ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಪೂರಕ; ಎಸ್‌ಐಆರ್ ಎತ್ತಿಹಿಡಿದ ಸುಪ್ರೀಂ ಕೋರ್ಟ್: ವಿಪಕ್ಷಗಳಿಗೆ ಭಾರಿ ಮುಖಭಂಗ
SIR: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಆಯೋಗದ ಅಧಿಕಾರವನ್ನು ಸಮರ್ಥಿಸಿದ ನ್ಯಾಯಾಲಯ, ಈ ಕ್ರಮವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಅಗತ್ಯ ಎಂದು ಹೇಳಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ನಕಲಿ ಹಾಗೂ ಮೃತ ಮತದಾರರ ಹೆಸರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ) -
ನವದೆಹಲಿ, ಮೇ 27: ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India) ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ದೊಡ್ಡ ಯಶಸ್ಸು ಸಿಕ್ಕಿದ್ದು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಪ್ರಕ್ರಿಯೆಯು "ಕಾನೂನುಬದ್ಧವಾಗಿ ಸಮರ್ಥನೀಯ" ಎಂದು ಸುಪ್ರೀಂ ಕೋರ್ಟ್ (Supreme Court) ಬುಧವಾರ ಮಹತ್ವದ ತೀರ್ಪು ನೀಡಿದೆ. ಈ ಪ್ರಮುಖ ತಾಂತ್ರಿಕ ಕ್ರಮವು ದೇಶದಲ್ಲಿ ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಆಶಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ಮೇ 30ರಿಂದ ದೇಶದ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ನ ಮೂರನೇ ಹಾಗೂ ಅಂತಿಮ ಹಂತದ ಪ್ರಕ್ರಿಯೆ ಆರಂಭವಾಗಲಿದ್ದು, ಇದಕ್ಕೂ ಕೆಲವೇ ದಿನಗಳ ಮುನ್ನ ಈ ಮಹತ್ವದ ಆದೇಶ ಬಂದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠವು, ಸಂವಿಧಾನದ ವಿಧಿ 326 ಮತ್ತು ಜನಪ್ರತಿನಿಧಿ ಕಾಯ್ದೆ 1950ರ ಅಡಿಯಲ್ಲಿ ಆಯೋಗಕ್ಕೆ ಈ ವಿಶೇಷ ಅಧಿಕಾರವಿದೆಯೇ ಎಂದು ಕೂಲಂಕಷವಾಗಿ ಪರಿಶೀಲಿಸಿ, ತೀರ್ಪು ಪ್ರಕಟಿಸಿತು.
ಎಸ್‌ಐಆರ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್:
Big win for @ECISVEEP in the Supreme Court. SC refused to strike down S.I.R...
— Mr Sinha (@Mrsinha) May 27, 2026
SC said that "Seeking voters' information doesn't impact rights".. pic.twitter.com/9W3sDg8it9
ಎಸ್‌ಐಆರ್ ಅಸ್ತಿತ್ವದಲ್ಲಿರುವ ಚುನಾವಣಾ ಕಾನೂನುಗಳನ್ನು ಮೀರಿಲ್ಲ, ಬದಲಿಗೆ ಸಂವಿಧಾನದ ವಿಧಿ 324ರ ಅಡಿಯಲ್ಲಿ ಆಯೋಗದ ಕರ್ತವ್ಯಕ್ಕೆ ಹೊಸ ಜೀವ ತುಂಬುತ್ತದೆ ಎಂದು ನ್ಯಾಯಾಲಯ ಹೇಳಿದೆ. ಸಾಮಾನ್ಯ ಪರಿಷ್ಕರಣೆಗಿಂತ ಇದರ ಪ್ರಕ್ರಿಯೆ ಭಿನ್ನವಾಗಿದೆ ಎಂಬ ಕಾರಣಕ್ಕೆ ಈ ರಾಷ್ಟ್ರೀಯ ಯೋಜನೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ತೀರ್ಪು, ಮತದಾರರ ಹೆಸರನ್ನು ರಾಜಕೀಯ ಉದ್ದೇಶದಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ವಿರೋಧ ಪಕ್ಷಗಳಿಗೆ ಭಾರಿ ಹಿನ್ನಡೆಯಾಗಿದೆ.
2025ರ ಜೂನ್‌ನಲ್ಲಿ ಬಿಹಾರದಲ್ಲಿ ಈ ವಿಶಿಷ್ಟ ವ್ಯವಸ್ಥೆಯನ್ನು ಮೊದಲು ಜಾರಿಗೆ ತಂದಾಗ ಸುಮಾರು 60 ಲಕ್ಷ ಹಾಗೂ ಪಶ್ಚಿಮ ಬಂಗಾಳದಲ್ಲಿ 90 ಲಕ್ಷಕ್ಕೂ ಹೆಚ್ಚು ನಕಲಿ, ಅಕ್ರಮ ಮತ್ತು ಮೃತ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಯಶಸ್ವಿಯಾಗಿ ತೆಗೆದುಹಾಕಲಾಗಿತ್ತು. ಈ ಪರಿಶೀಲನಾ ಪ್ರಕ್ರಿಯೆಯಲ್ಲಿ 2002 ಅಥವಾ 2003ಕ್ಕಿಂತ ಹಳೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆರಂಭದಲ್ಲಿ ಆಯೋಗವು ಗುರುತಿನ ಪರಿಶೀಲನೆಗೆ ಕೇವಲ 11 ಪ್ರಮುಖ ದಾಖಲೆಗಳನ್ನು ಮಾತ್ರ ಮಾನ್ಯ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್ ಸಾಮಾನ್ಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗೀಕೃತ ದಾಖಲೆಗಳ ಪಟ್ಟಿಗೆ ಮತ್ತೊಂದು ಪ್ರಮುಖ ರಾಷ್ಟ್ರೀಯ ಗುರುತಿನ ಚೀಟಿಯನ್ನೂ ಸೇರಿಸುವಂತೆ ಸೂಚಿಸಿ ಜನರಿಗೆ ದೊಡ್ಡ ಸೌಲಭ್ಯ ಕಲ್ಪಿಸಿದೆ. ನಿಯಮಬಾಹಿರವಾಗಿ ಯಾರೊಬ್ಬರೂ ಮತ ಚಲಾಯಿಸದಂತೆ ತಡೆಯಲು ಮತ್ತು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಕಟ್ಟುನಿಟ್ಟಿನ ಪರಿಶೀಲನೆ ಅತ್ಯಗತ್ಯ ಎಂದು ಆಯೋಗ ಸಮರ್ಥಿಸಿಕೊಂಡಿದೆ.