Tuesday, 29th September 2020

ಶಾಸ್ತ್ರೀಯ ಸಂಗೀತದಲ್ಲಿ ಹೊಸ ಪ್ರಯೋಗ

ವೀಣೆಯೇ ನನ್ನ ಭಾಷೆ

ಮೂರು ದಶಕಕ್ಕೂ ಮೀರಿದ ಸಂಗೀತ ಸಾಧನೆ ನಡೆಸಿರುವ ಜಯಂತಿ ಕುಮರೇಶ್, ನಮ್ಮ ನಡುವಿನ ಅಪ್ರತಿಮ ಕಲಾವಿದೆ. ಸಂಗೀತ ಚೂಡಾಮಣಿ ಪ್ರಶಸ್ತಿ, ವೀಣಾ ನಾದ ಮಣಿ, ಕಲಾ ರತ್ನ, ಸತ್ಯಶ್ರೀ, ಗಾನ ವಾರಿಧಿ, ಸಂಗೀತ ಶಿಖರ ಸಮ್ಮಾನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ ಇವರು ಬೆಂಗಳೂರಿನವರು. ಝಾಕಿರ್ ಹುಸ್ಸೇನ್, ಕುಮರೇಶ್, ಅರುಣಾ ಸಾಯಿರಾಂ ಸೇರಿದಂತೆ ಅನೇಕ ಸಂಗೀತ ದಿಗ್ಗಜರ ಜತೆ ದೇಶವಿದೇಶಗಳಲ್ಲಿ ವೀಣಾ ವಾದನ ಮಾಡಿರುವ ಜಯಂತಿ ಕುಮರೇಶ್ ಸಂಗೀತದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಭಾಷಣಗಳ ಮೂಲಕ, ಟೆಡ್ ಎಕ್ಸ್ ಭಾಷಣಗಳ ಮೂಲಕ, ತಮ್ಮದೇ ಯೂಟ್ಯೂಬ್ ಚ್ಯಾನೆಲ್ಲಿನ ಮೂಲಕ ಯುವಜನರನ್ನೂ ಶಾಸ್ತ್ರೀಯ ಸಂಗೀತದ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವಂತೆ ಮಾಡು ತ್ತಿದ್ದಾರೆ. ಅವರ ಸಂದರ್ಶನದ ಎರಡನೆಯ ಭಾಗ ಇಲ್ಲಿದೆ.

ಪ್ರ: ಒಂದು ವೇದಿಕೆಯ ಮೇಲೆ ನೀವೊಬ್ಬರೇ ಮುಖ್ಯ ಸಂಗೀತಗಾರರಾಗಿ ವೀಣೆ ನುಡಿಸುವ ಅನುಭವ ಮತ್ತು ಬೇರೆ ಬೇರೆ ಕಲಾ ವಿದರ ಜೊತೆ ಒಟ್ಟಿಗೇ ಸಂಗೀತದ ರಸಾನುಭೂತಿ ಸೃಷ್ಟಿಸುವ ಅನುಭವಗಳು ಹೇಗಿರುತ್ತವೆ? ನಿಮ್ಮ ಮನಸ್ಥಿತಿಯಲ್ಲಾಗುವ ಬದಲಾವಣೆಗಳು ಎಂಥವು?
ಉತ್ತರ: ಎರಡೂ ಖಂಡಿತಾ ವಿಭಿನ್ನವಾದ ಅನುಭವಗಳು. ಒಬ್ಬರೇ ನುಡಿಸುವಾಗ ಮನಸ್ಸು ಸಂಚರಿಸುವ ರೀತಿಯೇ ಬೇರೆ. ಅದು ಧ್ಯಾನಕ್ಕೆೆ ಕೂತಂತೆ. ಮೊದಮೊದಲು ಒಂದಷ್ಟು ಯೋಚನೆಗಳು ಬರುತ್ತವೆ, ನಂತರ ಒಂದು ಮೌನ ಮೆಲ್ಲಗೆ ಆವರಿಸುತ್ತದೆ. ಆಗ ನಾವು ಅಂತರ್ಮುಖಿಯಾಗಿ ನಮ್ಮೊೊಳಗಿರುವ ಆನಂದವನ್ನೇ ಶ್ರೋತೃಗಳ ಜೊತೆ ಹಂಚಿಕೊಳ್ಳುತ್ತೇವೆ.  ಬೇರೆ ಕಲಾವಿದರ ಜೊತೆ ನುಡಿಸುವಾಗ, ಸ್ನೇಹಿತರ ಜತೆ ಯಾವುದೋ ಹುಡುಕಾಟಕ್ಕೆ ಹೊರಟಂತೆ. ಆ ಪಯಣಕ್ಕೆ ತಕ್ಕ ಸಿದ್ಧತೆ ನಡೆಸುತ್ತೇವೆ. ಅದು ಸ್ಪರ್ಧೆ ಅಲ್ಲ, ಒಟ್ಟಿಗೆ ಒಂದು ದಿವ್ಯ ರಸಾನುಭೂತಿಯನ್ನು ಅರಸುವ, ಹಂಚಿಕೊಳ್ಳುವ ಪಯಣ. ಒಂದು ರಾಗವನ್ನು ಒಟ್ಟಿಗೆ ಆ ಕ್ಷಣಕ್ಕೆ ಹೇಗೆ ಅನ್ವೇಷಿಸಬಹುದೋ ನೋಡೋಣ ಎಂಬ ಮುಕ್ತತೆ, ಕುತೂಹಲದಿಂದ ಹೊರಡಬೇಕು. ಎಷ್ಟೋ ಸಲ ಕಛೇರಿಗಳಲ್ಲಿ, ಅದರಲ್ಲೂ ಹಿಂದೂಸ್ತಾನಿ ಸಂಗೀತಗಾರರ ಜೊತೆ ಇರುವ ಕಛೇರಿಗಳಲ್ಲಿ ನಾವು ವೇದಿಕೆಯನ್ನು ಏರುವ ಸ್ವಲ್ಪ ಸಮಯದ ಮುಂಚೆ ಕಲಾವಿದರನ್ನು ಭೇಟಿಯಾಗುತ್ತೇವೆ. ಯಾವ ರಾಗಗಳನ್ನು ನುಡಿಸುವ ಎಂದೆಲ್ಲಾ ಚರ್ಚಿಸುತ್ತೇವೆ. ನಾವು ಒಬ್ಬೊಬ್ಬರೂ ಒಂದೊಂದು ರೀತಿಯ ಸಂಗೀತದ ಹಿನ್ನೆೆಲೆಯಿಂದ ಬಂದಿರುತ್ತೇವೆ, ನಮ್ಮ ಅಭ್ಯಾಸಗಳು, ಒಂದು ರಾಗದ ಸಂಚಾರ ಮಾಡುವ ರೀತಿ ಎಲ್ಲವೂ ಬೇರೆಬೇರೆಯಾಗಿರುತ್ತದೆ. ಆದರೆ ವೇದಿಕೆ ಮೇಲೆ ತಾನ್ಪುರ ಅನುರಣಿಸುವ ಕ್ಷಣದಿಂದಲೇ ಇಬ್ಬರ ಅಥವಾ ಎಲ್ಲರ
