Friday, 2nd December 2022

ನಾಟಕಗಳಲ್ಲಿ ಅಬ್ಬರಿಸಿದರೂ ಸ್ವಗತದಲ್ಲೆ ಬದುಕು ಕಳೆದರು

ಇಪ್ಪತ್ತನೆ ಶತಮಾನದ ಆದಿಯಲ್ಲಿ, ಸರಿಯಾಗಿ ಹೇಳಬೇಕೆಂದರೆ 1919ರಲ್ಲಿ, ಕನ್ನಡ ರಂಗಭೂಮಿಯು ಒಂದು ಹೊಸ ದಿಕ್ಕಿಗೆ ಹೊರಳಿಕೊಂಡಿತು. ಕಾವ್ಯಜಗತ್ತಿನಲ್ಲಿ ಅರುಣೋದಯ, ನವೋದಯ ಇತ್ಯಾದಿ ಕಾಲಘಟ್ಟಗಳನ್ನು ಗುರುತಿಸುವಂತೆ ನಾಟಕಕ್ಷೇತ್ರದಲ್ಲಿ ಗುರುತಿಸುವ ಪರಿಪಾಠ ಅದೇಕೋ ಇದ್ದಂತೆ ಕಾಣುವುದಿಲ್ಲ. ಆದರೆ ಕನ್ನಡ ನಾಟಕ ತನ್ನ ಹಳೆವೇಷಗಳನ್ನೆಲ್ಲ ಕಳಚಿ, ಕಿರೀಟ-ಕತ್ತಿಗಳನ್ನು ಪಕ್ಕಕ್ಕಿಟ್ಟು ಹೊಸ ರೂಪ ಧರಿಸಿ ಮೈಚಳಿಬಿಟ್ಟು ರಂಗಕ್ಕೇರಿದ ವರ್ಷ ಯಾವುದು ಎಂದರೆ ಅದು ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದಿನ 1919. ಯಾಕೆಂದರೆ ಆ ವರ್ಷ ಬೆಂಗಳೂರಿನ ಎಡಿಎ ಸಂಸ್ಥೆ ಏರ್ಪಡಿಸಿದ್ದ ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಇಬ್ಬರು ಹೊಚ್ಚಹೊಸ ನಾಟಕಕಾರರು ಬೆಳಕಿಗೆ ಬಂದರು. ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದದ್ದು `ಸುಗುಣ ಗಂಭೀರ’ ಎಂಬ ಹೆಸರಿನ ನಾಟಕ.

ಬರೆದವನು ಇಪ್ಪತ್ತೊಂದರ ಹರೆಯದ ಚಿಗುರುಮೀಸೆಯ ಎಳೆನಿಂಬೇಕಾಯಿ. ಹೆಸರು ವೆಂಕಟಾದ್ರಿ ಅಯ್ಯರ್. ಮೊದಲ ಬಹುಮಾನ ಪಡೆದವನು ಮೂವತ್ತೈದರ ಹರೆಯದ ಹೈದ. ಹೆಸರು ಟಿ.ಪಿ. ಕೈಲಾಸಂ. ಬರೆದ ನಾಟಕ: `ಟೊಳ್ಳುಗಟ್ಟಿ.’ ಸ್ವಾರಸ್ಯವೆಂದರೆ ಇಬ್ಬರ ಮನೆಮಾತೂ ಕನ್ನಡವಲ್ಲ, ತಮಿಳು! ಆದರೆ ಇಬ್ಬರೂ ಕನ್ನಡದಲ್ಲಿ ನಾಟಕ ಬರೆಯುವ ಯತ್ನ ಮಾಡಿದ್ದರು. ಒಬ್ಬನದ್ದು ಇಂಗ್ಲೆಂಡಿನ ಬೀದಿಯಲ್ಲಿ ಕೂಲಿಂಗ್ ಗ್ಲಾಸೇರಿಸಿ ಗತ್ತಿನಲ್ಲಿ ಮಾತಾಡುವ ಬೋರೇಗೌಡನ ಆಧುನಿಕ ಕನ್ನಡದಂತಿದ್ದರೆ ಇನ್ನೊಬ್ಬನದ್ದು ನೂರಿನ್ನೂರು ವರ್ಷಗಳಷ್ಟು ಹಿಂದೆ ಮೈಸೂರು ಸಂಸ್ಥಾನದಲ್ಲಿ ಅರಸರು ಆಡುತ್ತಿದ್ದ ಗ್ರಾಂಥಿಕ ಬಿಗಿಬಂಧದ ನಡುಗನ್ನಡ. ಈ ನಾಟಕಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಬಿ.ಎಂ. ಶ್ರೀಕಂಠಯ್ಯ, ಬೆನಗಲ್ ರಾಮರಾಯರು ಮತ್ತು ನಂಗಪುರಂ ವೆಂಕಟೇಶ ಅಯ್ಯಂಗಾರರು. ಬಿಎಂಶ್ರೀ ಹೊರತುಪಡಿಸಿ ಮಿಕ್ಕಿಬ್ಬರ ಮನೆಮಾತು ಕೂಡ ಕನ್ನಡವಾಗಿರಲಿಲ್ಲ ಎಂಬುದು ಇನ್ನೊಂದು ವಿಶೇಷ!

ಕಾವ್ಯೇಷು ನಾಟಕಂ ರಮ್ಯಂ’ ಎಂದ ಕವಿರತ್ನ ಕಾಳಿದಾಸ. ಕಾವ್ಯ, ಖಂಡಕಾವ್ಯ, ನಾಟಕ ಎಂಬಿತ್ಯಾದಿ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ ವ್ಯಕ್ತಿಯೇ ಕೊನೆಗೆ ನಾಟಕವೇ ಎಲ್ಲಕ್ಕಿಂತ ಉತ್ತಮವಾದದ್ದು ಎಂದು ಸರ್ಟಿಫಿಕೇಟು ಕೊಟ್ಟಿರುವುದರಿಂದ ಅದನ್ನು ನಾವು ಮರುಮಾತಿಲ್ಲದೆ ಒಪ್ಪಬಹುದೇನೋ! ನಾಟಕ ಪ್ರಕಾರ ಭಾರತಕ್ಕೆ ಹೊಸತಲ್ಲ. ಇಬ್ಬರ ನಡುವಿನ ಸಂಭಾಷಣೆಯನ್ನು ದಾಖಲಿಸುವ ಮೂಲಕ ಹಾಗೊಂದು ಸಾಹಿತ್ಯಮಾರ್ಗಕ್ಕೆ ತೆರೆದುಕೊಳ್ಳಲು ಸಾಧ್ಯವಿದೆಯೆಂಬ ಸೂಚನೆ ನಮಗೆ ಯಮ-ನಚಿಕೇತ, ಯಾಜ್ಞವಲ್ಕ್ಯ-ಮೈತ್ರೇಯಿ, ಹಾರಿದ್ರುಮತ ಗೌತಮ-ಸತ್ಯಕಾಮ ಜಾಬಾಲ, ಸನತ್ಕುಮಾರ-ನಾರದ ಮುಂತಾದ ವ್ಯಕ್ತಿಗಳ ನಡುವಿನ ಮಾತುಕತೆಯನ್ನು ದಾಖಲಿಸುವ ಉಪನಿಷತ್ತುಗಳಲ್ಲೇ ಸಿಗುತ್ತದೆ.

ಭರತಮುನಿಯ ನಾಟ್ಯಶಾಸ್ತ್ರವು ನಾಟಕರಚನೆ ಮತ್ತು ಪ್ರದರ್ಶನಕ್ಕೆ ಬೇಕಾದ ಶಿಸ್ತಿನ ಚೌಕಟ್ಟನ್ನು ಕಲಿಸಿಕೊಟ್ಟಿತು. ಭಾಸ, ಕಾಳಿದಾಸ, ಭವಭೂತಿಯಂಥ ಮೇರುವ್ಯಕ್ತಿತ್ವಗಳು ನಾಟಕಸಾಹಿತ್ಯಕ್ಕೆ ಘನತೆ, ಗೌರವ ತಂದುಕೊಟ್ಟರು. ಮಾತ್ರವಲ್ಲದೆ ಉಳಿದವರೂ ಈ ದಾರಿಯಲ್ಲಿ ಧೈರ್ಯವಾಗಿ ನಾಲ್ಕು ಹೆಜ್ಜೆ ಇಡಲು ಪರೋಕ್ಷ ಪೆÇ್ರೀತ್ಸಾಹವಾದರು. ಕಾವ್ಯ-ಪುರಾಣಗಳಿಂದಲೇ ಕತೆಗಳನ್ನು ಎತ್ತಿಕೊಂಡು ರಂಗಕಲೆಗೆ ಅಳವಡಿಸುತ್ತಿದ್ದ ಹಳೆ ಪದ್ಧತಿಗೆ ಮುಕ್ತಿಕೊಟ್ಟವನು ರಾಜ ಶೂದ್ರಕ. ಅವನ `ಮೃಚ್ಛಕಟಿಕ’ ಸಾಮಾಜಿಕ ವಿಷಯ-ವೈವಿಧ್ಯವೂ ನಾಟಕದ ವಸ್ತುವಾಗಬಲ್ಲುದು ಎಂಬುದನ್ನು ಮೊದಲ ಬಾರಿಗೆ ತೋರಿಸಿಕೊಟ್ಟಿತು.

ಭಾರತದ ಕಲಾಪರಂಪರೆ ಅವಿಚ್ಛಿನ್ನ, ವೈವಿಧ್ಯಪೂರ್ಣ. ಇಲ್ಲಿ ಯಾವುದಾದರೊಂದು ಕಲಾಪ್ರಕಾರ ಹೇಗೆ, ಯಾವಾಗ, ಎಲ್ಲಿ, ಯಾರಿಂದ ಶುರುವಾಯಿತೆಂದು ಪತ್ತೆಹಚ್ಚುವುದು ಸ್ವತಃ ಪರಬ್ರಹ್ಮನಿಗೂ ಸಾಧ್ಯವಿಲ್ಲದ ಕೆಲಸ. ಬೇರೆಲ್ಲ ಬಿಡಿ, ನಮ್ಮ ಕನ್ನಡದ ನೆಲದ ದೊಡ್ಡಾಟ, ಸಣ್ಣಾಟ, ಯಕ್ಷಗಾನ, ಮೂಡಲಪಾಯ, ಶ್ರೀಕೃಷ್ಣಪಾರಿಜಾತ ಮುಂತಾದ ಕಲೆಗಳನ್ನು ನೋಡಿದರೂ ಅಷ್ಟೆ, ಯಾವುದು ಯಾವುದನ್ನು ಪ್ರಚೋದಿಸಿತು, ಪ್ರಭಾವಿಸಿತು ಎಂದು ಹೇಗೆ ಹೇಳುವುದು? ಯಕ್ಷಗಾನಕ್ಕೆ `ಕಥಕ್ಕಳಿ’ ಇಂಬು ಕೊಟ್ಟಿತೆ, ಯಕ್ಷಗಾನದಿಂದಲೇ ಕಥಕ್ಕಳಿ ಏನನ್ನಾದರೂ ಪಡೆಯಿತೆ – ಸಂಶೋಧನೆಗಳು ಇನ್ನು ನೂರು ವರ್ಷ ಮುಂದುವರಿದರೂ ಖಚಿತ ಅಭಿಪ್ರಾಯಗಳು ಹೊರಬರುವ ಸೂಚನೆಯೇನೂ ಇಲ್ಲ. ಜಗತ್ತಿನ ಏನನ್ನೇ ಆದರೂ ನಮ್ಮ ಸ್ಥಳೀಯತೆಗೆ ತಕ್ಕಂತೆ ಬಗ್ಗಿಸಿ ಒಗ್ಗಿಸಿಕೊಳ್ಳುವ ಕಲೆ ನಮಗೆ ಗೊತ್ತಿದೆ.

ಇಂಗ್ಲೆಂಡಿನ ಶೇಕ್ಸ್‍ಪಿಯರನನ್ನು ಭಾರತದ ಭಾಷೆಗಳಲ್ಲಿ ನಾಟಕವಾಗಿ ಬರೆದು ಓದಬೇಕೋ, ಇಲ್ಲಾ ರಂಗದ ಮೇಲೆ ಆಡಿಸಿ ನೋಡಬೇಕೋ ಎಂಬ ಗಹನ ತಾರ್ಕಿಕ ಪ್ರಶ್ನೆ ಪಂಡಿತರನ್ನು ಗುಂಗಿಹುಳದಂತೆ ಕಾಡುತ್ತಿದ್ದಾಗ, ಅವನ ನಾಟಕಗಳನ್ನು ಯಕ್ಷಗಾನ ಪ್ರಸಂಗರೂಪಕ್ಕಿಳಿಸಿ ನಮ್ಮ ಜನ ಆಡಿಬಿಟ್ಟಾಗಿತ್ತು! ರೋಮಿಯೋ-ಜೂಲಿಯೆಟ್ಟರು ನಾಟಕದ ಕೊನೆಯಲ್ಲಿ ಸಾಯುವುದು ಶುಭವಲ್ಲ ಎಂದು ಭಾವಿಸಿದ ನಮ್ಮ ಮಂದಿ ಶ್ರೀಮನ್ನಾರಾಯಣ ಕಾಣಿಸಿಕೊಳ್ಳುವಂತೆ ಮಾಡಿ, ಅವನ ಅನುಗ್ರಹದಿಂದ ಆ ಅಮರ ಪ್ರೇಮಿಗಳು ಮತ್ತೆ ಜೀವಂತ ಎದ್ದುಬರುವಂತೆ ಮಾಡಿ ನಾಟಕಕ್ಕೆ ಸುಖಾಂತ್ಯ ಕಲ್ಪಿಸಿದ್ದರು! ನಮ್ಮ ನೆಲದ ವಿಶೇಷವೇ ಅಂಥಾದ್ದು. ಬಡಿದಿಷ್ಟದೇವತಾವಿಗ್ರಹಕ್ಕೊಗ್ಗಿಸುವ ಅಸಲು ಕಸುಬಿನ ಛಲ, ಜಾಣ್ಮೆ ನಮ್ಮವರ ರಕ್ತಗುಣ.

ಬಿಡಿ, ಕನ್ನಡ ನಾಟಕದ ಅರುಣೋದಯದ ಕಾಲಕ್ಕೆ ವಾಪಸು ಬರೋಣ. ಆ ಕಾಲ ಹೇಗಿತ್ತು? ಹತ್ತೊಂಬತ್ತನೆ ಶತಮಾನದಲ್ಲಿ ಭಾರತದಲ್ಲಿ ಪಾರ್ಸಿ ನಾಟಕ ಕಂಪೆನಿಗಳ ಯುಗ ಪ್ರಾರಂಭವಾಯಿತು. ಅದಕ್ಕಿಂತ ಮೊದಲು ಈ ದೇಶದಲ್ಲಿ ನಾಟಕ ತಂಡಗಳು ತಿರುಗಾಟ ಮಾಡುತ್ತ, ಅಲ್ಲಲ್ಲಿ ಟೆಂಟ್ ಹಾಕಿ ಮೂರ್ನಾಲ್ಕು ತಿಂಗಳು ಠಿಕಾಣಿ ಹೂಡಿ ನಾಟಕ ಪ್ರದರ್ಶಿಸುತ್ತ ಕಾಲಕಳೆಯುವ ಪದ್ಧತಿಯೇ ಇರಲಿಲ್ಲ ಎಂಬುದು ಆಧುನಿಕ ಕನ್ನಡ ವಿಮರ್ಶಕರ ಅನಿಸಿಕೆ. ಪಾರ್ಸಿ ಕಂಪೆನಿಗಳೇ ನಮಗೆ ಹೀಗೆ ತಿರುಗಾಟದ ಕಲ್ಪನೆ ಕೊಟ್ಟವು ಎಂದು ಅವರು ಭರತವಾಕ್ಯ ಹಾಡಿಬಿಟ್ಟಿದ್ದಾರೆ. ಆದರೆ ಭಾರತದಲ್ಲಿ ಕಲಾತಂಡಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುತ್ತ, ಹೋದಲ್ಲಿ ತಮ್ಮ ಕಲಾಪ್ರದರ್ಶನ ಮಾಡುವ ದೊಡ್ಡ ಪರಂಪರೆಯೇ ಇತ್ತು.

ಕರ್ನಾಟಕದ ಬಯಲಾಟ, ಈಶಾನ್ಯ ಭಾರತದ ಜಾತ್ರಾ ಮುಂತಾದ ಪರಂಪರೆಗಳನ್ನು ನೋಡಿದವರಿಗೆ ಕಲಾತಂಡಗಳ ತಿರುಗಾಟದ ವಿಷಯದಲ್ಲಿ ಸಂಶಯ ಹುಟ್ಟುವುದಕ್ಕೆ ಕಾರಣವೇ ಇಲ್ಲ. ಭರತಮುನಿಯ ಮಕ್ಕಳು ಸ್ವರ್ಗಕ್ಕೆ ಹೋದಾಗ ಇಂದ್ರನಿಗೆ ಸಮುದ್ರಮಥನದ ಪ್ರಸಂಗವನ್ನು ಆಡಿತೋರಿಸಿದರೆಂಬ ಕತೆಯೇ ಇಲ್ಲವೇ? ದಕ್ಷಿಣ ಭಾರತದಲ್ಲಷ್ಟೇ ಪ್ರಚಾರವಿದ್ದ ಯಕ್ಷಗಾನ ಕಲೆಯನ್ನು ಕೆಲವು ತಂಡಗಳು ಆಂಧ್ರ, ತಮಿಳುನಾಡು, ಒಡಿಶಾಗಳಲ್ಲಿ ಕೂಡ ಪ್ರದರ್ಶಿಸಿದ್ದವು. 1842ರಲ್ಲಿ ಅಂಥದೊಂದು ತಂಡ ಮಹಾರಾಷ್ಟ್ರದಲ್ಲಿ ತನ್ನ ಪ್ರದರ್ಶನ ಕೊಟ್ಟz್ದÉೀ ಮುಂದೆ ಮರಾಠಿ ರಂಗಭೂಮಿಗೆ ಜನ್ಮಕೊಟ್ಟಿತು ಎಂದು ಕೆ.ವಿ. ಸುಬ್ಬಣ್ಣ ಒಂದೆಡೆ ಹೇಳಿದ್ದಾರೆ. ಯಕ್ಷಗಾನ ಬಯಲಾಟಗಳಿಂದ ಹಾಡು, ಕುಣಿತ, ಭಾವಾಭಿನಯಗಳನ್ನು ಭರಪೂರ ಪಡೆದ ಮರಾಠಿ ರಂಗಭೂಮಿ ಮುಂದೆ ಕನ್ನಡ, ತೆಲುಗು, ತಮಿಳು ರಂಗಮಂಚಗಳನ್ನು ಬಹಳ ಆಳವಾಗಿ ಪ್ರಭಾವಿಸಿತು. ನಾವು ಕೊಟ್ಟz್ದÉೀ ನಮಗೆ ಹತ್ತುಮಡಿಯಾಗಿ ವಾಪಸು ಸಿಕ್ಕಿತು!

ಯಕ್ಷಗಾನದಿಂದ ಪ್ರಭಾವಿತವಾದ ಮರಾಠಿ ರಂಗಭೂಮಿ ಮುಂದದೆಷ್ಟು ಶ್ರೀಮಂತವಾಗಿಬಿಟ್ಟಿತೆಂದರೆ ಅದರ ಜನಪ್ರಿಯತೆಯನ್ನು ಕಂಡು ಪಾರ್ಸಿಗಳು ತಾವೂ ತಿರುಗಾಟದ ತಂಡಗಳನ್ನು ಕಟ್ಟಿಕೊಂಡು ದೇಶಾದ್ಯಂತ ಸಂಚರಿಸಲು ಶುರುಮಾಡಿದರು. ಉತ್ತಮ ರಂಗಸಜ್ಜಿಕೆ, ಬಣ್ಣಬಣ್ಣದ ವೇಷಭೂಷಣ, ಉದ್ದುದ್ದ ಡಯಲಾಗು, ಸರ್ವಸಜ್ಜಿತ ಸಂಗೀತತಂಡ, ಭರಪೂರ ಪ್ರಚಾರ ಇವೆಲ್ಲದರಿಂದ ಪಾರ್ಸಿ ತಂಡಗಳು ಹೋದಲ್ಲೆಲ್ಲ ದೊಡ್ಡ ಸದ್ದು ಮಾಡಿದವು; ಜನಪ್ರಿಯತೆಯ ಉತ್ತುಂಗ ಮುಟ್ಟಿದವು. ಸಾಂಗ್ಲಿ, ಪಾರ್ಸಿ ನಾಟಕ ಮಂಡಳಿಗಳ ನಾಟಕಗಳಿಗೆ ಕರ್ನಾಟಕದ ಜನ ಎಷ್ಟು ಮಾರುಹೋದರೆಂದರೆ ಕನ್ನಡ ನಾಟಕಗಳನ್ನು ಆಡುತ್ತಿದ್ದವರು ಕೂಡ ಪಾರ್ಸಿಗಳ ತಂಡ ಸೇರಿಕೊಂಡು ರಾಜ್ಯರಾಜ್ಯಗಳನ್ನು ಅಲೆಯಹತ್ತಿದರು. ಈ ಬಿರುಗಾಳಿಗೆ ಸೆಡ್ಡುಹೊಡೆಯಲೇಬೇಕೆಂದು ಉತ್ತರ ಕರ್ನಾಟಕದ ಮಂದಿ 1872ರಲ್ಲಿ ಶಾಂತಕವಿಗಳ ನೇತೃತ್ವದಲ್ಲಿ `ಗದುಗಿನ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ’ಯನ್ನು ಕಟ್ಟಿಕೊಂಡರು.

`ಉಷಾಹರಣ’ ಎಂಬ ನಾಟಕದಿಂದ ಪ್ರಾರಂಭವಾದ ಈ ಮಂಡಳಿಯ ನಾಟಕಯಾತ್ರೆ ಮುಂದೆ ಸುಂದೋಪಸುಂದರ ವಧೆ, ವತ್ಸಲಾಹರಣ, ಸುಧನ್ವ ವಧೆ, ಕೀಚಕ ವಧೆ ಮುಂತಾದ ಹಲವು ರಂಗಕೃತಿಗಳನ್ನು ಕನ್ನಡಕ್ಕೆ ಕೊಟ್ಟಿತು. ಮರಾಠಿ ಮತ್ತು ಪಾರ್ಸಿ ಕಂಪೆನಿಗಳನ್ನು ಕನ್ನಡದ ನೆಲದಿಂದ ಬುಡಮಟ್ಟ ಕಿತ್ತು ಹೊರಗೆಸೆಯಬೇಕೆಂಬ ಛಲದಿಂದ ಹೊರಟಿದ್ದ ಶಾಂತಕವಿಗಳೇ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಈ ಮಂಡಳಿಗಾಗಿ ಬರೆದರಂತೆ. ಸರಕಾರೀ ಕೆಲಸದಲ್ಲಿದ್ದ ತಮ್ಮನ್ನು ನೀರುನೆಲೆಯಿಲ್ಲದ ಜಾಗಕ್ಕೆಲ್ಲ ವರ್ಗಾವಣೆ ಮಾಡಿದರೂ ಹಲವು ಗಂಟೆಗಳ ಪ್ರಯಾಣ ಮಾಡಿ ಪ್ರತಿದಿನ ಜನರನ್ನು ಒಟ್ಟುಗೂಡಿಸಿ ತಂಡ ಕಟ್ಟಿ ರಂಗತಾಲೀಮು ನಡೆಸಿ ನಾಟಕ ಆಡಿಸಿದರಂತೆ.

ಈ ಮಂಡಳಿಯ ಸ್ಫೂರ್ತಿಯೋ ಏನೋ, ಮೈಸೂರಿನಲ್ಲಿ 1880ರಲ್ಲಿ ರಘುನಾಥರಾಯರೆಂಬವರ ನೇತೃತ್ವದಲ್ಲಿ `ಶಾಕುಂತಲ ನಾಟಕ ಸಭಾ’ ಹೆಸರಿನ ಹೊಸ ತಂಡವೊಂದು ರಚನೆಯಾಯಿತು. ಇದೇ ಸಮಯಕ್ಕೆ ಮೈಸೂರು ಅರಸರಾದ ಶ್ರೀ ಚಾಮರಾಜೇಂದ್ರ ಒಡೆಯರು, ತನ್ನ ಹೆಸರಲ್ಲಿ ಒಂದು ನಾಟಕ ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ ರಾಜಾಶ್ರಯವನ್ನೇ ಕಲ್ಪಿಸಿಕೊಟ್ಟರು. ಹಣಕಾಸಿನ ಮುಗ್ಗಟ್ಟಿನಿಂದ ಕುಂಟುತ್ತ ತೆವಳುತ್ತ ನಡೆಯುತ್ತಿದ್ದ `ಶಾಕುಂತಲ ನಾಟಕ ಮಂಡಳಿ’ ಮುಂದೆ ಈ ಅರಮನೆ ತಂಡವನ್ನು ಕೂಡಿಕೊಂಡಿತು.

ರಾಜಾಶ್ರಯದಲ್ಲಿದ್ದ ಬಸವಪ್ಪಶಾಸ್ತ್ರಿಗಳು, ಸೋಸಲೆ ಅಯ್ಯಾಶಾಸ್ತ್ರಿಗಳು, ನಂಜನಗೂಡು ಸುಬ್ಬಾಶಾಸ್ತ್ರಿಗಳು, ಮೈಸೂರು ಸೀತಾರಾಮಶಾಸ್ತ್ರಿಗಳು ಮತ್ತೂ ಹಲವು ಪ್ರಮುಖರು ಸ್ಪರ್ಧೆಗೆ ಬಿದ್ದವರಂತೆ ನಾಟಕಗಳನ್ನು ಬರೆಯತೊಡಗಿದರು. 1955ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ಮಾಡಿದ ಸಾರ್ವಜನಿಕ ಭಾಷಣವೊಂದರಲ್ಲಿ, ಆ ಕಾಲದಲ್ಲಿ ಕನ್ನಡ ರಂಗಭೂಮಿಯಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದರ ಸುಳಿವು ಸಿಗುತ್ತದೆ. ಅದರ ಪ್ರಕಾರ, ಕನ್ನಡದ ಮೊದಲ ನಾಟಕ `ಮಿತ್ರವಿಂದಾ ಗೋವಿಂದ’ ಬರೆದ ಸಿಂಗರಾರ್ಯರು ಚಿಕ್ಕದೇವರಾಜ ಒಡೆಯರ ಆಸ್ಥಾನಕವಿಯಾಗಿದ್ದವರು. ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಳಿದಾಸನ ನಾಟಕತ್ರಯಗಳಾದ ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶೀಯ, ಮಾಳವಿಕಾಗ್ನಿಮಿತ್ರ – ಇವನ್ನು ಕನ್ನಡಕ್ಕೆ ಅನುವಾದ ಮಾಡಿಸಿದರು. ಚಾಮರಾಜ ಒಡೆಯರ್ ಅವರು ತನ್ನ ಕಾಲದಲ್ಲಿ ಚಂಡಕೌಶಿಕ, ರತ್ನಾವಳಿ, ಉತ್ತರ ರಾಮಚರಿತೆ, ಶೂರಸೇನಚರಿತೆ ಮುಂತಾದ ನಾಟಕಗಳನ್ನು ಆಸ್ಥಾನಕವಿಗಳಿಂದ ಬರೆಸಿ ತಾನೇ ಹುಟ್ಟುಹಾಕಿದ ನಾಟಕಮಂಡಳಿಯಿಂದ ಆಡಿಸಿ ಸಾರ್ವಜನಿಕ ಪ್ರದರ್ಶನ ಏರ್ಪಡುವಂತೆ ಮಾಡಿದರು. ಚಾಮರಾಜೇಂದ್ರ ನಾಟಕ ಸಭಾ ಅಸ್ತಿತ್ವಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕನ್ನಡದಲ್ಲಿ ಸಾಮಾಜಿಕ ನಾಟಕಗಳು ಕೂಡ ಬರಲು ಪ್ರಾರಂಭವಾದವು ಎಂಬುದು ಮಹತ್ವದ ಅಂಶ.

ಕರ್ಕಿ ವೆಂಕಟರಮಣಶಾಸ್ತ್ರಿಗಳು ಹವ್ಯಕ ಸಮಾಜದೊಳಗಿದ್ದ ಕನ್ಯಾಶುಲ್ಕದ ಸಮಸ್ಯೆಯನ್ನೆತ್ತಿಕೊಂಡು `ಇಗ್ಗಪ್ಪ ಹೆಗ್ಡೆಯ ವಿವಾಹ ಪ್ರಹಸನ’ ಎಂಬ ನಾಟಕ ಬರೆದರು. ಸ್ವಾರಸ್ಯವೆಂದರೆ ಈ ನಾಟಕದೊಳಗೆ ಬರುವ ಮೂರ್ನಾಲ್ಕು ಸಮುದಾಯದ ಪಾತ್ರಗಳೆಲ್ಲ ತಂತಮ್ಮ ಮನೆಮಾತಿನ ಶೈಲಿಯಲ್ಲೇ ಮಾತಾಡುತ್ತವೆ. ಹಾಗಾಗಿ ಇದು ಕನ್ನಡದ ಮೊದಲ ಸಾಮಾಜಿಕ ನಾಟಕ ಮಾತ್ರವಲ್ಲ, ಹವ್ಯಕ ಭಾಷೆಯ ಮೊದಲ ಆಧುನಿಕ ನಾಟಕ ಎಂಬುದೂ ಸರಿಯೇ! ಹೀಗೆ ಸಮಾಜದ ಭಿನ್ನ ಸಮುದಾಯಗಳವರ ಭಿನ್ನ ಡಯಲೆಕ್ಟುಗಳನ್ನೆಲ್ಲ ನಾಟಕದಲ್ಲಿ ತರಬಹುದೆಂಬ ಧೈರ್ಯ ಮಾಡಿದವರಲ್ಲಿ ಕರ್ಕಿಯವರೇ ಮೊದಲಿಗರು. ಸಂಸ್ಕøತದ ನಾಟಕಕಾರರು ಅಂಥ ಗಟ್ಟಿತನವನ್ನು ಶತಮಾನಗಳಷ್ಟು ಹಿಂದೆಯೇ ತೋರಿದ್ದರೂ ಕನ್ನಡದ ನಾಟಕಕರ್ತೃಗಳು ಮಾತ್ರ ಎಲ್ಲ ಸಂಭಾಷಣೆಯನ್ನೂ ಗ್ರಾಂಥಿಕ ಕನ್ನಡದಲ್ಲೇ ಬರೆಯುತ್ತಿದ್ದದ್ದು ಅದುವರೆಗೂ.

ಹೀಗೆ ಇಪ್ಪತ್ತನೇ ಶತಮಾನಕ್ಕೆ ಅಡಿಯಿಡುವ ಕ್ಷಣದಲ್ಲಿ ಕನ್ನಡದ ರಂಗಭೂಮಿಯ ಪರಿಸ್ಥಿತಿ ವಿಚಿತ್ರವಾಗಿತ್ತು. ಒಂದು ಕಡೆಯಲ್ಲಿ ಪಾರ್ಸಿ ನಾಟಕ ಕಂಪೆನಿಗಳ ಪ್ರಭಾವಕ್ಕೊಳಗಾಗಿ, ಕನ್ನಡದಲ್ಲೂ ನಾಟಕ ಕಂಪೆನಿಗಳ ಹೊಸಯುಗವೊಂದು ಪ್ರಾರಂಭಗೊಂಡಿತ್ತು. ಇನ್ನೊಂದೆಡೆ ಹಳೆ ಪುರಾಣ, ಇತಿಹಾಸ, ಕಾವ್ಯಗಳಿಂದ ಕತೆ ಹೆಕ್ಕಿ ಆಡುವ ನಾಟಕಕ್ಕಿಂತ ಭಿನ್ನವಾದ ಸಾಮಾಜಿಕ ಸಮಕಾಲೀನ ಸಮಸ್ಯೆಗಳ ಬಗ್ಗೆ ನಾಟಕ ಆಡಬೇಕೆಂಬ ಹೊಸಪ್ರಜ್ಞೆಯೂ ಮೂಡಿತ್ತು. ಬೆಂಗಳೂರಲ್ಲಿ 1909ರಲ್ಲಿ `ಅಮೆಚೂರ್ ಡ್ರಮಾಟಿಕ್ ಅಸೋಸಿಯೇಶನ್’ ಹೆಸರಿನ ಹವ್ಯಾಸಿ ರಂಗಭೂಮಿ ಸಂಸ್ಥೆಯೊಂದು ಜನ್ಮತಳೆದಿತ್ತು.

ಇದರಲ್ಲಿದ್ದವರು ನವಯುಗದ, ಕ್ರಾಪುಕೇತನದ ಬಿಸಿರಕ್ತದ ತರುಣರು. ವಕೀಲರು, ಕಾಲೇಜು ಅಧ್ಯಾಪಕರು, ಸಾಮಾಜಿಕ ಹೋರಾಟಗಾರರು, ಮಧ್ಯಮವರ್ಗದ ಹೊಳಪುಗಣ್ಣುಗಳ ಬಣ್ಣದ ಕನಸುಹೊತ್ತ ಯುವಕರು. ಸಂಸ್ಥೆಯ ಎಲ್ಲ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತಿದ್ದವರು ಬಳ್ಳಾರಿ ರಾಘವ ಎಂದೇ ಹೆಸರಾದ ಟಿ. ರಾಘವಾಚಾರ್ಯರು. ಹಗಲುಹೊತ್ತಲ್ಲಿ ಹೈಕೋರ್ಟ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವ, ಸಂಜೆಯಾದರೆ ಸಾಕು ನಾಟಕ ನಾಟಕ ಎಂದು ರಂಗಭೂಮಿಯನ್ನು ಆವಾಹಿಸಿಕೊಂಡು ಕೆಲಸ ಮಾಡುತ್ತಿದ್ದರು. ಎಡಿಎ ತಂಡ, ಭಾಷೆಗಳ ಕಟ್ಟುಬೇಲಿಗಳನ್ನೆಲ್ಲ ಕಿತ್ತೆಸೆದು ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲಿ ನಾಟಕವಾಡುತ್ತ ಇಡೀ ದಕ್ಷಿಣ ಭಾರತವೇ ಏಕೆ, ಮುಂಬೈ, ಕಲ್ಕತ್ತ, ಶಿಮ್ಲಾ, ದೆಹಲಿಗಳಲ್ಲಿ ಕೂಡ ರಂಗಪ್ರದರ್ಶನ ಕೊಡುತ್ತಿತ್ತು. ಸಂಸ್ಥೆ ನಡೆಸುತ್ತಿದ್ದ ಅಖಿಲ ಭಾರತ ನಾಟಕ ಸಮ್ಮೇಳನಗಳಲ್ಲಿ ರವೀಂದ್ರನಾಥ ಟಾಗೋರ್, ಸರೋಜಿನಿ ನಾಯ್ಡು, ಸಿ.ಆರ್.

ರೆಡ್ಡಿಯಂಥ ಘಟಾನುಘಟಿಗಳು ಭಾಗವಹಿಸಿದ್ದರು. ಎಡಿಎ ಸಂಸ್ಥೆ ಪಂಡಿತ ತಾರಾನಾಥ, ಸಿ.ಕೆ. ವೆಂಕಟರಾಮಯ್ಯ, ಬೆಳ್ಳಾವೆ ನರಹರಿಶಾಸ್ತ್ರಿ ಮುಂತಾದ ಪಂಡಿತರನ್ನು ಬೆಳಕಿಗೆ ತಂದಿತು; ಮಾಸ್ತಿ, ಕುವೆಂಪು, ಬಿಎಂಶ್ರೀ – ಈ ಮೂವರ ಮೊದಲ ನಾಟಕಕೃತಿಗಳನ್ನು ಅಚ್ಚುಹಾಕಿತು. ಕೇವಲ ಒಂದು ಖಾಸಗಿ ಸಂಸ್ಥೆಯಾಗಿ ಇದು ಮಾಡಿದ ಕೆಲಸಕ್ಕಿಂತ ಹೆಚ್ಚಿನದನ್ನು ಸಂಪರ್ಕ – ಸಂಪನ್ಮೂಲಗಳು ಧಂಡಿಯಾಗಿರುವ ಸರಕಾರೀ ಸಂಸ್ಥೆಗಳಾದರೂ ಮಾಡುತ್ತಿದ್ದವೋ ಇಲ್ಲವೋ! ಹೀಗೆ ರಂಗಭೂಮಿ ಚಟುವಟಿಕೆಗಳ ವಿಷಯದಲ್ಲಿ ಏಕಮೇವಾದ್ವಿತೀಯನಾಗಿ ರಾಕ್ಷಸನಂತೆ ಕೆಲಸ ಮಾಡುತ್ತಿದ್ದ ಸಂಸ್ಥೆಯು ಅಖಿಲ ಕರ್ನಾಟಕ ನಾಟಕ ಸ್ಪರ್ಧೆ ನಡೆಸಿದಾಗ ಅದು ದೊಡ್ಡ ಪ್ರಚಾರ, ನಿರೀಕ್ಷೆ ಹುಟ್ಟುಹಾಕುವುದು ಸಹಜವೇ. ಈ ಸ್ಪರ್ಧೆಯಲ್ಲಿ ವಿಜೇತರಾದ ಇಬ್ಬರೂ ಮುಂದೆ ತಮ್ಮ ಜೀವನವನ್ನೆಲ್ಲ ನಾಟಕ ರಚನೆಗೇ ಮೀಸಲಿಟ್ಟುಬಿಟ್ಟರೆಂಬುದನ್ನು ಗಮನಿಸಿದರೆ ಸ್ಪರ್ಧೆಯ ಸಾರ್ಥಕತೆ ಅರ್ಥವಾಗುತ್ತದೆ.

ಟಿ.ಪಿ. ಕೈಲಾಸಂ ಎಂಬುದು ದೈತ್ಯಪ್ರತಿಭೆ. ಅವರು ಹೀಗೇ, ಇಷ್ಟೇ ಎಂದು ಹೇಳುವುದು ಬೊಗಸೆಯಲ್ಲಿ ನೀರೆತ್ತಿಹಿಡಿದು ಸಮುದ್ರವನ್ನು ವರ್ಣಿಸಿದಂತೆ. ಮೈಸೂರು ಸಂಸ್ಥಾನದಲ್ಲಿ ಮುನ್ಸೀಫರಾಗಿ, ನಂತರ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಪರಮಶಿವ ಅಯ್ಯರ್‍ರ ಪುತ್ರರತ್ನ ಕೈಲಾಸಂ ಓದಿನಲ್ಲಿ ಪ್ರಚಂಡ.

ಅದೇ ಕಾರಣಕ್ಕೆ ಸ್ಕಾಲರ್‍ಶಿಪ್ ಗಿಟ್ಟಿಸಿ ಇಂಗ್ಲೆಂಡಿಗೆ ಭೂಗರ್ಭಶಾಸ್ತ್ರ ಅಧ್ಯಯನ ಮಾಡಲು ಹೋದವರು. ಅಲ್ಲಿ ನಾಟಕಗಳ ಆಕರ್ಷಣೆಗೆ ಒಳಗಾಗಿ, ನಾಟಕ ನೋಡುವುದಕ್ಕೆಂದೇ ತನ್ನ ಅಧ್ಯಯನದ ಅವಧಿಯನ್ನು ಆರು ವರ್ಷ ಎಳೆದು, ಕೊನೆಗೆ ಪದವಿ ಮುಗಿಸಿ ಭಾರತಕ್ಕೆ ಬಂದವರು. ತಾನೇ ಬೇರೆ, ತನ್ನ ಮರ್ಜಿಯೇ ಬೇರೆ ಎಂಬಂಥ ಕಾಡುಕೋಣದ ವ್ಯಕ್ತಿತ್ವದ ಕೈಲಾಸಂ, ಮಗನ ಮೇಲೆ ಅಪ್ಪ ಇಟ್ಟುಕೊಂಡಿದ್ದ ಎಲ್ಲ ಆಸೆಗಳಿಗೂ ತಣ್ಣೀರೆರಚಿ, ಸಿಕ್ಕ ಯಾವ ಕೆಲಸವನ್ನೂ ಮಾಡದೆ, ಕೆಲಸಕ್ಕಾಗಿ ಪ್ರಯತ್ನಿಸದೆ, ಅನ್-ಎಂಪ್ಲಾಯ್ಡ್ ಮತ್ತು ಅನ್-ಎಂಪ್ಲಾಯೆಬಲ್ ಆಗಿ ಜೀವನಪೂರ್ತಿ ಉಳಿದರು.

ಕಲಸುಮೇಲೋಗರವಾಗಿದ್ದ ರೂಮಲ್ಲಿ ದಿನರಾತ್ರಿಗಳನ್ನು ಕಳೆಯುತ್ತ ನಾಟಕದ ಮೇಲೆ ನಾಟಕವನ್ನು ಬರೆಯುತ್ತ, ಹೇಳುತ್ತ, ಕನ್ನಡ ರಂಗಭೂಮಿಯ ಗೊಂಡಾರಣ್ಯದಲ್ಲಿ ಹೊಸ ಹೆದ್ದಾರಿಯನ್ನು ಸ್ವತಃ ಕೊರೆದು ನಿರ್ಮಿಸಿದ ಕೈಲಾಸಂ, ಅವರೇ ನಾಟಕದಲ್ಲಿ ಹೇಳಿಕೊಂಡಂತೆ ಕರ್ನಾಟಕ ಪ್ರಹಸನ ಪ್ರಪಿತಾಮಹ. ಕೈಲಾಸಂ ನಾಟಕಗಳನ್ನು ಬರೆಯಲು ತೊಡಗಿದ ಕಾಲಕ್ಕೆ ಕರ್ನಾಟಕದಲ್ಲಿನ್ನೂ ಕಂಪೆನಿ ನಾಟಕಗಳ ಹಾವಳಿ. ಶ್ರೀರಂಗರು ಹೇಳುವಂತೆ ಈ ಕಂಪೆನಿ ನಾಟಕಗಳಲ್ಲಿ ಆಗ ಪೌರಾಣಿಕ ವಸ್ತು, ಕೃತಕ ಭಾಷೆ, ಅಸಂಬದ್ಧ ರಂಗಸಜ್ಜಿಕೆ, ಅಪ್ರಾಸಂಗಿಕ ಸಂಗೀತ, ಅಸಹ್ಯ ವೇಷಭೂಷಣ – ಇವುಗಳz್ದÉೀ ಮೆರವಣಿಗೆ.

ಒನ್ಸ್ ಮೋರ್ ಎಂದು ಪ್ರೇಕ್ಷಕರು ಕಿರಲಿದರೆ ಸತ್ತುಬಿದ್ದವನೂ ಮತ್ತೆ ಎದ್ದು ತನ್ನ ಡಯಲಾಗನ್ನು ಮತ್ತೊಮ್ಮೆ ಒದರಿ ಸತ್ತುಬೀಳುವ ಅಭಾಸಗಳೂ ಯಥೇಚ್ಛ ನಡೆಯುತ್ತಿದ್ದವು. ರಾತ್ರಿಯಿಂದ ಬೆಳಗಿನವರೆಗೆ ಬಯಲಾಟದಂತೆ ನಡೆಯುತ್ತಿದ್ದ ನಾಟಕಗಳನ್ನು ಬೆಳಗಿನ ಜಾವ ಮುಗಿಸುವಷ್ಟರಲ್ಲಿ ಪ್ರೇಕ್ಷಕರೇ ಮುಂದಾಗಿ ಇಷ್ಟು ಬೇಗ ಮುಗಿಸುತ್ತೀರಾ? ಎಂದು ತಂಡದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ! ಹಾಗಾಗಿ ನಾಟಕಗಳನ್ನು ಆದಷ್ಟೂ ಉದ್ದಕ್ಕೆ ಎಳೆದೆಳೆದು ಆಡುವುದು ಒಂದು ಸಂಪ್ರದಾಯವೇ ಆಗಿಬಿಟ್ಟಿತ್ತು. `ಮಹಾರಾಜರೇ! ಯಾರೋ ನಿಮ್ಮನ್ನು ನೋಡಲು ಬಂದಿದ್ದಾನೆ’ ಎಂದು ಹೇಳಲು ಸೇವಕ,

ಆರೊ ಪ್ರಭುವೆ ದ್ವಾರದ ಬಳಿ ಬಂದು ನಿಂತಿಹನೈ|
ಮೋರೆ ನೋಡಲು ಪಾರ್ವನಂದದಿ ತೋರುವನೈ||
ಕೋರಿ ನಿಮ್ಮ ದರ್ಶನವನು ಸಾರಿ ಬಂದಿಹನೈ|
ಮಾರಜನಕನಾಜ್ಞೆಯಿತ್ತರೆ ಸಾರಿ ಬಿಡುವೆನೈ||

ಎಂಬ ಪದ್ಯ ಹಾಡುತ್ತಿದ್ದ! ಅದಕ್ಕುತ್ತರವಾಗಿ ಬರಲು ಹೇಳು ಎಂಬುದಕ್ಕೆ ಅರಸನಾದವನು,

ಕರೆದು ತರಲುಯಿತ್ತಲವರ ಪೆÇೀಗು ನೀ ಬರ|
ಪರಿ ಪರಿ ಮರ್ಯಾದೆಯಿಂದ ವಿಪ್ರವರ್ಯರಾ||

– ಎಂದು ಹಾಡಿನಲ್ಲೇ ಉತ್ತರಿಸುತ್ತಿದ್ದ! ಹೀಗೆ ಹೂಸಿಗೊಂದು ಹುರ್ಕೆಗೊಂದು ಎಂಬಂತೆ ಹಾಡುಗಳನ್ನು ಹಾಕಿ ಹಾಕಿ ಆರು ತಾಸಿನ ನಾಟಕದಲ್ಲಿ ನೂರಕ್ಕೂ ಹೆಚ್ಚು ಹಾಡುಗಳಿರುತ್ತಿದ್ದವಂತೆ! ಇಂಥ ಸಾಂಪ್ರದಾಯಿಕ ಶಿಥಿಲಾವಸ್ಥೆಯನ್ನು ಛೇಡಿಸಲೆಂದೇ ಇಂಗ್ಲೆಂಡಿನಲ್ಲಿ ಹೊಸ ಬಗೆಯ ನಾಟಕಗಳನ್ನೆಲ್ಲ ನೋಡಿ ಬಂದಿದ್ದ ಕೈಲಾಸಂ ಹೊಸ ಬಗೆಯ ನಾಟಕಗಳನ್ನು ಕನ್ನಡದಲ್ಲಿ ಬರೆಯತೊಡಗಿದರು. ತಮ್ಮ ನಾಟಕಗಳಲ್ಲಿ ಯಥೇಚ್ಛವಾಗಿ ಇಂಗ್ಲಿಷನ್ನೂ ಬಳಸಿದರು. ಕನ್ನಡದ ಗ್ರಾಂಥಿಕ ಮಡಿಮೈಲಿಗೆಯ ಸೀರೆ ಬದಿಗಿಟ್ಟು ಮನೆಮಾತಿನ ಲಂಗದಾವಣಿ ಉಡಿಸಿದರು.

ಮನೆಯೊಳಗಿನ ಜಗಳಪಗಳವನ್ನು ರಂಗದ ಮೇಲೆ ತಂದರು. ಬೀದಿರಂಪ ಹಾದಿರಂಪಗಳ ಕನ್ನಡದ ಸೊಗಡನ್ನು ಯಾವ ಭಯವಿಹ್ವಲತೆಯಿಲ್ಲದೆ ಅವರು ವೇದಿಕೆ ಹತ್ತಿಸಿದರು. ಕಂಪ್ನಿ ನಾಟಕಗಳ ಅಧ್ವಾನಗಳನ್ನು ಗೇಲಿ ಮಾಡುವುದಕ್ಕೆಂದೇ `ನಂ ಕಂಪ್ನಿ’ ಎಂಬ ನಾಟಕ ಬರೆದರು. ಅದರಲ್ಲಿ, ನಟಿ, ಸೂತ್ರಧಾರನ ಬಳಿ, ಯಾವ ಋತುವಿನ ವರ್ಣನೆ ಮಾಡಿ ಹಾಡಲಿ ಎಂದು ಕೇಳಿದಾಗ ಸೂತ್ರಧಾರ ರಾರಾಜಿಸುತ್ತಿರುವ ಬೇಸಿಗೆಯ ವರ್ಣನೆ ಮಾಡು ಎನ್ನುತ್ತಾನೆ. ಆಗ ನಟಿ ಹಾಡುತ್ತಾಳೆ:

ರಾರಾಜಿಸುತ್ತಿಹುದು ಬೇಸಿಗೆ ||ಪ||
ಹುದು ಬೇಸಿಗೆ
ತ್ತಿಹುದು ಬೇಸಿಗೆ
ಸುತ್ತಿಹುದು ಬೇಸಿಗೆ
ಜಿಸುತ್ತಿಹುದು ಬೇಸಿಗೆ
ರಾ..ಜಿ..ಸುತ್ತಿ…ಹುದು ಬೇಸಿಗೆ
ರಾ ರಾ ಜಿ ಸು ತ್ತಿ… ಹು ದು ಬೇ ಸಿ ಗೆ!
ಸುಮಬಾಣನ ಸುಮ ಸೌರಭ ಭರದಿಂದಲಿ ವಿರಾಜಿಸುತ…
ಕೀರಂಗಳು ಕಿರಲೂತಲಿ
ಭ್ರಮರಂಗಳು ಭ್ರಮಿಸುತ್ತಲಿ
ಪುಷ್ಪಂಗಳು ಪುಷ್ಪೂತಲಿ
ವೃಕ್ಷಂಗಳು ವೃಕ್ಷೀಸುತ ||ರಾರಾಜಿಸುತ್ತಿಹುದು||

ಹೀಗೆ ಅದುವರೆಗೆ ಸೊಟ್ಟಗೆ ಬೆಳೆದು ಬಂದಣಿಕೆ ಹಿಡಿದಿದ್ದ ಕಂಪ್ನಿ ನಾಟಕಗಳ ಹಳೆಕಾಲದ ಗೊಡ್ಡುತನವನ್ನು ಕೈಲಾಸಂ ತಮ್ಮ ಹೊಸ ಶೈಲಿಯ ಮಾತು-ನಟನೆಯ ಚಬುಕಿನಿಂದ ಬಾರಿಸಿ ಓಡಿಸಿಬಿಟ್ಟರು. ಹೊಸ ಬಗೆಯ ನೀರನ್ನು ಕನ್ನಡಕ್ಕೆ ತಂದರು.
ಕೈಲಾಸಂರ ದಾರಿಗೆ ವಿರುದ್ಧ ಗತಿಯಲ್ಲಿ ಹೋದಂತೆ ಕಾಣುವ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರರ ಕತೆ ಇನ್ನೊಂದು ಬಗೆಯದು. ಕೈಲಾಸಂ ಹುಟ್ಟಿದ ಅದೇ ಮೈಸೂರು ರಾಜ್ಯದಲ್ಲೇ ಯಳಂದೂರಿನ ಅಗರದಲ್ಲಿ ಹುಟ್ಟಿದ ವೆಂಕಟಾದ್ರಿಯ ಅಡ್ಡಹೆಸರು ಸ್ವಾಮಿ ಎಂದು. ಅವರದ್ದು ಆಯುರ್ವೇದ ಪಂಡಿತರ ಮನೆತನ.

ಕೊಳ್ಳೇಗಾಲದಲ್ಲಿ ಸಂಸ್ಕøತ ಪಂಡಿತರಾಗಿದ್ದ ಶ್ರೀಕಂಠಶಾಸ್ತ್ರಿಗಳಿಂದ ಅಕ್ಷರಾಭ್ಯಾಸ ಮಾಡಿಸಿಕೊಂಡ ವೆಂಕಟಾದ್ರಿ ಮುಂದೆ ಮೈಸೂರಿನ ಮರಿಮಲ್ಲಪ್ಪ ಶಾಲೆಯಲ್ಲಿ ಓದು ಮುಂದುವರಿಸಿದರು. ತನ್ನ ಹದಿನಾರನೆ ವಯಸ್ಸಿನಲ್ಲಿ ಹತ್ತನೇ ತರಗತಿ ಪರೀಕ್ಷೆಗೆ ಕೂತು ನಪಾಸಾದರು. ಆದರೆ ಓದು ಕೈಬಿಡದ ವೆಂಕಟಾದ್ರಿ ಮೈಸೂರಿನ ಮಹಾರಾಜರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸಪ್ಪಶಾಸ್ತ್ರಿಗಳಲ್ಲಿ ಹಳೆಗನ್ನಡ, ನಡುಗನ್ನಡದ ಸಾಹಿತ್ಯವನ್ನು ಶಾಸ್ತ್ರೋಕ್ತವಾಗಿ ಅಧ್ಯಯನ ಮಾಡಿ, ಜೊತೆಗೇ ಮೈಸೂರು ಒಡೆಯರ್ ಮನೆತನದ ಇತಿಹಾಸದ ಆಳವಾದ ಅಧ್ಯಯನ ನಡೆಸಿ, ತನ್ನದೇ ಆದ ನಡುಗನ್ನಡವನ್ನು ಸೃಷ್ಟಿಸಿಕೊಂಡು ಅದರಲ್ಲಿ ನಾಟಕಗಳನ್ನು ಬರೆಯಲು ತೊಡಗಿದರು.

