Tuesday, 21st March 2023

ರಾಷ್ಟ್ರೀಯ ಶಿಕ್ಷಣ ನೀತಿ; ಕರ್ನಾಟಕದ ವೇಗಕ್ಕೆ ಬೆರಗಾದ ಡಾ.ಕಸ್ತೂರಿ ರಂಗನ್‌

ಡಾ.ಕಸ್ತೂರಿ ರಂಗನ್‌, ಪ್ರೊ.ಸಿ.ಕಾಮೇಶ್ವರ ರಾವ್‌, ನಾಗೇಶ ಹಗಡೆ ಸೇರಿ ಹದಿನಾರಕ್ಕೂ ಹೆಚ್ಚು ವಿಜ್ಞಾನಿಗಳಿಗೆ ಪ್ರಶಸ್ತಿ ಸಮರ್ಪಣೆ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರದಲ್ಲಿ ಪ್ರಕಟಿಸುವ ಮುನ್ನವೇ ಆ ನೀತಿಯ ಜಾರಿಗೆ ಎಲ್ಲ ರಾಜ್ಯಗಳಿಗಿಂತ ಮೊದಲೇ ಕರ್ನಾಟಕವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಪಡೆಯನ್ನೂ ರಚನೆ ಮಾಡಿಕೊಂಡಿದ್ದರ ಬಗ್ಗೆ ಇಸ್ರೋ ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಕಸ್ತೂರಿ ರಂಗನ್‌ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ನೀಡಲಾದ ʼಜೀವಮಾನ ಸಾಧನೆʼ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು; “ನಾವು ದಿಲ್ಲಿಯಲ್ಲಿ ವರದಿಯನ್ನು ಸಿದ್ಧಪಡಿಸಿ ಮಾನವ ಸಂಪನ್ಮೂಲ ಸಚಿವಾಯಲಯಕ್ಕೆ ಸಲ್ಲಿಸಿದ್ದೆವು. ನಂತರ ಎಲ್ಲ ರಾಜ್ಯಗಳಿಗೂ ನೀತಿಯ ಕರಡು ಪ್ರತಿಗಳನ್ನು ಕಳಿಸಿ ಕೊಡಲಾಯಿತು. ಕರ್ನಾಟಕವು ಕರಡು ಪ್ರತಿ ಸಿಕ್ಕಿದ ಕೂಡಲೇ ಅದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿತು. ಸಲಹೆ-ಸಹಕಾರ ನೀಡಲು ಕಾರ್ಯಪಡೆಯ್ನೂ ರಚಿಸಿಕೊಂಡಿತು. ಇದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ” ಎಂದರು.

ತದೇಕ ಚಿತ್ತದಿಂದ ಆಲಿಸಿದ ಸಿಎಂ, ಡಿಸಿಎಂ: ಇದೇ ಸಂದರ್ಭದಲ್ಲಿ ಒಂದು ಘಟನೆಯನ್ನು ಮೆಲುಕು ಹಾಕಿದ ಅವರು; “ಶಿಕ್ಷಣ ನೀತಿ ದೆಹಲಿಯಲ್ಲಿ ಪ್ರಕಟವಾದ ಮೇಲೆ ನಾನು ಬೆಂಗಳೂರಿಗೆ ವಾಪಸ್ಸಾದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನಮ್ಮ ಮನೆಗೆ ಬಂದರು. ʼಶಿಕ್ಷಣ ನೀತಿಯ ಬಗ್ಗೆ ಹೇಳಿ, ಸರಕಾರ ಏನೆಲ್ಲ ಮಾಡ ಬಹುದುʼ ಎಂದು ಕೇಳಿದರು. ನಾನು ಅರ್ಧ ಗಂಟೆ ಕಾಲ ಇಡೀ ಶಿಕ್ಷಣ ನೀತಿಯ ಸಾರಾಂಶವನ್ನು ವಿವರಿಸಿದೆ. ಅಷ್ಟೂ ಹೊತ್ತು ತದೇಕಚಿತ್ತದಿಂದ ಆಲಿಸಿದ ಇಬ್ಬರೂ ನಾಯಕರು ಎಲ್ಲೂ ನನ್ನ ಮಾತಿನ ಮಧ್ಯೆ ಮಾತನಾಡಲೇ ಇಲ್ಲ.

ನಾನು ಹೇಳಿದ್ದನ್ನು ಕೇಳಿದ ಮೇಲೆ ಯಡಿಯೂರಪ್ಪ ಅವರು, ʼಹೊಸ ಶಿಕ್ಷಣ ನೀತಿ ಬಹಳ ಚೆನ್ನಾಗಿದೆ. ನಾವು ತಪ್ಪದೇ ಜಾರಿ ಮಾಡುತ್ತೇವೆʼ ಎಂದರು. ಇನ್ನು ಅಶ್ವತ್ಥನಾರಾಯಣ ಅವರು, ಶಿಕ್ಷಣ ನೀತಿಯ ಜಾರಿಯ ಬಗ್ಗೆ ಈಗಾಗಲೇ ಕೈಗೊಂಡ ಎಲ್ಲ ಮಾಹಿತಿಯನ್ನು ಹಂಚಿಕೊಂಡರು. ನನಗೆ ಪರಮಾಶ್ಚರ್ಯವಾಯಿತು. ಅವರು ಬಹಳ ವೇಗವಾಗಿ ಹೆಜ್ಜೆಗಳನ್ನಿಡುತ್ತಿದ್ದರು” ಎಂದರು ಕಸ್ತೂರಿ ರಂಗನ್.

ಇಡೀ ಶಿಕ್ಷಣ ನೀತಿಯನ್ನು ಹೇಗೆ ಜಾರಿ ಮಾಡಬೇಕು? ಪ್ರಾಥಮಿಕ ಹಂತ, ಪ್ರೌಢ ಹಂತ, ಕಾಲೇಜು ಹಂತ ಹಾಗೂ ವಿಶ್ವವಿದ್ಯಾ ಲಯದ ಹಂತಗಳಲ್ಲಿ ಯಾವ ರೀತಿಯಲ್ಲಿ ಜಾರಿ ಮಾಡಬೇಕು ಎಂಬ ಎಲ್ಲ ಸಿದ್ಧತೆಯ ಮಾಹಿತಿಯನ್ನೂ ಅಶ್ವತ್ಥನಾರಾಯಣ ನೀಡಿದರು. ಆಮೇಲೆ ಎಷ್ಟು ವೇಗವಾಗಿ ಪ್ರಕ್ರಿಯೆಗಳು ನಡೆದವು ಎಂದರೆ, ಕಾರ್ಯಪಡೆ ವರದಿ ನೀಡಿದ್ದೂ ಆಯಿತು. ಆ ವರದಿ ಯನ್ನು ಸಂಪುಟ ಒಪ್ಪಿದ್ದೂ ಆಯಿತು. ಅದಾದ ಮೇಲೆ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆಗಳು ಆದವು. ಒಂದು ಸರಕಾರ ಇಷ್ಟು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖವಾಗುವುದು ವಿರಳ. ಇದೇ  ಕರ್ನಾಟಕ ಎಂದು ಕಸ್ತೂರಿ ರಂಗನ್‌ ಅವರು ಮುಕ್ತಕಂಠ ದಿಂದ ಶ್ಲಾಘಿಸಿದರು.

ಶಿಕ್ಷಣ ನೀತಿಯಲ್ಲಿ ಮೂಲ ವಿಜ್ಞಾನಕ್ಕೆ ಒತ್ತು: ಕಾರ್ಯಕ್ರಮದಲ್ಲಿ ಎಲ್ಲ ವಿಜ್ಞಾನಿಗಳಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ; “ಮೂಲ ವಿಜ್ಞಾನ ಬೋಧನೆಯ ಶೈಲಿ ಬದಲಾಗಬೇಕಿದೆ. ಹಾಗೆಯೇ, ಮಕ್ಕಳಿಗೆ ಮೂಲ ವಿಜ್ಞಾನವನ್ನು ಕಲಿಯಲು ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟದ ಬೋಧನೆ, ಕಲಿಕೆಯ ಜತೆಗೆ ಸಂಶೋಧನೆಗೂ ಹೆಚ್ಚು ಮಹತ್ವ ನೀಡಲಾಗಿದೆ. ಆವಿಷ್ಕಾರ ಕ್ಷೇತ್ರದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಉಳಿಸಿಕೊಳ್ಳಲು ಶಿಕ್ಷಣ ನೀತಿಯನ್ನು ವೇಗಗತಿ ಯಲ್ಲಿ ಜಾರಿ ಮಾಡಲಾಗುತ್ತಿದೆ ಎಂದರು ಡಿಸಿಎಂ.

ಇನ್ನು ಹತ್ತು ವರ್ಷಗಳಲ್ಲಿ 150 ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ. ವೈಯಕ್ತಿಕವಾಗಿ ಹೇಳುವು ದಾದರೆ, ಹತ್ತು ವರ್ಷಗಳಲ್ಲಿ ಎಲ್ಲ ಗುಣಮಟ್ಟದ ಕಾಲೇಜುಗಳು ವಿವಿಗಳಾಗಬೇಕು ಎನ್ನುವುದು ನನ್ನ ಉದ್ದೇಶ. ಮುಂದಿನ ದಿನಗಳಲ್ಲಿ ವಿವಿಗಳಿಗೆ, ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರ ರಾಜ್ಯಗಳಿಗೆ ಧಕ್ಕಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣದ ಸುಧಾರಣೆಗಳ ಪರ್ವವೇ ಆರಂಭವಾಗಲಿದೆ ಎಂದರು ಉಪ ಮುಖ್ಯಮಂತ್ರಿ.

ಇದೇ ವೇಳೆ ಉಪ ಮುಖ್ಯಮಂತ್ರಿಗಳು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದರು. ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಲ್ಲಿ ಅಕಾಡೆಮಿಯ ಅಧ್ಯಕ್ಷ ಪ್ರೊ.ಅಯ್ಯಪ್ಪನ್‌, ಅಕಾಡೆಮಿ ಸಿಇಒ ಡಾ.ರಮೇಶ್‌ ಮುಂತಾದವರು ಪಾಲ್ಗೊಂಡಿದ್ದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ತರಬೇತುದಾರರ ತರಬೇತಿ ‌ಕೇಂದ್ರ ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ. ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್, ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್, ಅಕಾಡೆಮಿ ಅಧ್ಯಕ್ಷ ಪ್ರೊ.ಎಸ್.ಅಯ್ಯಪ್ಪನ್ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ‌ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ ಗಣ್ಯರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಜ್ಞಾನಿಗಳಿಗೆ ಫೆಲೋಶಿಪ್ ಪ್ರದಾನ ಕೂಡ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳು:

ಪ್ರೊ.ಸಿ.ಎನ್.ಆರ್.ರಾವ್ ಜೀವಮಾನ ಸಾಧನೆ ಪ್ರಶಸ್ತಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಕೃಷಿ, ವೈದ್ಯಕೀಯ)
*‌ ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್
* ಪದ್ಮಶ್ರೀ ಡಾ.ಗೋಡ್‌ಬಳೆ ರೋಹಿಣಿ ಮಧುಸೂಧನ್ (ಹಾಜರಿರಲಿಲ್ಲ)
* ಪದ್ಮಭೂಷಣ ಡಾ.ಎಂ.ಮಹಾದೇವಪ್ಪ
* ಪ್ರೊ.ಸಿ.ಕಾಮೇಶ್ವರ ರಾವ್‌

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (ವಿಜ್ಞಾನ- ಕನ್ನಡದಲ್ಲಿ ಬರವಣಿಗೆ)
* ನಾಗೇಶ್‌ ಹೆಗಡೆ
* ಡಾ.ಸಿ.ಆರ್.ಚಂದ್ರಶೇಖರ್‌

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಗೌರವ ಫೆಲೋಶಿಫ್

* ಡಾ.ಕೆ.ವಿ. ಪ್ರಭು: ಕೃಷಿ ವಿಜ್ಞಾನ (ಹಾಜರಿರಲಿಲ್ಲ)
* ಡಾ,ಎನ್.ಕೆ.ನಂದಕುಮಾರ್‌: ಕೃಷಿ ವಿಜ್ಞಾನ (ಹಾಜರಿರಲಿಲ್ಲ)
* ಡಾ.ಟಿ.ಶಿವಾನಂದಪ್ಪ: ಪಶು ವಿಜ್ಞಾನ
* ಡಾ.ರಾಮಕೃಷ್ಣ: ಪಶು ವಿಜ್ಞಾನ
* ಪ್ರೊ.ಬಿ.ವೆಂಕಟೇಶ್:‌ ಬಯೋ ಕೆಮಿಸ್ಟ್ರಿ, ಬಯೋ ಫಿಸಿಕ್ಸ್‌, ಬಯೋ ಟೆಕ್ನಾಲಜಿ
* ಪ್ರೊ.ಎಸ್.ಆರ್.ನಿರಂಜನ: ಬಯೋ ಕೆಮಿಸ್ಟ್ರಿ, ಬಯೋ ಫಿಸಿಕ್ಸ್‌, ಬಯೋ ಟೆಕ್ನಾಲಜಿ
* ಪ್ರೊ. ಕೆ.ಎಸ್.ರಂಗಪ್ಪ: ರಾಸಾಯನ ವಿಜ್ಞಾನ
* ಡಾ.ಎನ್.ಆರ್.ಶೆಟ್ಟಿ: ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ
* ಪ್ರೊ.ಎನ್.ಎಂ.ಬುಜುರ್ಕೆ: ಗಣಿತ ವಿಜ್ಞಾನ
* ಡಾ.ಸಿ.ಎನ್.ಮಂಜುನಾಥ್:‌ ವೈದ್ಯಕೀಯ ಮತ್ತು ಫೋರೆನ್ಸಿಕ್‌
* ಪ್ರೊ.ಎಂ.ಐ.ಸವದತ್ತಿ: ಭೌತ ವಿಜ್ಞಾನ
* ಪ್ರೊ.ಕೆ.ಸಿದ್ದಪ್ಪ: ಭೌತ ವಿಜ್ಞಾನ
* ಡಾ.ಎಚ್.ಹೊನ್ನೇಗೌಡ: ವಿಜ್ಞಾನ ಮತ್ತು ಸಮಾಜ
* ಪ್ರೊ.ಆರ್.ಎಸ್.ದೇಶಪಾಂಡೆ: ಸಮಾಜ ವಿಜ್ಞಾನ
* ಡಾ.ಮೃತ್ಯುಂಜಯ: ಸಮಾಜ ವಿಜ್ಞಾನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಫೆಲೋಶಿಫ್-2020-21

* ಡಾ.ಸಿ.ಎನ್.ರವಿಂಶಕರ್:‌ ಕೃಷಿ ವಿಜ್ಞಾನ
* ಡಾ.ರಾಘವೇಂದ್ರ ಭಟ್ಟ: ಕೃಷಿ ವಿಜ್ಞಾನ
* ಡಾ.ಗೋವಿಂದ ಆರ್.ಕಡಂಬಿ: ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ

error: Content is protected !!