ಹೃದಯ ವಿದ್ರಾವಕ ದೃಶ್ಯ; 1,500 ರುಪಾಯಿ ಪಿಂಚಣಿ ಹಣಕ್ಕಾಗಿ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು 9 ಕಿ.ಮೀ. ನಡೆದ ಮಹಿಳೆ
Woman Carries Mother-in-Law: ಮಹಿಳೆಯೊಬ್ಬಳು ಬ್ಯಾಂಕಿನಿಂದ ಪಿಂಚಣಿ ಹಣವನ್ನು ಪಡೆಯುವ ಸಲುವಾಗಿ, ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸುಡುವ ಬಿಸಿಲು, ಕಾಡಿನ ಹಾದಿ, ಕಲ್ಲು-ಮುಳ್ಳುಗಳು, ಬಂಡೆಗಳು ಮತ್ತು ನದಿಗಳನ್ನು ಅತ್ತೆಯನ್ನು ಹೊತ್ತುಕೊಂಡೇ ಸಾಗಿದ್ದಾರೆ.
ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು 9 ಕಿ.ಮೀ. ನಡೆದ ಮಹಿಳೆ -
ರಾಯ್‌ಪುರ, ಮೇ 24: ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ದೇಶದಲ್ಲಿ ಆಗರ್ಭ ಶ್ರೀಮಂತರೂ ಇದ್ದಾರೆ, ಜತೆಗೆ ಕಡುಬಡತನದಲ್ಲಿ ಬದುಕುವ ಸಹಸ್ರಾರು ಜನರಿದ್ದಾರೆ. ಭಾರತ ಚಂದ್ರನ ಮಡಿಲಿಗೆ ತಲುಪಿರಬಹುದು. ಆದರೆ ದೇಶದ ಅದೆಷ್ಟೋ ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಛತ್ತೀಸ್‌ಗಢದಲ್ಲಿ (Chhattisgarh) ಮನಕಲಕುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಬ್ಯಾಂಕಿನಿಂದ ಪಿಂಚಣಿ ಹಣವನ್ನು ಪಡೆಯುವ ಸಲುವಾಗಿ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸುಡುವ ಬಿಸಿಲು, ಕಾಡಿನ ಹಾದಿ, ಕಲ್ಲು-ಮುಳ್ಳುಗಳು, ಬಂಡೆಗಳು ಮತ್ತು ನದಿಗಳ ಮೂಲಕ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕಿ.ಮೀ. ಅತ್ತೆಯನ್ನು ಹೊತ್ತುಕೊಂಡೇ ಸಾಗಿದ್ದಾರೆ. ಇದು ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದ ಪ್ರದೇಶದ ಕರುಣಾಜನಕ ಕಥೆಯನ್ನು ತೆರೆದಿಟ್ಟಿದೆ.
ಸುರ್ಗುಜಾ ಜಿಲ್ಲೆಯ ಮೈನ್‌ಪತ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಅತ್ತೆಯನ್ನು ಬೆನ್ನ ಮೇಲೆ ಹೊತ್ತ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ. ಸುಖ್ಮಾನಿಯಾ ಬಾಯಿ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ವೃದ್ಧ ಅತ್ತೆಯನ್ನು ಬ್ಯಾಂಕಿನಿಂದ ಪಿಂಚಣಿ ಪಡೆಯಲು ಸುಮಾರು 9 ಕಿ.ಮೀ. ಹೊತ್ತುಕೊಂಡೇ ನಡೆದರು. ಅರಣ್ಯ ಪ್ರದೇಶವಾದ್ದರಿಂದ ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲ. ಗ್ರಾಮಸ್ಥರು ಮೂಲಭೂತ ಸೇವೆಗಳನ್ನು ಪಡೆಯಲು ದುರ್ಗಮ ಕಾಡು ಮತ್ತು ಹೊಳೆಗಳ ಮೂಲಕ ಕಾಲ್ನಡಿಗೆಯಲ್ಲಿ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ.
