US Accident: ಅಪಘಾತವಾಗಿ ಕೋಮಾದಲ್ಲಿರುವ ಭಾರತೀಯ ವಿದ್ಯಾರ್ಥಿ; ಅಮೆರಿಕಕ್ಕೆ ತೆರಳಲು ವೀಸಾ ಸಿಗದೆ ಪರದಾಡುತ್ತಿರುವ ಪೋಷಕರು
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಫೆ. 14 ರಂದು ಸಂಭವಿಸಿದ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದಾಳೆ. ಆಕೆಯ ಪಾಲಕರು ಭಾರತದಲ್ಲಿದ್ದು, ಆಕೆಯನ್ನು ತಲುಪಲು ವೀಸಾ ಇಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಸಂಸದೆ ಸುಪ್ರಿಯಾ ಸುಳೆ ಟ್ವೀಟ್ ಮಾಡಿದ್ದಾರೆ.

ನೀಲಂ ಶಿಂಧೆ

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಫೆ. 14 ರಂದು ಸಂಭವಿಸಿದ ಅಪಘಾತದಲ್ಲಿ (US Accident) ಭಾರತೀಯ ಮೂಲದ 35 ವರ್ಷದ ವಿದ್ಯಾರ್ಥಿನಿ ನೀಲಂ ಶಿಂಧೆ ಗಂಭೀರವಾಗಿ ಗಾಯಗೊಂಡಿದ್ದು, ಕೋಮಾದಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಕೋಮಾದಲ್ಲಿರುವ ನೀಲಂ ಕುಟುಂಬವು ತಮ್ಮ ಪುತ್ರಿ ಇರುವಲ್ಲಿ ತಲುಪಲು ಅಂದಿನಿಂದ ಇವತ್ತಿನವರೆಗೂ ಪರೆದಾಟ ನಡೆಸುತ್ತಿದೆ. ನೀಲಂ ಕುಟುಂಬ ಮಹಾರಾಷ್ಟ್ರದ ಸತಾರ ಜಿಲ್ಲೆಯವರಾಗಿದ್ದು, ನೀಲಂ ತಂದೆ ಅಮೆರಿಕಕ್ಕೆ ತೆರಳಲು ವೀಸಾ ಇಲ್ಲದೆ ಪರಿತಪಿಸುತ್ತಿದ್ದಾರೆ. ಫೆ. 14 ರಂದು ಕ್ಯಾಲಿಫೋರ್ನಿಯಾದಲ್ಲಿ ನೀಲಂಗೆ ಅಪಘಾತವಾಗಿತ್ತು. ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಎದೆ ಮತ್ತು ತಲೆಗೆ ಗಂಭೀರ ಗಾಯವಾಗಿದೆ.
ಅಪಘಾತವಾದ ಎರಡು ದಿನಗಳ ನಂತರ ಕುಟುಂಬಸ್ಥರಿಗೆ ವಿಷಯ ತಿಳಿದಿದೆ. ಆಸ್ಪತ್ರೆಯವರು ಕುಟುಂಬಸ್ಥರಿಗೆ ಕರೆ ಮಾಡಿ ನೀಲಂ ಅವರ ಮೆದುಳಿನ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿದ್ದಾರೆ. ಸದ್ಯ ನೀಲಂ ಕೋಮಾದಲ್ಲಿದ್ದಾರೆ. ಫೆಬ್ರವರಿ 16 ರಂದು ಅಪಘಾತದ ಬಗ್ಗೆ ನಮಗೆ ತಿಳಿಯಿತು ಮತ್ತು ಅಂದಿನಿಂದ ವೀಸಾಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ ನಮಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ನೀಲಂ ತಂದೆ ತಾನಾಜಿ ಶಿಂಧೆ ಅಳಲನ್ನು ತೋಡಿಕೊಂಡಿದ್ದಾರೆ.
ಸದ್ಯ ತಾನಾಜಿ ಶಿಂಧೆ ಅವರ ಪರಿಸ್ಥಿಯನ್ನು ಅರಿತು ನೆರವಿಗೆ ಧಾವಿಸಿದ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಶಿಂಧೆ ಕುಟುಂಬವನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ನೀಲಂ ತಂದೆ ಅವರ ತಂದೆಗೆ ವೀಸಾ ಪಡೆಯಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಸಹಾಯವನ್ನು ಕೋರಿದ್ದಾರೆ ಮತ್ತು ಅವರ ಎಕ್ಸ್ ಪೋಸ್ಟ್‌ನಲ್ಲಿ ಅವರನ್ನು ಟ್ಯಾಗ್ ಮಾಡಿದ್ದಾರೆ.
Student Neelam Shinde has met with an accident in the USA and is hospitalized in a local hospital. Her father, Tanaji Shinde, from Satara, Maharashtra, India, urgently needs to visit his daughter due to a medical emergency. Tanaji Shinde has applied for an urgent visa to the USA…
— Supriya Sule (@supriya_sule) February 26, 2025
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇದು ಆತಂಕಕಾರಿ ವಿಷಯವಾಗಿದ್ದು, ನಾವೆಲ್ಲರೂ ಒಟ್ಟಾಗಿ ಸೇರಿ ಇದನ್ನು ಪರಿಹರಿಸಬೇಕಾಗಿದೆ. ನಾನು ನೀಲಂ ಕುಟುಂಬದೊಂದಿಗೆ ಮಾತುಕತೆ ನಡೆಸಿ, ಅವರಿಗೆ ಧೈರ್ಯ ತುಂಬಿದ್ದೇನೆ. ಈ ಬಗ್ಗೆ ವಿದೇಶಾಂಗ ಸಚಿವರಿಗೂ ಮಾಹಿತಿ ನೀಡಲಾಗಿದೆ. ನಮ್ಮ ನಡುವೆ ಕೆಲ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಆದರೆ ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗಲೆಲ್ಲಾ ಅವರು ತುಂಬಾ ಸಹಾಯಕ ಮತ್ತು ಸಹಾನುಭೂತಿಯುಳ್ಳವರು ಎಂದು ಅವರು ಹೇಳಿದ್ದಾರೆ. ವಿದೇಶಾಂಗ ವಹಾರಗಳ ಸಚಿವಾಲಯದೊಂದಿಗಿನ ನನ್ನ ಒಡನಾಟ ತುಂಬಾ ಚೆನ್ನಾಗಿದೆ. ಈ ಪ್ರಕರಣದಲ್ಲಿಯೂ ಅವರು ಸಹಾಯ ಮಾಡುತ್ತಾರೆ ಎಂದು ನಂಬಿದ್ದೇನೆ. ಈ ಬಗ್ಗೆ ನಾನು ಮುಂಬೈನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಸಹ ಸಂಪರ್ಕಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Kolkata Horror: ಒಂದೆಡೆ ಅಪಘಾತ, ಇನ್ನೊಂದೆಡೆ ಆತ್ಮಹತ್ಯೆ! ಏನಿದು ಕೊಲ್ಕತ್ತಾವನ್ನೇ ಬಿಚ್ಚಿ ಬೀಳಿಸಿದ ಡೇ ಕುಟುಂಬದ ಮಿಸ್ಟರಿ ಕೇಸ್?
ಅಪಘಾತದ ಬಗ್ಗೆ ನೀಲಂ ಶಿಂಧೆಯವರ ಕದಮ್ ಚಿಕ್ಕಪ್ಪ ಮಾತನಾಡಿ, ಅಪಘಾತ ಸಂಭವಿಸುತ್ತಿದ್ದಂತೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು ಮತ್ತು ಆಕೆಯ ರೂಮ್‌ಮೇಟ್‌ಗಳು ಫೆಬ್ರವರಿ 16 ರಂದು ನಮಗೆ ಮಾಹಿತಿ ನೀಡಿದರು. ಆಸ್ಪತ್ರೆ ಆಡಳಿತ ಮಂಡಳಿ ಮೆದುಳು ಶಸ್ತ್ರ ಚಿಕಿತ್ಸೆಗೆ ಅನುಮತಿ ಕೋರಿತ್ತು. ಇದೀಗ ಆಕೆ ಕೋಮಾದಲ್ಲಿದ್ದಾಳೆ. ಆಸ್ಪತ್ರೆಯು ಆಕೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.