Sunday, 3rd July 2022

ದೆಹಲಿ ತಲುಪಿದ ಎನ್‌ಡಿಎ ನಾಮನಿರ್ದೇಶಿತ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ನಾಮನಿರ್ದೇಶಿತ ದ್ರೌಪದಿ ಮುರ್ಮು ಅವರು ಗುರುವಾರ ಭುವನೇಶ್ವರದಿಂದ ದೆಹಲಿ ತಲುಪಿದ್ದಾರೆ.

ಶುಕ್ರವಾರ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದು, ರಾಜಧಾನಿಗೆ ಭೇಟಿ ನೀಡಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ದ್ರೌಪದಿ ಮುರ್ಮು ನಾಮಪತ್ರ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 

ಮೋದಿ, ನಡ್ಡಾ ಮತ್ತು ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಸಲಹೆಗಾರರಲ್ಲಿ ಸೇರಿದ್ದಾರೆ. ಅವರ ನಾಮ ನಿರ್ದೇಶನ ಬೆಂಬಲಿಸಿದ ಬಿಜೆಡಿಯ ಸಸ್ಮಿತ್ ಪಾತ್ರ ಕೂಡ ಜೋಶಿ ಅವರ ಮನೆಯಲ್ಲಿ ಪತ್ರಗಳಿಗೆ ಸಹಿ ಹಾಕಲು ಸೇರಿದ್ದರು.

ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ್ ಜೋಶಿ ಅವರ ನಿವಾಸ ಗುರುವಾರ ರಾಜಕೀಯದ ಕೇಂದ್ರಬಿಂದುವಾಗಿತ್ತು. ಹಲವು ರಾಜ್ಯಗಳಿಂದ ಬಿಜೆಪಿ ನಾಯಕರು ಪ್ರತಿಪಾದಕರು ಮತ್ತು ಸೂಚಕರು ಸಹಿ ಹಾಕಲು ಆಗಮಿಸಿದ್ದರು.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಸೂಚಕರಾಗಿ ಸಹಿ ಹಾಕಲು ಜೋಶಿ ನಿವಾಸಕ್ಕೆ ತೆರೆಳಿದ್ದು, ಇನ್ನೂ ಹಲವರು ಸಹಿ ಹಾಕುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ನಾಮಪತ್ರ ಸಲ್ಲಿಸುವ ಮೊದಲು ಭೇಟಿಯಾದರು. ರಾಷ್ಟ್ರಪತಿ ಚುನಾವಣೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಭಾರತದಾದ್ಯಂತ ಸಮಾಜದ ಎಲ್ಲಾ ವರ್ಗಗಳಿಂದ ಮೆಚ್ಚುಗೆ ಪಡೆದಿದೆ ಎಂದು ಮೋದಿ ಹೇಳಿದರು.ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ, ಬಿಜೆಪಿ ಸಂಸದ ಮನೋಜ್ ತಿವಾರಿ ಮತ್ತು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಬಿಧುರಿ ಸೇರಿದಂತೆ ಹಲವು ದೆಹಲಿ ಬಿಜೆಪಿ ನಾಯಕರು ಮುರ್ಮು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿ ಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 14 ನೇ ರಾಷ್ಟ್ರಪತಿ ಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ.