Tuesday, 29th September 2020

ಮರಳಿನಲ್ಲಿ ಪ್ರತ್ಯಕ್ಷವಾದ ನಾಗೇಶ್ವರ ದೇಗುಲ

ಪ್ರವಾಹ ಬಂದು, ಮರಳಿನ ರಾಶಿಯಲ್ಲಿ ಹುದುಗಿಹೋಗಿದ್ದ ಆ ದೇಗುಲವು ಪುನಃ ಜನರಿಗೆ ದರ್ಶನ ನೀಡಲು ಕರೋನಾ ಲಾಕ್‌ಡೌನ್ ಕಾರಣ ಎನಿಸಿತು!

ಶಶಾಂಕ್ ಮುದೂರಿ

ಆ ಪುಟ್ಟ ಹಳ್ಳಿಯಲ್ಲಿ ಈ ವರ್ಷದ ಎಪ್ರಿಲ್‌ನಲ್ಲಿ ಒಮ್ಮೆಗೇ ಜನಸಂಖ್ಯೆ ಜಾಸ್ತಿಯಾಯಿತು. ಕಾರಣ? ಕರೋನಾ ವಿಧಿಸಿದ ಲಾಕ್‌ಡೌನ್. ನಗರಗಳಲ್ಲಿ, ವಿದೇಶಗಳಲ್ಲಿ ಇದ್ದ ಯುವಕರು ಹಳ್ಳಿಗೆ ಹಿಂದಿರುಗಿದರು. ಲಾಕ್ಡೌನ್ ಅವಧಿಯಲ್ಲಿ ಅವರೆಲ್ಲ ಸೇರಿ ಮಾಡಿದ ಕೆಲಸವೇನು ಗೊತ್ತೆ? ಒಂದು ದೇವಾಲಯವನ್ನು ಭೂಮಿಯಿಂದ ಅಗೆದು ತೆಗೆದದ್ದು!

ಪೆರುಮಲ್ಲಪಾಡು ಗ್ರಾಮವು ಆಂಧ್ರಪ್ರದೇಶದ ಸಣ್ಣ ಗ್ರಾಮ. ಜೇಚರ‌್ಲ ಮಂಡದಲ್ಲಿರುವ ಈ ಗ್ರಾಮದ ಪಕ್ಕದಲ್ಲೇ ಪೆನ್ನಾ ನದಿ ಹರಿದುಹೋಗುತ್ತದೆ. ವರ್ಷದ ಬಹುಕಾಲ ಕೇವಲ ಮರಳಿನ ರಾಶಿಯಂತಿರುವ ಈ ನದಿಯು, ಒಮ್ಮೊಮ್ಮೆ ದೂರದಲ್ಲೆಲ್ಲೋ ಮಳೆಯಾದಾಗ ಪ್ರವಾಹದಿಂದ ತುಂಬುತ್ತದೆ. 1850ರ ಸಮಯದ ಒಂದು ಮಳೆಗಾಲ. ನದಿಯ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆ.

ಪೆರುಮಲ್ಲಪಾಡು ಗ್ರಾಮದ ಮೇಲ್ಭಾಗದಲ್ಲಿದ್ದ ಸೋಮಶಿಲ ಅಣೆಕಟ್ಟು ಇನ್ನೂ ನಿರ್ಮಾಣವಾಗಿರಲಿಲ್ಲ. ಪೆನ್ನಾ ನದಿಯಲ್ಲಿ ಒಮ್ಮೆಗೇ ಪ್ರವಾಹ ಬಂತು. ಪ್ರವಾಹ ಪ್ರಬಲವಾಗಿತ್ತು. ಆ ದಡದಿಂದ ಈ ದಡಕ್ಕೆ ತುಂಬಿ ಹರಿಯುವ ಕೆಂಪು ನೀರು. ಗ್ರಾಮದವ ರೆಲ್ಲ ಒಂದು ಕಿಮೀ ಎತ್ತರ ಪ್ರದೇಶಕ್ಕೆ ತಮ್ಮ ವಸತಿಯನ್ನು ಸ್ಥಳಾಂತರಿಸಿಕೊಂಡರು.

ಪ್ರವಾಹ ಇಳಿದ ನಂತರ, ನದಿ ತೀರಕ್ಕೆ ಹೋಗಿ ನೋಡಿದರೆ, ಅಲ್ಲಿದ್ದ ನಾಗೇಶ್ವರ ದೇವಾಲಯ ಪೂರ್ತಿಯಾಗಿ ಮರಳಿನಲ್ಲಿ ಹೂತು ಹೋಗಿದೆ! ಪ್ರವಾಹ ತಂದು ಹಾಕಿದ ಮರಳು ಮತ್ತು ಮಣ್ಣು ಅಲ್ಲಿದ್ದ ನಾಗೇಶ್ವರ ದೇವಾಲಯವನ್ನು ಬಹುಪಾಲು ಮುಚ್ಚಿ ಬಿಟ್ಟಿತ್ತು.

ಒಂದು ಶತಮಾನದ ನಂತರ 2020ರ ಕರೋನಾ ಲಾಕ್‌ಡೌನ್ ಸಮಯದಲ್ಲಿ ಸ್ಟಾಕ್ ಹೋಂನಲ್ಲಿ ಸಾಫ್ಟ್ವೇರ್ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ತಮ್ಮ ಊರಾದ ಪೆರುಮಲ್ಲಪಾಡು ಗ್ರಾಮಕ್ಕೆ ವಾಪಸಾಗಿ, ಇಲ್ಲೇ ವಾಸಮಾಡತೊಡಗಿದರು. ಅವರು ಬಾಲ್ಯದಲ್ಲಿ ಕೇಳಿದಂತೆ, ನದಿ ತೀರದಲ್ಲಿ ಒಂದು ದೇಗುಲವಿತ್ತು. ಲಾಕ್‌ಡೌನ್ ಸಮಯದಲ್ಲಿ ಅವರ ರೀತಿ ಹಲವು ಯುವಕರು ಊರಿಗೆ ವಾಪಸಾದರು. ಎಲ್ಲರ ಸಹಕಾರ ಪಡೆದು, ಮರಳಿನಲ್ಲಿ ಮುಚ್ಚಿಹೋದ ದೇಗುಲವನ್ನು ಹುಡುಕಲು ನಿರ್ಧರಿಸಿದರು. ಸರಕಾರದ ಎಂಡೋಮೆಂಟ್ ಇಲಾಖೆಯ ಮೌಖಿಕ ಸಮ್ಮತಿ ಪಡೆದು, ಮರಳನ್ನು ಅಗೆಯಲು ನಿರ್ಧರಿಸಿದರು. ವಂತಿಗೆ ಸಂಗ್ರಹಿಸಿ, ಜೆಸಿಬಿಯನ್ನು ತರಿಸಿದರು. ಹಿರಿಯರ ಸಲಹೆಯ ಮೇರೆಗೆ, ದೇಗುಲ ಇದ್ದ ಜಾಗವನ್ನು ಊಹಿಸಿ, ಮರಳು ತೆಗೆಯತೊಡಗಿದರು. ಮೊದಲ ದಿನ ಎಷ್ಟು ಅಗೆದರೂ ಇನ್ನಷ್ಟು ಮರಳು ಬಂತೇ ಹೊರತು, ತಾವು ಕೇಳಿದ ಕಥೆಗೆ ಪುಷ್ಟಿ ಸಿಗಲಿಲ್ಲ. ದೇಗುಲ ಮರಳಿನಲ್ಲೇ ಉಳಿಯಿತು.

ಕುರಿಗಾಹಿಯ ಸಲಹೆ

ಗ್ರಾಮದ ಹೊರವಲಯದಲ್ಲಿ ಕುರಿಗಾಹಿಯೊಬ್ಬ ವಾಸಿಸುತ್ತಿದ್ದ. ವಿದೇಶದಿಂದ ಮತ್ತು ನಮ್ಮ ದೇಶದಿಂದ ಊರಿಗೆ ವಾಪಸಾದ ಯುವಕರೆಲ್ಲ ಸೇರಿ ಮರಳು ಅಗೆಯುತ್ತಿದ್ದು ದನ್ನು ನೋಡಿದ. ಮರುದಿನ ಬೆಳಿಗ್ಗೆ, ಯುವಕರ ಬಳಿ ಬಂದು ಹೇಳಿದ ‘‘ಅಣ್ಣಾ, ನೀವು ಹುಡುಕುತ್ತಿರುವ ದೇಗುಲ ಅಲ್ಲಿಲ್ಲ, ಇಲ್ಲಿದೆ’’ ಎಂದು ನದಿ ತೀರದ ಇನ್ನೊೊಂದು ದಿಬ್ಬವನ್ನು ತೋರಿಸಿದ. ಯುವಕರಿಗೆ, ಹಳ್ಳಿಯ ಜನರಿಗೆ ಸಂದಿಗ್ಧ.

ಈ ಕುರಿಗಾಹಿಯ ಮಾತನ್ನು ನಂಬಿ, ಅಗೆಯಲು ಆರಂಭಿಸಿ ಏನೂ ದೊರೆಯದಿದ್ದರೆ ನಿನ್ನೆಯ ರೀತಿಯೇ ಭ್ರಮ ನಿರಸನ ಆದೀತಲ್ಲಾ ಎಂದು. ಕುರಿಗಾಹಿಯದ್ದು ಒಂದೇ ಹಠ. ‘‘ಕುರಿ ಮೇಯಿಸುವ ನನಗೆ ಇಲ್ಲಿನ ಎಲ್ಲಾ ವಿವರ ಚೆನ್ನಾಗಿ ಗೊತ್ತು. ನಾಗೇಶ್ವರ ದೇಗುಲ ಇದೇ ಜಾಗದಲ್ಲಿದೆ, ನೀವು ಅಗೆದು ನೋಡಿ, ಬೇರೆಲ್ಲು ಅಗೆದರೂ ನಿಮಗೆ ದೇಗುಲ ಸಿಗದು.’’ ಎಂದು ಆತನ ಒಂದೇ ವರಾತ. ಸರಿ ನೋಡೇ ಬಿಡೋಣ, ಎಂದು ಜೆಸಿಬಿ ಯಂತ್ರವನ್ನು ಆ ಕುರಿಗಾಹಿ ಹೇಳಿದ ಜಾಗಕ್ಕೆ ತಂದು ಅಗೆಯಲು ಆರಂಭಿಸಿದರು.

ಪ್ರತ್ಯಕ್ಷವಾದ ದೇಗುಲ

ಒಂದು ಗಂಟೆ ಅಗೆಯುವಷ್ಟರಲ್ಲಿ, ಕುರಿಗಾಹಿಯ ಮಾತು ನಿಜವಾಯಿತು. ದೇಗುಲದ ತುದಿ ಕಾಣಿಸಿತು. ಅಗೆತವನ್ನು ಮುಂದು ವರಿಸಿದರು. ದೇಗುಲದ ಗೋಪುರ, ಮುಖ ಮಂಟಪ ಮತ್ತು ಇತರ ಭಾಗಗಳು ಕಾಣಿಸಿದವು. ವಿಷಯ ತಿಳಿದು ಸರಕಾರದ ಅಧಿಕಾರಿಗಳು ಓಡಿ ಬಂದರು.

‘‘ಈಗ ಲಾಕ್‌ಡೌನ್ ಇದೆ, ಜನ ಸೇರಬಾರದು. ಜತೆಗೆ ದೇಗುಲದ ಇತಿಹಾಸವನ್ನು ಪರಿಶೀಲಿಸಿ, ಸರಕಾರಕ್ಕೆ ವರದಿ ಮಾಡಬೇಕು’’ ಎಂದು ಆ ಜಾಗವನ್ನು ಕ್ವಾರಂಟೈನ್ ಮಾಡಿದರು! ಮುಳ್ಳು ಬೇಲಿ ಹಾಕಿಸಿ, ಯಾರೂ ಅಲ್ಲಿ ಅಗೆತ ಮುಂದುವರಿಸಬಾರದೆಂದು ತಾಕೀತು ಮಾಡಿದರು. ದೇಗುಲದ ಕಾಲು ಭಾಗ ಮಾತ್ರ ಈಗ ಮರಳಿನಿಂದ ಹೊರಗೆ ಕಾಣಿಸುತ್ತಿದೆ. ಸದ್ಯಕ್ಕೆ ಅಗೆತದ ಕೆಲಸ ಸ್ಥಗಿತಗೊಂಡಿದೆ.

ಪೆನ್ನಾಾ ನದಿಯ ಅಗಾಧ ಮರಳಿನ ರಾಶಿಯ ನಡುವೆ, ಸ್ವಲ್ಪ ಮಾತ್ರ ಕಾಣಿಸುತ್ತಿರುವ ಈ ನಾಗೇಶ್ವರ ದೇಗುಲದ ಗಾರೆ ಗಚ್ಚಿನ ಗೋಪುರದ ವಿನ್ಯಾಸವನ್ನು ಕಂಡ ಹವ್ಯಾಸಿ ಇತಿಹಾಸಕಾರರು, ಇದು ವಿಜಯನಗರೋತ್ತರ ಶೈಲಿಯನ್ನು ಹೋಲುತ್ತದೆ ಎಂದಿದ್ದಾರೆ. ಲಾಕ್‌ಡೌನ್ ಅವಧಿ ಮುಗಿದದ್ದರಿಂದ, ಊರಿಗೆ ಬಂದಿದ್ದ ಯುವಕರು ತಮ್ಮ ಉದ್ಯೋಗಕ್ಕೆ ಒಬ್ಬೊಬ್ಬರಾಗಿ ವಾಪಸಾಗುತ್ತಿದ್ದಾರೆ. ಈ ದೇಗುಲದ ಅಧ್ಯಯನ, ಮರಳಿನಿಂದ ಉತ್ಖನನ ನಡೆಸಲು ಸರಕಾರ ಸದ್ಯದಲ್ಲೇ ಕ್ರಮ ಕೈಗೊಳ್ಳುತ್ತದೆ ಎಂದು ಪೆರುಮಲ್ಲಪಾಡು ಗ್ರಾಮಸ್ಥರು ನಿರೀಕ್ಷಿಸುತ್ತಿದ್ದಾರೆ. ಮರಳಿನಿಂದ ಮೇಲೆದ್ದು ಬಂದ ನಾಗಲಿಂಗೇಶ್ವರ ದೇಗುಲದಿಂದ ತಮ್ಮ ಹಳ್ಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅವರದ್ದು.

ಪ್ರವಾಹದಿಂದ ಕಣ್ಮರೆ

ಊರಿನ ಹಿರಿಯರು ತಮ್ಮ ಬಾಲ್ಯದಲ್ಲಿ ಕೇಳಿದ ಕಥೆಗಳನ್ನು ಈಗ ಮತ್ತೊಮ್ಮೆ ನೆನಪಿಸಿಕೊಂಡರು. ‘‘ನೂರೈವತ್ತು ವರ್ಷದ ಹಿಂದೆ ಪ್ರವಾಹ ಬಂದಾಗ, ದೇವಾಲಯದಲ್ಲಿದ್ದ ಅಮೂಲ್ಯ ವಸ್ತುಗಳನ್ನು ರಕ್ಷಿಸಿ, ಹಳ್ಳಿಗೆ ಹಳ್ಳಿಯನ್ನೇ ಒಂದು ಕಿಮೀ ದೂರಕ್ಕೆ ಸ್ಥಳಾಂತರಿಸಿದೆವು. ದೇಗುಲ ಮುಳುಗಿತು. ಇದು ಪರಶುರಾಮ ನಿರ್ಮಿಸಿದ ದೇವಾಲಯ. 300 ವರ್ಷಗಳ ಹಿಂದೆ ಇದನ್ನು ಇಟ್ಟಿಗೆ, ಗಾರೆ ಬಳಸಿ ಪುನರ್ ನಿರ್ಮಿಸಲಾಗಿದೆ.”

Leave a Reply

Your email address will not be published. Required fields are marked *