ಮನಸ್ಸುಗಳೂ ಶೃತಿಗೊಳ್ಳಬೇಕು. ಆಗ ಎರಡೂ ಸಂಗೀತ ವಾದ್ಯಗಳು ಸಂವಹನ ಶುರುಮಾಡುತ್ತವೆ. ಆಗ ನಮ್ಮ ಮುಂದೆ
ಅಷ್ಟು ಜನರಿರುತ್ತಾರಲ್ಲ, ಅವರಿಗೆ ಒಂದು ಅರ್ಥಪೂರ್ಣ, ರಸಪೂರ್ಣ ಸಂಗೀತದ ಅನುಭವವನ್ನು ಕೊಡಬೇಕು. ಹಾಗಾಗಿ
ಒಬ್ಬ ಸಂಗೀತಗಾರರನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಸಂಗೀತವನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಹುದು. ಒಮ್ಮೊಮ್ಮೆ ಒಬ್ಬರು ಒಂದು ರಾಗದ ಯಾವುದೋ ಆಳ ದಲ್ಲಿ ವಶೀಕರಣಗೊಂಡಂತೆ ಕಳೆದುಹೋದರೆ, ಆಗ ಅವರು ನುಡಿಸಲಿ ಎಂದು ಮತ್ತೊಬ್ಬರು ಯೋಚಿಸಬೇಕು. ಅಥವಾ ಒಬ್ಬರು ಒಂದು ಸ್ವಲ್ಪ ಆಯಾಸಗೊಂಡಂತೆ ಕಂಡರೆ ನಾವು ಸ್ವಲ್ಪ ಹೆಚ್ಚಿನ ಸಂಗೀತ ನುಡಿಸಬೇಕು. ಒಬ್ಬೊಬ್ಬರದ್ದೂ ಒಂದೊಂದು ಶಕ್ತಿ ಇರುತ್ತದೆ, ಅದು ಹೊರಬರುವಂತೆ, ಶ್ರೋತೃಗಳನ್ನು ಮುಟ್ಟುವಂತೆ ಎಲ್ಲರೂ ಒಟ್ಟಿಗೇ ಕೆಲಸ ಮಾಡಬೇಕು. ಕಛೇರಿಗಳನ್ನು ಕೊಡುತ್ತಾ ಕೊಡುತ್ತಾ ಸಮಯ ಕಳೆದಂತೆ ಸಂಗೀತಗಾರರ ಪ್ರವೃತ್ತಿ, ಅಂತರದೃಷ್ಟಿ ಈ ಕ್ರಿಯೆಗೆ ಒಗ್ಗಿಕೊಂಡುಬಿಡುತ್ತದೆ.  ಹೀಗೆ ಕೊಡು-ಕೊಳ್ಳುವಿಕೆಯಿಂದ ಸಂಗೀತದ ಅನುಭೂತಿ ನಮ್ಮೆಲ್ಲರನ್ನೂ ಮೀರಿದ ಒಂದು ಸ್ವಚ್ಛಂದ ಸಾಮೂಹಿಕ ಸಂತೋಷ ಸೃಷ್ಟಿಸುತ್ತದೆ.

ಪ್ರ: ನಿಮ್ಮ ಪಿ.ಎಚ್.ಡಿ. ವಿಷಯ ಸರಸ್ವತಿ ವೀಣೆ ನುಡಿಸುವ ವೈಖರಿಗಳು ಮತ್ತು ವಿಧಾನಗಳು. ಇದರ ಬಗ್ಗೆ ವಿವರಿಸುತ್ತೀರಾ?
