ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿವಾನಂದ ನೀಲಣ್ಣವರ‌ ಸಾವಿರಾರು ಕೋಟಿ ವಂಚನೆ ಕೇಸ್‌ನಲ್ಲಿ ಪೊಲೀಸರು ಬಾಲಿವುಡ್‌ ನಟಿ ಸನ್ನಿ ಲಿಯೋನ್‌ಗೆ ನೋಟಿಸ್‌ ನೀಡಿರೋದ್ಯಾಕೆ?

ಬೆಳಗಾವಿ ಮೂಲದ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯು 40,700 ಗ್ರಾಹಕರಿಂದ 2,400 ಕೋಟಿ ರೂ. ವಸೂಲಿ ಮಾಡಿ ವಂಚಿಸಿದ ಪ್ರಕರಣಕ್ಕೆ ಚಿತ್ರರಂಗದ ನಂಟು ಬಯಲಾಗಿದೆ. ಆರೋಪಿ ಶಿವಾನಂದ ನೀಲಣ್ಣವರ ಜನರಿಂದ ಪಡೆದ ಹಣವನ್ನು 'ಚಾಂಪಿಯನ್' ಸಿನಿಮಾ ನಿರ್ಮಾಣಕ್ಕೆ ಹಾಗೂ ನಟಿ ಸನ್ನಿ ಲಿಯೋನ್‌ಗೆ 1 ಕೋಟಿ ರೂ. ಸಂಭಾವನೆ ನೀಡಲು ಅಕ್ರಮವಾಗಿ ಬಳಸಿದ್ದಾನೆ.

ಬೆಳಗಾವಿ ಮೂಲದ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣವೀಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಆರೋಪ ಕೇಳಿಬಂದಿದ್ದು, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ. ಸದ್ಯ ಈ ಹಗರಣದ ತನಿಖೆ ಈಗ ಸಿನಿಮಾ ಗ್ಲಾಮರ್ ಜಗತ್ತಿನೊಂದಿಗೂ ತಳುಕು ಹಾಕಿಕೊಂಡಿದೆ.

ಹೂಡಿಕೆದಾರರ ಹಣವನ್ನು ಚಿತ್ರರಂಗ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮನಬಂದಂತೆ ಖರ್ಚು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ನೋಟಿಸ್ ನೀಡಲಾಗಿದ್ದು, ಇದೀಗ ಹಲವು ಕನ್ನಡಿಗ ನಟ-ನಟಿಯರಿಗೂ ನೋಟಿಸ್ ನೀಡಲು ಸಿಐಡಿ ಪೊಲೀಸರು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸನ್ನಿ ಲಿಯೋನ್‌ಗೆ ನೋಟಿಸ್‌ ನೀಡಿರೋದ್ಯಾಕೆ?

ಕೋಟಿ ಕೋಟಿ ಸಂಭಾವನೆ ಪಡೆದಿದ್ದರೇ ಸನ್ನಿ ಲಿಯೋನ್?

ಶಿವಂ ಅಸೋಸಿಯೇಟ್ಸ್‌ನ ಶಿವಾನಂದ ನೀಲಣ್ಣವರ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ. 2023ರಲ್ಲಿ ‘ಚಾಂಪಿಯನ್’ ಎಂಬ ಕನ್ನಡ ಸಿನಿಮಾವನ್ನು ಈತ ನಿರ್ಮಿಸಿದ್ದ. ಈ ಚಿತ್ರದ ವಿಶೇಷ ಹಾಡೊಂದಕ್ಕಾಗಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಅವರನ್ನು ಕರೆತರಲಾಗಿತ್ತು. ಆ ಹಾಡಿನಲ್ಲಿ ಹೆಜ್ಜೆ ಹಾಕಿದ್ದಕ್ಕಾಗಿ ಅವರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬುದನ್ನು ಸಿಐಡಿ ಅಧಿಕಾರಿಗಳು ದಾಖಲೆಗಳ ಸಮೇತ ಪತ್ತೆಹಚ್ಚಿದ್ದಾರೆ.

Sunny Leone: ಸನ್ನಿ ಲಿಯೋನ್‌ಗೂ ಸರ್ಕಾರದಿಂದ ಸಿಗ್ತಿದ್ಯಾ ತಿಂಗಳಿಗೆ 1000 ರೂ. !? ಈತನ ಖತರ್ನಾಕ್‌ ಐಡಿಯಾಗೆ ಅಧಿಕಾರಿಗಳೇ ಶಾಕ್‌

