Monday, 5th December 2022

ಹೊಸ ರಾಷ್ಟ್ರ ಕಟ್ಟಲು ಕತಾರ್‌ನ ಖತರ್ನಾಕ್ ಐಡಿಯಾ !

ನೂರೆಂಟು ವಿಶ್ವ

vbhat@me.com

ಫಿಫಾ ವಿಶ್ವಕಪ್: ಹೊಸ ದೋಹಾಕ್ಕೆ ಖರ್ಚು ಮಾಡಿರುವುದು ೨೨೦ ಶತಕೋಟಿ ಡಾಲರ್!

ವಿಶ್ವಕಪ್‌ನಲ್ಲಿ ವಿಶ್ವವಾಣಿ (ಭಾಗ ೨)

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ 8 ಬೃಹತ್ ಸ್ಟೇಡಿಯಂಗಳನ್ನು ಕಟ್ಟಲಾಗಿದೆ. ಆಟಗಾರರು, ಪ್ರೇಕ್ಷಕರಿಗಾಗಿ ವಸತಿ ಸೌಕರ್ಯ ಕಲ್ಪಿಸಲು ಐವತ್ತು ಪಂಚತಾರಾ ಹೋಟೆಲ್‌ಗಳು ತಲೆ ಎತ್ತಿದೆ. ಇಪ್ಪತ್ತೊಂಬತ್ತು ಲಕ್ಷ ಜನಸಂಖ್ಯೆಯಿರುವ ಕತಾರ್‌ಗೆ ಫುಟ್ಬಾಲ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಹದಿನೈದು ಲಕ್ಷ ಜನ ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ.

ಕತಾರಿನ ರಾಜಧಾನಿ ದೋಹಾ ಎಂದಾಕ್ಷಣ ನೆನಪಾಗುವುದು ಒಂದು ಒಣ ಒಣ, ರಣ ರಣ ಮರುಭೂಮಿ. ಅದೇ ದೋಹಾ ಇಂದು ನಂದನವನ ದಂತೆ ಮೈದಾಳಿ ನಿಂತಿದೆ. ಇಡೀ ದೋಹಾ ದಲ್ಲಿ ಎಲ್ಲಿ ನೋಡಿದರೂ ಕಟ್ಟಡ, ರಸ್ತೆ, ಸೇತುವೆ, ಮೇಲ್ಸೇತುವೆ, ಸುರಂಗ, ಮೆಟ್ರೋ ರೈಲು, ಸ್ಟೇಡಿಯಂ… ಕಳೆದ ಏಳೆಂಟು ವರ್ಷಗಳಲ್ಲಿ ದೋಹಾಕ್ಕೆ ದೋಹಾವೇ ಹೊಸ ಗೆಟಪ್ಪಿನಲ್ಲಿ ಸಜ್ಜಾಗಿದೆ. ನಾನು ಐದಾರು ವರ್ಷಗಳ ಹಿಂದೆ ನೋಡಿದ ದೋಹಾ ಇದೇನಾ ಎಂದು ಅಚ್ಚರಿಗೊಳ್ಳು ವಷ್ಟು ದೋಹಾ ನಗರ ಬದಲಾಗಿಬಿಟ್ಟಿದೆ. ಮೊದಲ ಬಾರಿಗೆ ಬಂದಾಗ ನೋಡಿದ ದೋಹಾವನ್ನು ಹುಡುಕಿದರೂ ಸಿಗುವುದಿಲ್ಲ.

ಅಲ್ಲಿಯೇ ಹುಟ್ಟಿ ಬೆಳೆದವರ ಕಲ್ಪನೆಗೂ ನಿಲುಕದಷ್ಟು ಅಪರಿಮಿತ ವೇಗದಲ್ಲಿ ಆ ನಗರ ಬದಲಾಗಿ ಬಿಟ್ಟಿದೆ. ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಏನಿಲ್ಲವೆಂದರೂ ನೂರು ವರ್ಷಗಳಲ್ಲಿ ಆಗದಷ್ಟು ಬದಲಾವಣೆಗಳಾಗಿವೆ. ನೋಡ ನೋಡುತ್ತಿದ್ದಂತೆ ಹೊಸ ದೇಶ ಉದ್ಭವವಾದಂತಿದೆ. ನೆರೆಯ ದುಬೈ, ಅಬುದಾಬಿ, ಶಾರ್ಜಾ, ಸೌದಿ ಅರೇಬಿಯಾ, ಒಮಾನ್ ಮುಂತಾದ ಕೊಲ್ಲಿ ದೇಶಗಳು ತೈಲ ನಿಕ್ಷೇಪದ ಪರಿಣಾಮ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲಕ್ಕೆ ವಿಪರೀತ ಬೇಡಿಕೆ ಬಂದಂದಿನಿಂದ ಅಗಾಧ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದವು.

ಇದರ ಲಾಭ ಕತಾರ್‌ಗೂ ಲಭಿಸಿತು. ಆದರೆ ದುಬೈ (ಯುಎಇ) ಇದರ ಸಂಪೂರ್ಣ ಪ್ರಯೋಜನ ಪಡೆದು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದಿತು. ಜಗತ್ತಿನ ಎಲ್ಲ ಆಧುನಿಕತೆಗಳನ್ನು ಹೊದ್ದು ಅಭಿವೃದ್ಧಿಯ ನಾಗಾಲೋಟದಲ್ಲಿ ಎಲ್ಲರನ್ನು ಹಿಂದೆ ಹಾಕಿ ಮುಂದೆಮುಂದೆ ಓಡಿತು. ಆಗ ಮೈಕೊಡವಿ ಎದ್ದು ನಿಂತಿದ್ದು ಕತಾರ್!

ಆದರೆ, ಅಕ್ಕ ಪಕ್ಕದ ದೇಶಗಳಲ್ಲಿ ಬೀಸಿದ ಬದಲಾವಣೆಯ ಗಾಳಿ ಕತಾರನ್ನೂ ತಟ್ಟದೇ ಹೋಗಲಿಲ್ಲ. ಅಂದ ಮಾತ್ರಕ್ಕೆ ಕತಾರ್ ಕೂಡ ಹಾಗೇ ಆಗಬೇಕೆಂದೇನೂ ಇಲ್ಲ. ಹೀಗಾಗಿ ಅದಕ್ಕೊಂದು ನೆಪಬೇಕಿತ್ತು. ಒಂದು ದೇಶಕ್ಕೆ ಅಂಥ ಸ್ವರೂಪ, ಸೊಬಗು, ನೀಡಬೇಕೆಂದರೆ ಅದಕ್ಕೊಂದು ಕಾರಣ,
ಹೂರಣ, ನೆಪ, ಸಂದರ್ಭಗಳೆಲ್ಲ ಬೇಕು. ಕಟ್ಟಡ ಹಾಗೂ ರಸ್ತೆಗಳನ್ನು ಕಟ್ಟಿ, ಅಗಲ ಮಾಡಿದ ಮಾತ್ರಕ್ಕೆ ಜನ ಯಾವ ದೇಶಕ್ಕೂ ಮುಗಿಬಿದ್ದು ಬರುವುದಿಲ್ಲ. ಹೂರಣವಿಲ್ಲದೇ ಯಾವ ಕಾರಣ ಹೇಳಿದರೂ ಪ್ರಯೋಜನವಿಲ್ಲ.

ಒಂದು ದೇಶ ಪ್ರವಾಸೋದ್ಯಮಕ್ಕೆ ಪ್ರಾಧಾನ್ಯ ನೀಡಬೇಕು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬೇಕೆಂದು ನಿರ್ಧರಿಸಿದರೆ, ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಬೇಕು, ರನ್‌ವೇ ಹೆಚ್ಚಬೇಕು, ನಗರದಿಂದ ವಿಮಾನ ನಿಲ್ದಾಣಕ್ಕೆ Connectivity ಯನ್ನು ಸುಧಾರಿಸಬೇಕು, ವಿದೇಶಿ ಪ್ರವಾಸಿಗರ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಕಟ್ಟಬೇಕು, ಮೂಲ ಸೌಕರ್ಯಗಳನ್ನು ವಿಶ್ವ ದರ್ಜೆಗೇರಿಸಬೇಕು, ಮೊಬೈಲ್ ಜಾಲವನ್ನು
ಸುಧಾರಿಸ ಬೇಕು, ವಾಹನ ಸಂಚಾರವನ್ನು ಉತ್ತಮ ಪಡಿಸಬೇಕು, ಮಾಹಿತಿ ಎಡೆ ಸಿಗುವಂತಾಗಬೇಕು, ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸ ಬೇಕು… ಹೀಗೆ ಹತ್ತಾರು ಅಂಶಗಳು ಮುಖ್ಯವೆನಿಸುತ್ತವೆ. ಸುಮ್ಮನೆ ಕಟ್ಟಡ, ರಸ್ತೆ, ಅಪಾರ್ಟಮೆಂಟ್, ಮಾಲ, ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿದ ಮಾತ್ರಕ್ಕೆ ಎಲ್ಲರೂ ಬರುವುದಿಲ್ಲ. ಅದಕ್ಕೊಂದು ಬಲವಾದ ಕಾರಣ, ನೆಪ ಬೇಕು.

ಇಡೀ ವಿಶ್ವವನ್ನೇ ತನ್ನತ್ತ ಆಕರ್ಷಿಸುವ ಬೃಹತ್ ಯೋಜನೆ, ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಾತ್ರ ಇದು ಸಾಧ್ಯ ಎಂಬುದನ್ನು ಕತಾರ್ ಮನಗಂಡಿತು. ಅಂಥ ಯಾವ ಕಾರ್ಯಕ್ರಮ ಹಮ್ಮಿಕೊಂಡರೆ ಸಮಸ್ತ ಪ್ರಪಂಚದ ಜನ ತನ್ನತ್ತ ನೋಡುತ್ತಾರೆ? ಆಗ ಕತಾರ್‌ಗೆ ಹೊಳೆದ ಖತರ್ನಾಕ್ ಐಡಿಯಾ ಅಂದ್ರೆ ವಿಶ್ವ ಫುಟ್ಬಾಲ್ ಪಂದ್ಯಾವಳಿ!

ಜಗತ್ತಿನ ಗಮನ ಸೆಳೆಯಲು ಇದಕ್ಕಿಂತ ದೊಡ್ಡ Event ಮತ್ತೊಂದಿಲ್ಲ. ಬೇರೆ ಯಾವ ಕಾರ್ಯಕ್ರಮ ಹಮ್ಮಿಕೊಂಡರೂ, ವಲ್ಡಕಪ್ ಫುಟ್‌ಬಾಲ್ ಪಂದ್ಯಾವಳಿಯಷ್ಟು ಸುದೀರ್ಘವಾಗಿ, ಬೃಹತ್ ಪ್ರಮಾಣದಲ್ಲಿ ಇಡೀ ವಿಶ್ವವನ್ನೇ ಆಕರ್ಷಿಸಲು ಸಾಧ್ಯವಿಲ್ಲ. ಯಾವುದೇ ಇವೆಂಟ್‌ಗಳನ್ನೂ ಏರ್ಪಡಿಸಿ ದರೂ ಅದು ಒಂದೆರಡು ದಿನಗಳಲ್ಲಿ ಮುಗಿದು ಹೋಗುತ್ತದೆ. ಆದರೆ ಒಂದು ತಿಂಗಳ ಕಾಲ ಇಡೀ ವಿಶ್ವವನ್ನು ತನ್ನತ್ತ ಸೆರೆ ಹಿಡಿದುಕೊಂಡಿ ರಲು ಸಾಧ್ಯವಾಗುವುದು ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯನ್ನು ಸಂಘಟಿಸುವುದರಿಂದ ಮಾತ್ರ.

