ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಗೊ ವಿಮಾನಯಾನಕ್ಕೆ ಕೇಂದ್ರದಿಂದ ಅಂಕುಶ; ಶೇಕಡಾ 10ರಷ್ಟು ಕಾರ್ಯಾಚರಣೆ ಕಡಿತ

IndiGo Crisis: ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ. 60ರಷ್ಟು ಪಾಲು ಹೊಂದಿರುವ ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದೀಗ ಇಂಡಿಗೊದ ಕಾರ್ಯಾಚರಣೆಯಲ್ಲಿ ಶೇ. 10ರಷ್ಟನ್ನು ಕಡಿತಗೊಳಿಸಿದೆ.

ಇಂಡಿಗೊದ ಶೇಕಡಾ 10ರಷ್ಟು ಕಾರ್ಯಾಚರಣೆ ಕಡಿತ

ಸಭೆ ನಡೆಸಿದ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು -

Ramesh B
Ramesh B Dec 9, 2025 9:30 PM

ದೆಹಲಿ, ಡಿ. 9: ವಾರದಿಂದ ದೇಶ ಹಿಂದೆಂದೂ ಕಂಡಿರದ ಬೃಹತ್‌ ಪ್ರಮಾಣದ ವಿಮಾನ ಪ್ರಯಾಣದ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ (IndiGo crisis). ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ. 60ರಷ್ಟು ಪಾಲು ಹೊಂದಿರುವ ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 6 ದಿನಗಳ ಬಿಕ್ಕಟ್ಟಿನ ನಂತರ ಇದೀಗ ಪರಿಸ್ಥಿತಿ ತುಸು ಸುಧಾರಿಸಿದ್ದು, ಸಂಪೂರ್ಣ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನ ಅಗತ್ಯ ಎಂದು ಸಂಸ್ಥೆ ಹೇಳಿದೆ. ಈ ಮಧ್ಯೆ ಕೇಂದ್ರ ಇಂಡಿಗೊ ಸಂಸ್ಥೆಗೆ ಅಂಕುಶ ಹಾಕಲು ನಿರ್ಧರಿಸಿದೆ. ಅದರ ಭಾಗವಾಗಿ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೊದ ಕಾರ್ಯಾಚರಣೆಯಲ್ಲಿ ಶೇ. 10ರಷ್ಟನ್ನು ಕಡಿತಗೊಳಿಸಿದೆ.

ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಡಿಸೆಂಬರ್‌ 9ರಂದು ಎಂಒಸಿಎ ಕಾರ್ಯದರ್ಶಿ ಸಮೀರ್ ಸಿನ್ಹಾ ಮತ್ತು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರೊಂದಿಗೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪ್ರತಿದಿನ 138 ಕಡೆಗೆ 2,200 ವಿಮಾನಗಳ ಸಂಚಾರ ನಡೆಸುತ್ತಿದ್ದ ಇಂಡಿಗೊಗೆ ಈ ನಿರ್ಧಾರದಿಂದ ಸುಮಾರು 200 ಸಂಚಾರ ಕಡಿತವಾಗಲಿದೆ.

ಸಚಿವ ರಾಮ್ ಮೋಹನ್ ನಾಯ್ಡು ಎಕ್ಸ್‌ ಪೋಸ್ಟ್‌:



"ಇಂಡಿಗೊದ ಕಾರ್ಯಾಚರಣೆಯನ್ನು ಕಡಿತಗೊಳಿಸುವುದು ಅಗತ್ಯವೆಂದು ಸಚಿವಾಲಯ ಕಂಡುಕೊಂಡಿದೆ. ಇದು ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸಲ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಾರ್ಯಾಚರಣೆಯ ಪೈಕಿ ಶೇಕಡಾ 10ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ʼʼಈ ನಿಯಮವನ್ನು ಪಾಲಿಸಿಕೊಂಡು ಇಂಡಿಗೊ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಶುಲ್ಕ ಮಿತಿ ಮತ್ತು ಪ್ರಯಾಣಿಕರ ಅನುಕೂಲ ಕ್ರಮಗಳನ್ನು ಒಳಗೊಂಡಂತೆ ಸಚಿವಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗುತ್ತದೆʼʼ ಎಂದು ಇಂಡಿಗೊ ಹೇಳಿದೆ.

"ನಿಯಮ ಇರುವುದು ವ್ಯವಸ್ಥೆ ಸುಧಾರಿಸಲು, ಜನರಿಗೆ ಕಿರುಕುಳ ನೀಡಲು ಅಲ್ಲ"; ಇಂಡಿಗೋ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಮಾತು

ಸಚಿವ ನಾಯ್ಡು ಹೇಳಿದ್ದೇನು?

ಸಭೆಯ ಬಗ್ಗೆ ವಿಮಾನಯಾನ ಸಚಿವ ರಾಮ್‌ಮೋಹನ್‌ ನಾಯ್ಡು ಮಾಹಿತಿ ನೀಡಿ, "ಇಂದು ಮತ್ತೊಮ್ಮೆ ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಡಿಸೆಂಬರ್ 6ರವರೆಗಿನ ಮರುಪಾವತಿ ಪೂರ್ಣಗೊಂಡಿದೆ ಎಂದು ಅವರು ದೃಢಪಡಿಸಿದರು. ಒಟ್ಟಾರೆ ಇಂಡಿಗೊ ಕಾರ್ಯಾಚರಣೆಯನ್ನು ಮೊಟಕುಗೊಳಿಸುವುದು ಅಗತ್ಯವೆಂದು ಸಚಿವಾಲಯ ನಿರ್ಧರಿಸಿದೆ" ಎಂದು ತಿಳಿಸಿದರು.

4,500 ಇಂಡಿಗೊ ವಿಮಾನಗಳ ಹಾರಾಟ ರದ್ದು

ಬಿಕ್ಕಟ್ಟು ಆರಂಭವಾದಾಗಿನಿಂದ ಇದುವರೆಗೆ 7 ದಿನಗಳಲ್ಲಿ ಇಂಡಿಗೊ ವಿಮಾನಗಳ 4,500 ಹಾರಾಟ ರದ್ದಾಗಿದೆ. ಕೇಂದ್ರದ ಸೂಚನೆಯಂತೆ ವಿಮಾನಯಾನ ಸಂಸ್ಥೆ ಟಿಕೆಟ್‌ ಹಣವನ್ನು ಪ್ರಯಾಣಿಕರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸುತ್ತಿದೆ. ಇದುವರೆಗೆ 827 ಕೋಟಿ ರೂ.ಗಿಂತ ಅಧಿಕ ಮರು ಪಾವತಿಸಲಾಗಿದೆ.

ಕಾರಣವೇನು?

ಸರ್ಕಾರ ಸೂಚಿಸಿದ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸದೇ ಇರುವುದು ಇಂಡಿಗೊದ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ ಎನ್ನಲಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಪೈಲಟ್‌ ಮತ್ತು ಕ್ಯಾಬಿನ್‌ ಸಿಬ್ಬಂದಿಯ ಕೆಲಸದ ಅವಧಿ-ವಿಶ್ರಾಂತಿ ಮತ್ತು ರಾತ್ರಿ ವೇಳೆಯ ವಿಮಾನ ಸಂಚಾರ ಕುರಿತು ಮಾರ್ಗಸೂಚಿ ರಚಿಸಿ 2024ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಆದರೆ ಇದನ್ನು ಇಂಡಿಗೊ ಅನುಷ್ಠಾನಗೊಳಿಸದೇ ಇದ್ದುದು ಇಷ್ಟೆಲ್ಲ ಬಿಕ್ಕಟ್ಟಿಗೆ ಕಾರಣ. ಇದರಿಂದ ಕಳೆದೊಂದು ವಾರದಿಂದ ಇಂಡಿಗೊ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.