Wednesday, 28th July 2021

ಬಿಡುಗಡೆಗೆ ಸಿದ್ಧವಾಗಿದೆ ಸಿನೆಮಾಗಳು – ಥಿಯೇಟರ್‌ನಲ್ಲೊ, ಒಟಿಟಿಯಲ್ಲೊ ?

ಕರೋನಾ ತಂದೊಡ್ಡಿದ ಗಂಭೀರ ಪರಿಸ್ಥಿತಿಯಿಂದ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಥಗಿತವಾಗಿವೆ. ಈಗಾಗಲೇ ಚಿತ್ರೀಕರಣ ಮುಗಿಸಿ ತೆರೆಗೆ ಬರಬೇಕಿದ್ದ ಸಿನಿಮಾಗಳಿಗೆ ಕರೋನಾ ತಡೆಯೊಡ್ಡಿದೆ. ಪರಿಣಾಮ ಸಿನಿಮಾಗಳ ಬಿಡು ಗಡೆಯೂ ವಿಳಂಬ ವಾಗುತ್ತಿದೆ. ಎರಡು ವರ್ಷಗಳ ಹಿಂದೆ ವರುಷಕ್ಕೆ 230 ರಿಂದ 250 ಸಿನಿಮಾಗಳು ತೆರೆಗೆ ಬರುತ್ತಿದ್ದವು. ಆದರೆ ಕರೋನಾದಿಂದ 50 ಸಿನಿಮಾಗಳು ರಿಲೀಸ್ ಆದರೆ ಹೆಚ್ಚು. ಚಿತ್ರಮಂದಿರಗಳು ತೆರೆಯದೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರಲೇ ಇಲ್ಲ. ಈ ವರ್ಷ ಇಲ್ಲಿಯವರೆಗೆ ಕೇವಲ ಮೂರು ಹೈಬಜೆಟ್ ಚಿತ್ರಗಳು ಮಾತ್ರ ಬಿಡುಗಡೆ ಯಾಗಿವೆ. ಉಳಿದ ಚಿತ್ರಗಳ ರಿಲೀಸ್ ಯಾವಾಗ. ಇನ್ನು ಸಣ್ಣಪುಟ್ಟ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೂ, ಪೆಟ್ಟಿಗೆ ಯಲ್ಲಿ ಭದ್ರವಾಗಿವೆ. ಆ ಚಿತ್ರಗಳ ಬಿಡುಗಡೆ ಯಾವಾಗ ಎಂದು ನಿರ್ದೇಶಕರಿಗೆ ತಿಳಿದಿಲ್ಲ.

ಚಿತ್ರಮಂದಿರದಲ್ಲೇ ಕೋಟಿಗೊಬ್ಬನ ಅಬ್ಬರ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ಓಟಿಟಿಯಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಅದನ್ನು ನಿರ್ಮಾಪಕರು ಅಲ್ಲಗಳೆದಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕ ಸೂರಪ್ಪ ಬಾಬು, ಕೋಟಿಗೊಬ್ಬ 3 ಬಹುನಿರೀಕ್ಷೆ ಯ ಸಿನಿಮಾ. ಯಾವುದೇ ಕಾರಣಕ್ಕೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ. ಚಿತ್ರಮಂದಿರಗಳಲ್ಲಿ ಆಸನದ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರಿಗೆ ಅವಕಾಶ ನೀಡಿದ ಮೇಲೆಯೇ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ಅಲ್ಲಿಯವರೆಗೂ ಕಾಯುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಕೋಟಿ ಗೊಬ್ಬನ ದರ್ಶನ ಬೆಳ್ಳಿಪರದೆಯಲ್ಲೇ ಆಗಲಿದೆ.

ಹಿರಿತೆರೆಯಲ್ಲೇ ಸಲಗನ ಸವಾರಿ
ಹೊಸ ಕ್ರೇಜ್ ಸೃಷ್ಟಿಸಿರುವ ಸಲಗ ಹಿರಿತೆರೆಯಲ್ಲೇ ಸವಾರಿ ಆರಂಭಿಸಿಲಿದೆ. ದುನಿಯಾ ವಿಜಿ ನಿರ್ದೇಶನದ ಚೊಚ್ಚಲ ಸಿನಿಮಾ ಸಲಗ. ಇದು ಅವರ ಕನಸಿನ ಕೂಸು. ಇದಕ್ಕಾಗಿ ಎರಡು ವರ್ಷ ಶ್ರಮಿಸಿದ್ದಾರೆ. ಸಲಗ ಚಿತ್ರವನ್ನು ಹಿರಿತೆರೆಗೆ ತರಬೇಕು ಎಂಬ ನಿರ್ಧಾರ ನಮ್ಮದು. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಆಗಸ್ಟ್‌ನಲ್ಲಿ ಚಿತ್ರಮಂದಿರಗಳು ತೆರೆಯ ಬಹುದು ಎಂಬ ನಂಬಿಕೆಯಿದೆ. ಆ ಬಳಿಕ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತ ವಾಗಿ ಘೋಷಿಸುತ್ತೇವೆ, ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಮಾತೇ ಇಲ್ಲ ಎನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್.

ಬೆಳ್ಳಿತೆರೆಯಲ್ಲಿ ಭಜರಂಗಿ ದರ್ಶನ
ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರವೂ ಕೂಡ ಅದಾಗಲೇ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ರೆಡಿಯಾಗಿದೆ. ಭಜರಂಗಿಯನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದಾರೆ. ಇದನ್ನು ಅರಿತ ಚಿತ್ರತಂಡ ಓಟಿಟಿ ಯಲ್ಲಿ ಸಿನಿಮಾ ತೆರೆಗೆ ತರುತ್ತದೆ ಎಂಬ ಮಾತುಗಳು ಕೇಳಿಬಂದವು. ಈ ಮಾತನ್ನು ಚಿತ್ರತಂಡ ತಳ್ಳಿಹಾಕಿದೆ. ಯಾವುದೇ ಕಾರಣಕ್ಕೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲ. ಬೆಳ್ಳಿಪರದೆಯಲ್ಲಿಯೇ ಭಜರಂಗಿಯ ದರ್ಶನ ವಾಗಲಿದೆ. ಅದಕ್ಕಾಗಿ ಇಷ್ಟು ದಿನ ಕಾಯ್ದಿದ್ದೇವೆ. ಮತ್ತೊಂದಷ್ಟು ದಿನ ಕಾಯುತ್ತೇವೆ
ಎಂದು ಹೇಳಿದ್ದಾರೆ ನಿರ್ದೇಶಕ ಹರ್ಷ. ಇನ್ನು ಶಿವಣ್ಣ, ನಿರ್ಮಾಪಕರ ಹಿತಾಸಕ್ತಿ ಕಾಯಲು ಸಿದ್ಧವಾಗಿದ್ದು, ಚಿತ್ರಮಂದಿರದಲ್ಲೇ ಸಿನಿಮಾಗಳು ತೆರೆಗೆ ಬರಬೇಕು ಎಂದಿದ್ದಾರೆ.

ಡಿಸೆಂಬರ್‌ನಲ್ಲಿ ಕೆಜಿಎಫ್
ರಾಕಿಬಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಜುಲೈ 16ಕ್ಕೆ ತೆರೆಗೆ ಬರುವುದಾಗಿ ಈ ಹಿಂದೆಯೇ ಘೋಷಿಸಿತ್ತು. ಸದ್ಯದ ಪರಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ, ಹಾಗಾಗಿ ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ವಾಗಿ ಘೋಷಿಸಿಲ್ಲವಾದರು, ಕೆಜಿಎಫ್ ಚಾಪ್ಟರ್ 1 ಕೂಡ ಡಿಸೆಂಬರ್‌ನಲ್ಲೇ ರಿಲೀಸ್ ಆಗಿತ್ತು. ಹಾಗಾಗಿ ಚಾಪ್ಟರ್ 2 ಕೂಡ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರಲಿದೆ, ಅದು ಚಿತ್ರಮಂದಿರದಲ್ಲೇ ಎನ್ನುವುದು ಪಕ್ಕಾ ಆಗಿದೆ. ಇನ್ನುಳಿದಂತೆ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777, ಶರಣ್ ನಟನೆಯ ಅವತಾರ್‌ಪುರುಷ್, ಈ ಚಿತ್ರಗಳು ಕೂಡ ಥಿಯೇಟರ್‌ ನಲ್ಲೇ ಬಿಡುಗಡೆಯಾಗಲಿವೆ.

ಒಟಿಟಿಯಲ್ಲೆ ಐರಾವನ್
ಜೆಕೆ ನಾಯಕನಾಗಿ ಕಾಣಿಸಿಕೊಂಡಿರುವ ಐರಾವನ್ ರಿಲೀಸ್ ಮುನ್ನವೇ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಐರಾವನ್ ತೆರೆಗೆ ಸಿದ್ಧವಾಗಿದ್ದು, ಓಟಿಟಿಯಲ್ಲೇ ಚಿತ್ರ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ. ಇದನ್ನು ಜೆಕೆ ಕೂಡ ಸ್ಪಷ್ಟಪಡಿಸಿದ್ದಾರೆ. ಐರಾವನ್ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯಕ್ಕೆ ಚಿತ್ರಮಂದಿರ ಗಳು ತೆರೆದಿಲ್ಲ.

ಮುಂದಿನ ದಿನಗಳಲ್ಲಿ ಓಪನ್ ಆದರೂ ಶೇ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಯೇ ಹೆಚ್ಚು. ಆ ವೇಳೆ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ, ನಷ್ಟವಾಗುವುದು ಖಚಿತ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವುದು ಅನುಮಾನವಾಗಿದೆ. ಹೀಗಿರುವಾಗ ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಮಾಡುವುದು ಸದ್ಯದ ಮಟ್ಟಿಗೆ ಸಾಧ್ಯವೇ ಇಲ್ಲ. ಅದು ಅಲ್ಲದೆ ನಿರ್ಮಾಪಕರ ಹಿತಾಸಕ್ತಿಯೂ ನಮಗೆ ಮುಖ್ಯ, ಅವರ ಬಂಡವಾಳವು ವಾಪಾಸ್ ಬರಬೇಕು. ಇದೆಲ್ಲವನ್ನು ಮನದಲ್ಲಿಟ್ಟು ಕೊಂಡು ಐರಾವನ್ ಚಿತ್ರವನ್ನು ಓಟಿಟಿಯಲ್ಲಿ ತೆರೆಗೆ ತರಲು ನಿರ್ಧರಿಸಿದ್ದೇವೆ, ಈ ಹಿಂದೆಯೂ ನಾನು ನಟಿಸಿದ್ದ, ಕರಾಳರಾತ್ರಿ, ಕೇಸ್ ನಂ 101 ಚಿತ್ರಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದಾಗ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರಲಿಲ್ಲ, ಅದೇ ಕಿರುತೆರೆಯಲ್ಲಿ ಪ್ರಸಾರವಾದಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಿಸಿದರು.

ಸಿನಿಮಾವನ್ನು ಮೆಚ್ಚಿಕೊಂಡರು. ಇದೆಲ್ಲವನ್ನು ಗಮನಿಸಿದಾಗ ಥಿಯೇಟರ್‌ಗಿಂತ ಓಟಿಟಿಯೇ ಉತ್ತಮ ಎನ್ನಿಸಿತು. ಹಾಗಾಗಿ ಓಟಿಟಿಗೆ ಮೊದಲ ಆದ್ಯತೆ ನೀಡುತ್ತೇವೆ. ಅವಕಾಶ ಸಿಕ್ಕರೆ ಚಿತ್ರಮಂದಿರಗಳಲ್ಲೂ ಐರಾವನ್ ಬಿಡುಗಡೆ ಮಾಡಲಿದ್ದೇವೆ ಎನ್ನುತ್ತಾರೆ ಜೆಕೆ. ಇದರ ಜತೆಗೆ ಹೊಸಬರ ಪ್ರಯೋಗಾತ್ಮಕ ಚಿತ್ರಗಳು ಓಟಿಟಿಯಲ್ಲೇ ತೆರೆಕಾಣಲು ಸಿದ್ಧವಾಗಿವೆ.

Leave a Reply

Your email address will not be published. Required fields are marked *