ಲಖನೌ, ಮೇ 24: ಬಕ್ರೀದ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಈ ನಡುವೆ ಹಸುವನ್ನು ರಾಷ್ಟ್ರೀಯ ಪ್ರಾಣಿ (National Animal) ಎಂದು ಘೋಷಿಸಬೇಕೆಂದು ಜಮಿಯತ್ ಉಲಮಾ-ಎ-ಹಿಂದ್ (ಅರ್ಷದ್ ಮದನಿ ಬಣ) ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಹೇಳಿದ್ದಾರೆ. ಈ ಬೇಡಿಕೆಯನ್ನು ಹಲವು ಮುಸ್ಲಿಂ ಸಂಘಟನೆಗಳು (Muslim Organisations) ಬೆಂಬಲಿಸಿವೆ. ಈ ಕ್ರಮವು ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಹತ್ಯೆ ಮತ್ತು ದೌರ್ಜನ್ಯಗಳನ್ನು ಕೊನೆಗೊಳಿಸುತ್ತದೆ ಎಂಬುದು ಮುಸ್ಲಿಂ ಸಂಘಟನೆಗಳ ಆಶಯ.
ಈ ವಿಚಾರದಲ್ಲಿ ಸಮುದಾಯದೊಳಗೆ ಒಮ್ಮತ ನಿರ್ಮಿಸಲು ಹಲವು ಮಂದಿ ಮುಂದಾಗಿರುವುದರ ಜತೆಗೆ, ಕೆಲವರು ಈ ಸಂಬಂಧ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.
ಉತ್ತರ ಪ್ರದೇಶವು ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ. ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಇಂತಹ ಬೇಡಿಕೆಗಳು ಹಿಂದೂ ಸಂಘಟನೆಗಳಿಂದಲೇ ಹೆಚ್ಚು ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ, ಈ ಉಪಕ್ರಮವು ವಿಶೇಷ ಮಹತ್ವ ಪಡೆದುಕೊಂಡಿದೆ.
ಈದ್ ಹಬ್ಬಕ್ಕೆ ಬಲಿಯಾಗಲಿದೆ 'ಡೊನಾಲ್ಡ್ ಟ್ರಂಪ್' ಎಮ್ಮೆ!
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆಯುವ ಅಂತಿಮ ಈದ್-ಉಲ್-ಅಝಾ ಸಮಯದಲ್ಲಿ ಎತ್ತಲಾದ ಈ ಧ್ವನಿಯು ಮುಸ್ಲಿಂ ಸಮುದಾಯದಿಂದ ಹೊರ ಹೊಮ್ಮುತ್ತಿರುವುದು ತನ್ನದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದೆ. ಅಖಿಲ ಭಾರತ ಮುಸ್ಲಿಂ ಜಮಾಅತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಮದನಿ ಅವರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ನಡುವೆ ಒಮ್ಮತ ಮೂಡಿಸುವುದು ತಮ್ಮ ಉದ್ದೇಶ ಎಂದು ಹೇಳಿದರು. ಈ ನಿಟ್ಟಿನಲ್ಲಿ, ಶೀಘ್ರದಲ್ಲೇ ದೆಹಲಿಯಲ್ಲಿ ಪ್ರಮುಖ ಮುಸ್ಲಿಂ ಸಂಘಟನೆಗಳ ಪ್ರಮುಖ ಪ್ರತಿನಿಧಿಗಳ ಸಭೆಯನ್ನು ಕರೆಯಲಾಗುವುದು. ಅಲ್ಲಿ ಬೇಡಿಕೆಗಳನ್ನು ಪಟ್ಟಿ ಮಾಡಿದ ನಂತರ ಆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಈ ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು. ಹಾಗೆ ಮಾಡುವುದರಿಂದ ರಾಷ್ಟ್ರದಾದ್ಯಂತ ಗೋಹತ್ಯೆಗೆ ಸಂಬಂಧಿಸಿದ ಸರ್ಕಾರದ ನೀತಿಗಳಿಗೆ ಏಕರೂಪತೆ ತರುವುದಲ್ಲದೆ, ಹಲ್ಲೆ ಮತ್ತು ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಇತರ ದಬ್ಬಾಳಿಕೆ ಕೃತ್ಯಗಳನ್ನು ನಿರ್ಮೂಲನೆ ಮಾಡಲು ಸಹಾಯವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಮಾಂಸ ವ್ಯಾಪಾರದಲ್ಲಿ ತೊಡಗಿರುವ ಖುರೇಷಿ ಸಮುದಾಯದ ಪ್ರಮುಖ ಸಂಘಟನೆಯಾದ ಅಖಿಲ ಭಾರತ ಖುರೇಷಿ ಜಮಾತ್‌ನ ಅಧ್ಯಕ್ಷ ಸಿರಾಜ್ ಖುರೇಷಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಬೇಡಿಕೆಯನ್ನು ಬಹಿರಂಗವಾಗಿ ಬೆಂಬಲಿಸಿದರು. ಅಗತ್ಯವಿದ್ದಲ್ಲಿ, ತಮ್ಮ ಸಂಘಟನೆಯು ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವರೊಂದಿಗೆ ಸಭೆ ನಡೆಸುವುದಾಗಿ ದೃಢಪಡಿಸಿದರು.
ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ತಮ್ಮ ಸಂಘಟನೆ ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ ಎಂದು ಖುರೇಷಿ ಹೇಳಿದರು. ಆದರೆ ಇಲ್ಲಿವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.