Friday, 30th September 2022

ನಮ್ಮ ಮೆಟ್ರೋದಲ್ಲಿ ಕನ್ನಡ ನಿರ್ಲಕ್ಷ್ಯ: ಎಂಡಿಗೆ ನೋಟೀಸ್‌

ಬೆಂಗಳೂರು: ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ನಮ್ಮ ಮೆಟ್ರೋ ವಿಸ್ತರಣಾ ಕಾರ್ಯಕ್ರಮದಲ್ಲಿ ಸ್ಥಳೀಯ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಿದ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೋಟೀಸ್ ಜಾರಿ ಮಾಡಿದೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕೆಂದು ಆದೇಶವಿದ್ದರೂ ಮೆಟ್ರೋ ರೈಲು ವಿಸ್ತರಣೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡದೆ ಅಪಮಾನ ಮಾಡಿದ್ದೀರಿ. ಇದಕ್ಕೆ ಕಾರಣವೇ ನೆಂದು ಸಚಿವ ವಿ.ಸುನಿಲ್‍ಕುಮಾರ್ ಪ್ರಶ್ನಿಸಿದ್ದಾರೆ.

ಬ್ಯಾನರ್‍ಗಳಲ್ಲಿ ಕನ್ನಡ ಭಾಷೆ ಬಳಸ ಬೇಕೆಂದು ಸರ್ಕಾರ ಸೂಚನೆ ನೀಡಿದೆ. ನಮ್ಮ ಭಾಷೆಯನ್ನು ನಿರ್ಲಕ್ಷಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ಅಪಮಾನ ಮಾಡಲಾಗಿದೆ. ಇದಕ್ಕೆ ಕಾರಣವನ್ನು ನೋಟೀಸ್‍ನಲ್ಲಿ ತಿಳಿಸ ಬೇಕೆಂದು ಸೂಚಿಸಿದ್ದಾರೆ.

ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಕನ್ನಡವನ್ನು ಬಳಕೆ ಮಾಡಲೇಬೇಕೆಂದು ಸೂಚನೆ ನೀಡಲಾಗಿತ್ತು. ಆದರೂ ಇಂತಹ ಘಟನೆಗಳು ಮರು ಕಳಿಸುತ್ತಿರುವುದು ಅತ್ಯಂತ ದುರದೃಷ್ಟಕರ. ಯಾವುದೇ ಸಂದರ್ಭದಲ್ಲೂ ನಮ್ಮ ಸರ್ಕಾರ ಕನ್ನಡ ಭಾಷೆಯನ್ನು ಅಪಮಾನಿಸುವ ಅಥವಾ ಕಡೆಗಣಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ತಕ್ಷಣವೇ ಮೆಟ್ರೋ ಅಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದ್ದಾರೆ.