ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಜೂನ್ 4ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಇದರ ರಿಲೀಸ್ ದಿನಾಂಕ ಮುಂದೆ ಹೋಗಿದ್ದು. ಹೊಸ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಈ ನಡುವೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ನಿರ್ಮಿಸುತ್ತಿರುವ ಈ ಚಿತ್ರದ ಬಗ್ಗೆ ಒಂದಷ್ಟು ವದಂತಿಗಳು ಹಬ್ಬಿವೆ. ಆ ಬಗ್ಗೆ ಇಲ್ಲಿದೆ ಕ್ಲಾರಿಟಿ.
ರೀ- ಶೂಟಿಂಗ್ ಇಲ್ಲವೇ ಇಲ್ಲ!
ಹೌದು, ಈ ಚಿತ್ರದ ಕೆಲವು ಭಾಗಗಳ ಬಗ್ಗೆ ಯಶ್‌ಗೆ ತೃಪ್ತಿ ಇಲ್ಲದ ಕಾರಣ, ಸುಮಾರು 100 ದಿನಗಳ ಕಾಲ ರೀ-ಶೂಟಿಂಗ್ ಮಾಡಲು ಯೋಜಿಸಲಾಗಿದೆ ಎಂಬ ಭಾರಿ ವದಂತಿಗಳು ಹರಡಿದ್ದವು. ಇದಕ್ಕಾಗಿಯೇ ನಿರ್ಮಾಪಕರು ಸುಮಾರು 40 ಕೋಟಿ ರೂಪಾಯಿಗಳ ಹೆಚ್ಚುವರಿ ಹಣವನ್ನು ವೆಚ್ಚ ಮಾಡಲಿದ್ದಾರಂತೆ ಎನ್ನಲಾಗಿತ್ತು. ಆದರೆ, ಚಿತ್ರತಂಡದ ಮೂಲಗಳು ಸ್ಪಷ್ಟನೆ ನೀಡಿದ್ದು, ಯಾವುದೇ ರೀ-ಶೂಟಿಂಗ್ ಮಾಡುವ ಪ್ಲ್ಯಾನ್ ಇಲ್ಲ ಎನ್ನುವ ಮೂಲಕ ವದಂತಿಗಳಿಗೆ ತೆರೆ ಎಳೆಯಲಾಗಿದೆ.
Toxic Movie: ಗೀತು ಮೋಹನ್‌ದಾಸ್ ಹುಟ್ಟುಹಬ್ಬ; ‘ಟಾಕ್ಸಿಕ್’ ಮೇಕಿಂಗ್ ವಿಡಿಯೋ ಔಟ್!
ವದಂತಿಗಳು ಹರಡಲು ಕಾರಣವೇನು?
'ಟಾಕ್ಸಿಕ್' ರೀ-ಶೂಟಿಂಗ್ ವದಂತಿಗಳು ಹರಡಲು ಮಾರ್ಚ್ ತಿಂಗಳಿನಿಂದ ಪದೇ ಪದೇ ಬದಲಾಗುತ್ತಿರುವ ಚಿತ್ರದ ಬಿಡುಗಡೆ ದಿನಾಂಕಗಳೇ ಕಾರಣ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರತಂಡವು ಮಾರ್ಚ್ 19 ಅನ್ನು ಬಿಡುಗಡೆಯ ದಿನಾಂಕ ಎಂದು ಮೊದಲು ಘೋಷಿಸಿತ್ತು. ಆದರೆ, ಇರಾನ್ ಯುದ್ಧ ಭುಗಿಲೆದ್ದ ಕಾರಣ, ಜೂನ್ 4 ಕ್ಕೆ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿತು.
ಆದರೆ, ಯಶ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದರು. 'ಟಾಕ್ಸಿಕ್' ಸಿನಿಮಾ ಜೂನ್ 4 ರಂದೂ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿಸಿದರು. "ನಮ್ಮ ಚಿತ್ರವನ್ನು 'ಸಿನಿಮಾಕಾನ್'ನಲ್ಲಿ ಪ್ರದರ್ಶಿಸಿದಾಗ ಜಾಗತಿಕವಾಗಿ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯು ನಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಸಿನಿಮಾ ವಿಶ್ವಾದ್ಯಂತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಅರ್ಹವಾಗಿದೆ" ಎಂದು ಯಶ್ ಬರೆದುಕೊಂಡಿದ್ದರು.
Kiara Advani: ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕಿಯಾರಾ
ಸದ್ಯ ಹೊಸ ಬಿಡುಗಡೆ ದಿನಾಂಕದ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. 'ಕೆಜಿಎಫ್: ಚಾಪ್ಟರ್ 2' ನಂತರ ಯಶ್ ಅವರ ಮೊದಲ ಸಿನಿಮಾ ಇದಾಗಿರುವುದರಿಂದ ಪ್ರೇಕ್ಷಕರಲ್ಲಿ ಮತ್ತು ಚಿತ್ರರಂಗದಲ್ಲಿ ನಿರೀಕ್ಷೆಗಳು ಬೆಟ್ಟದಷ್ಟಿವೆ. ಯಶ್ ಕೇವಲ ನಾಯಕನಾಗಿ ಮಾತ್ರವಲ್ಲದೆ ಈ ಚಿತ್ರದ ಬರಹಗಾರ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು 'ಟಾಕ್ಸಿಕ್' ಚಿತ್ರವನ್ನು ಬರೋಬ್ಬರಿ 500 ಕೋಟಿ ರೂಪಾಯಿಗಳ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದು, ಇದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. ಚಿತ್ರದ ತಾರಾಗಣದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ನಮ್ಮ ಹೆಮ್ಮೆಯ ಕರಾವಳಿ ಬೆಡಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಒಟ್ಟು ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.
10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್
'ಟಾಕ್ಸಿಕ್' ಸಿನಿಮಾವನ್ನು ವಿಶ್ವಾದ್ಯಂತ ಅತ್ಯಂತ ಬೃಹತ್ ಮಟ್ಟದಲ್ಲಿ ಬಿಡುಗಡೆ ಮಾಡಲು ಯಶ್ ಯೋಜಿಸುತ್ತಿದೆ. ಅಮೆರಿಕ, ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಸಾಧ್ಯವಾದಷ್ಟು ಗರಿಷ್ಠ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಅಲ್ಲದೆ ಐಮ್ಯಾಕ್ಸ್ ಮತ್ತು ಡಾಲ್ಬಿ ಸಿನೆಮಾ ನಂತಹ ಪ್ರೀಮಿಯಂ ಫಾರ್ಮ್ಯಾಟ್‌ಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಇಂಗ್ಲಿಷ್ ಭಾಷೆಯಲ್ಲೂ ಸಿದ್ಧವಾಗಿರುವ ‘ಟಾಕ್ಸಿಕ್’ ಚಿತ್ರವನ್ನು, ವಿಶ್ವಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.