ಅವಿಭಕ್ತ ಕುಟುಂಬದಲ್ಲಿ, ಮನೆಯ ಇತರ ಸದಸ್ಯರೊಂದಿಗೆ ಯಾವುದೋ ಜಗಳಕ್ಕೆ ಮನಸ್ತಾಪ ಬಂದದ್ದರಿಂದ ಮನೆ ಬಿಟ್ಟು ಅಲೆಯಹತ್ತಿದ ವೆಂಕಟಾದ್ರಿ ತನ್ನ ಜೀವನದ ಇಪ್ಪತ್ತು ವರ್ಷಗಳನ್ನು ಅನಿಕೇತನ ಪರಿವ್ರಾಜಕನಾಗಿ ಕಳೆದರು. ಪೆಸಿಫಿಕ್ ಸಾಗರಮಧ್ಯದಲ್ಲಿರುವ ಫಿಜಿ ದ್ವೀಪಗಳಿಂದ ಹಿಡಿದು ಅಟ್ಲಾಂಟಿಕ್ ಸಾಗರವನ್ನು ಮುಟ್ಟುವ ಆಫ್ರಿಕದ ಭೂಶೃಂಗದವರೆಗೆ ಇವರ ಓಡಾಟ! ಅಫಘಾನಿಸ್ತಾನದ ಗುಹೆಗಳಲ್ಲಿ, ಟಿಬೆಟಿನ ಉತ್ತುಂಗ ಪರ್ವತ ಶಿಖರಗಳಲ್ಲಿ ಇವರ ಹುಡುಕಾಟ. ವೆಂಕಟಾದ್ರಿ ಅಯ್ಯರ್ ಬರೆದ `ವಿಗಡ ವಿಕ್ರಮರಾಯ’ ನಾಟಕ ಪ್ರಬುದ್ಧ ಕರ್ಣಾಟಕದಲ್ಲಿ ಮೂರು ಕಂತುಗಳಾಗಿ ಪ್ರಕಟವಾಯಿತು. ಕಂಸ ಎಂಬ ಕಾವ್ಯನಾಮದಲ್ಲಿ ಹಸ್ತಪ್ರತಿ ಕಳಿಸಿದ್ದರೂ ಅದು ಅಚ್ಚಾದಾಗ ಸಂಸ ಎಂದಾಗಿತ್ತಂತೆ! ರಾಕ್ಷಸನ ಮೇಲೇ ಮುದ್ರಾರಾಕ್ಷಸನ ದಾಳಿ! ಆದರೆ ಸಂಪಾದಕರ ಜೊತೆ ಜಗಳಾಡಲು ಹೋಗದೆ ಅವರು ಆ ಹೆಸರನ್ನೇ ಗಟ್ಟಿಮಾಡಿಕೊಂಡರು.

`ಸಂಸ’ ಎಂಬ ಹೆಸರಲ್ಲೇ ಮುಂದಿನ ಎಲ್ಲ ನಾಟಕಕೃತಿಗಳನ್ನು ಬರೆದರು. ಬರೆದ 23 ನಾಟಕಗಳಲ್ಲಿ ಕೊನೆಗೆ ಉಳಿದದ್ದು, ಸಿಕ್ಕಿದ್ದು ಆರು ಮಾತ್ರ. ಮಿಕ್ಕವು ವಿನಷ್ಟ; ಭಸ್ಮೀಭೂತ. ತನ್ನನ್ನು ಯಾರೋ ಪೆÇಲೀಸರು ಬೆಂಬತ್ತಿದ್ದಾರೆ ಎಂಬ ಚಿತ್ತಭ್ರಮೆಗೆ ಸಿಕ್ಕಿದ ಸಂಸ ಕೊನೆಗಾಲದ ಮೂರು ವರ್ಷಗಳನ್ನು ಮೈಸೂರಲ್ಲಿ, ಒಂದು ಪುಟ್ಟ ಕೋಣೆಯಲ್ಲಿ, ನಾಲ್ಕು ದಿಕ್ಕುಗಳಿಂದಲೂ ಕಿಟಕಿ-ಬಾಗಿಲು ಮುಚ್ಚಿಕೊಂಡ ಸ್ಥಿತಿಯಲ್ಲಿ ಕಳೆದರು. ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ 1939ರಲ್ಲಿ, ತನ್ನ 41ನೆಯ ವಯಸ್ಸಿನಲ್ಲಿ ಆ ಪ್ರಯತ್ನದಲ್ಲಿ ಯಶಸ್ವಿಯಾದರು. ತೀರಿಕೊಂಡ ಹಲವು ದಿನಗಳ ನಂತರ ಹೆಣ ನಾರಲು ಹತ್ತಿದಾಗ ಈ ಮಹಾನ್ ನಾಟಕಕಾರ ತೀರಿಕೊಂಡ ಸುದ್ದಿ ಹೊರಜಗತ್ತಿಗೆ ಗೊತ್ತಾಯಿತು. ಎಂಥ ಉನ್ನತ ಪ್ರತಿಭೆಯ ಎಂಥ ಹೀನಾಯ ಸಾವು!

ಇವಿಷ್ಟೆಲ್ಲ ನಡೆದುಹೋದದ್ದು ಕೇವಲ ಕಳೆದೊಂದು ಶತಮಾನದಲ್ಲಿ ಎಂದು ನೆನೆದರೆ ಅಚ್ಚರಿಯಾಗುತ್ತದೆ. ಹಳೆಯ ಕಾಲುವೆಯಲ್ಲಿ ನಿಂತ ನೀರಾಗಿ ಕೊಳೆಯಹತ್ತಿದ್ದ ಕನ್ನಡ ರಂಗಭೂಮಿಗೆ ಹೊಸ ನೀರನ್ನು ಧುಸಮುಸನೆ ಚೆಲ್ಲಿ ಹೊಸ ಚೈತನ್ಯ ತುಂಬುವಂತೆ ಮಾಡಿದವರು ನಿಸ್ಸಂಶಯವಾಗಿಯೂ ಕೈಲಾಸಂ ಮತ್ತು ಸಂಸ. ಇವರಿಬ್ಬರೂ `ನಾಟಕಕಾರರಾಗಿ ಜನ್ಮವೆತ್ತಿ ಇಂದಿಗೆ ನೂರು ವರ್ಷ’ಗಳಾಯಿತೆಂಬುದು ನಮಗೆ ವಿಶೇಷ ಅನ್ನಿಸಬೇಕಿತ್ತು. ಶೇಕ್ಸ್‍ಪಿಯರನ 100, 200, 300ನೇ ಜನ್ಮೋತ್ಸವಗಳನ್ನು ಇಡೀ ಯುರೋಪು ಹಬ್ಬವಾಗಿ ಆಚರಿಸುವಂತೆ ನಾವು ನಮ್ಮ ಆಧುನಿಕ ಕನ್ನಡ ರಂಗಭೂಮಿಯ ಪುನರುತ್ಥಾನದ ಈ ಶತಮಾನೋತ್ಸವನ್ನು ಅದ್ದೂರಿಯಿಂದ ನಡೆಸಬೇಕಿತ್ತು. ಕೈಲಾಸಂ ಮತ್ತು ಸಂಸ ಇಬ್ಬರ ಹೆಸರಲ್ಲೂ ನಾಟಕೋತ್ಸವಗಳು ಆಯೋಜನೆಯಾಗಬೇಕಿತ್ತು. ಇಬ್ಬರ ಐದೈದು ನಾಟಕಗಳನ್ನಾದರೂ ಕನ್ನಡದ ಮಂದಿ ಆಡಿ ತೋರಿಸಿ ಜನರನ್ನು ರಂಜಿಸಬೇಕಿತ್ತು. ಆದರೆ, ನಮ್ಮ ಗರಬಡಿದ ಕನ್ನಡಿಗರನ್ನು ಈಗ ಮತ್ತೆ ಯಾರಾದರೂ ತಣ್ಣೀರಿನ ಬಕೆಟ್ಟಿನಲ್ಲಿ ಮುಳುಗಿಸಿ ಎಚ್ಚರಿಸಬೇಕಾಗಿದೆ! ಜೋಮುಹಿಡಿದ ರಂಗಭೂಮಿಗೆ ವಿದ್ಯುದಾಘಾತ ಕೊಟ್ಟು ಎಬ್ಬಿಸುವವರು ಯಾರು?