ಹಾಗಂತ ವರ್ಲ್ಡ್ ಕಪ್ ಪಂದ್ಯಾವಳಿಯನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಎಲ್ಲ ದೇಶಗಳಿಗೂ ಅದು ಸಾಧ್ಯವಿಲ್ಲ. ಭಾರತಕ್ಕೆ ಅಂಥ ಅವಕಾಶ ಇನ್ನೂ ಸಿಕ್ಕಿಲ್ಲ. ಕಾರಣ ಅದನ್ನು ಸಂಘಟಿಸಲು ನಾವು ಶಕ್ತರಲ್ಲ, ನಮಗಿನ್ನೂ ಆ ಸಾಮರ್ಥ್ಯ ಇಲ್ಲ. ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುವ ಫಿಫಾ ಪ್ರಕಾರ, ಭಾರತಕ್ಕೆ ಆ ಸಾಮರ್ಥ್ಯವಿಲ್ಲ. (ಇಲ್ಲ, ಇಲ್ಲ, ಆ ಸಾಮರ್ಥ್ಯ ನಮಗಿದೆ ಎಂದು ನಾವು ವಾದಿಸಬಹುದು. ಆದರೆ ಅದನ್ನು ಫಿಫಾ ಒಪ್ಪಬೇಕಲ್ಲ? ಅದು ರೂಪಿಸಿದ ಮಾನದಂಡಗಳೆಲ್ಲವೂ ನಮ್ಮಲ್ಲಿ ಇರಬೇಕಲ್ಲ? ಇರಲಿ, ಇವೆಲ್ಲ ಬೇರೆ ಮಾತು) ಫಿಫಾ ವಿಧಿಸಿದ ನಿಬಂಧನೆಗಳಿಗೆಲ್ಲ ಒಪ್ಪಿಗೆ ಸೂಚಿಸಿ, 2022ರ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ತಾನೇ ಸಂಘಟಿಸುವುದಾಗಿ, 2010 ರಲ್ಲಿ
ಕರೆದ ಹರಾಜನ್ನು ಕತಾರ್ ತನ್ನದಾಗಿಸಿಕೊಂಡಿತು.

ಅಂದರೆ 2010 ರಿಂದ ಹನ್ನೆರಡು ವರ್ಷಗಳ ಅವಧಿಯಲ್ಲಿ ಹೊಸ ದೇಶ ಕಟ್ಟಿ ವಿಶ್ವದ ಮುಂದೆ ಅಭಿಮಾನದಿಂದ ನಿಂತುಕೊಳ್ಳಲು ಕತಾರ್ ನಿರ್ಧರಿಸಿತು. ಫಿಫಾ ವರ್ಲ್ಡ್ ಕಪ್ ಪಂದ್ಯಾವಳಿಯನ್ನು ತಾನೇ ಸಂಘಟಿಸುತ್ತೇನೆಂದು ಬಲಾಢ್ಯ ದೇಶಗಳು ಪೈಪೋಟಿಗೆ ಬೀಳುತ್ತವೆ. ಉನ್ನತ ಮಟ್ಟದಲ್ಲೂ ಪ್ರಭಾವ ಬೀರುತ್ತವೆ. ತಾನೇ ಆತಿಥೇಯ ರಾಷ್ಟ್ರವಾಗಲು ಹೇರಳ ಹಣ ಚೆಲ್ಲುತ್ತವೆ. ಅಂತೂ ಆ ಪಂದ್ಯಾವಳಿಯನ್ನು ಸಂಘಟಿಸುವು ದೆಂದರೆ, ಬಹಳ ಪ್ರತಿಷ್ಠೆಯ ಸಂಗತಿ. ಇದಕ್ಕಾಗಿ ಯಾವ ಹಂತವನ್ನಾದರೂ ತಲುಪುತ್ತವೆ, ಹಣ ಚೆಲ್ಲುತ್ತವೆ. ಕತಾರ್ ಈ ಹರಾಜನ್ನು ಗೆದ್ದುಕೊಂಡಾಗ ಫಿಫಾ ಸಂಘಟಕರಿಗೆ ಅಗಾಧ ಪ್ರಮಾಣದ ಲಂಚ ಕೊಟ್ಟಿzರೆಂಬ ಮಾತುಗಳು ಕೇಳಿಬಂದವು.

