ಚೆನ್ನೈ, ನ. 1: ಚಿತ್ರರಂಗದ ಸ್ಟಾರ್ ಕಲಾವಿದರ ಸಂಭಾವನೆ ಕೋಟಿ ರೂ. ಗಡಿ ದಾಟಿ ಮುನ್ನಡೆಯುತ್ತಿದೆ. ನಟರು ಮಾತ್ರವಲ್ಲ ನಟಿಯರೂ ಇತ್ತೀಚೆಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರಗಳಲ್ಲಿ ನಟಿಸುವ ಜತೆಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕವೂ ದಾಖಲೆ ಪ್ರಮಾಣದಲ್ಲಿ ಹಣ ಗಳಿಸುತ್ತಿದ್ದಾರೆ. ಇದೀಗ ದಕ್ಷಿಣ ಭಾರತದ ಜನಪ್ರಿಯ ತಾರೆ, ಸ್ಟಾರ್ ನಟಿಯೊಬ್ಬರು 50 ಸೆಕೆಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಚಿತ್ರಕ್ಕಾಗಿ ಕೋಟಿ ಕೋಟಿ ರೂ. ದುಡಿಯುವ ಅವರು ಜಾಹೀರಾತಿಗೆ ದಾಖಲೆಯ ಸಂಭಾವನೆ ಮೂಲಕ ಗಮನ ಸಳೆದಿದ್ದಾರೆ. ಅವರೇ ಬಹುಭಾಷಾ ತಾರೆ ನಯನತಾರಾ (Nayanthara).
ಹೌದು, ಕಾಲಿವುಡ್ ಮತ್ತು ಟಾಲಿವುಡ್‌ನ ಟಾಪ್ ನಟಿಯಾಗಿ, ದಕ್ಷಿಣ ಭಾರತದ ಬಹುತೇಕ ಎಲ್ಲ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಯನತಾರಾ ಇದೀಗ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ನಯನತಾರಾ ಹೆಸರು ಮುಂಚೂಣಿಯಲ್ಲಿದೆ. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಯನತಾರಾ ಪ್ರತಿ ಚಿತ್ರಕ್ಕೆ 8-10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದೀಗ ಜಾಹೀರಾತಿಗೆ ಪಡೆದ ಸಂಭಾವನೆ ಹಲವರ ಹುಬ್ಬೇರಿಸುವಂತೆ ಮಾಡಿದೆ.
ಈ ಸುದ್ದಿಯನ್ನೂ ಓದಿ: Toxic Movie: ಭರದಿಂದ ಸಾಗುತ್ತಿದೆ ಯಶ್ ʼಟಾಕ್ಸಿಕ್ʼ ಶೂಟಿಂಗ್; ಮಕ್ಕಳೊಂದಿಗೆ ಮುಂಬೈಗೆ ಬಂದಿಳಿದ ನಯನತಾರಾ
ಸದ್ಯ ನಯನತಾರಾ ಪ್ಯಾನ್ ಇಂಡಿಯಾ ಸ್ಟಾರ್. ಮಲಯಾಳಂ ಚಾನಲ್‌ವೊಂದರಲ್ಲಿ ನಿರೂಪಕಿಯಾಗಿದ್ದ ಅವರು ಬಳಿಕ ಮಾಲಿವುಡ್‌ಗೆ ಕಾಲಿಟ್ಟು, ಕಾಲಿವುಡ್, ಟಾಲಿವುಡ್‌ನ ಟಾಪ್ ನಟಿ ಎನಿಸಿಕೊಂಡಿದ್ದಾರೆ. ಟಾಟಾ ಸ್ಕೈಯ 50 ಸೆಕೆಂಡ್‌ನ ಜಾಹೀರಾತಿಗೆ ಅವರು ಬರೋಬ್ಬರಿ 5 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.
2 ದಶಕಗಳಿಂದ ಸಕ್ರೀಯ
ಚಿತ್ರರಂಗಕ್ಕೆ ಬಂದು 2 ದಶಕ ಕಳೆದರೂ ನಯನತಾರಾ ಅದೇ ಚಾರ್ಮ್, ಬೇಡಿಕೆ ಉಳಿಸಿಕೊಂಡಿರುವುದು ವಿಶೇಷ. 2003ರಲ್ಲಿ ತೆರೆಕಂಡ ಮಲಯಾಳಂನ ʼಮನಸ್ಸಿನಕ್ಕರೆʼ ನಯನತಾರಾ ನಟನೆಯ ಮೊದಲ ಚಿತ್ರ. 2005ರಲ್ಲಿ ʼಅಯ್ಯʼ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕಾಲಿವುಡ್‌ಗೆ ಕಾಲಿಟ್ಟರು. 2006ರಲ್ಲಿ ರಿಲೀಸ್ ಆದ ʼಲಕ್ಷ್ಮೀʼ ಮೊದಲ ತೆಲುಗು ಸಿನಿಮಾ. ಇನ್ನು 2010ರಲ್ಲಿ ತೆರೆಕಂಡ ಉಪೇಂದ್ರ ನಟಿಸಿ, ನಿರ್ದೇಶಿಸಿದ ʼಸೂಪರ್ʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೂ ಪದಾರ್ಪಣೆ ಮಾಡಿದರು. ಹೀಗೆ ಸೂರ್ಯ, ಮಾಧವನ್, ಅಜಿತ್, ವೆಂಕಟೇಶ್, ವಿಜಯ್, ಚಿರಂಜೀವಿ, ಉಪೇಂದ್ರ, ಆರ್ಯ, ವಿಜಯ್ ಸೇತುಪತಿ, ಮೋಹನ್‌ಲಾಲ್, ಮಮುಟ್ಟಿ, ದಿಲೀಪ್, ಪೃಥ್ವಿರಾಜ್ ಸುಕುಮಾರನ್ ಮುಂತಾದ ದಕ್ಷಿಣದ ಬಹುತೇಕ ಸೂಪರ್ ಸ್ಟಾರ್‌ಗಳ ಜತೆಗ ತೆರೆಹಂಚಿಕೊಂಡಿದ್ದಾರೆ.
ಯಶ್ ಚಿತ್ರದಲ್ಲಿ ನಯನತಾರಾ
2023ರಲ್ಲಿ ಬಿಡುಗಡೆಯಾದ ʼಜವಾನ್ʼ ಮೂಲಕ ನಯನತಾರಾ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಶಾರುಖ್ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಅವರ ಅಭಿನಯಕ್ಕೆ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸದ್ಯ ನಯನತಾರಾ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದರಲ್ಲಿ ಕನ್ನಡದ ʼಟಾಕ್ಸಿಕ್ʼ ಚಿತ್ರ ಮುಖ್ಯವಾದುದು. ಯಶ್ ನಟನೆಯ ಈ ಚಿತ್ರ ಕನ್ನಡ ಜತೆ ಇಂಗ್ಲಿಷ್‌ನಲ್ಲೂ ನಿರ್ಮಾಣವಾಗುತ್ತಿದೆ. ಸದ್ಯ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರೊಂದಿಗೆ ಮಲಯಾಳಂ, ತಮಿಳು, ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.