ಉತ್ತರ: ನಾನು ಪಿ.ಎಚ್.ಡಿ. ಮಾಡಿದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ, ಡಾ ಮಂಜುನಾಥ್ ಅವರ ಮಾರ್ಗದರ್ಶನ
ದಲ್ಲಿ. ಅವರು ಪಿಟೀಲಿನ ಮೇಲೆ ಇದೇ ವಿಷಯದ ಮೇಲೆ ಪಿ.ಎಚ್.ಡಿ. ಮಾಡಿದ್ದಾರೆ. ನಾನು ಪಿ.ಎಚ್.ಡಿ. ಮಾಡುವಾಗ ವೀಣೆ
ನುಡಿಸುವ ಶ್ರೇಷ್ಠ ಕಲಾವಿದರು ಎಷ್ಟೋ ಜನ ನಮ್ಮನ್ನಗಲಿದ್ದರು.  ದೊರೆಸ್ವಾಮಿ ಐಯಂಗಾರ್, ಏಮನಿ ಶಂಕರ ಶಾಸ್ತ್ರಿ, ಬಾಲಚಂದರ್ ಮಾಮಾ, ಚಿಟ್ಟಿ ಬಾಬು ಇವರಲ್ಲಿ ಯಾರೂ ಇರಲಿಲ್ಲ. ಆದರೆ ಅವರೆಲ್ಲರ ಕಛೇರಿಗಳ ನೂರಾರು ಧ್ವನಿಮುದ್ರಣ ಗಳನ್ನು ಕೇಳಿ ಸಂಶೋಧನೆ ನಡೆಸುವುದಕ್ಕೆ ಅವಕಾಶವಿತ್ತು. ನನ್ನ ಕಛೇರಿಗಳು, ಅದಕ್ಕಾಗಿ ಬೇರೆ ಊರುಗಳಿಗೆ, ದೇಶಗಳಿಗೆ ಪ್ರವಾಸ,  ಇವೆಲ್ಲದರ ನಡುವೆ ಅಧ್ಯಯನ ಮುಗಿಸಲು ಆರು  ವರ್ಷವಾಯಿತು. ಈ ಸಂಶೋಧನೆಯಿಂದ ನನಗೆ ಸರಸ್ವತಿ ವೀಣೆ ನುಡಿಸುವ ಎಲ್ಲಾ ಶೈಲಿಗಳ ಪರಿಚಯವಾಯ್ತು. ಪ್ರಮುಖವಾಗಿ ತಂಜಾವೂರು ಶೈಲಿ, ಮೈಸೂರು ಶೈಲಿ, ಆಂಧ್ರ ಶೈಲಿ ಮತ್ತು ಕೇರಳ ಶೈಲಿ. ಎಲ್ಲಾ ಶೈಲಿಗಳನ್ನೂ ವಸ್ತುನಿಷ್ಠವಾಗಿ ಅಧ್ಯಯಿಸಿದ್ದರಿಂದ ನನಗೆ ಹೊಸ ಹೊಸ ಅನುಭವಗಳಾದವು. ವೀಣೆಯ ತಂತಿಗಳನ್ನು ಮೀಟುವ ವಿಧಾನ, ಗಮಕಗಳು, ಶಾರೀರ ಎಲ್ಲವೂ ಬೇರೆ ರೀತಿಯಲ್ಲಿರುತ್ತವೆ. ಹಾಗಾಗಿ ಒಂದು ಶೈಲಿಯನ್ನೇ ಅನುಸರಿಸಬೇಕು ಎಂಬ ಯಾವ ಮಿತಿಯಿಲ್ಲದೇ ಎಲ್ಲ ಶೈಲಿಗಳ ವಿಶಿಷ್ಟ ಗುಣಗಳು ನನ್ನ ಸಂಗೀತದ ಮೇಲೂ ಪ್ರಭಾವ ಬೀರಿವೆ, ಬೀರುತ್ತಿವೆ.

ಪ್ರ: ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾ ಹಿಂದಿನ ಸ್ಫೂರ್ತಿ ಏನು?
ಉತ್ತರ: ದೆಹಲಿಯಲ್ಲಿ ಏಶಿಯನ್ ಗೇಮ್ಸ್‌ ನಡೆಯುವಾಗ ಯಾವ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿ
ದ್ದಾರೆ ಎಂದು ನೋಡುತ್ತಿದ್ದೆವು. ಬಾಲಿವುಡ್ ಸಂಗೀತ ಇತ್ತು,  ಜಾನಪದ ಸಂಗೀತ ಇತ್ತು. ಆದರೆ ನಮ್ಮ ದೇಶದ ಪ್ರಮುಖ
ಸಂಗೀತ ವ್ಯವಸ್ಥೆಗಳಲ್ಲಿ ಶಾಸ್ತ್ರೀಯ ಸಂಗೀತವೂ ಒಂದು. ಆದರೆ ಅದರ ಯಾವುದೇ ಕಾರ್ಯಕ್ರಮ ಇರಲಿಲ್ಲ. ಆಗ ನನಗೆ, ನಮ್ಮ
ದೇಶವನ್ನು ಪ್ರತಿನಿಧಿಸುವ ಒಂದು ನ್ಯಾಷನಲ್ ಆರ್ಕೆಸ್ಟ್ರಾ ಇರಬೇಕು ಎಂಬ ಆಲೋಚನೆ ಬಂತು. ಬಹಳಷ್ಟು ಸಂಗೀತ
ಕಲಾವಿದರ ಜೊತೆ ಇದರ ಬಗ್ಗೆ ಮಾತಾಡಿದೆ. 20ಕ್ಕೂ ಹೆಚ್ಚು ಕಲಾವಿದರು ಭಾರತದ ವಿವಿಧ ಭಾಗಗಳಿಂದ ಸ್ಪಂದಿಸಿದರು.
ಮತ್ತು ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾಗಾಗಿಯೇ ಹಲವು ವಿಶಿಷ್ಟ ಸಂಯೋಜನೆಗಳನ್ನೂ ಮಾಡಿದೆವು. ಅನೇಕ ಕಛೇರಿಗಳೂ
ನಡೆದವು. ಅನಂತರ ನನಗೆ ಅದರ ನಿರ್ವಹಣೆ ಸ್ವಲ್ಪ ಕಷ್ಟವಾಯಿತು. ಪ್ರತಿ ಕಛೇರಿಗೂ ಬಹಳ ಸಿದ್ಧತೆ ಬೇಕಾಗುತ್ತಿತ್ತು.
ಕಲಾವಿದರನ್ನು ಕಲೆಹಾಕಬೇಕು, ತಾಲೀಮು ನಡೆಸಬೇಕು, ಊಟ-ತಿಂಡಿ ವ್ಯವಸ್ಥೆಯಾಗಬೇಕು, ಕಲಾವಿದರ ಪ್ರಯಾಣ,
ವಸತಿ ನೋಡಿಕೊಳ್ಳಬೇಕು, ಕಾರ್ಯಕ್ರಮದ ಸಂಯೋಜನೆ ಮಾಡಬೇಕು… ನನ್ನ ಸಂಗೀತ ಕಾರ್ಯಕ್ರಮಗಳ ನಡುವೆ
ಇದೆಲ್ಲವನ್ನೂ ನಿರ್ವಹಿಸುವುದು ಕಷ್ಟವಾಯಿತು. ಹಾಗಾಗಿ ಅಂದುಕೊಂಡಿದ್ದ ಎಷ್ಟೋ ಕಛೇರಿಗಳನ್ನು ನಾವು ಮಾಡಲಾಗಲಿಲ್ಲ. ಆದರೆ ಈಗಲೂ ನನ್ನನ್ನು ಜನ ಅದರ ಬಗ್ಗೆ ಕೇಳುತ್ತಾರೆ.

ನನಗೆ ಸಂಗೀತದ ಜವಾಬ್ದಾರಿ ಮಾತ್ರ ಬಿಟ್ಟು, ನಿರ್ವಹಣೆಯ ಹೊಣೆ ಯಾರಾದರೂ ಹೊರಲು ತಯಾರಿದ್ದರೆ ನನಗೆ ಇದನ್ನು
ಮುಂದುವರೆಸಲು ಮೊದಲಿನಷ್ಟೇೇ ಆಸಕ್ತಿ ಇದೆ. ಆದರೆ ಸಕ್ರಿಯವಾಗಿದ್ದಷ್ಟೂ ಕಾಲ ನಾವೆಲ್ಲರೂ ಬಹಳ ಆನಂದ ಪಟ್ಟಿದ್ದೇವೆ, ನಮಗೆಲ್ಲ ಅದೊಂದು ಮಹತ್ವಪೂರ್ಣ ಅನುಭವ. ಅದನ್ನು ಪುನಶ್ಚೇತನಗೊಳಿಸುವ ಆಸೆಯಂತೂ ಇದೆ.

