Choo Mantar Movie: ಶರಣ್ ಅಭಿನಯದ ‘ಛೂಮಂತರ್’ಗೆ 25 ದಿನಗಳ ಸಂಭ್ರಮ
Choo Mantar Movie: ಶರಣ್ ನಾಯಕರಾಗಿ ನಟಿಸಿರುವ ʼಛೂ ಮಂತರ್ʼ ಚಿತ್ರ ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಸಂಭ್ರಮಿಸಲು ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಶರಣ್ (Sharan) ನಾಯಕರಾಗಿ ನಟಿಸಿರುವ ʼಛೂ ಮಂತರ್ʼ ಚಿತ್ರ (Choo Mantar Movie) ಯಶಸ್ವಿ 25 ದಿನಗಳ ಪ್ರದರ್ಶನ ಕಂಡು, 50 ದಿನಗಳತ್ತ ಮುನ್ನುಗುತ್ತಿದೆ. ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ʼಕರ್ವʼ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸಮಾರಂಭ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಇಪ್ಪತ್ತೈದು ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶರಣ್ ಅವರೊಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದೇನೆ. ತರುಣ್ ಕೂಡ ಬಹು ದಿನಗಳ ಗೆಳೆಯ. ಈ ಚಿತ್ರ ಬಿಡುಗಡೆಯಾದಾಗ ನನ್ನ ಸ್ನೇಹಿತರೊಬ್ಬರು ಫೋನ್ ಮಾಡಿ ʼಛೂ ಮಂತರ್ʼ ಚಿತ್ರದ ಟಿಕೇಟ್ ಬೇಕು. ಹೌಸ್ ಫುಲ್ ಆಗಿದೆ ಎಂದರು. ಈ ವಿಷಯ ಕೇಳಿ ಸಂತೋಷವಾಯಿತು. ಚಿತ್ರ ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಶ್ರೀಮುರಳಿ ಹಾರೈಸಿದರು.
ಶ್ರೀಮುರಳಿ ಅವರು ಇಂದು ಆಗಮಿಸಿರುವುದು ನಿಜಕ್ಕೂ ಬಹಳ ಸಂತೋಷವಾಗಿದೆ ಎಂದು ಮಾತನಾಡಿದ ನಾಯಕ ಶರಣ್, ಇಂದು ನನಗೆ ಮತ್ತೊಂದು ಖುಷಿಯ ವಿಚಾರ. ಅದೇನೆಂದರೆ ನಮ್ಮ ಚಿತ್ರಕ್ಕೆ ತೆರೆಯ ಹಿಂದೆ ದುಡಿದ ಬಹುತೇಕ ತಂತ್ರಜ್ಞರು ಬಂದಿದ್ದಾರೆ. ನಿಜವಾಗಲೂ ಚಿತ್ರದ ಗೆಲುವಿಗೆ ಇವರ ಕೊಡುಗೆ ಅಪಾರ. ನಮ್ಮ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಅಂದರೆ ಅದಕ್ಕೆ ಕಾರಣ ಜನರು ನಮ್ಮ ಚಿತ್ರಕ್ಕೆ ನೀಡುತ್ತಿರುವ ಮೌತ್ ಪಬ್ಲಿಸಿಟಿ. ಈ ಸಂದರ್ಭದಲ್ಲಿ ಕನ್ನಡ ಕಲಾರಸಿಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಈ ಸುದ್ದಿಯನ್ನೂ ಓದಿ | Winter Denim Crop Top Fashion: ವಿಂಟರ್‌ನಲ್ಲಿ ಹೀಗಿರಲಿ ಬಿಂದಾಸ್ ಡೆನಿಮ್ ಕ್ರಾಪ್ ಟಾಪ್ ಸ್ಟೈಲಿಂಗ್!
ಚಿತ್ರದ ಯಶಸ್ಸಿಗೆ ಕಾರಣರಾದ ಚಿತ್ರತಂಡಕ್ಕೆ ನಿರ್ಮಾಪಕರಾದ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಧನ್ಯವಾದ ತಿಳಿಸಿದರು. ಈ ಗೆಲುವು ನನ್ನ ಚಿತ್ರತಂಡದು ಹಾಗೂ ಅಭಿಮಾನಿಗಳದು ಎಂದರು ನಿರ್ದೇಶಕ ನವನೀತ್. ನಟಿಯರಾದ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ʼಛೂ ಮಂತರ್ʼ ಚಿತ್ರದ ಯಶಸ್ಸಿನ ಖುಷಿಯನ್ನು ಮಾತುಗಳ ಮೂಲಕ ಹಂಚಿಕೊಂಡರು.