Thursday, 19th May 2022

ಶಿವಾಜಿ ಸುರತ್ಕಲ್ 2: ರಮೇಶ್’ಗೆ ತಮಿಳು ನಟ ನಾಜರ್ ಸಾಥ್

ಬೆಂಗಳೂರು: ಹಿರಿಯ ನಟ ರಮೇಶ್ ಅಭಿನಯದ ‘ಶಿವಾಜಿ ಸುರತ್ಕಲ್ 2’ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿ, 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರಕ್ಕೆ ತಮಿಳು ನಟ ನಾಜರ್ ಸೇರ್ಪಡೆಯಾಗಿದ್ದು, ರಮೇಶ್ ತಂದೆಯಾಗಿ ನಟಿಸುತ್ತಿದ್ದಾರೆ.

30 ವರ್ಷಗಳ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ನಾಜರ್ ಸೇರ್ಪಡೆಯ ಬಗ್ಗೆ ನಿರ್ದೇಶಕ ಆಕಾಶ್ ಶ್ರೀವತ್ಸ, ‘ಶಿವಾಜಿಯ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ನಾಜರ್ ನಟಿಸುತ್ತಿದ್ದಾರೆ. ಅವರು ಸಹ ಪೊಲೀಸ್ ಇಲಾಖೆಯಲ್ಲಿ ಐಜಿಯಾಗಿ ನಿವೃತ್ತರಾಗಿರುತ್ತಾರೆ. ಪತ್ತೆದಾರಿಕೆಯ ಜತೆಗೆ ಇಲ್ಲಿ ಅಪ್ಪ-ಮಗನ ಕಥೆಯೂ ಇದೆ.

ಅವರಿಬ್ಬರ ನಡುವೆ ಕಾರಣಾಂತರಗಳಿಂದ ಮಾತುಕತೆ ನಿಂತು ಹೋಗಿರುತ್ತದೆ. ಇಬ್ಬರೂ ಜೀವನವನ್ನು ನೋಡುವ ರೀತಿ ಬೇರೆಯಾಗಿದ್ದು, ಅದೇ ಘರ್ಷಣೆಗೆ ಕಾರಣವಾಗಿರುತ್ತದೆ ಎನ್ನುತ್ತಾರೆ.

‘ಶಿವಾಜಿ ಸುರತ್ಕಲ್ 2’ ಚಿತ್ರಕ್ಕೆ ಆಕಾಶ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ವಿುಸುತ್ತಿರುವ ಈ ಚಿತ್ರದಲ್ಲಿ ರಮೇಶ್ ಜತೆಗೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ ಮುಂತಾದವರು ನಟಿಸುತ್ತಿದ್ದಾರೆ.

2022ರ ಜನವರಿ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದೆ.