ ಮೂರು ದಿನಗಳು ಹಿಡಿದಿತ್ತು. ಇಲಿಯ ನಿರಂತರ ವೀಣಾವಾದನದಿಂದ ವಾಷಿಂಗ್ ಮಿಷನ್ನಿನ ವೈರುಗಳು ತುಕುಡಗೊಂಡು ರಿಪೇರಿಗೆ ಮೂರೂವರೆ ಸಾವಿರ ಬೇಡಿತ್ತು. ಒಟ್ಟಿನಲ್ಲಿ ನಾನಿಲ್ಲದಾಗ ನಾನಾ ಜೀವಿಗಳ ಕೌಟುಂಬಿಕ ಆಕ್ರಮಣವಾಗಿ, ನನ್ನ ಮನೆಗೆ ನಾನೇ ಅತಿಥಿಯಾಗಿದ್ದೆ. ನನ್ನ ಮನೆಯಲ್ಲಿದ್ದ ಎಲ್ಲ ಜೀವಿಗಳು ನಿಗಿನಿಗಿ ಕೋವಿಡ್ ಕಾಲದಲ್ಲೂ ತಮ್ಮ ಮಕ್ಕಳು, ಮರಿಗಳ ಆರೈಕೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದವು. ಅದೆಷ್ಟು ಬಸಿರು, ಬಾಣಂತನ ಗಳೋ, ಹೆರಿಗೆ ಸಂಭ್ರಮಗಳೋ! ಪರಸ್ಪರರಲ್ಲಿ ರಾಗ- ದ್ವೇಷಗಳಿ ದ್ದರೂ, ತಮ್ಮ ತಮ್ಮ ಭಾಗ ಗಳನ್ನು ಸ್ಪಷ್ಟ ಪಡಿಸಿಕೊಂಡು ಸಾಕಷ್ಟು ಅನ್ಯೊನ್ಯದಿಂದಲೇ ಬದುಕುತ್ತಿದ್ದವು.

ಹಕ್ಕಿಯೊಂದು ಕಟ್ಟಿದ ಗೂಡು 
ಅಂಗಳಕ್ಕೆ ಬಂದರೆ, ಹೊರಗಿನ ಪೋರ್ಟಿಕೋದ ತೂಗಾಡುವ ಷಾಂಡಿಲೇರ್‌ನಲ್ಲಿ ಚಿಲಿಪಿಲಿ ಶಬ್ದ, ಸಂಭ್ರಮ! ಕತ್ತೆತ್ತಿ ನೋಡಿ
ದರೆ, ತೂಗುವ ದೀಪಗೊಂಚಲಿನಲ್ಲೊಂದು ಹಸಿರು ದೊನ್ನೆ, ಅದರ ಸುತ್ತಲೂ ಒಣಗಿದ ಕಡ್ಡಿ, ಪುರಲೆ, ನಾರುಗಳು. ಈಗಾಗಲೇ ತಯಾರಿಕಾ ಹಂತದಲ್ಲಿದ್ದ ಹೊಚ್ಚ ಹೊಸ ಪಕ್ಷಿಗೂಡು.

ಅಲ್ಲೇ ಬಾಲವನ್ನು ಇಳಿಬಿಟ್ಟು ಬಾಯಿ ತುಂಬ ಹುಲ್ಲು ಕಡ್ಡಿ ಕಚ್ಚಿಕೊಂಡಿದ್ದ ಸುಂದರ ಪಕ್ಷಿ. ಗುಬ್ಬಚ್ಚಿಯಷ್ಟೇ ಮೈ ಅಳತೆ.
ಹಳದಿ, ಕೆಂಪು, ಕಪ್ಪು, ಬಿಳುಪು, ಮಣ್ಣು ಮೈ ಬಣ್ಣಗಳ, ಚೂಪಾದ ಕೊಕ್ಕುಗಳ, ಪಿಳಿ ಪಿಳಿ ಕಣ್ಣುಗಳ ಮುದ್ದು ಹಕ್ಕಿ. ಮೈ ಕೈ ತುಂಬಿಕೊಂಡ ದಿನ ತುಂಬಿದ ಬಸುರಿ. ಏಕ್ದಂ ಗೂಡೊಳಗೆ ಕೂತು ನೋಡ ನೋಡುತ್ತಲೇ ಮೊಟ್ಟೆಗಳನ್ನಿಟ್ಟಿದ್ದಾಳೆ. ಆಕೆ
ಗೂಡಲ್ಲಿ ರೆಕ್ಕೆಗೆದರಿ ಕಾವಿಗೆ ಕೂತರೆ, ಅವಳ ಸಂಗಾತಿ ಪಕ್ಕದ ಗ್ರಿಲ್ ಕಂಬಿಗಳ ಮೇಲೆ ಕೂತು ಕಣ್ಣಲ್ಲೇ ಕಣ್ಣಿಟ್ಟು ಏಕಚಿತ್ತನಾಗಿ ಗೂಡನ್ನೇ ದೃಷ್ಟಿಸುತ್ತಿದ್ದ. ಇದರ ಅರಿವಿಲ್ಲದ ನಾನು ಷಾಂಡಿಲೇರಿನ ಕಸ ಕಡ್ಡಿಗಳನ್ನು ಗುಡಿಸಲು ಪೊರಕೆ ಎತ್ತಿದರೆ, ರೆಕ್ಕೆಯನ್ನು ಸುತ್ತಲೂ ಹರಡಿಕೊಂಡು ಕೂತ ಹಕ್ಕಿ, ಹೆದರದೆ ಮತ್ತಷ್ಟು ಬಿಗಿಯಾಗಿ ಕೂತಳಲ್ಲದೆ, ಕೊಕ್ಕನ್ನೂ ಚಕಮಕ ಮಸೆದಿದ್ದಳು.

ಅವಳ ಪರಮಾಪ್ತ ಖಾಸಗಿ ಕ್ಷಣಗಳಿಗೆ ಭಂಗ ತರಲು ಬಿಡುವಳೆ ಆ SW ಮಾತೆ? ಈ ನಡುವೆ ಬೆಕ್ಕು, ತನ್ನ ಮರಿಗಳೊಡನೆ ಆಗಾಗ್ಗೆ ನಾಲಿಗೆ ಸವರುತ್ತ ಆ ಹಕ್ಕಿ ಗೂಡಿನ ಕಡೆಗೆ ನೆಟ್ಟ ದೃಷ್ಟಿ ಇಟ್ಟಿತ್ತು. ಹೊರ ಗೋಡೆಯ ಮೇಲೆ ಕೀಂಚ್ ಕೀಂಚ್ ಎನ್ನುತ್ತಾ ಅಳಿಲು ಸಂಸಾರ, ಹಕ್ಕಿ, ಬೆಕ್ಕುಗಳೆರಡರ ಮೇಲೂ ನಿಗಾ ವಹಿಸುತ್ತಾ ಬೇರೇನೋ ಹೊಂಚುಹಾಕುತ್ತ, ಅಸಹನೆಯಿಂದ ತಾರಕದಲ್ಲಿ
ಕಿರುಚಾಡುತ್ತಿತ್ತು. ಈ ಎಲ್ಲ ಬೃಹನ್ನಾಟಕವನ್ನು ನೋಡುತ್ತಲೇ ಗ್ರಿಲ್ ಮೇಲೆ ಕುಳಿತ ಗಂಡು ಹಕ್ಕಿ ಗೂಡಿನತ್ತಲೇ ನೋಡುತ್ತ
ಧ್ಯಾನಸ್ಥ ಸ್ಥಿತಿ ತಲುಪಿತ್ತು.

ತನ್ನ ಸಂಗಾತಿ, ಚಿಕ್ಕ ಮರಿಗಳು, ಪುಟ್ಟ ಸಂಸಾರದ ದೊಡ್ಡ ಕನಸುಗಳನ್ನು ಕಣ್ಣ ತುಂಬ ಹೊತ್ತ ಮಮತೆಯ, ವಾತ್ಸಲ್ಯದ ದೃಷ್ಟಿ. ಒಂದು ಕಾವ ದೃಷ್ಟಿಯಾದರೆ, ಮತ್ತೊಂದು ಕೊಲುವ ನೋಟ. ಮುಖ್ಯ ರಸ್ತೆಯಲ್ಲಿರುವ ನಮ್ಮ ಮನೆಯ ಮುಂದೇ ಪಾರ್ಕು. ಅದರ ಇನ್ನೊಂದು ಬದಿಯಲ್ಲಿ ನಂದಿನಿ ಹಾಲಿನ ಡೈರಿ. ಬೆಳಿಗ್ಗೆ ಐದು ಗಂಟೆಯಿಂದಲೇ ಗಿಜುಗುಟ್ಟುವ ಜನಸಂದಣಿ. ಅದರ ಪಕ್ಕದಲ್ಲೇ ಒಂಭತ್ತು ಗಂಟೆಗೆಲ್ಲ ಶುರುವಾಗುವ ಬೆಂಗಳೂರು ಮಹಾ ನಗರ ಪಾಲಿಕೆ ನಾಡಕಛೇರಿಯ ವಾರ್ಡ್ ಆಫೀಸಿನ ಚಟುವಟಿಕೆಗಳು, ಪಕ್ಕದಲ್ಲೇ ನಮ್ಮ ಮನೆಯ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಜೆರಾಕ್ಸ್ ಅಂಗಡಿ, ಮನೆ ಬಾಗಿಲಿ ನಲ್ಲೇ ಇರುವ ಆಟೋ ನಿಲ್ದಾಣ – ಇವೆಲ್ಲದರ ನಡುವೆ ಯಾವ ಗೊಂದಲ, ಗೌಜುಗಳನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ವ್ರತದೋಪಾದಿಯಲ್ಲಿ ಧ್ಯಾನಶೀಲಳಾಗಿ ಕಾವಿಗೆ ಕೂತ ಪಕ್ಷಿ ಮಾತೆ.

ಇಷ್ಟೆಲ್ಲ ಅಡ್ಡಿ, ಆತಂಕ, ಹಂತಕರ ಸಂಚಿನ ಪ್ರಾಣಾಪಾಯದ ನಡುವೆಯೂ ಆ ತಾಯಿ ಮಾತ್ರ ಇಪ್ಪತ್ತೊಂದು ದಿನಗಳ ಕಾಲ, ಮುದ್ದು ಮರಿಗಳ ಹೊಂಗನಸು ಕಾಣುತ್ತಾ ಕಾವು ಕೊಡುತ್ತಲೇ ಇದ್ದಳು! ಓದುತ್ತಲೋ, ಬರೆಯುತ್ತಲೋ, ಅಡಿಗೆಗೆ ಒಗ್ಗರಣೆ ಹಾಕುವಾಗಲೋ, ಬೆಳಿಗ್ಗೆ ಎದ್ದ ಕೂಡಲೇ, ಮಲಗುವಾಗ, ಕೊನೆಗೆ ನೆನಪಾದಾಗಲೆಲ್ಲ ಹೊರಗೆ ಬಂದು ಅವಳನ್ನು ಕಾಣುವುದು,
ಕ್ಷೇಮವಾಗಿದ್ದಾಳೆಂದು ಮನವರಿಕೆ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಡುವ ಅಭ್ಯಾಸ ಬದುಕಿನ ಭಾಗವಾಗಿ ಹೋಯಿತು.

ಮಧ್ಯಾನ್ಹದ ಕುದಿವ ಬಿಸಿಲಿನಲ್ಲಿ ಎ ಸಿ ಹಾಕಿಕೊಂಡು ತಣ್ಣಗೆ ಮಲಗಿದ್ದಾಗ, ಇದ್ದಕ್ಕಿದ್ದಂತೆ ಗರಿಗೆದರಿಕೊಂಡು ಮೊಟ್ಟೆಗಳ ಮೇಲೆ ಕಾವಿಗೆ ಕೂತ ಮಹಾಮಾತೆಯ ನೆನಪಾಗಿ ಅಂಗಳದ ದೀಪದ ಗೊಂಚಲನ್ನು ಕಂಡಾಗ, ರೆಕ್ಕೆ ಹರಡಿಕೊಂಡ ಪುಕ್ಕದ ರಾಣಿಯ ಪತ್ತೆಯಿಲ್ಲ. ಇತ್ತ, ಗ್ರಿಲ್ಲಿನ ಮೇಲೆ ಕುಳಿತ ಪಕ್ಷಿ ಪುರುಷೋತ್ತಮನೂ ಇಲ್ಲ. ಛೆ, ಶತೃ ಪಾಳಯದ ನಡುವೆ ಇವರೆಲ್ಲಿ ಹೋದರೋ? ಬೇಜವಾಬ್ದಾರಿಯವು, ಎಂದು ಬೈದು ಕೊಳ್ಳುವಷ್ಟರಲ್ಲಿ ಗೂಡಿನಿಂದ ಪುಟ್ಟ ಪುಟ್ಟ ಎರಡು ಕೆಂಪು ಕೊಕ್ಕುಗಳ ಎಳೆಯ ಮರಿಗಳು ಕಾಣಿಸಿದವು. ಪೂರ್ತಿ ವಿವರಗಳನ್ನು ಬಿಟ್ಟುಕೊಡದೆ ಮೇಲೆ ತೂಗಾಡುವ ದೀಪಗೊಂಚಲುಗಳ ನಡುವೆ ಕಂದು ಬಣ್ಣಕ್ಕೆ ತಿರಗಿ, ಒಣಗುತ್ತಿದ್ದ ಗೂಡಿನೊಳಗೆ ಮುದುರಿ ಬೆಚ್ಚಗೆ ಕುಳಿತ್ತಿದ್ದವು.