ಫಿಫಾ ಅಧ್ಯಕ್ಷನ ತಲೆದಂಡವೂ ಆಯಿತು. ಅದು ಎಷ್ಟರ ಮಟ್ಟಿಗೆ ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಆ highstakes ನಲ್ಲಿ ಕತಾರ್ ಭಾಗವಹಿಸಿ ಪಂದ್ಯಾವಳಿಯನ್ನು ಸಂಘಟಿಸುವ ಅವಕಾಶವನ್ನು ತನ್ನದಾಗಿಸಿಕೊಂಡಿತು. ಅಂದರೆ ಫುಟ್ಬಾಲ್ ಪಂದ್ಯಾವಳಿ ನೆಪದಲ್ಲಿ ಹೊಸ ರಾಷ್ಟ್ರ ಕಟ್ಟಲು ಕತಾರ್ ನಿರ್ಧರಿಸಿದ್ದು ಮಾತ್ರ ಅತ್ಯಂತ ದಿಟ್ಟ ಹಾಗೂ ಬುದ್ಧಿವಂತಿಕೆಯ ನಡೆ. ಅಂದಿನಿಂದ ಆರಂಭವಾಯಿತು ನವರಾಷ್ಟ್ರ ನಿರ್ಮಾಣ. ದುಬೈ ಕತಾರ್‌ಗಿಂತ ಹತ್ತಾರು ವರ್ಷ ಮುಂದಿರಬಹುದು.

ಆದರೆ 2022ರ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುವ ಈ ಸಮಯದಲ್ಲಿ ಕತಾರ್, ಎಲ್ಲ ಅರಬ್ ದೇಶಗಳ ಪೈಕಿ ಅಗ್ರಸ್ಥಾನ ಹೊಂದಿರುವುದು ಅಷ್ಟೇ ಸತ್ಯ. ಕಾರಣ ಇಲ್ಲಿಯವರೆಗೆ ಯಾವ ಅರಬ್ ದೇಶವೂ ಈ ಫುಟ್ಬಾಲ್ ಪಂದ್ಯಾವಳಿ ಸಂಘಟಿಸಿಲ್ಲ ಎಂಬುದು ಗಮನಾರ್ಹ. ಹಿಂದೆ ಜಪಾನ್ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಿದ್ದನ್ನು ಬಿಟ್ಟರೆ, ಏಕಾಂಗಿಯಾಗಿ ಈ ಪಂದ್ಯಾವಳಿಯನ್ನು ಸಂಘಟಿಸುತ್ತಿರುವ ಏಷ್ಯಾದ ದೇಶಗಳಲ್ಲಿ ಕತಾರ್ ಮೊದಲನೆಯದು.

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಾಗಿ 8 ಬೃಹತ್ ಸ್ಟೇಡಿಯಂಗಳನ್ನು ಕಟ್ಟಲಾಗಿದೆ. ಆಟಗಾರರು, ಪ್ರೇಕ್ಷಕರಿಗಾಗಿ ವಸತಿ ಸೌಕರ್ಯ ಕಲ್ಪಿಸಲು ಐವತ್ತು ಪಂಚತಾರಾ ಹೋಟೆಲ್‌ಗಳು ತಲೆ ಎತ್ತಿದೆ. ಇಪ್ಪತ್ತೊಂಬತ್ತು ಲಕ್ಷ ಜನಸಂಖ್ಯೆಯಿರುವ ಕತಾರ್‌ಗೆ ಫುಟ್ಬಾಲ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ಹದಿನೈದು ಲಕ್ಷ ಜನ ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ. ಇವರೆಲ್ಲರ ಸಂಚಾರ, ವಾಸ್ತವ್ಯ, ಊಟೋಪಚಾರ, ಶಾಪಿಂಗ್,
ಹಾಲಿಡೇ, ತಿರುಗಾಟ, ಮೋಜು-ಮಸ್ತಿ… ಹೀಗೆ ಸಕಲ ರೀತಿಯಲ್ಲಿ, ಬರುವ ಅತಿಥಿಗಳನ್ನು ನಿಭಾಯಿಸಲು ಹಾಗೂ ಅವರ ಅಪೇಕ್ಷೆಯನ್ನು ಪೂರೈಸಲು ಸರ್ವ ಸಿದ್ಧತೆ ಮಾಡಿಕೊಂಡಿದೆ.

ದೋಹಾ ಇಡೀ ವಿಶ್ವವನ್ನು ಬರಮಾಡಿಕೊಳ್ಳಲು ಸಿದ್ಧವಾದ ಪರಿ ನಿಜಕ್ಕೂ ಅದ್ಭುತ. ಎಡೆ ಅಚ್ಚುಕಟ್ಟುತನ, ವ್ಯವಸ್ಥೆ. ನಗರದ ಗರ್ಭದೊಳಗೆ ಮೆಟ್ರೋ ಮಾರ್ಗ ಹಾದು ಹೋದರೂ, ಆ ಕೆಲಸದಿಂದ ನಿತ್ಯ ಸಾಗಾಟ, ಸಂಚಾರಕ್ಕೆ ಸ್ವಲ್ಪವೂ ಅಡೆತಡೆಯಾಗದಂತೆ ಕಾಮಗಾರಿಗಳನ್ನು ಪೂರೈಸಿದ್ದು ವಿಶೇಷ. 2022ರ ಫುಟ್ಬಾಲ್ ಪಂದ್ಯಾವಳಿಗಾಗಿ 2040 ರಲ್ಲಿ ಕತಾರ್ ಹೇಗಿರಬೇಕೆಂಬುದನ್ನು ಮನಗಂಡು ನಗರವನ್ನು ನಿರ್ಮಿಸಲಾಗಿದೆ. ಜಗತ್ತಿನ ಮೂರನೇಯ ಅತಿದೊಡ್ಡ ತೈಲ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪ ಹೊಂದಿರುವ ರಾಷ್ಟ್ರವೆಂದು ಕರೆಯಿಸಿಕೊಳ್ಳುವ ಕತಾರ್, ತನ್ನೆಲ್ಲ ಸಂಪನ್ಮೂಲ ಗಳನ್ನು ನವರಾಷ್ಟ್ರ ನಿರ್ಮಾಣಕ್ಕಾಗಿ ಸುರಿದಿದೆ.

ಹೊಸ ದೇಶವನ್ನು ಕಟ್ಟುವವರಿಗೆ ಗಗನಚುಂಬಿಕಟ್ಟಡ, ರಸ್ತೆ, ಸೇತುವೆ, ವರ್ತುಲ ರಸ್ತೆ, ಮೇಲ್ಸೇತುವೆಗಳಷ್ಟೇ ಮುಖ್ಯವಲ್ಲ. ಕಾರು ಓಡಿಸುವವನಷ್ಟೇ ಪಾದಚಾರಿಯೂ ಮುಖ್ಯ. ಕರೋಡ್ ಪತಿಯಷ್ಟೇ ಕಲಾವಿದನೂ ಮುಖ್ಯ. ಸಂಪತ್ತು ಇರುವವರಷ್ಟೇ ಸಂಸ್ಕೃತಿಯ ಒಲವಿರುವವನೂ ಮುಖ್ಯ, ಸಂಗೀತಗಾರನೂ ಮುಖ್ಯ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಕರ್ತಾ ನಿರ್ಮಾಣಗೊಂಡಿದೆ.

ಫುಟ್ಬಾಲ್ ಕ್ರೀಡಾಂಗಣವನ್ನು ಕಟ್ಟುವಂತೆ, ಮ್ಯೂಸಿಯಂ, ಗ್ರಂಥಾಲಯ, ಸಂಸ್ಕೃತಿ ಕೇಂದ್ರ, ಕಲಾ ಗ್ಯಾಲರಿ, ಕಲಾವಿದರ ವೇದಿಕೆ, ಸಿನಿಮಾ ಥಿಯೇಟರ್, ರಂಗಭೂಮಿ, ಬೃಹತ್ ಬಯಲು ರಂಗಮಂದಿರ, ಪುಸ್ತಕ ಮೇಳಕ್ಕೆ ವಿಶಾಲ ಸಭಾಂಗಣ, ಹಜಾರವನ್ನೂ ನಿರ್ಮಿಸಿರುವುದು
ಸಮಾಧಾನ ಕರ ವಿಷಯ. ಸಂಸ್ಕೃತಿ, ಕಲೆ, ಓದು, ವಿeನ, ಅಧ್ಯಯನ ಸಂಶೋಧನೆಗೆ ಮಹತ್ವ ನೀಡಲಾಗಿದೆ. ಮಾಲ್‌ಗಳನ್ನು ಕಟ್ಟುವುದಕ್ಕೆ ನೀಡಿದಷ್ಟೇ ಮಹತ್ವವನ್ನು ಪುಸ್ತಕ ಮಹಲಿಗೂ ನೀಡಲಾಗಿದೆ. ಒಂದು ಆದರ್ಶ, ಸಂಪನ್ನ, ಸುಸಂಸ್ಕೃತ, ಆಧುನಿಕ ನಗರ ಏನೇನಲ್ಲ ಒಳಗೊಂಡಿರಬೇಕೋ ಅವೆಲ್ಲವುಗಳನ್ನೂ ದೋಹಾ ನಗರ ಹೊಂದಿದೆ.

ಹೊಸ ದೇಶ ಕಟ್ಟುವಾಗ, ಅದರಲ್ಲೂ ಫುಟ್ಬಾಲ್ ನೆಪದಲ್ಲಿ ಈ ಕೆಲಸ ಮಾಡುವಾಗ, ಇಂದಿಗೂ ಪುರಾತನ ಸಂತೆಪೇಟೆ, ಸಾಂಪ್ರದಾಯಿಕ ಮಳಿಗೆ ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಒಂದು ತಿಂಗಳು ನಡೆಯುವ ಫುಟ್ಬಾಲ್ ಪಂದ್ಯಾವಳಿ ಒಂದು ನೆಪವಷ್ಟೇ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡು ದೇಶವನ್ನು ಕಟ್ಟುವ ಸಂಕಲ್ಪ ತೊಟ್ಟ ಕತಾರಿನ ಅಂತಃಶಕ್ತಿ ಇತರ ದೇಶಗಳಿಗೂ ಮಾದರಿ. 1994 ರಲ್ಲಿ ಅಮೆರಿಕ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಿದಾಗ ೦.೫ ಶತಕೋಟಿ ಡಾಲರ್ ಖರ್ಚು ಮಾಡಿತ್ತು. ಅದಾಗಿ ಇಪ್ಪತ್ನಾಲ್ಕು ವರ್ಷಗಳ ಬಳಿಕ, 2018ರಲ್ಲಿ ರಷ್ಯಾ ಈ ಪಂದ್ಯಾವಳಿಯನ್ನು ಸಂಘಟಿಸಿದಾಗ 11.6 ಶತಕೋಟಿ ಡಾಲರ್ ಖರ್ಚು ಮಾಡಿತ್ತು. ಆದರೆ ಕತಾರ್ ಖರ್ಚು ಮಾಡಿರುವುದು 220 ಶತಕೋಟಿ ಡಾಲರ್!

ಹನ್ನೊಂದು ಸಾವಿರ ಚದರ ಕಿಮೀ ವಿಸ್ತೀರ್ಣದ ಪುಟ್ಟ ದೇಶ ಕತಾರ್ ಇಡೀ ವಿಶ್ವವನ್ನು ತನ್ನತ್ತ ಸೆಳೆದುಕೊಳ್ಳಲು ನಡೆಸಿದ ಕಸರತ್ತು, ವಲ್ಡ ಕಪ್ ಫುಟ್ಬಾಲ್‌ಗಿಂತಲೂ ರೋಚಕ .