ಪ್ರ: ನಿಮ್ಮ ಮಿಸ್ಟೀರಿಯಸ್ ‘ಮಿಸ್ಟೀರಿಯಸ್ ಡ್ಯುಯಾಲಿಟಿ’ ಆಲ್ಬಮ್‌ನಲ್ಲಿ ಮಾಡಿರುವ ಸಂಗೀತ ಪ್ರಯೋಗ, ಅದರ ಹಿಂದಿನ ಚಿಂತನೆ ಏನು?

ಉತ್ತರ: ಒಂದೇ ಕಲಾವಿದೆ, ಒಂದೇ ವಾದ್ಯ ಬಳಸಿ ಮಾಡಿರುವ ಆಲ್ಬಮ್ ಅದು. ಅದರಲ್ಲೇನು ವಿಶೇಷ ಎಂದು ನೀವು
ಕೇಳಬಹುದು. ಆದರೆ ಅದರ ಸಂಯೋಜನೆಗಳನ್ನು ನೀವು ಕೇಳುವಾಗ ಒಂದು ದೊಡ್ಡ ಆರ್ಕೆಸ್ಟ್ರಾ ಕೇಳಿದ ಅನುಭವವಾಗುತ್ತದೆ. ಅದನ್ನು ಓವರ್ ಡಬ್ಬಿಿಂಗ್ ಎಂದು ಹೇಳುತ್ತಾರೆ. ಅದರಲ್ಲಿ ಮೊದಲು ನಾನು ಒಂದು ಟ್ರ್ಯಾಕ್ ನುಡಿಸುತ್ತೇನೆ, ಅದನ್ನು ಹೆಡ್ ಫೋನಿನಲ್ಲಿ ಕೇಳುತ್ತಾ ಎರಡನೇ ಟ್ರ್ಯಾಕ್ ನುಡಿಸುತ್ತೇನೆ. ನಂತರ ಆ ಎರಡು ಟ್ರ್ಯಾಕ್-ಗಳನ್ನು ಒಟ್ಟಿಗೆ ಹೆಡ್ ಫೋನಿನಲ್ಲಿ
ಕೇಳುತ್ತಾ ಮೂರನೇ ಟ್ರ್ಯಾಕ್ ನುಡಿಸುವುದು… ಹೀಗೆ ಒಟ್ಟಿಗೇ ಆರು ಟ್ರ್ಯಾಕ್ ನುಡಿಸಿದ್ದೇನೆ, ಸಹಕಾಲಿಕವಾಗಿ. ಒಂದು ಟ್ರ್ಯಾಕ್ ಮೆಲೋಡಿ ಆದರೆ, ಎರಡನೇ ಟ್ರ್ಯಾಕ್ ಹಾರ್ಮನಿ, ಇವೆರಡೂ ಬೆರೆತ ಟ್ರ್ಯಾಕ್ ಕೇಳುತ್ತಾ ಮೂರನೇ ಟ್ರ್ಯಾಕ್ ಸ್ವಲ್ಪ ಲಯ ಮುಂದಿರುವ ಹಾಗೆ ನುಡಿಸೋದು, ಮುಂದೆ ಒಂದು ಸ್ವರಾಷ್ಟಕ ಶ್ರೇಣಿ ಕೆಳಗೆ ನುಡಿಸೋದು… ಹೀಗೆ. ಇದರ ಹಿಂದೆ ಒಂದು ಚಂದದ ಕಥೆ ಇದೆ. ಒಮ್ಮೆ ನಾನು ಮನೆಯಲ್ಲಿದ್ದಾಗ ಅಮ್ಮ ಕರೆ ಮಾಡಿದ್ದರು, ಅವರ ಜೊತೆ ಮಾತನಾಡಿದ ನಂತರ ಒಬ್ಬ ಪ್ರಖ್ಯಾತ ಸಂಗೀತ ಸಂಘಟಕರು ಕರೆ ಮಾಡಿದರು. ಈ ಎರಡೂ ಸಂಭಾಷಣೆಗಳು ನಡೆದ ನಂತರ ಯೋಚಿಸಲು ಶುರು ಮಾಡಿದೆ. ನಾವು ಒಬ್ಬರೇ ಆದರೂ, ಬೇರೆ ಬೇರೆ ಜನರ ಜೊತೆ ನಾವು ಬೇರೆ ಬೇರೆ ನಾವಾಗಿರುತ್ತೇವೆ. ನಮ್ಮ ಮಾತಿನ ಧಾಟಿ, ಧ್ವನಿ ಎಲ್ಲವೂ ಬದಲಾಗುತ್ತವೆ. ಈಗ ನಾನು ನನ್ನ ಬಳಿ ಬರುವ ವಿದ್ಯಾರ್ಥಿಗಳ ಜೊತೆ ಮಾತನಾಡುವ ರೀತಿ ಬೇರೆ, ನಮ್ಮ ಮನೆಕೆಲಸಕ್ಕೆ ನೆರವಾಗಲು ಬರುವವರ ಜೊತೆ ಬೇರೆ ರೀತಿ ಮಾತನಾಡುತ್ತೇನೆ, ನನ್ನ ಗಂಡನ ಜೊತೆ ಬೇರೆ ರೀತಿ ಮಾತನಾಡುತ್ತೇನೆ. ನಮ್ಮೊಳಗೆ ಎಷ್ಟು ನಾನುಗಳಿರುತ್ತವೆ. ಇವುಗಳಲ್ಲಿ ಯಾವುದು ನಿಜವಾದದ್ದು ಎಂದರೆ, ಎಲ್ಲವೂ! ಅದು ನಿಜವಾದದ್ದು, ಇದಲ್ಲ ಎನ್ನುವ ಹಾಗಿಲ್ಲ. ನಾನು ಒಬ್ಬ ಸಂಗೀತ ಕಲಾವಿದೆ, ಒಬ್ಬ ಮಡದಿ, ಒಬ್ಬ ಮಗಳು, ಒಬ್ಬ ಗೆಳತಿ, ಒಬ್ಬ ಗುರು, ಎಲ್ಲವೂ. ಹಾಗಾಗಿ ಇದು ಡ್ಯುಯಾಲಿಟಿಗೂ ಹೆಚ್ಚು. ಈ ಆಲ್ಬಮ್ ಸಂಯೋಜನೆಗಳಲ್ಲಿ ನಾನು ಆರು ವೀಣೆಗಳನ್ನು ಒಂದರ ಮೇಲೊಂದರಂತೆ ನುಡಿಸಿ ಎಲ್ಲವನ್ನೂ ಚಂದವಾಗಿ ಮಿಶ್ರಣ ಮಾಡಲಾಯಿತು, ಈ ಸಂಯೋಜನೆಗಳೂ ನಮ್ಮಂತೆಯೇ. ಒಂದು ಜೀವದೊಳಗೇ ಹಲವಾರು ಜೀವಗಳು ಮಿಡಿಯುವಂತೆ ಈ ಸಂಯೋಜನೆಗಳೂ ವಿವಿಧ ಅನುರಣನಗಳನ್ನು ಒಳಗೊಂಡೇ ಒಂದು ದಿವ್ಯ ಅನುಭೂತಿ ನೀಡಲಿ ಎಂಬ ಆಶಯ.

(ಮುಂದುವರಿಯುವುದು)

Leave a Reply

Your email address will not be published. Required fields are marked *