ಇಣುಕಿ ನೋಡುವುದೊರಳಗಾಗಿ ಅವರವಸರವಾಗಿ ಹಾರಿ ಬಂದ ಪಕ್ಷಿ ಮಾತೆ ಪ್ರತ್ಯಕ್ಷ. ಪುಟ್ಟ ಬಾಯಿ ತುಂಬ ಮಕ್ಕಳಿಗಾಗಿ ಹುಳು, ಹುಪ್ಪಟೆಗಳ ಆಹಾರ ಹೊತ್ತು ತಂದಿದ್ದಳು. ನಾನು ಅಲ್ಲೇ ನಿಂತಿದ್ದರೂ, ಬಸ್ಸು, ಕಾರುಗಳು, ಭರ್ರೆಂದು ಚಲಿಸಿದರೂ, ಅವಳಿಗೆ ಭಯವಿರಲಿಲ್ಲ. ಹಸಿದ ಕಂದಮ್ಮಗಳ ಹೊಟ್ಟೆ ತುಂಬಿಸುವುದೇ ಮುಖ್ಯ ಕೆಲಸ ಎನಿಸಿತ್ತು. ಈ ದೃಶ್ಯ ನೋಡುತ್ತಿದ್ದಂತೆ, ನನ್ನ ಅಮ್ಮ ಹೇಳುತ್ತಿದ್ದ ದಿವ್ಯ ವಾಣಿ, ತಾನು ಬರಲಾರದ ದೇವರು ತಾಯಿಯನ್ನು ಕಳಿಸಿದ ಎಂಬ ಮಾತು ಅದೆಷ್ಟು ಸತ್ಯ ಎನ್ನಿಸಿತ್ತು.
ಆ ತಾಯಿ, ಹಸಿದ ಮರಿಗಳಿಗೆ ಗುಟುಕು ನೀಡುವುದೇನು, ಗರಿ ಹೊಚ್ಚುವುದೇನು? ಪ್ರೀತಿಯಿಂದ ಅವುಗಳನ್ನು ತನ್ನ ಕಣ್ಣುಗಳ ತುಂಬ ತುಂಬಿಕೊಳ್ಳುವುದೇನು? ಆ ತಾಯಿ – ಮಕ್ಕಳ ಸಂಭ್ರಮಾಚರಣೆಯನ್ನು ಬಿಡುವಾದಾಗಲೆಲ್ಲ ಹೊರ ಬಂದು ನೋಡಿ ಕಣ್ಣು ತುಂಬಿಕೊಳ್ಳುತ್ತಿದ್ದೆ.

ಆಶ್ಚರ್ಯವೆಂದರೆ, ಬೆಕ್ಕಿನ ಸಂಸಾರವೂ ನನ್ನಷ್ಟೇ ಮುತುವರ್ಜಿಯಿಂದ ಹಗಲೂ ರಾತ್ರಿ ಕಾಯುತ್ತಿತ್ತು. ಬೆಕ್ಕಮ್ಮನೂ ತನ್ನ ಮರಿ ಗಳನ್ನು ಹೆತ್ತೂ ಹೊತ್ತು, ಕಾಪಿಡುವ ಜವಾಬ್ದಾರಿ ಹೊತ್ತ ಅಮ್ಮನಲ್ಲವೆ ? ಜಿರಲೆ, ಹಲ್ಲಿ, ಇಲಿ, ಕೆಂಜಿಗ, ಅಳಿಲು, ಬೆಕ್ಕು, ಬಣ್ಣದ ಹಕ್ಕಿ – ಅಮೆರಿಕೆಯಲ್ಲಿ ಮಗಳ ಬಾಣಂತನ ಮುಗಿಸಿ, ಮುದ್ದು ಮೊಮ್ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಲಾಲಿ ಹಾಡಿ ತೂಗಿ ಬಂದ ನನ್ನ ತಾಯ್ತನಕ್ಕೇ ಸವಾಲು ಹಾಕುವಂತೆ, ಈ ಪುಟ್ಟ ಮೂಕ ಜೀವಿಗಳೂ ತಮ್ಮ ತಮ್ಮ ಸಂಸಾರ ಪೊರೆವ ಕರ್ತವ್ಯ ದಲ್ಲಿ ನಿರತವಾಗಿದ್ದವು.

ನಾಪತ್ತೆ
ಎಂದಿನಂತೆ ಹೊರ ಬಂದು ತಲೆಯೆತ್ತಿ ದೀಪದ ಗೊಂಚಲನ್ನು ನೋಡಿದರೆ, ಗೂಡು ಅಸ್ತವ್ಯಸ್ತ. ರೆಕ್ಕೆ ಹರಡಿಕೊಂಡು ಕೂತ
ಖಗಮಾತೆಯಾಗಲಿ, ಪುಟ್ಟ ಪುಟ್ಟ, ಕೆಂಪಾದ ಎಳೆ ಕೊಕ್ಕುಗಳನ್ನೆತ್ತಿ ಪಿಳಿ ಪಿಳಿ ಕಣ್ಣುಗಳನ್ನು ಪಿಳುಕಿಸುವ ಮರಿ ಹಕ್ಕಿಗಳಾಗಲಿ
ಕಾಣಿಸಲಿಲ್ಲ. ಅದೆಷ್ಟೊ ದಿನಗಳಿಂದ ಈ ಪಕ್ಷಿ ಕುಟುಂಬವನ್ನು ಆಸೆ ಕಂಗಳಿಂದ ತನ್ನ ಕಂದಮ್ಮಗಳೊಂದಿಗೆ ಎಡಬಿಡದೆ ಹಪ
ಹಪನೆ ಕಾಯುತ್ತಿದ್ದ ಬೆಕ್ಕಿನ ಸಂಸಾರವೂ ಕಾಣಲಿಲ್ಲ.

ಇತ್ತ ಇಣುಕಿ ನೋಡುವ ಇಣಚಿಯೂ ನಾಪತ್ತೆ. ಎಲ್ಲಿ ಹೋಯಿತು ಈ ದಿವ್ಯ ಪಕ್ಷಿ? ವ್ರತದೋಪಾದಿಯಲ್ಲಿ ಹತ್ತಾರು ದಿನ ಕಾವು
ಕೊಟ್ಟು, ಗುಟುಕು ನೀಡಿ ಮರಿ ಮಾಡಿಕೊಂಡು, ಹೊಸ ನೆಲೆಗೆ ಹಾರಿ ಹೋದಳೆ? ಅಥವಾ ಮಾರ್ಜಾಲ ಮಾತೆ ಇಡೀ ಪಕ್ಷಿ
ಕುಲಕ್ಕೇ ಕುಠಾರಳಾದಳೆ? ಹಕ್ಕಿಮಾತೆಯ ದುರಾದೃಷ್ಟಕ್ಕೆ ಮರುಗಬೇಕೋ, ಮಾರ್ಜಾಲದ ಮೋಸದ ಜಾಲಕ್ಕೆ ಶಪಿಸಬೇಕೋ? ಗೊಂದಲ. ಇದು ಒಂದನ್ನು ಒಂದು ನುಂಗಿ, ಮತ್ತೊಂದು ಬದುಕುವ ಜೀವ ಜಾಲದ ಸಹಜ ಪ್ರಕೃತಿ ಲೀಲೆ.

ಯಾರಿಗಾಗಿ ಮರುಗಲಿ?
ಕಣ್ತೆರೆದರೆ, ಕಣ್ಮುಚ್ಚಿದರೆ, ಅಂಗಳಕ್ಕೆ ಕಾಲಿಟ್ಟರೆ ಸಾಕು, ಆ ಬಣ್ದದ ಹಕ್ಕಿ, ಹರಡಿದ ರೆಕ್ಕೆಗಳು, ಅದರ ತಾಳ್ಮೆ, ಮಮತೆ, ಧ್ಯಾನ ಶೀಲತೆ, ಪಿಳಿ ಪಿಳಿ ಕಣ್ಣುಗಳು, ಎಳೆ ಚುಂಚುಗಳ ಮುದ್ದು ಮರಿಗಳು ಒಂದೇ ಸಮನೆ ಕಾಡುತ್ತವೆ. ಅವುಗಳನ್ನು ಕಾಣದೆ ಮನಸ್ಸಿನ ಮೂಲೆಯಲ್ಲೆಲ್ಲೊ ಒಂದು ನೋವಿನ ಎಳೆ ಮಿಡಿದಂತಾಗುತ್ತದೆ. ಮನೆ ಮುಂದೆ, ಹಿಂದೆ , ಮನೆಯಲ್ಲಿನ ಅತಿಥಿಗಳೂ ಇಲ್ಲದೆ, ಕರೋನ ಕಾಲದಲ್ಲಿ ಕರೆದರೂ ಬಾರದ ಅತಿಥಿಗಳ ನಡುವೆ ಮನೆ, ಮನ ಖಾಲಿ ಖಾಲಿ.

Leave a Reply

Your email address will not be published. Required fields are marked *