Friday, 24th September 2021

ಗೋಡ್ಸೆ ಆರಾಧನೆ ತರವಲ್ಲ

ಗುಜರಾತ್‌ನಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಸೇನಾ ಯುವಕರು ನಿರ್ಧಾರ ಮಾಡಿರು ವುದು ಬೇಸರದ ಸಂಗತಿ. ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯನ್ನು ಆರಾಧನೆ ಮಾಡುವುದೆಂದರೆ ಅದು ಪರೋಕ್ಷವಾಗಿ ದೇಶದ್ರೋಹವೇ. ಅಷ್ಟಕ್ಕೂ ಗಾಂಧೀಜಿ ಈ ದೇಶಕ್ಕೆ ಮಾಡಿದ ದ್ರೋಹವಾದರೂ ಏನು? ತಮ್ಮ ವೈಯಕ್ತಿಕ ಜೀವನವ ನ್ನು ದೇಶಕ್ಕಾಗಿ ಧಾರೆಯೆರೆದು ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಅವರ ತಪ್ಪೇ? ಸ್ವಾತಂತ್ರ್ಯೋತ್ತರ ಬೆಳವಣಿಗೆಗಳ ಬಗ್ಗೆ ಗಾಂಧೀಜಿ ಕುರಿತು ಅನೇಕರದಲ್ಲಿ ಅಸಮಾಧಾನ, ಭಿನ್ನಾಭಿಪ್ರಾಯ ಗಳಿರಬಹುದು ನಿಜ.

ಆದರೆ ಅದೇ ಕಾರಣದಿಂದ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸಿಸುವ ದುಸ್ಸಾಹಸಕ್ಕೆ ಕೈ ಹಾಕುವುದು ಸರಿಯಲ್ಲ. ಗಾಂಧೀಜಿಯವರ ತತ್ವ, ಸಿದ್ಧಾಂತಗಳು ಕೆಲವರಿಗೆ ಇಷ್ಟವಾಗಬಹುದು, ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಅವರು ರಾಷ್ಟ್ರಪಿತ ಎಂಬುದು ಸರ್ವ ಒಪ್ಪಿತ ಸತ್ಯ. ಅಲ್ಲದೇ, ಬ್ರಿಟಿ ಷರ ಸಂಕೋಲೆಯಿಂದ ಭಾರತವನ್ನು ಬಿಡಿಸಲು ಹೋರಾಡಿದ ಪ್ರತಿಯೊಬ್ಬರನ್ನೂ ಇಂದಿನ ಪೀಳಿಗೆ, ಮುಂದಿನ ಪೀಳಿಗೆ ಗೌರವಿಸಬೇಕಾದದ್ದೆ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಈ ನೆಲದ ಕಾನೂನು, ಇತಿಹಾಸ, ಹೋರಾಟ, ಪರಂಪರೆಗೆ ಬೆಲೆ ಕೊಟ್ಟು ಗೌರವಿಸಲೇಬೇಕು. ಅದು ಬಿಟ್ಟು ಯಾವುದೋ ಸಮುದಾಯ, ಧರ್ಮದ ಮೆಚ್ಚುಗೆ ಗಳಿಸಲು ಇಲ್ಲ ಸಲ್ಲದ ದುಸ್ಸಾಹಸಕ್ಕೆ ಕೈ ಹಾಕುವುದು ತರವಲ್ಲ.

ಗೋಡ್ಸೆ ಪ್ರತಿಮೆ ಸ್ಥಾಪನೆ ಮಾಡು ವುದೆಂದರೆ ಶಾಂತಿಯ ವಿರುದ್ಧದ ನಡೆಗೆ ಪ್ರಚೋದನೆ ನೀಡಿದಂತೆಯೇ. ಭಾರತವು ಅಂದು, ಇಂದು, ಮುಂದೆಯೂ ಶಾಂತಿ ಪ್ರಿಯ ರಾಷ್ಟ್ರ ಎಂದೇ ಹೆಸರು ಗಳಿಸಿದೆ. ಅದಕ್ಕೆ ಮಸಿ ಬಳಿಯುವ ಕೆಲಸಕ್ಕೆ ಇಂದಿನ ಯುವಪೀಳಿಗೆ ಕೈ ಹಾಕಬಾರದು. ಇಂದಿನ ಯುವಕರಿಗೆ ಗಾಂಧೀಜಿ ಆದರ್ಶ ವಾಗಬೇಕೇ ವಿನಾ ಗೋಡ್ಸೆಯಲ್ಲ. ಗೋಡ್ಸೆ ಆರಾಧಕರ ಬಗ್ಗೆ ಸರಕಾರ, ಪೊಲೀಸರು ಜಾಣಮೌನ ವಹಿಸಬಾರದು. ಸಸಿ ಇದ್ದಾಗಲೇ ಇಂತಹ ಯೋಚನೆಗಳನ್ನು ಚಿವುಟಿ ಹಾಕಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ ಗಾಂಧೀಜೀ ಅವರನ್ನು ಮುಂದಿನ ಪೀಳಿಗೆಗೆ ಬೇರೆ ರೀತಿ ಚಿತ್ರಿಸುವ ಅಪಾಯ ಇದೆ.

Leave a Reply

Your email address will not be published. Required fields are marked *