ಗೋವಾ, ಡಿ. 07: ಉತ್ತರ ಗೋವಾದ ಅರ್‌ಪೋರಾದಲ್ಲಿರುವ ನೈಟ್ ಕ್ಲಬ್‌ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 23 ಜನ ದುರ್ಮರಣ ಹೊಂದಿದ್ದಾರೆ. ಮಧ್ಯರಾತ್ರಿ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ನೈಟ್ ಕ್ಲಬ್ ಹೊತ್ತಿ ಉರಿದಿದೆ. ಈ ವೇಳೆ ಹಲವರು ಸಜೀವ ದಹನವಾಗಿದ್ದರೆ, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಆ ಪೈಕಿ ಮೂವರು ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಮೃತರಲ್ಲಿ ಮೂರರಿಂದ ನಾಲ್ಕು ಮಂದಿ ಪ್ರವಾಸಿಗರು ಕೂಡ ಇರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನೈಟ್‌ಕ್ಲಬ್‌ನಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರೋದೇ ಹೆಚ್ಚಿನ ಅವಘಡಕ್ಕೆ ಕಾರಣವಾಗಿದೆ.
ಗೋವಾ ರಾಜಧಾನಿ ಪಣಜಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಅರ್‌ಪೋರಾ ಗ್ರಾಮದಲ್ಲಿ ಈ ಜನಪ್ರಿಯ ನೈಟ್‌ಕ್ಲಬ್ ಕಳೆದ ವರ್ಷ ಆರಂಭವಾಗಿತ್ತು. ಎಲ್ಲ 23 ಶವಗಳನ್ನು ಘಟನಾ ಸ್ಥಳದಿಂದ ಹೊರತೆಗೆಯಲಾಗಿದ್ದು, ಬಾಂಬೊಲಿಂನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ. ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ್ದು, ಇಡೀ ರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಗೋವಾದ ಅರ್ಪೋರಾದಲ್ಲಿ ಸಂಭವಿಸಿದ ಅಗ್ನಿ ಅವಘಡ ತೀವ್ರ ದುಃಖಕರ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಪರಿಸ್ಥಿತಿಯ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಜಿ ಅವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಸಿಎಂ ಸಂತಾಪ
ಅಗ್ನಿ ದುರಂತದ ವಿಚಾರ ತಿಳಿದು ತುಂಬಾ ನೋವಾಗಿದೆ ಎಂದು ಹೇಳಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ. ಅಲ್ಲದೆ, ನೈಟ್‌ಕ್ಲಬ್ ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದು, ಶೀಘ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.