'ವಾರ್ತೆಗಳು.. ಓದುತ್ತಿರುವವರು ಶಂಕರ್‌ನಾಗ್' ಸಿನಿಮಾಕ್ಕೆ ಹೀರೋ ಆದ ನಾಗಶೇಖರ್
ನಾಗಶೇಖರ್ ಅವರು ನಿರ್ದೇಶನಕ್ಕೆ ಸ್ವಲ್ಪ ವಿರಾಮ ನೀಡಿ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಸಿನಿಮಾದ ಮೂಲಕ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ಧಾರೆ. ಅವರ ಹುಟ್ಟುಹಬ್ಬದಂದು (ನ. 11) ಈ ವಿಭಿನ್ನ ಟೈಟಲ್‌ನ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಇದೇ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ನಾಗಶೇಖರ್.
-
ಸ್ಯಾಂಡಲ್‌ವುಡ್‌ನಲ್ಲಿ ಮೊದಲು ಹಾಸ್ಯ ನಟರಾಗಿ, ಆನಂತರ ನಿರ್ದೇಶಕರಾಗಿ ಹೆಸರು ಮಾಡಿದವರು ನಾಗಶೇಖರ್. ಇದೀಗ ನಿರ್ದೇಶನಕ್ಕೆ ಕೊಂಚ ಬ್ರೇಕ್ ನೀಡಿ, ಹೀರೋ ಆಗುವುದಕ್ಕೆ ಮುಂದಾಗಿದ್ದಾರೆ. ಅವರು ಹೀರೋ ಆಗಿರುವ ಸಿನಿಮಾಕ್ಕೆ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಎಂದು ವಿಭಿನ್ನ ಟೈಟಲ್ ಇಡಲಾಗಿದೆ.
ನೆರವೇರಿದ ಸಿನಿಮಾ ಮುಹೂರ್ತ
ನವೆಂಬರ್ 11ರಂದು ನಾಗಶೇಖರ್ ಅವರ ಹುಟ್ಟುಹಬ್ಬವಿತ್ತು. ಅದೇ ದಿನ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಸಿನಿಮಾಗೆ ಮುಹೂರ್ತ ನೆರವೇರಿದೆ. ಆರ್ ಆರ್ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ನಾಗಶೇಖರ್ ಅವರ ತಾಯಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ವಿ ಎನ್ ಕಿರಣ್ (ವಾಸಣ್ಣ) ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಾಗರ ಎ. ರಾಮ್ ಚಿರು ಪ್ರೊಡಕ್ಷನ್ ಹೌಸ್ ಮೂಲಕ ರಾಮ್ ಚಿರು ಅವರು ಬಂಡವಾಳ ಹೂಡುತ್ತಿದ್ದಾರೆ. ನವೆಂಬರ್ 15ರಿಂದ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
Rachita Ram: ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ನಿರ್ದೇಶಕ ನಾಗಶೇಖರ್ ದೂರು; ಕಾರಣವೇನು?
ಸಂಗೀತ ನಿರ್ದೇಶಕರಾದ ನಾಗಶೇಖರ್
ನಟನೆಯಿಂದ ನಿರ್ದೇಶಕರಾಗಿದ್ದ ನಾಗಶೇಖರ್ ಅವರು ಇದೀಗ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಹೊಸ ಸಾಹಸಕ್ಕೆ ನಾಗಶೇಖರ್ ಕೈ ಹಾಕಿದ್ದಾರೆ. ಜೊತೆಗೆ ಈ ಚಿತ್ರದ ಹೀರೋ ಕೂಡ ಆಗಿರುವ ಅವರು ಸಹ ನಿರ್ಮಾಣವನ್ನು ಕೂಡ ಮಾಡಲಿದ್ದಾರೆ. ಚಿತ್ರದ ಉಳಿದ ತಾಂತ್ರಿಕವರ್ಗ ಹಾಗೂ ಕಲಾವಿದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.
ನಾಗಶೇಖರ್ ಸಿನಿಮಾ ಜರ್ನಿ
2008ರಲ್ಲಿ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡ ನಾಗಶೇಖರ್, ನಂತರ ʻಸಂಜು ವೆಡ್ಸ್ ಗೀತಾʼ ಮೂಲಕ ದೊಡ್ಡ ಹೆಸರು ಗಳಿಸಿದರು. ʻಮೈನಾʼ ಮೂಲಕ ನಿರ್ದೇಶಕರಾಗಿ ಮತ್ತೊಂದು ಗೆಲುವು ನಾಗಶೇಖರ್ ಅವರಿಗೆ ದಕ್ಕಿತು. ಮಾಸ್ತಿ ಗುಡಿ, ಅಮರ್, ಸಂಜು ವೆಡ್ಸ್ ಗೀತಾ 2 ಸಿನಿಮಾಗಳನ್ನು ಕೂಡ ನಾಗಶೇಖರ್ ಅವರು ನಿರ್ದೇಶಿಸಿದ್ದಾರೆ. ʻಗುರ್ತುಂದಾ ಸೀತಾಕಾಂʼ ಮೂಲಕ ತೆಲುಗು ಚಿತ್ರರಂಗಕ್ಕೂ ನಾಗಶೇಖರ್ ಕಾಲಿಟ್ಟಿದ್ದರು. ಇದೀಗ ಅವರು 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕೆಲ ತಿಂಗಳ ಹಿಂದೆ ನಾಗಶೇಖರ್ ನಿರ್ದೇಶನದ ʻಸಂಜು ವೆಡ್ಸ್ ಗೀತಾ 2ʼ ಸಿನಿಮಾವು ತೆರೆಕಂಡಿತ್ತು. ಶ್ರೀನಗರ ಕಿಟ್ಟಿ, ರಚಿತಾ ರಾಮ್ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಒಂದೇ ವರ್ಷದಲ್ಲಿ ಎರಡು ಬಾರಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು.