Saturday, 16th January 2021

ಹೊಸ ಶಿಕ್ಷಣ ನೀತಿ ಸ್ವಾಗತಾರ್ಹ

ಅಭಿಮತ

ವಾಣಿ ಹುಗ್ಗಿ

ಕೇಂದ್ರ ಶಿಕ್ಷಣ ಇಲಾಖೆ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಗೆ ಸ್ವಾಗತ. ಅಂಕಗಳಾಧಾರಿತ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ವಿಧಾನ ಬದಲಾಗಲೇಬೇಕಾದ ಅವಶ್ಯಕತೆ ಇತ್ತು.

ಮಕ್ಕಳ ಬೆನ್ನ ಮೇಲಿದ್ದ ಪುಸ್ತಕಗಳ ಭಾರವನ್ನು ಇಳಿಸಲೇಬೇಕಾದ ಅನಿವಾರ್ಯವಿದೆ. ಶಾಲಾ – ಕಾಲೇಜಿನಲ್ಲಿ ತೆಗೆದುಕೊಂಡ ಅಂಕಗಳೇನಾದರೂ ನಮಗೆ ಜೀವನ ನಿರ್ವಹಣೆಯನ್ನೇನಾದರೂ ಕಲಿಸಿವೆಯೇ? ಶಾಲೆ ಮತ್ತು ಮನೆಯಲ್ಲಿ ಮಕ್ಕಳನ್ನು ತುಚ್ಛ ವಾಗಿ ಕಾಣುವ ಪ್ರಸಂಗಗಳು ಕಡಿಮೆಯಾಗಬಹುದು. ಮಕ್ಕಳ ಮನಸ್ಸು ತುಂಬಾ ಮುಗ್ಧವಾಗಿರುತ್ತದೆ. ಆದರೆ ಕಲಿಯುವ ಸಾಮರ್ಥ್ಯ ವಿರುತ್ತದೆ. ಬರಿ ಪುಸ್ತಕದ ಹುಳುಗಳನ್ನಾಗಿಸದೆ ಜೀವನದ ಮೌಲ್ಯಗಳನ್ನು ಬೋಧಿಸಿದರೆ ಉಪಯುಕ್ತವಾಗುತ್ತದೆ.

ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಅಲ್ಲವೇ? ಶಾಲೆಗಳಲ್ಲಿ ಅನುಸರಿಸುತ್ತಿರುವ ಅತಿ ಶಿಸ್ತಿನ ದೌರ್ಜನ್ಯವನ್ನು ನಿಲ್ಲಿಸಬೇಕಾಗಿದೆ. ಅಂದರೆ ತರಗತಿಯ ಅವಧಿ ಮುಗಿದ ನಂತರವೂ ನೀರು ಕುಡಿಯಲು ಕೊಡದಿರುವುದು, ಮೂತ್ರ ವಿಸರ್ಜನೆಗೆ ಹೋಗಲು ಕೊಡದಿರುವುದು. ಇಲ್ಲಿ ಶಿಕ್ಷಕರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಹೇಗೆಂದರೆ ಒಬ್ಬರಿಗೆ ಅನುಮತಿ ಕೊಟ್ಟರೆ ಎಲ್ಲರೂ ದುಂಬಾಲು ಬೀಳುತ್ತಾರೆಂದು. ಆದರೆ ಇದರ ಅಡ್ಡ ಪರಿಣಾಮ ಮಕ್ಕಳ ಆರೋಗ್ಯದ ಮೇಲಾಗುತ್ತಿದೆ ಎಂಬುದನ್ನು ಯಾರೂ ಗಮನಿಸುತ್ತಿಲ್ಲ.

ಮೂತ್ರಕೋಶದ ತೊಂದರೆಗೆ ಒಳಗಾಗುತ್ತಿದ್ದಾರೆ. ಮಕ್ಕಳು ನೀರು ಕುಡಿಯುವುದನ್ನೆ ಮರೆಯುತ್ತಿದ್ದಾರೆ. ಶೌಚಾಲಯಗಳನ್ನು ಪದೇ ಪದೇ ಸ್ವಚ್ಛಗೊಳಿಸಲಾಗುವುದಿಲ್ಲವೆಂದು ಆಯಾ ಶೌಚಾಲಯಕ್ಕೆ ಹೋಗಲು ಬಿಡುವುದಿಲ್ಲ. ಒಂದೆಡೆ ದಿನಕ್ಕೆ ಎಂಟು
ಲೋಟ ನೀರು ಕುಡಿಯಬೇಕೆಂದು ಹೇಳುವ ಶಿಕ್ಷಕಿ ನೀರು ಕುಡಿಯಲು ಕೊಡದಿರುವುದು ಮಕ್ಕಳ ಕಣ್ಣಲ್ಲಿ ಹಾಸ್ಯಾಸ್ಪದವಾಗಿ ಕಾಣುತ್ತಾರೆ. ತರಗತಿಯಲ್ಲಿ ಹೇಳುವುದು ಅನುಸರಿಸುವುದಕ್ಕಲ್ಲ ಎಂಬ ಅನೀತಿಯನ್ನು ಮಕ್ಕಳು ಕಲಿಯುತ್ತಿದ್ದಾರೆ.

ಕೋವಿಡ್ ಕಾರಣದಿಂದ ಮನೆಯಲ್ಲಿರುವ ಮಕ್ಕಳಿಗೆ ಶಾಲೆ ಅನಿವಾರ್ಯವೇನಲ್ಲ ಎಂದೆನಿಸಿದೆ. ನಮ್ಮ ಶಾಲಾಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಸುಸಮಯವು ಇದೆಂದರೆ ತಪ್ಪಾಗಲಾರದು. ಶಾಲೆ ಕುರಿಮಂದೆ ತುಂಬುವ ಕಾರ್ಖಾನೆ ಯಾಗಬಾರದಲ್ಲವೆ? ಸೀಮಿತ ಮಕ್ಕಳನ್ನು ಹೊಂದಿದ್ದರೆ ನಿರ್ವಹಣೆ ಸುಲಭ. ನಾಲ್ಕು ಗೋಡೆಗಳಲ್ಲಿ ಬಂಧಿಯಾಗುವ ಶಾಲಾವಧಿ ಕಡಿತಗೊಂಡರೆ ಒಳ್ಳೆಯದು ಅನಿಸುತ್ತದೆ. ಪೋಷಕರು ಮತ್ತು ಶಿಕ್ಷಕರ ಮಧ್ಯೆ ಸಮನ್ವಯ ಮೂಡಬೇಕಾಗಿದೆ.

ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಆತ್ಮೀಯತೆ ಮೂಡಲಿ. ಗುರು – ಶಿಷ್ಯ ಪರಂಪರೆ ಮುಂದುವರಿದರೆ ಚೆನ್ನಾಗಿರುತ್ತದೆ. ಸಿಲೆಬಸ್‌ ನಲ್ಲಿರುವುದನ್ನಷ್ಟೆ ಹೇಳಿಕೊಡದೆ ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಲಿ. ಸಹಾಯ, ಸಹಕಾರ, ಸಮನ್ವಯ, ಸಮರ್ಪಣಾ ಭಾವಗಳು ಬದುಕಿನ ಧ್ಯೇಯೋದ್ದೇಶಗಳಾಗಲಿ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ವಾಗಲೇಬೇಕಿದೆ. ಬದುಕಿನ ಕಷ್ಟಗಳನ್ನು ಎದುರಿಸುವ ಜೀವನ ಕಲೆಯನ್ನು ಕಲಿಸಬೇಕಾಗಿದೆ. ಹಣದ ಬೆಲೆಯನ್ನು ಅರಿತರೆ ಕೊಳ್ಳುಬಾಕತನ, ಭ್ರಷ್ಟಾಚಾರ ಕೊನೆಗೊಳ್ಳಬಹುದು.