ಇಲ್ಲಿದೆ ವಿಡಿಯೊ:
A tribal woman from Chhattisgarh's Surguja carried her 90 year old mother-in-law on her shoulders and walked 5 km in the scorching heat to avail her pension money. pic.twitter.com/bUuRp3wo8x
— News Arena India (@NewsArenaIndia) May 23, 2026
ಪಿಂಚಣಿ ನಿಯಮಗಳ ಪ್ರಕಾರ ಹಣ ಬಿಡುಗಡೆಗೊಳಿಸುವ ಮೊದಲು ಫಲಾನುಭವಿಗಳು ಬ್ಯಾಂಕ್‌ಗೆ ಸ್ವತಃ ಹಾಜರಾಗಿ ಬೆರಳಚ್ಚು ಅಥವಾ ಗುರುತು ಪರಿಶೀಲನೆ ಮಾಡಿಸಬೇಕಿರುವುದರಿಂದ, ಸುಖ್ಮಾನಿಯಾ ಬಾಯಿ ಹಲವು ತಿಂಗಳಿನಿಂದ ಇದೇ ರೀತಿ ಬರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾರತದಲ್ಲಿ ವೈಯಕ್ತಿಕ ದಾಖಲೆಗಳಿಗಿಲ್ಲ ಸುರಕ್ಷತೆ: 20 ರೂ. ಬೇಲ್ ಪುರಿ ಜೊತೆ ಸಿಕ್ತು ಬ್ಯಾಂಕ್ ಸ್ಟೇಟ್‌ಮೆಂಟ್!
ದೃಶ್ಯವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯೊಬ್ಬರು ಸ್ಥಳೀಯ ಭಾಷೆಯಲ್ಲಿ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ʼʼವೃದ್ಧ ಅತ್ತೆಯನ್ನು ಏಕೆ ಇಷ್ಟು ದೂರ ಹೊತ್ತುಕೊಂಡು ಬಂದಿದ್ದೀರಾ?ʼʼ ಎಂದು ಕೇಳಿದ್ದಾರೆ. ಇದಕ್ಕುತ್ತರಿಸಿದ ಮಹಿಳೆ, ʼʼಅತ್ತೆಯನ್ನು ಕರೆತಂದರೆ ಮಾತ್ರ ಪಿಂಚಣಿ ಹಣ ಕೊಡುತ್ತಾರೆʼʼ ಎಂದು ಹೇಳಿದ್ದಾರೆ. ಅಲ್ಲದೆ, ʼʼನಮ್ಮೂರಲ್ಲಿ ಮೂಲ ಸೌಕರ್ಯಗಳಿಲ್ಲ. ಯಾವುದೇ ಸಾರಿಗೆ ಸೌಲಭ್ಯ ಇಲ್ಲ. ಬ್ಯಾಂಕ್‌ಗೆ ತಲುಪಲು ಕಾಡಿನ ದಾರಿ, ನದಿ ದಾಟಿ ಬರಬೇಕು. ಸುಮಾರು 1,500 ರುಪಾಯಿ ಪಿಂಚಣಿ ಸಿಗುತ್ತದೆ. ಕೆಲವೊಮ್ಮೆ ಹಲವು ತಿಂಗಳುಗಳವರೆಗೆ ಒಟ್ಟಿಗೆ ಪಾವತಿಸಲಾಗುತ್ತದೆʼʼ ಎಂದು ಅವರು ಹೇಳಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಡಿಜಿಟಲ್ ಇಂಡಿಯಾ ಮತ್ತು ಕಲ್ಯಾಣ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಸರ್ಕಾರ ಪದೇ ಪದೆ ಹೇಳಿಕೊಂಡರೂ, ದೂರದ ಪ್ರದೇಶಗಳಲ್ಲಿರುವ ವೃದ್ಧರು ಮತ್ತು ಹಾಸಿಗೆ ಹಿಡಿದ ಪಿಂಚಣಿದಾರರು ಪ್ರಯಾಣಿಸಬೇಕಾಗಿರುವುದು ಏಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.