ಜನರಿಂದ ಪಡೆದುಕೊಂಡಿದ್ದ ಡೆಪಾಸಿಟ್ ಹಣವನ್ನೇ 'ಚಾಂಪಿಯನ್' ಸಿನಿಮಾ ನಿರ್ಮಾಣಕ್ಕೆ ಹಾಗೂ ಸನ್ನಿ ಲಿಯೋನ್ ಅವರಿಗೆ ಸಂಭಾವನೆ ನೀಡಲು ಅಕ್ರಮವಾಗಿ ಬಳಸಲಾಗಿದೆ ಎಂಬುದು ದೃಢಪಟ್ಟಿರುವುದರಿಂದ, ಈ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಸನ್ನಿ ಲಿಯೋನ್‌ಗೆ ಸಿಐಡಿ ಅಧಿಕಾರಿಗಳು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಅಂದಹಾಗೆ, ಶಾಹುರಾಜ್ ಶಿಂಧೆ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬಂದಿದ್ದ ʻಚಾಂಪಿಯನ್ʼ‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೇನೂ ಉತ್ತಮ ಕಮಾಯಿ ಮಾಡಿರಲಿಲ್ಲ. ಈ ಚಿತ್ರದಲ್ಲಿ ಸಚಿನ್ ಧನ್‌ಪಾಲ್, ಅದಿತಿ ಪ್ರಭುದೇವ, ದೇವರಾಜ್, ರಂಗಾಯಣ ರಘು, ಚಿಕ್ಕಣ್ಣ, ಅವಿನಾಶ್ ಮುಂತಾದವರು ನಟಿಸಿದ್ದರು.

ಸ್ಯಾಂಡಲ್‌ವುಡ್ ಕಲಾವಿದರಿಗೂ ನೋಟಿಸ್‌?

ಸನ್ನಿ ಲಿಯೋನ್ ಮಾತ್ರವಲ್ಲದೆ ಕನ್ನಡದ ಹಲವು ಪ್ರಮುಖ ಸೆಲೆಬ್ರಿಟಿಗಳಿಗೂ ಈ ಹಗರಣದ ಬಿಸಿ ತಟ್ಟಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಈ ಸಂಸ್ಥೆಯ ಆಶ್ರಯದಲ್ಲಿ ನಡೆದಿದ್ದ ಕನ್ನಡ ಸಾಂಸ್ಕೃತಿಕ ಉತ್ಸವವೊಂದರಲ್ಲಿ ಹಲವು ಜನಪ್ರಿಯ ಸಿನಿತಾರೆಯರು ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸ್ಯಾಂಡಲ್‌ವುಡ್‌ನ ಕೆಲ ಪ್ರಮುಖ ತಾರೆಯರಿಗೂ ನೋಟಿಸ್ ನೀಡಲು ಸಿಐಡಿ ಸಿದ್ಧತೆ ನಡೆಸಿದೆ. ವಂಚನೆಗೆ ಒಳಗಾದ ಸಂತ್ರಸ್ತರ ಹಣದಿಂದಲೇ ಇವರಿಗೂ ಭಾರಿ ಮೊತ್ತದ ಸಂಭಾವನೆ ಸಂದಾಯವಾಗಿದೆ ಎಂಬ ಶಂಕೆಯಿದ್ದು, ಈ ಹಣ ಯಾವ ರೂಪದಲ್ಲಿ ತಲುಪಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳು ಕೇಳಲಿದ್ದಾರೆ.

Sunny Leone: ಬೆಂಗಳೂರಿನಲ್ಲಿ ಕುಣಿದು, ಕುಣಿಸಿದ ಶೇಷಮ್ಮ; IGNITE ಸೂಪರ್ ಕ್ಲಬ್‌ನಲ್ಲಿ ಸನ್ನಿ ಲಿಯೋನ್ ಡಿಜೆ ಪಾರ್ಟಿ ಜೋರು

ಏನಿದು ಹಗರಣ?

ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಯಾವುದೇ ಸರ್ಕಾರಿ ಅನುಮತಿಯಿಲ್ಲದೆ ಬರೋಬ್ಬರಿ 40,700 ಗ್ರಾಹಕರಿಂದ ಒಟ್ಟು 2,400 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ವಸೂಲಿ ಮಾಡಿದೆ. ಗ್ರಾಹಕರಿಗೆ ವಾರ್ಷಿಕ ಶೇ. 36 ರಿಂದ ಶೇ. 60 ರಷ್ಟು ಹೆಚ್ಚಿನ ಬಡ್ಡಿ ನೀಡುವುದಾಗಿ ಆಸೆ ತೋರಿಸಲಾಗಿತ್ತು. ಜನರಿಂದ ಸಂಗ್ರಹಿಸಿದ ಹಣದಲ್ಲಿ 540 ಕೋಟಿ ರೂ.ಗಳನ್ನು ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ, ಅದರಲ್ಲಿ 170 ಕೋಟಿ ರೂ.ಗಳನ್ನು ಶಿವಾನಂದ ನೀಲಣ್ಣವರ್ ಕಳೆದುಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.