ಚಿಕ್ಕಂದಿನಲ್ಲೆ ಪ್ರಾಣಿ, ಪಕ್ಷಿ, ಪರಿಸರದ ಕಾಳಜಿಯ ಬಗ್ಗೆ ಪ್ರೋತ್ಸಾಹಿಸಬೇಕಾಗಿದೆ. ದೇಶಪ್ರೇಮದ ಬೀಜವನ್ನು ಬಿತ್ತಬೇಕಾಗಿದೆ. ಇಲ್ಲವಾದರೆ ಸ್ವಾತಂತ್ರ್ಯ ದಿನಾಚರಣೆ ರಜೆಯ ದಿನವಾಗಿಬಿಡುವ ಅಪಾಯವಿದೆ. ಸಕಾರಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳ ಬೋಧನೆಯಾಗಲಿ. ಸ್ನೇಹ, ಮನುಷ್ಯ ಸಂಬಂಧಗಳ ಅರಿವು ಮೂಡಲಿ. ಆಗ ಕೌಟುಂಬಿಕ ದೌರ್ಜನ್ಯಗಳು ಕಡಿಮೆಯಾಗ ಬಹುದು. ಕೋಡಿಂಗ್, ಪ್ರಥಮ ಚಿಕಿತ್ಸೆ, ಚಿತ್ರಕಲೆ, ಕಸೂತಿ, ನಟನೆ, ಸಂಗೀತ, ಕ್ರೀಡೆ, ಕೃಷಿ ಎಲ್ಲವನ್ನು ಶಾಲೆಯಲ್ಲಿ ಕಲಿಯು ವಂತಾದರೆ ಮಕ್ಕಳು ತಮ್ಮ ಆಸಕ್ತಿಗನುಗುಣವಾಗಿ ಮುಂದಿನ ವ್ಯಾಸಂಗದ ದಾರಿಯನ್ನು ಕಂಡುಕೊಳ್ಳಬಹುದು.

ಪ್ರಾದೇಶಿಕ ಭಾಷೆಗಳ ಬಗ್ಗೆ ಗೌರವ ಮೂಡಿಸಿ, ಸಾಹಿತ್ಯಾಸಕ್ತಿಯನ್ನು ಬೆಳೆಸುವ ಪ್ರಯತ್ನವಾಗಲಿ. ಸಾಹಿತ್ಯದ ಹಿರಿಮೆಯು ಮಕ್ಕಳಿಗೆ ತಿಳಿಯಲಿ. ಮಕ್ಕಳೆ ಕಥೆ, ಕವನ ಸೃಜಿಸಿ ಸಾಹಿತ್ಯಕ್ಕೆ ಗರಿಮೆಯಾಗಲಿ. ಕೃಷಿಯ ಬಗ್ಗೆ ಆಳವಾದ ಜ್ಞಾನ, ಕ್ರೀಡೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುವಂತಾಗಲಿ. ಹೀಗಾದರೆ ರೈತರ ಆತ್ಮಹತ್ಯೆಗಳು ಕೊನೆಯಾಗಬಹುದು. ಒಲಂಪಿಕ್ಸ್‌ನಲ್ಲಿ ಹೆಚ್ಚೆಚ್ಚು ಪದಕಗಳು ಸಿಗಬಹುದು. ಸಂಸ್ಕೃತ, ವೇದಾಧ್ಯಯನ, ಆಯುರ್ವೇದ ಕಲಿತು ಭಾರತೀಯ ಜೀವನ ಪದ್ಧತಿ ರೂಢಿಸಿ ಕೊಳ್ಳುವಂತಾಗಲಿ.

ಶಿಕ್ಷಣ ಶಿಕ್ಷೆಯಾಗದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಲಿ. ಹೊಸ ಶಿಕ್ಷಣ ನೀತಿ ಜಾರಿಗೆ ಬಂದರೆ ಸಮಾಜ
ಪರಿವರ್ತನೆಯಾಗುವುದು ಖಂಡಿತ. ಭವ್ಯ ಭಾರತದ ಭವಿಷ್ಯವನ್ನು ಬದಲಿಸುವ ಶಕ್ತಿ ಇರುವ ಹೊಸ ಶಿಕ್ಷಣ ನೀತಿ ಬೇಗ
ಅನುಷ್ಠಾನಕ್ಕೆ ಬರಲಿ. ನವ ಮನ್ವಂತರದ ಪ್ರತೀಕ್ಷೆ.

Leave a Reply

Your email address will not be published. Required fields are marked *