Monday, 3rd October 2022

ಹೊಸ ವಿವಿಗಳ ಆಶಯ ಈಡೇರೀತೇ?

ಜಿಲ್ಲೆಗೊಂದರಂತೆ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯ ಆಶಯ ವೇನೋ ಸರಿ. ಆದರೆ ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ದೊರಕಿದಂತಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಹೊಸ ವಿವಿಗಳ ಸ್ಥಾಪನೆ ಮಾಡಿ ಬೆಳೆಸುವುದು ಸುಲಭದ ವಿಚಾರವಲ್ಲ. ಈಗ ಇರುವ ವಿವಿಗಳಿಗೇ ಸರಿಯಾದ ಮೂಲ ಸೌಕರ್ಯವಿಲ್ಲದಿರುವಾಗ ಹೊಸ ವಿವಿಗಳಿಗೆ ಇವನ್ನೆಲ್ಲ ಎಲ್ಲಿಂದ ಒದಗಿಸಬೇಕು? ಹೊಸದಾಗಿ ಸ್ಥಾಪನೆಯಾಗಿರುವ ಸಂಗೀತ ವಿಶ್ವ ವಿದ್ಯಾಲಯ, ಶಿಲ್ಪಕಲಾ ವಿಶ್ವವಿದ್ಯಾಲಯ ಮುಂತಾದ ವಿವಿಗಳಿಗೇ ಅಗತ್ಯ ಸಿಬ್ಬಂದಿ ಇಲ್ಲ, ಕಟ್ಟಡಗಳಿಲ್ಲ, ಸಂಗೀತ ವಿವಿಯಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 30.

ಇದನ್ನು ಸರಕಾರವೇ ಸದನದಲ್ಲಿ ಬಹಿರಂಗ ಪಡಿಸಿದೆ. ಇಂತಹ ಪರಿಸ್ಥಿತಿ ಯಲ್ಲಿ ಹೊಸ ವಿವಿಗಳನ್ನು ಕೇವಲ ಸಂಖ್ಯೆ ಹೆಚ್ಚಿಸುವ ದೃಷ್ಟಿಯಿಂದ ಸ್ಥಾಪಿಸದೆ, ವ್ಯವಸ್ಥಿತ ಶಿಕ್ಷಣದ ದೃಷ್ಟಿಯಿಂದ ಸ್ಥಾಪಿಸಬೇಕಾಗಿದೆ. ಈಗಾಗಲೇ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣ ಸರಿಯಾಗಿಲ್ಲ, ಗುಣಮಟ್ಟ ಸಂಪೂರ್ಣ ಕುಸಿದಿದೆ. ಪರೀಕ್ಷೆಗಳಲ್ಲಿ ಅವ್ಯವಸ್ಥೆ, ನಕಲು ಮಾಡಿಸಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ನೀಡುವ ಪರಿಸ್ಥಿತಿ ಇದೆ. ನಾನಾ ರೀತಿಯ ಹಗರಣಗಳಿಂದ ವಿವಿಗಳ ಸ್ಥಿತಿ ಶೋಚನೀಯವಾಗಿದೆ.

ವಿಧಾನಸಭೆಯಲ್ಲಿ ಬುಧವಾರ ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಕ್ಕೊರಲಿನಿಂದ ವ್ಯಕ್ತಪಡಿಸಿದ ಕಳಕಳಿ ಮತ್ತು ಕಳವಳ ಇದು. ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕದ ಬಗ್ಗೆ ಸುದೀರ್ಘ ಚರ್ಚೆಯ ವೇಳೆ ಈ ಎಲ್ಲ ವಿಚಾರಗಳು ಸದನದಲ್ಲಿ ಪ್ರಸ್ತಾಪಗೊಂಡಿವೆ. ಸಭಾಧ್ಯಕ್ಷ ಕಾಗೇರಿಯವರೇ ಮಾತನಾಡಿ, ವಿಶ್ವವಿದ್ಯಾನಿಲಯಗಳ ಗುಣಮಟ್ಟದ ಕೊರತೆ ಮೂಲ ಸೌಕರ್ಯಗಳ ಅಲಭ್ಯತೆಯಿಂದ ನಮ್ಮ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಕೆನಡಾದಂತಹ ವಿದೇಶಗಳಿಗೆ ತೆರಳುತ್ತಿದ್ದಾರೆ.

ಶೈಕ್ಷಣಿಕ ಚಟುವಟಿಕೆಗಳಿಗೆ ನಮ್ಮಲ್ಲಿ ಆದ್ಯತೆಯೇ ಇಲ್ಲ. ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಹಿಂಸೆ ನೀಡಲಾಗುತ್ತಿದೆ ಎಂದು
ಕಳವಳ ವ್ಯಕ್ತಪಡಿಸಿರುವುದು ಸರಕಾರಕ್ಕೆ ಶೋಭೆ ತರುವ ಸಂಗತಿ ಅಲ್ಲ. ವಿಶ್ವವಿದ್ಯಾಲಯದ ಕುಲಪತಿಗಳಾಗಲು ಹಿಂದೆ ಸರಕಾರವೇ ಅರ್ಹ ಗಣ್ಯರ ಮನೆಬಾಗಿಲಿಗೆ ಹೋಗಿ ವಿನಂತಿಸುವ ಪರಿಪಾಠವಿತ್ತು. ಆದರೆ ಈಗ ವಿ.ಸಿ. ಹುದ್ದೆಗೆ ಲಾಬಿ ಮಾಡುವವರು ಕ್ಯೂನಲ್ಲಿ ನಿಂತಿರುತ್ತಾರೆ ಎಂದು ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಅವರ ಮಾತುಗಳು ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿವೆ.

ಮೊದಲು ಇರುವ ವಿವಿಗಳನ್ನು ಸುವ್ಯವಸ್ಥಿತಗೊಳಿಸಿದ ಬಳಿಕ ಹೊಸ ವಿವಿಗಳನ್ನು ಸ್ಥಾಪಿಸುವುದರತ್ತ ಗಮನ ಹರಿಸುವುದು ಒಳ್ಳೆಯದು