Sunday, 27th November 2022

ಪೊಲೀಸ್ ಇನ್ಸ್‌ಪೆಕ್ಟರ್ ಗೆ ಏಕವಚನದಲ್ಲಿ ಅವಾಜ್ ಹಾಕಿದ ಮೂಡಿಗೆರೆ ಶಾಸಕ

ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಲ್ಲಂದೂರು ಪೊಲೀಸ್ ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಏಕವಚನದಲ್ಲಿ ಅವಾಜ್ ಹಾಕಿ ಬಾಯಿಗೆ ಬಂದಂತೆ ನಿಂದಿಸಿ ದ್ದಾರೆ.

ಮಲ್ಲಂದೂರು ಠಾಣೆಯ ಇನ್ಸ್‌ಪೆಕ್ಟರ್ ರವೀಶ್ ಗೆ ಆವಾಜ್ ಹಾಕಿ ನಿಂದಿಸಿದ್ದಾರೆ. ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲಿದ್ದೀಯಾ? ನಿನ್ನನ್ನ ಇಲ್ಲಿಗೆ ಬರಬೇಡ ಎಂದು ಹೇಳಿದ್ದೆ ತಾನೆ? ಮತ್ತೆ ಏಕೆ ಬಂದಿದ್ದೀಯಾ? ನೀನು ವಾಪಸ್ ಹೋಗು, ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ, ಮರ್ಯಾದೆಯಿಂದ ವಾಪಸ್ ಹೋಗೊಲೇ.! ನಾನು ಹೇಳಿದ ಹಾಗೆ ಕೇಳು, ಬೇಕಾದ್ರೆ ರೆಕಾರ್ಡ್ ಮಾಡ್ಕೋ. ಬಂದ ರೀತಿಯಲ್ಲೇ ವಾಪಸ್ ಹೋಗು, ನಾಳೆಯೇ ನಿನ್ನ ಡೆಪ್ಟೇಶನ್ ಮಾಡಿಸುತ್ತೇನೆ. ಐಜಿಗೆ ಎಷ್ಟು ಲಂಚ ಕೊಟ್ಟಿ ದ್ದೀಯಾ.? ಯಾವನೂ ಐಜಿ.? ಐಜಿಯಲ್ಲ, ಮೂಡಿಗೆರೆಲಿ ಎಲ್ಲ ನಾನೆ! ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ ಎಂದು ನಿಂದಿಸಿದ್ದಾರೆ.

ಇದೆ ವೇಳೆ ಶಾಸಕ ಕುಮಾರಸ್ವಾಮಿ ಐಜಿ ಅವರನ್ನು ನಿಂದಿಸಿದ್ದಾರೆ. ಈ ಸಂಬಂಧ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಲ್ಲಂದೂರು ಠಾಣಾಧಿಕಾರಿಗೆ ಆವಾಜ್ ಹಾಕಿದ್ದು ನಿಜ, ಹೊಸದಾಗಿ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಸೌಜನ್ಯಕ್ಕಾದರೂ ನನಗೆ ಮಾಹಿತಿ ನೀಡಿಲ್ಲ. ಭೇಟಿಯಾಗಿಲ್ಲ. ಆತ ಐಜಿ ಸೇರಿ ಎಲ್ಲರಿಗೂ ಲಂಚ ನೀಡಿ ಬಂದಿದ್ದಾನೆ. ನಾನು ಮಾತನಾಡಿದ್ದನ್ನು ರೆಕಾರ್ಡ್ ಮಾಡಿದ್ದಾನೆ. ಈ ಬಗ್ಗೆ ಆತನ ವಿರುದ್ಧ ಹಕ್ಕು ಚ್ಯುತಿ ಮಂಡಿಸುತ್ತೆನೆ. ನಾನು ಠಾಣಾಧಿಕಾರಿಗೆ ಆವಾಜ್ ಹಾಕಿದ್ದು ನಿಜ, ನನ್ನ ಮಾತಿಗೆ ನಾನು ಈಗಲೂ ಬದ್ಧ, ಅತ ಲಂಚ ನೀಡಿ ಬಂದಿದ್ದಾನೆ. ಭ್ರಷ್ಟರು ನನ್ನ ಕ್ಷೆತ್ರದಲ್ಲಿರಬಾರದು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.